ತಪ್ಪು ನಿನ್ನದಲ್ಲ
ಜಿಟಿ ಜಿಟಿ ಮಳೆಯಲಿ
ತೊಟ್ಟಿಕ್ಕುವ ಹನಿಹನಿಗಳಲಿ,
ಘಮ್ಮೆಂದ ಹೊಸಮಳೆಯ
ಮಣ್ಣ ವಾಸನೆಯಲಿ,
ನಿನ್ನದೇ ನೆನಪಾದರೆ
ತಪ್ಪು ನಿನ್ನದಲ್ಲ
ಕರುವಿನ ತುಂಬು ಕಣ್ಣನೋಟದಲಿ,
ಕೂಗಿ ಕರೆವ ಗಿಣಿಯ ಕಲರವದಲಿ,
ಮುಗ್ಧ ಮಗುವಿನ ಬೊಚ್ಚು
ಬಾಯಿಯ ನಗೆಯಲಿ,
ನಿನ್ನದೇ ನೆನಪಾದರೆ
ತಪ್ಪು ನಿನ್ನದಲ್ಲ
ಮಲ್ಲಿಗೆ ಹೂವಿನ ಸುವಾಸನೆಯಲಿ,
ಗಟ್ಟಿ ಮೊಸರಿನ ರುಚಿಯಲಿ,
ಬಿಸಿ ಮಸಾಲೆ ದೋಸೆಯ ಮೇಲೆ
ಕರುಗುತ ಜಾರುವ ಬೆಣ್ಣೆಯಲಿ,
ನಿನ್ನದೇ ನೆನಪಾದರೆ,
ತಪ್ಪು ನಿನ್ನದಲ್ಲ.
ಡಾ. ಎಸ್.ಎನ್. ಶ್ರೀಧರ
No comments:
Post a Comment