Sunday, March 24, 2013

ಕನಲಿದಳು ಕಮಲಿ



ಭಾರತದಲ್ಲಿ ಜನಿಸಿ, ಹೆಣ್ಣಾದ ಮಾತ್ರಕ್ಕೆ ಪಡಬಾರದ ಪಾಡನ್ನು ಪಟ್ಟು ಅನುಭವಿಸುವ ಒಂದು ನತದೃಷ್ಟ ಹೆಣ್ಣಿನ ಅನುಭವವನ್ನು ಕಟ್ಟಿಕೊಡುವ ಪ್ರಯತ್ನ ಇದು. 


ಕನಲಿದಳು ಕಮಲಿ

ಭ್ರೂಣದಲಿ
ಹೆಣ್ಣಾಯಿತೆಂದು
ಹಣ್ಣಾಗುವ ಮೊದಲೇ,
ಹೊಸಕುವ ಹೀನಕೃತ್ಯಕೆ
ತುತ್ತಾಗಿ ಬದುಕುಳಿದ ಕೂಸಾಗಿ
ಕೊನರಿದಳು ಕಮಲಿ.

’ವಂಶಧ್ದಾರಕ’ ಅಣ್ಣನ
ವೈಭೋಗದ ನಡುವಲಿ,
ಅವನುಂಡುಳಿದುದನುಂಡು
ಚಳಿಯಲಿ ನಡುಗಿ, ಗೋಣಿಯಲಿ
ಮುದುರಿ ಸೊಪ್ಪಾಗಿ ಮಲಗಿ
ನಡುಗಿದಳು ಕಮಲಿ.

ಮೈಯರಳಿ, ಮನವರಳುವ
ಮುನ್ನವೇ ’ಮದುವೆ’ಗೆ ತುತ್ತಾಗಿ,
ಬಲವಂತದಲಿ, ಮೊಗ್ಗ ಹಿಚುಕುವ
’ಗಂಡ’ನ ಕ್ರೌರ್ಯಕೆ ತುತ್ತಾಗಿ,
’ಸಂಸಾರ’ದ ನೊಗಕೆ, ಎಳೆ ಹೆಗಲ
ನೀಡಿ, ಬಸವಳಿದಳು ಕಮಲಿ
  
ಸಂಸಾರವರಿಯದ ಮುಗುದೆ,
ಗೊಂಬೆಯೊಡನಾಡುವ ವಯದಲಿ,
ಬಸಿರೊಳಗೊಂದು ಗೊಂಬೆಯುದಿಸೆ,
ಪಿಂಡಕೆ ರಕ್ತಮಾಂಸವನೆರೆದು
ಕೂಸಿಗೆ ತಾಯಾದ ಕೂಸಾಗಿ,
ಕನಲಿದಳು ಕಮಲಿ.

ಬಸಿರು ಬಾಣಂತನದಲಿ
ಹಸಿರು ಕಳೆದ ಒಣಲತೆಯಾಗಲು,
ಹದಿಹರೆಯದಲಿ ಮುಪ್ಪಡರೆ,
ಪತಿಯು ಚಟಕೆ ಬಲಿಯಾಗಿ,
ಫಕ್ಕನುದುರಿದ ಕೊರಡಾಗೆ, ವೈಧವ್ಯದಲಿ
ಕರಗಿದಳು ಕಮಲಿ.

ಎಳೆಮೊಳಕೆಗಳ ಕುಡಿಕಾದು,
ಸಸಿಪೊರೆದು ಮರವಾಗಿಸೆ,
ಕೊಂಬೆ ಕೊಂಬೆಯಲಿ ಫಲ ತೂಗಿ
ರೆಕ್ಕೆ ಬಲಿತ ಹಕ್ಕಿ ಗೂಡ ತೊರೆದು
ಬಾನಂಗಳಕೆ ಪುರ್ರೆಂದು ಹಾರಲು,
ಕೊರಗಿದಳು ಕಮಲಿ.

ವಿಧಿಯಾಟಕೆ ಆಡೊಂಬಲವಾಗಿ,
ಮೈ ಮನಗಳ ಸಕಲ ವ್ಯಾಧಿಗಳಲಿ
ಸವೆ ಸವೆದು, ಗಂಧವಡರೆ,
ಸಕಲರನು ಕ್ಷಮಿಸು ದೇವ ದೇವನೆನುತ
ಧರೆಯೊಳಗೆ ಧರಿತ್ರಿಯಾಗಿ

ಕಮರಿದಳು ಕಮಲಿ.

No comments:

Post a Comment