Tuesday, April 9, 2013

ಅಜ್ಜನ ನೆನಪುಗಳು


ಅಜ್ಜನ ನೆನಪುಗಳು 


           ಎಪ್ಪತ್ತರ ದಶಕ, ಆಗ ನನಗಿನ್ನೂ 5-10 ವರ್ಷದ ಪ್ರಾಯ. ಆದರೆ ಆಗಿನ ನಮ್ಮ ಸುಂದರ ನೆನೆಪುಗಳು ಇನ್ನೂ ಹಚ್ಚ ಹಸಿರಾಗೇ ಮನದಲ್ಲಿ ನಿಂತಿವೆ. ಶಿವಮೊಗ್ಗದ ನಮ್ಮ ಅಜ್ಜ ’ಗಾಂಧಿ ಬಸಪ್ಪ’ನೆಂದೇ ಹೆಸರಾಗಿದ್ದರು. ಈ ಗಾಂಧಿ ಬಸಪ್ಪನ ಹಿರಿಯ ಮಗಳಾದ ಸೀತಮ್ಮನವರ ಸಂತಾನವೇ, ನಾವು ಐದು ಜನ ಮಕ್ಕಳು. ನಮ್ಮ ತಂದೆ ನಾಗಪ್ಪ, ತಮ್ಮ ಜೀವನದಲ್ಲಿ ಹಾಗೂ ತಮ್ಮ ಉದ್ಯೋಗದಲ್ಲಿ ತುಂಬಾ ಶಿಸ್ತಿನ, ಪ್ರಾಮಾಣಿಕರಾದ, ಯಾರಿಗೂ ಬಗ್ಗದ, ಯಾವುದಕ್ಕೂ  ಜಗ್ಗದ, ಕಡಕ್ ಆದ ವ್ಯಕ್ತಿ. ಮನೆಯಲ್ಲಿ ಕೂಡಾ ಯಾರೂ, ಯಾವಾಗಲೂ ಶಿಸ್ತನ್ನು ಮೀರಬಾರದೆಂಬ ನಿಲುವು. ಹಾಗಾಗಿ, ಮನಸ್ಸು ಬಿಚ್ಚಿ ಕುಣಿಯುವ, ಏನೇ ತಪ್ಪು ಮಾಡಿದರೂ ಯಾರೂ ಶಿಕ್ಷಿಸದ ಅವಕಾಶ ದೊರೆಯುವ ಶಿವಮೊಗ್ಗದ ಅಜ್ಜನ ಮನೆ ನಮಗೆಲ್ಲಾ ಸ್ವರ್ಗಕ್ಕೆ ಸಮಾನವಾದುದು.

            ಎಲ್ಲಾ ಬೇಸಿಗೆ ರಜೆಯಲ್ಲೂ, ಶಿವಮೊಗ್ಗಕ್ಕೆ ಹೋಗುವ ಅವಕಾಶ, ಅದಕ್ಕಾಗಿ ಏನೆಲ್ಲಾ ತಯಾರಿ. ಶಿವಮೊಗ್ಗಕ್ಕೆ ಬೆಂಗಳೂರಿನಿಂದ ಇದ್ದ ಪ್ಯಾಸೆಂಜರ್ ರೈಲಿನ ಸುಮಾರು ಎಂಟು ಗಂಟೆಯ ಪ್ರಯಾಣ. ಚುಕು ಬುಕು ಎನ್ನುತ್ತಾ, ದಟ್ಟ ಕಪ್ಪನೆಯ ಹೊಗೆ ಕಾರುತ್ತಾ ಅಲ್ಲಲ್ಲಿ ಬುಸುಗುಟ್ಟಿಕೊಂಡು ನಿಲ್ಲುತ್ತಾ ಚಲ್ಲಿಸುವ ಉಗಿಬಂಡಿ ನಮಗೆ ಅನೂಹ್ಯ ಅನುಭವ ನೀಡುವ ಮಾಯಾಲೋಕದ ವಾಹನ. ಉಗಿಬಂಡಿಯ ಸೀಮಿತ ಶಕ್ತಿಯಿಂದಾಗಿ ಅದಕ್ಕೆ ಬೀರೂರು ಜಂಕ್ಷನ್ ನಲ್ಲಿ ಸುಮಾರು ಒಂದು ಗಂಟೆಯ ಎಂಜಿನ್ ಬದಲಿಸುವ ನೆಪದಲ್ಲಿ ಹಾಲ್ಟ್. ಅಲ್ಲಿ ಆಗ ತೆರೆದುಕೊಳ್ಳುತ್ತಿದ್ದುದು ಚಿತ್ರಾನ್ನ-ಮೊಸರನ್ನದ ಬುತ್ತಿ. ಈರುಳ್ಳಿ-ಕೊತ್ತಂಬರಿ ಸೊಪ್ಪು ಹಾಕಿ ಅನ್ನವನ್ನು ನಾದಿ ನಮ್ಮಮ್ಮ ಮಾಡಿಟ್ಟುಕೊಂಡ ಮೊಸರನ್ನದ ರುಚಿ ಯಾವುದಕ್ಕೂ ಹೋಲಿಸಲಾಗದು. ಎಲ್ಲಾ ಮಕ್ಕಳೂ ಚಕ್ಕಮಕ್ಕಳ ಹಾಕಿಕೊಂಡು, ನಮ್ಮಮ್ಮ ಊಟದ ಎಲೆಯಲ್ಲಿ (((ಮುತ್ತುಗದ ಎಲೆಯಲ್ಲಿ)  ಹಾಕಿಕೊಡುವ ಚಿತ್ರಾನ್ನ-ಮೊಸರನ್ನದ ಊಟಕ್ಕೆ ಕವ-ಕವ ಎನ್ನುತ್ತಾ, ಹೊಟ್ಟೆ ಬಿರಿಯುವಷ್ಟು ತಿನ್ನುತ್ತಿದ್ದೆವು. ನೀರು ಕುಡಿಯಲು ಆಗ ಇರುತ್ತಿದ್ದುದೇ ರೈಲು ಚೆಂಬು ಎನಿಸಿಕೂಳ್ಳುತ್ತಿದ್ದ, ತಿರುಪು ಇದ್ದ ಮುಚ್ಚಳ ಹೊಂದಿದ್ದ ತಾಮ್ರದ ಕಮಂಡಲ ರೀತಿಯ ಚೊಂಬು. ಅದರ ಜೊತೆಗೆ ಒಂದೆರಡು ತಾಮ್ರದ ಕುಡಿಯುವ ನೀರಿನ ಲೋಟಗಳು. ರೈಲ್ವೆ ಪ್ಲಾಟ್ ಫ಼ಾರಂನಲ್ಲಿ ಹಾಕಿರುವ ನಲ್ಲಿಯಲ್ಲಿ ನೀರು ಹಿಡಿದು ಕುಡಿದರೂ ಏನೂ ಹೆಚ್ಚು ಕಮ್ಮಿ ಆಗದಿರುತ್ತಿದ್ದ ಕಾಲ. 

        ಊಟ ಮಾಡಿ ಮುಗಿಸುತ್ತಿದ್ದಂತೆ ರೈಲು ಸಿಳ್ಳು ಹಾಕಿ ಮತ್ತೆ ಚುಕು ಬುಕು ಸಪ್ಪಳ ಮಾಡುತ್ತಾ ಹೊರಟು ಬಿಡುತ್ತಿತ್ತು. ಶಿವಮೊಗ್ಗದಲ್ಲಿ ರೈಲಿನಿಂದ ಇಳಿದ ನಂತರ ಪ್ಲಾಟ್ ಫ಼ಾರಂ ಹೊರಗೆ ಕಾದಿರುತ್ತಿದ್ದ ಜಟಕಾ ಬಂಡಿಯವರ ಪೈಪೋಟಿ ಮಧ್ಯೆ ಯಾವುದಾದರು ಒಂದು ಟಾಂಗಾ ಹಿಡಿದು ಹೊರಟರೆ, ಮಕ್ಕಳಾದ ನಮಗೆ, ಕುದುರೆ ಹತ್ತಿ ಸವಾರಿ ಹೊರಟ ಶಿವಪ್ಪ ನಾಯಕನಿಗಿಂತ ಹೆಚ್ಚಿನ ಗತ್ತು. ಟಾಂಗಾವಾಲನಿಗೆ ಮನೆ ವಿಳಾಸ ಹೇಳದೇ, ಕೇವಲ “ಗಾಂಧಿ ಬಸಪ್ಪನವರ ಮನೆ” ಎಂದು ಹೇಳಿದರೆ ಸಾಕಿತ್ತು. ಸೀದಾ ಅಜ್ಜನ ಮನೆಗೆ ತಂದು ಬಿಡುತ್ತಿದ್ದರು. ಚಿಕ್ಕ ಮಕ್ಕಳಾದ ನಮಗೆ ಅದೇ ಬೆರಗು. ನಮ್ಮಜ್ಜ ಈ ಊರಿನಲ್ಲಿ ಎಷ್ಟು ಹೆಸರುವಾಸಿ ಎಂಬ ಹೆಮ್ಮೆ. ಮನೆಗೆ ಬಂದು ಇಳಿಯುತ್ತಿದ್ದಂತೇ ಎಲ್ಲಿಲ್ಲದ ಉತ್ಸಾಹದದಿಂದ ಮನೆಯೊಳಗೆ ಓಡಿ ಬಿಡುತ್ತಿದ್ದೆವು.     
      
        ನಮ್ಮ ಅಜ್ಜ ಗಾಂಧಿ ಅನುಯಾಯಿ. ಹಾಗಾಗಿ ಖಾದಿಯೇ ಅವರ ದಿರಿಸು. ಬಿಳಿ ಕಚ್ಚೆ, ಬಿಳಿ ಜುಬ್ಬ, ತಲೆಯ ಮೇಲೆ ಒಂದು ಗಾಂಧಿ ಟೋಪಿ. ಇವಿಷ್ಟು ಅವರು ಹೊರಟಾಗ ಹಾಕಿಕೊಳ್ಳುವ ಶಿಸ್ತಿನ ಉಡುಪು. ಮನೆಯಲ್ಲಿ ಒಂದು ಉರುಟು ಪಂಚೆ, ಅದೇ ಬಟ್ಟೆಯಲ್ಲಿ ಹೊಲೆಸಿಕೊಂಡ ಚಿಕ್ಕ ತೋಳಿನ ಬನಿಯನ್. ಎಲ್ಲವೂ ಶುಭ್ರ ಬಿಳುಪು. ಅವರು ಜೀವಿತದ ಕೊನೆವರಗೂ ತಮ್ಮ ಬಟ್ಟೆ ತಾವೇ ಸ್ವಚ್ಛ ಮಾಡಿಕೊಳ್ಳುತ್ತಿದ್ದರು. ಅವರ ಬಟ್ಟೆಗಳನ್ನು ಬೇರೆಯವರು ಒಗೆದದ್ದು (ಶುಭ್ರ ಮಾಡಿದ್ದು) ನಾವಂತೂ ಕಂಡಿಲ್ಲ. ಹಿಂದಿನ ರಾತ್ರಿ ಯಾವುದೋ ಒಂದು ಸೋಪಿನ ಬಾರನ್ನು ತುರಿದು ಅದರ ಪುಡಿಯನ್ನು ನೀರಿಗೆ ಹಾಕಿ ಅದರಲ್ಲಿ ತಮ್ಮ ಬಟ್ಟೆ ನೆನೆಸಿ ಇಟ್ಟರೆ, ಮಾರನೇ ದಿನ, ಬೆಳ್ಳಂಬೆಳಗ್ಗೆ ಎದ್ದು ತಲೆಗೆ ಒಂದು ಟವೆಲ್ ಸುತ್ತಿ, ಒಗೆಯುವ ಕಲ್ಲಿನ ಬಳಿ ನಿಂತು, ತಮ್ಮ ಎಲ್ಲಾ ಬಟ್ಟೆಗಳನ್ನೂ ತಾವೇ ಒಗೆದು, ನಂತರ ಒಣಗಲು ಹಾಕಿ, ಸಾಯಂಕಾಲ ಅವೆಲ್ಲವನ್ನೂ, ತಾವೇ ಕೈಯಲ್ಲಿ ತಿದ್ದಿ ತೀಡಿ ತಮ್ಮ ರೂಮಿನಲ್ಲಿರುವ ಗಾಜಿನ ಬಾಗಿಲು ಇರುವ ಸಣ್ಣ ಬೀರುವಿನಲ್ಲಿ ಒಪ್ಪ ಓರಣ ಮಾಡಿ ಜೋಡಿಸಿಡುತ್ತಿದ್ದರು.  
       
      ನಮ್ಮ ಅಜ್ಜ ಯಾವುದೇ ಬಟ್ಟೆಗೆ ಇಸ್ತ್ರಿ ಮಾಡಿಡದಿದ್ದರೂ, ಬೆಳಿಗ್ಗೆ, ತಿದ್ದಿ ತೀಡಿದಂತಹ ಜುಬ್ಬಾ ಮತ್ತು ಕಚ್ಚೆ ನೋಡಿದಾಗಲೆಲ್ಲಾ ಆಶ್ಚರ್ಯ ಪಡುತ್ತಿದ್ದೆವು. ಇದಕ್ಕೆ ಕಾರಣ ನಮ್ಮ ಅಜ್ಜ ಕೈಯಲ್ಲೇ ಅವನ್ನು ತಿದ್ದುತ್ತಿದ್ದುದು ಮತ್ತು ಕೆಲವೊಮ್ಮೆ ತಲೆದಿಂಬಿನ ಕೆಳಗೆ ರಾತ್ರಿ ಇಟ್ಟು ಮಲಗಿದ್ದು, ಬೆಳಿಗ್ಗೆ ಎದ್ದರೆ, ಖಾದಿ ಬಟ್ಟೆ ಇಸ್ತ್ರಿ ಮಾಡಿಟ್ಟಿದ್ದಂತೇ ಇರುತ್ತಿತ್ತು. ನಮ್ಮ ಅಜ್ಜನ ರೂಮಿನಲ್ಲಿ ಕೆಲವು ಸುಭಾಷಿತಗಳನ್ನೂ, ಕೆಲವು ನೀತಿ ಮಾತುಗಳನ್ನೂ ದೊಡ್ಡ ಬೋರ್ಡ್ ಮೇಲೆ ಬರೆದು ಒಂದು ಗೋಡೆ ತುಂಬಾ ಹಾಕಿದ್ದರು. ಅದರಲ್ಲಿ ಒಂದು ನೀತಿಮಾತು “ಪ್ರತಿಯೊಬ್ಬರೂ ತಮ್ಮ ಕೈ, ಬಾಯಿ ಮತ್ತು ಕಚ್ಚೆ ಶುದ್ಧವಾಗಿಟ್ಟಿರಬೇಕು” ಎಂದಿತ್ತು. ಆಗ ಸಣ್ಣ ಹುಡುಗನಾದ ನನಗೆ, ಅದಕ್ಕೇ ನಮ್ಮ ಅಜ್ಜ ಯಾವಾಗಲೂ, ತಮ್ಮ ಕೈ, ಬಾಯಿ ತೊಳೆದುಕೊಂಡು ಸ್ವಚ್ಛ ಇಟ್ಟುಕೊಳ್ಳುವುದಲ್ಲದೇ, ತಮ್ಮ ಕಚ್ಚೆಯನ್ನೂ ಶುಭ್ರವಾಗಿ ತೊಳೆದು ಇಟ್ಟುಕೊಂಡಿರುತ್ತಾರೆ ಎಂದುಕೊಂಡಿದ್ದೆ. ಸ್ವಲ್ಪ ದೊಡ್ಡವನಾದ ಮೇಲೆ, ಕಚ್ಚೆ ಅಂದರೆ ಅದರೊಳಗಿನ ಕುಂಡೆಯನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಬರೆಸಿದ್ದಾರೆ ಎಂದುಕೊಂಡ್ಡಿದ್ದೆ. ಈ ನೀತಿಮಾತಿನ ವಿಶಾಲ ಅರ್ಥ ತಿಳಿಯಲು ನನಗೆ ಸುಮಾರು ಹದಿನೈದು ವರ್ಷ ವಯಸ್ಸಾಗಬೇಕಾಯ್ತು.

ನಮ್ಮ ಅಜ್ಜನದು, ಗಡಿಯಾರದಂತಹ ಜೀವನ ಕ್ರಮ. ಬೆಳಿಗ್ಗೆ ಐದು ಗಂಟೆಗೆ ಎದ್ದು, ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿಕೊಂಡು, ಮನೆಯ ಎಲ್ಲಾ ಮಕ್ಕಳೊಂದಿಗೆ ಮತ್ತು ದೊಡ್ಡವರೊಂದಿಗೆ ಪ್ರಾರ್ಥನಾ ಕೊಠಡಿಯಲ್ಲಿ ಒಂದೆರಡು ದೇವರ ಸ್ತುತಿಗಳನ್ನು (ಇದರಲ್ಲಿ, “ಏಳು ನಾರಾಯಣ,... ಏಳಯ್ಯ ಬೆಳಗಾಯಿತು...” ಕಡ್ಡಾಯ ಪ್ರಾರ್ಥನೆ) ಹಾಡಿದ ನಂತರ ಮುಂದಿನ ಎಲ್ಲಾ ದೈನಂದಿನ ಕಾರ್ಯಕ್ರಮಗಳು ಚಾಲು. ಪ್ರಾರ್ಥನಾ ಕೊಠಡಿಗೆ ಯಾರು ಬರುವುದು ತಡವಾದರೂ, ನಮ್ಮಜ್ಜ ಅಲ್ಲಿ ಕುಳಿತು ಏರುದನಿಯಲ್ಲಿ “ಏಳು ನಾರಾಯಣ,...” ಎಂದು ಹಾಡಲು ಶುರು ಮಾಡಿದರೆ, ಉಳಿದ ಎಲ್ಲಾ ಸದಸ್ಯರೂ, ಎಲ್ಲಾ ಕೆಲಸಗಳನ್ನು ಅಲ್ಲಲ್ಲೇ ಬಿಟ್ಟು, ತಡಬಡಾಯಿಸಿಕೊಂಡು ಓಡಿ ಬಂದು ಕುಳಿತುಕೊಂಡು ಪ್ರಾರ್ಥನೆಗೆ ದನಿ ಕೂಡಿಸಲೇಬೇಕು. ಈ ಬೆಳಗಿನ ಪ್ರಾರ್ಥನೆ ಮುಗಿದ ತಕ್ಷಣ ಮನೆಯ ಹೆಂಗಸರು, ಅಡಿಗೆಮನೆಗೆ ಓಡಿ ಹೋಗಿ ಅಡುಗೆ ಕೆಲಸ ಶುರು ಮಾಡುತ್ತಿದ್ದರು. ಅಜ್ಜ ತಮ್ಮ ರೂಮಿಗೆ ಹೋಗಿ, ಅಲ್ಲೇ ಅಟಾಚ್ಡ್ ಬಚ್ಚಲು ಮನೆಯಲ್ಲಿ ತಣ್ಣೀರಿನ ಸ್ನಾನ ಮಾಡಬೇಕು. ಆ ಸ್ನಾನ ಮಾಡುವಾಗ ದೊಡ್ಡ ದನಿಯಲ್ಲಿ “ಶ್ರೀ ಹರಿ,... ಶ್ರೀ ಹರಿ,... ಶ್ರೀ ರಾಮ, ಶ್ರೀ ರಾಮ, ಜಯ ಜಯ ರಾಮ...” ಎಂದು ಜೋರಾಗಿ ಹಾಡಿಕೊಳ್ಳಬೇಕು. ಇನ್ನೊಂದು ವಿಷಯ, ನಮ್ಮಜ್ಜ ತಮ್ಮ ಹಲ್ಲುಜ್ಜುತ್ತಿದ್ದುದು, ಕೇವಲ ಪುಡಿ ಉಪ್ಪಿನಿಂದ. ಯವತ್ತೂ ಪೇಸ್ಟ್ ಬಳಸಿದವರಲ್ಲ. ಹಾಗಾಗಿ, ಅವರ ಬಚ್ಚಲು ಮನೆಯಲ್ಲಿ ಒಂದು ಬಟ್ಟಲಿನಲ್ಲಿ ಉಪ್ಪಿನ ಪುಡಿ ಇರಲೇ ಬೇಕು, ಜೊತೆಗೆ ಅರ್ಧ ಕತ್ತರಿಸಿ ಇಟ್ಟ ಲೈಫ಼್ ಬಾಯ್ ಸೋಪು. ಆಗಿನ ಲೈಫ಼್ ಬಾಯ್ ಸೋಪು ಈಗಿನಂತೆ ಬಣ್ಣ ಬಣ್ಣಗಳಲ್ಲಿ ಇರಲಿಲ್ಲ. ನಸು ಕೆಂಪು ಬಣ್ಣದ, ಎಷ್ಟು ಬಳಸಿದರೂ, ಬೇಗ ಕರಗದ ಗಟ್ಟಿ ಇಟ್ಟಿಗೆಯಂತಹದಾಗಿತ್ತು. ಎಲ್ಲರ ಮನೆಯಲ್ಲೂ ಅದೇ ಸೋಪು. ರೇಡಿಯೋದಲ್ಲಿ ಬರುತ್ತಿದ್ದ “ಲೈಫ಼್ ಬಾಯ್ ಎಲ್ಲಿದೆಯೋ.. ಅಲ್ಲಿದೇ ಅರೋಗ್ಯ..” ಎನ್ನುವ ಜಾಹೀರಾತು ಎಲ್ಲರಿಗೂ ಚಿರಪರಿಚಿತ. ಆ ಸೋಪು ಕೂಡ ಬೇಗ ಖರ್ಚಾಗದಿರಲಿ ಎಂದು ಎಲ್ಲರ ಮನೆಯಲ್ಲೂ ಅದನ್ನು ಅರ್ಧಕ್ಕೆ ತುಂಡು ಮಾಡಿ ಬಚ್ಚಲಲ್ಲಿ ಇಡುತ್ತಿದ್ದರು. 

ನಾ ಶಿವಮೊಗ್ಗಕ್ಕೆ ಹೋದಾಗ, ಅದೇ ಬಚ್ಚಲಲ್ಲಿ ಸ್ನಾನ ಮಾಡುವಾಗ, ಅಜ್ಜನಂತೆಯೇ, “ಶ್ರೀ ಹರಿ,... ಶ್ರೀ ಹರಿ,... ಶ್ರೀ ರಾಮ, ಶ್ರೀ ರಾಮ, ಜಯ ಜಯ ರಾಮ...” ಎಂದು ಜೋರಾಗಿ ಹಾಡಿಕೊಂಡು, ನಂತರ ಲೈಫ಼್ ಬಾಯ್ ಹಾಡೂ ಕೂಡಾ ಹಾಡುತ್ತಿದ್ದೆ. ಅಗೆಲ್ಲಾ ನಮ್ಮ ಬಸಪ್ಪಜ್ಜ ರೂಮಿನಿಂದಲೇ, ನನಗೆ ಪೀತಿಯಿಂದ, “ಪೋಕರಿ,... ಪೋಕರಿ... , ರೇಡಿಯೋ ಹಾಡು ಹೇಳುತ್ತಾನೆ. ರಾಮಾಂಜನೇಯ ಸೀತರನ್ನು ನೆನೆಸಿಕೊಳ್ಳೋ” ಅನ್ನುತ್ತಿದ್ದರು. ಅದಕ್ಕೆ, ನಾನು, “ರಾಮ ನಿಮ್ಮ ದೇವರ ಕೋಣೆಯಲ್ಲಿದಾನೆ, ಸೀತ ನಮ್ಮಮ್ಮ, ಇನ್ನು ನಾನೇ ಆಂಜನೇಯ.. ಇನ್ಯಾಕೆ ಅವರೆಲ್ಲರ ಹೆಸರು” ಅಂತ ವಾಪಸ್ಸು ಜವಾಬು ಕೊಟ್ಟರೆ, “ಪೋಕರಿ,... ಪೋಕರಿ... , ನಿಮಗೆಲ್ಲಾ ನಿಮ್ಮಪ್ಪ ನಾಗಪ್ಪನೇ ಸರಿ. ಆತ ಇಷ್ಟು ಬಿಗಿ ಇದ್ದೂ, ನೀವೆಲ್ಲಾ ಎಷ್ಟೋಂದು ತುಂಟರು. ಅವನೇನಾದರೂ ಸ್ವಲ್ಪ ಸಡಿಲ ಬಿಟ್ಟಿದ್ದರೆ, ನಿಮ್ಮನ್ನೆಲ್ಲಾ ಮರದ ಮೇಲೇ ನೋಡಬೇಕಾಗುತ್ತಿತ್ತು” ಎಂದು ಜೋರಾಗಿ ನಗುತ್ತಿದ್ದರು.

ನಮ್ಮಜ್ಜನ ನಗುವೇ ಒಂದು ಅನೂಹ್ಯ. ಆ ದೊಡ್ಡ ಶಬ್ದದ “ಹಿ..ಹಿ ಹಿ..” ಎಂಬ, ತಮಾಷೆಯಾಗಿದ್ದರೂ ಗಾಂಭಿರ್ಯ ತುಂಬಿದ ನಗು ಎಷ್ಟೇ ದೂರವಿದ್ದರೂ ಗುರುತಿಸಬಹುದಾದ ವಿಶಿಷ್ಟ ದೇಶಾವರಿ ನಗು. ಈ ನಗು, ಕೆಲವೊಮ್ಮೆ ಹಾಸ್ಯಕ್ಕಾಗಿದ್ದರೆ, ಕೆಲವೊಮ್ಮೆ ತಮಗೆ ಅರ್ಥವಾಗದ ಮಾತುಗಳನ್ನು ತಳ್ಳಿಹಾಕಲು ಬಳಸುತ್ತಿದ್ದರು. ಹಾಗಾಗೇ ನಮ್ಮ ತಂದೆ, ನಮ್ಮ ಅಮ್ಮನ ಮುಂದೆ, “ನಿಮ್ಮಪ್ಪನ ನಗು ಹೇಗೇ ಸೀತಾ..?” ಅನ್ನುತ್ತಾ ಅಣಕಿಸಿಕೊಂಡು ನಗುವರು. ನಮ್ಮಮ್ಮ, “ನಮ್ಮಪ್ಪ ಮಹಾಪುರುಷ, ಅವರ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ ಅನ್ನುತ್ತಿದ್ದರು.” ನಾನು, ನಮ್ಮಪ್ಪನ ಮುಂದೆ ಬಾಯಿ ಬಿಚ್ಚಿ ನಗುವ ಅವಕಾಶ ಇಲ್ಲದ್ದರಿಂದ ಹಿತ್ತಲಿಗೆ ಓಡಿ ಹೋಗಿ, “ನಮ್ಮಜ್ಜ ನಗುವುದು, ಹಾಗಲ್ಲಾ, ಹೀಗೆ... ಅನ್ನುತ್ತಾ...” ನಮ್ಮಜ್ಜನ ನಗುವನ್ನು ಪ್ರಾಕ್ಟೀಸ್ ಮಾಡುತ್ತಿದ್ದೆ.

ಅದಿರಲಿ, ನಮ್ಮಜ್ಜ, ಬೇಸಿಗೆ ಇರಲಿ, ಚಳಿ ಇರಲಿ, ಮಳೆ ಇರಲಿ, ಯಾವಾಗಲೂ, ತಣ್ಣೀರಿನಲ್ಲೇ ಸ್ನಾನ ಮಾಡುತ್ತಿದ್ದರು. ನಾವು ಅದೇ ತಣ್ಣೀರಿನಲ್ಲಿ ಸ್ನಾನ ಮಾಡಿದರೆ, ಚಳಿಗಾಲದಲ್ಲಿ ತಡೆಯಲು ಆಗುತ್ತಿರಲಿಲ್ಲ. ಆಗೆಲ್ಲಾ, ಈ ಚಳಿ ತಡೆಯಲಾಗದೇ ನಮ್ಮಜ್ಜ ಹೀಗೆ ಹಾಡು ಹೇಳುತ್ತಿದ್ದಾರೆ, ಎಂದುಕೊಳ್ಳುತ್ತಿದ್ದೆ. ಈ ಚಳಿಯಲ್ಲಿ ಸ್ನಾನ ಮಾಡುವುದು ಯಾಕೆ? ಮತ್ತೆ ರಾಮ ರಾಮ.. ಅಂತ ಹೇಳಿಕೊಳ್ಳುವುದು ಏಕೆ ಎಂದುಕೊಳ್ಳುತ್ತಿದ್ದೆ. ಆದರೆ, ಬೆಂಗಳೂರಿನ ನಮ್ಮ ಮನೆಗೆ ಬಂದಿದ್ದಾಗಲೂ, ಆಗಿನ ಬೆಂಗಳೂರಿನ ಚಳಿಯಲ್ಲೂ ನಮ್ಮಜ್ಜ ತಣ್ಣೀರಿನ ಸ್ನಾನ ಮಾಡುವುದನ್ನು ಕಂಡಾಗ ಬೆರಗಾಗಿದ್ದೆ.  ನಮ್ಮಜ್ಜ ತಾನು ನಂಬಿದ್ದ ವಿಚಾರಗಳಲ್ಲಿ ಯಾವುದಕ್ಕೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ವಯಸ್ಸಾದಂತೆ ಎರಡು ಬಾರಿ ಹಾಸಿಗೆ ಹಿಡಿದಾಗಲೂ, ಸ್ವಲ್ಪ ಚೇತರಿಸಿಕೊಂಡ ಕ್ಷಣದಲ್ಲೇ, ಮಾರನೇ ದಿನವೇ ಎಂದಿನಂತೆ ತಮ್ಮ ದಿನಚರಿ ಇರಬೇಕು ಎಂದು ಬಯಸುತ್ತಿದ್ದರು. ಬೆಳಿಗ್ಗೆ ಬೇಗ ಏಳುವುದು, ತಣ್ಣೇರಿನ ಸ್ನಾನ ಮಾಡುವುದು, ಪ್ರಾರ್ಥನೆ ಮಾಡುವುದು, ಇತ್ಯಾದಿ ಹಾಗಾಗೇ ನಡೆಯಬೇಕೆಂದು ಬಯಸುತ್ತಿದ್ದರು ಮತ್ತು ಹಾಗೇ ನಡೆಯುತ್ತಿದ್ದರು.  ಆ ಮನಸ್ಸಿನ ಧೃಢತೆ, ಈಗಲೂ ಬೆರಗನ್ನು ತರುತ್ತದೆ.  ನಮ್ಮ ತಂದೆ ನಾಗಪ್ಪನವರ ಅತೀವ ಪ್ರಾಮಾಣಿಕತೆ, ಮೂಗಿನ ನೇರಕ್ಕೆ ನಡೆಯುವ ಛಲ, ಜೀವನವನ್ನು ಕಷ್ಟಪಟ್ಟು ನಡೆಸಬೇಕೆಂಬ ಹಠ, ಯಾರಿಗೂ ಬಗ್ಗದ, ಡೊಗ್ಗು ಸಲಾಮು ಹೊಡೆಯದ ಗುಣಗಳು ನನ್ನಲ್ಲಿ ಒಂದು ಕಡೆ ಪ್ರಭಾವ ಬೀರಿದರೆ, ಇನ್ನೊಂದೆಡೆ, ನಮ್ಮಜ್ಜನ ಸರಳತೆ, ಕಷ್ಟಗಳನ್ನು ನಗು ನಗುತ್ತಾ ಸ್ವೀಕರಿಸುವ, ಕೆಲವೊಮ್ಮೆ ದೇಶಾವರಿ ನಗು ನಗುತ್ತಾ ಎಲ್ಲ ದುಃಖ ದುಮ್ಮಾನಗಳನ್ನೂ ಹುಡಿ ಹಾರಿಸುವ ಸ್ವಭಾವ ನನ್ನಲ್ಲಿ ಆಳವಾಗಿ ಬೇರೂರಿವೆ.

ಇನ್ನು ಮತ್ತೆ ನಮ್ಮಜ್ಜನ ದಿನಚರಿಗೆ ಬಂದರೆ, ಸ್ನಾನವಾದ ನಂತರ, ತಮ್ಮ ಉರುಟು ಪಂಚೆ ಉಟ್ಟು, ಮೇಲಿನ ಮೈಯನ್ನು ಹಾಗೇ ಬಿಟ್ಟುಕೊಂಡು, ಮನೆಯ ಕಾಂಪೌಂಡಿನಲ್ಲಿ ಬೆಳೆದಿದ್ದ ಗಿಡಗಳಿಂದ, ಹೂ ಬಿಡಿಸಿ, ದೇವರ ಮನೆಗೆ ತಲುಪಿಸಿ, ನಂತರ, ದೇವರ ಮನೆಯಲ್ಲಿ ಮತ್ತೆ ದೀರ್ಘ ಪ್ರಾರ್ಥನೆಗೆ ಕುಳಿತರೆ, ಅವರೊಂದಿಗೆ ಎಲ್ಲರೂ ಹಾಡಬೇಕು. ಭಗವತ್ ಗೀತೆಯ ಚರಣಗಳು, ಕೇಶವನನ್ನು ಕುರಿತ ಪ್ರಾರ್ಥನೆಗಳು, ಹಾಗೇ ಕೊನೆಗೆ “ಸರ್ವೇ ಸುಖಿನೋಭವಂತು...” ಹಾಡಿನೊಂದಿಗೆ ಕೊನೆಗೊಳ್ಳಬೇಕು. ನಂತರ ಅತ್ಯಂತ ದೀರ್ಘವಾಗಿ ಉಸಿರಾಡಿಕೊಂಡು, ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರು. ಈ ಪ್ರಾರ್ಥನೆಯ ಕೊನೆಯಲ್ಲಿ ಮಾತ್ರ ಕಣ್ಣು ಮುಚ್ಚಿ ಕೈ ಮುಗಿಯುತ್ತಾ ಕುಳಿತರೆ, ನಮಸ್ಕಾರದ ಒಂದೊಂದು ಭಂಗಿಗೂ ಬಹಳ ಸಮಯ ಹಿಡಿಯುತ್ತಿತ್ತು. ಆಗ ತುಂಬಾ ಸಮಯ ಆಯಿತೆಂದು ನನಗನಿಸಿದರೆ, ಮುಚ್ಚಿದ ಕಣ್ಣನ್ನು ಕಿರಿದಾಗಿ ತೆರೆದು, ನಮಸ್ಕಾರ ಯಾವ ಹಂತದಲ್ಲಿದೆ ಎಂಬುದನ್ನು ನೋಡಿಕೊಂಡು ಮತ್ತೆ ಕಣ್ಣು ಮುಚ್ಚಿಕೊಳ್ಳುತ್ತಿದ್ದೆ. 

ನಮ್ಮಜ್ಜ ದೇವರ ಪ್ರಾರ್ಥನೆಯಲ್ಲಿ ಎಲ್ಲವನ್ನೂ ಮರೆತು, ದೇವರ ಧ್ಯಾನದಲ್ಲಿ ಮುಳುಗಿದ್ದಾಗ ಅವರು ರಾಮದೇವರ ಪಟವನ್ನು ತದೇಕಚಿತ್ತವಾಗಿ ನೋಡುತ್ತಾ ಇದ್ದರೆ, ಎಲ್ಲರಿಗೂ ಭಕ್ತಿ ಭಾವ ತುಂಬಿ ಬರುತ್ತಿತ್ತು. ನಮ್ಮಜ್ಜ, ರಾಮ ದೇವರನ್ನು ಬಿಟ್ಟು ಬೇರೆ ಯಾವ ದೇವರನ್ನೂ ಪೂಜಿಸುತ್ತಿರಲಿಲ್ಲ. ಬೆಂಗಳೂರಿನ ನಮ್ಮ ಮನೆಗೆ ಅಜ್ಜ ಬಂದಾಗಲೆಲ್ಲಾ ನಮ್ಮ ಮನೆಯ ದೇವರ ಮನೆಯಲ್ಲಿದ್ದ ನಮ್ಮಮ್ಮ ಜೋಡಿಸಿಟ್ಟ ಅನೇಕ ದೇವರ ಪಟಗಳನ್ನು ನೋಡಿ “ಹುಚ್ಚಿ, ಹುಚ್ಚಿ,.. ರಾಮದೇವರನ್ನು ಪ್ರಾರ್ಥಿಸಿಕೋ, ಅಷ್ಟೇ ಸಾಕು. ಸುಮ್ಮನೇ ಇಷ್ಟೋಂದು ಪಟಗಳನ್ನು ಇಟ್ಟಿದ್ದೀಯಲ್ಲಾ..” ಎಂದು ಆಕ್ಷೇಪ ಮಾಡಿತ್ತಿದ್ದರು.

ನಮ್ಮಜ್ಜನ ದೇವರ ಕೋಣೆಯಲ್ಲಿ, ರಾಮದೇವರ ಪಟ್ಟಾಭಿಷೇಕದ ಒಂದು ದೊಡ್ಡ ಫೋಟೋವನ್ನು, ಆಳೆತ್ತರದ ಸುಂದರವಾದ ಕಲಾಕೃತಿಯ ಮರದ ಮಂಟಪದ ಮಧ್ಯೆ ಕೂಡಿಸಿ, ಆ ಮಂಟಪಕ್ಕೆ ಸಣ್ಣ ಸಣ್ಣ ವಿದ್ಯುತ್ ದೀಪಗಳ ಅಲಂಕಾರ ಮಾಡಿ, ವೈಭವವಾಗಿ ಕಾಣುವಂತೆ ಇಡುತ್ತಿದ್ದರು. ರಾಮದೇವರ ಪಟ್ಟಾಭಿಷೇಕದ ಪಟದಲ್ಲಿ, ರಾಮ, ಸೀತ, ಲಕ್ಷ್ಮಣರು ನಿಂತುಕೊಂಡು ಆಶೀರ್ವಾದ ಮಾಡುತ್ತಿದ್ದರೆ, ಕಣ್ಣುಗಳನ್ನು ಅರ್ಧ ಮುಚ್ಚಿ ಮಂಡಿಯೂರಿ ಕುಳಿತ ಆಂಜನೇಯನು, ಎರಡು ಕೈಗಳನ್ನು ವಿನೀತವಾಗಿ ಜೋಡಿಸಿ, ರಾಮಸೀತರ ಪಾದವನ್ನೇ ನೋಡುತ್ತಾ ಭಕ್ತಿ ಭಾವದಿಂದ ಪೂಜಿಸುತ್ತಿರುವ ದೃಶ್ಯ ನನಗಂತೂ ಕಣ್ಣು ತುಂಬಿ ಮನತುಂಬಿ ಶಾಶ್ವತವಾಗಿ ಕುಳಿತಿದೆ. ಇದೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ, ನಮ್ಮಜ್ಜ, ಥೇಟ್ ಪಟದಲ್ಲಿನ ಆಂಜನೇಯನ ರೀತಿಯಲ್ಲಿ, ಅರೆ ಕಣ್ಣು ಮುಚ್ಚಿ ಪ್ರಾರ್ಥನೆ ಮಾಡುತ್ತಿದ್ದರೆ, ಆಂಜನೇಯನ ಭಕ್ತಿಗಿಂತ, ನಮ್ಮಜ್ಜನ ಭಕ್ತಿ ಹೆಚ್ಚು ಅನ್ನಿಸುತ್ತಿತ್ತು. ಹಾಗೇ ದೀರ್ಘದಂಡ ನಮಸ್ಕಾರ ಮಾಡಿ ಎದ್ದರೆ ನಮ್ಮಜ್ಜ ಯಾವುದೋ ಲೋಕದಿಂದ, ಈ ಲೋಕಕ್ಕೆ ಇಳಿದು ಬಂದಂತೆ ಅನ್ನಿಸಿತ್ತಿತ್ತು. ಪ್ರಾರ್ಥನೆ ಮುಗಿಸಿ ದೇವರ ಕೋಣೆಯಿಂದ ನಮ್ಮಜ್ಜ ಆಚೆ ಬಂದರೆ, ಅಲೌಕಿಕ ಲೋಕದಿಂದ ಲೌಕಿಕ ಲೋಕಕ್ಕೆ ಧಿಡೀರನೆ ಬಂದಿಳಿದ ದೂತನಂತೆ, ತಕ್ಷಣ ಅಲ್ಲಿದ್ದ ಎಲ್ಲಾ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ, ನಗಿಸಿ, ತಾವು ತಮ್ಮ ದೈನಂದಿನ ದಿರಿಸು ಧರಿಸಿ ಬರಲು ತಮ್ಮ ರೂಮಿಗೆ ಹೂಗುತ್ತಿದ್ದರು. ಅವರು ಬರುವಷ್ಟರಲ್ಲಿ ನಾವೆಲ್ಲಾ ಸೇರಿ, ನಡುಮನೆಯಲ್ಲಿ ತಿಂಡಿ ತಿನ್ನಲು ಚಾಪೆಗಳನ್ನೂ, ತಟ್ಟೆ ಲೋಟಗಳನ್ನೂ ಜೋಡಿಸಿ ಇಡುತ್ತಿದ್ದೆವು. ಸುಮಾರು 10 ರಿಂದ 20 ಜನ ಒಟ್ಟಿಗೆ ತಿಂಡಿಗೆ ಕೂರುತ್ತಿದ್ದೆವು. ಅಜ್ಜ, ಬಿಳಿ ಕಚ್ಚೆ, ಜುಬ್ಬಾ ಧರಿಸಿ, ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು, ಬಂದು ನಮ್ಮೆಲ್ಲರ ಜೊತೆ ತಿಂಡಿಗೆ ಕೂರುತ್ತಿದ್ದರು.

ಶಿವಮೊಗ್ಗದ ಅಜ್ಜನ ಮನೆಯ ಸುಪ್ರಸಿದ್ದ ತಿಂಡಿ ಎಂದರೆ, ಹುಳಿ ಚಿತ್ರಾನ್ನ. ಚಿತ್ರಾನ್ನದ ಗೊಜ್ಜು ದಿನದ ಎಲ್ಲಾ ವೇಳೆಯಲ್ಲೂ ಅಡುಗೆಮನೆಯಲ್ಲಿ ಸಿದ್ಧವಿರುತ್ತಿತ್ತು. ಅಜ್ಜನ ಮನೆಯ ಇನ್ನೊಂದು ಪ್ರಸಿದ್ದ ವ್ಯಂಜನವೆಂದರೆ, ಕೆಂಡದ ಮೇಲೆ ಸುಟ್ಟ ಹುರುಳಿ ಹಪ್ಪಳ. ಬೇಸಿಗೆ ರಜದಲ್ಲಿ, ಅಜ್ಜನ ಮನೆಯಲ್ಲಿ, ಬೆಳಿಗ್ಗೆ ಹುರುಳಿ ಹಪ್ಪಳದ ಹಿಟ್ಟನ್ನು, ಗಂಡು ಮಕ್ಕಳಾದ ನಾವುಗಳು ಒರಳಲ್ಲಿ ಕುಟ್ಟಿ ಕುಟ್ಟಿ ಹದಕ್ಕೆ ತಂದು ಅದರ ಮೇಲೆ ಒದ್ದೆ ಬಟ್ಟೆ ಹಾಕಿಟ್ಟು ನಂತರ ಮಧ್ಯಾಹ್ನ ಅದನ್ನು ಒತ್ತಿಕೊಡುವ ಹೆಂಗಸರುಗಳಿಂದ ಪಡೆದು, ಮನೆ ಮೇಲೆ ಹಾಸಿದ ಹಳೆ ಪಂಚೆ ಮೇಲೆ ಒಣಗಿ ಹಾಕಿ, ನಂತರ ಕಾಗೆಗಳಿಂದ ಅವುಗಳನ್ನು ರಕ್ಷಿಸಿ, ಒಣಗಿದ ಹಪ್ಪಳಗಳನ್ನು ದೊಡ್ಡ ಡಬ್ಬಾಗಳಲ್ಲಿ ತುಂಬಿ ಇಡುತ್ತಿದ್ದೆವು. ಈ ಹುರುಳಿ ಹಪ್ಪಳ, ಕೆಂಡದ ಮೇಲೆ ಸುಟ್ಟರೆ, ಚಿತ್ರಾನ್ನದ ಜೊತೆಗೆ ಒಳ್ಳೆ ಕುರುಕು ವ್ಯಂಜನ ಅಂತ ನನಗೆ ಗೊತ್ತಾಗಿದ್ದೇ ನಮ್ಮ ಅಜ್ಜನ ಮನೆಯಲ್ಲಿ. ಹುರುಳಿ ಹಪ್ಪಳ ಇಲ್ಲದ್ದಿದ್ದರೆ, ನಮ್ಮಜ್ಜನ ತಿಂಡಿ ಮತ್ತು ಊಟ ಎರಡೂ ಅಪೂರ್ಣ. ತಿಂಡಿಯ ಕೊನೆಯಲ್ಲಿ ಚೆನ್ನಾಗಿ ಕಾಯಿಸಿದ ಗಟ್ಟಿ ಹಾಲು, ಲೋಟದ ತುಂಬಾ ಕೊಡುತ್ತಿದ್ದರು. ಅಜ್ಜ ಅದರಲ್ಲಿ ಸ್ವಲ್ಪ ಉಳಿಸಿ, ಮನೆಯಲ್ಲಿದ್ದ ಉಗ್ರ ಸ್ವರೂಪಿ ನಾಯಿ “ರಾಜು”ಗೆ ಹಾಕಿ, ನಂತರ ಹೊರಡುತ್ತಿದ್ದರು.

ಅಜ್ಜನ ಕಚ್ಚೆ ಪಂಚೆಯಂತೆ ಅವರ ಅವಿನಾಭಾವದ ಇನ್ನೊಂದು ವಸ್ತು, ಅವರ “ಸುವೇಗ” ಮೊಪೆಡ್. ಆಗ ಇದ್ದ ಒಂದೇ ಮೊಪೆಡ್ ಎಂದರೆ, ಸುವೇಗ, ಅಷ್ಟೇನೂ ಬಲಯುತವಾಗಿರದ ಇಂಜಿನ್ ಹೊಂದಿದ್ದ ಸುವೇಗವನ್ನು ಏರುದಾರಿಯಲ್ಲಿ ಪೆಡಲ್ ಮಾಡಿಕೊಂಡೇ ಹೋಗಬೇಕಾಗಿತ್ತು. ಅಂತಹ ಸುವೇಗಾ ಒಂದರಲ್ಲಿ ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಗೆ ತಮ್ಮ ಕೆಲಸಕ್ಕೆ ಹೊರಟುಬಿಟ್ಟರೆ, ಮತ್ತೆ ವಾಪಸ್ಸಾಗುತ್ತಿದ್ದುದು, ಸರಿಯಾಗಿ ಮಧ್ಯಾಃಹ್ನ 12 ಗಂಟೆಗೆ. ತಕ್ಷಣ ಮನೆ ದಿರಿಸು ತೊಟ್ಟು 12.30 ಕ್ಕೆ ಊಟಕ್ಕೆ ಕುಳಿತಿಕೊಳ್ಳುತ್ತಿದ್ದರು. ಊಟದ ನಂತರ, ಒಂದು ಗಂಟೆ ನಿದ್ದೆ, ನಂತರ, ರೂಮಿನಲ್ಲೇ ಅಧ್ಯಯನ, ನಂತರ, ಸುಮಾರು 2 ಗಂಟೆಗೆ ಮತ್ತೆ ಕೆಲಸಕ್ಕೆ. ಮನೆಗೆ ವಾಪಸಾಗುತ್ತಿದ್ದುದು, ಸಂಜೆ ಸುಮಾರು 5 ಗಂಟೆಗೆ. ರಾತ್ರಿ ಏಳರವರೆಗೆ, ವ್ಯವಹಾರದ ಲೆಕ್ಕ ಬರೆದು, ಮತ್ತೆ ಸಾಯಂಕಾಲದ ಪ್ರಾರ್ಥನೆ, ನಂತರ ಊಟ, ಅಮೇಲೆ ಮಕ್ಕಳು ಮೊಮ್ಮಕ್ಕಳೊಂದಿಗೆ ಸ್ವಲ್ಪ ಹರಟೆ. ರಾತ್ರಿ ಹತ್ತಕ್ಕೆಲ್ಲಾ ಕಣ್ತುಂಬಾ ನಿದ್ದೆ. ಎಲ್ಲವೂ ಗಡಿಯಾರದಂತೆ ಕರಾರುವಾಕ್ಕು. ಇದು ನಮ್ಮಜ್ಜನ ದಿನಚರಿ.

ಶನಿವಾರ ಮನೆಯಲ್ಲಿ ಸಂಜೆ ಸಡಗರ. ಆ ದಿನ ಸಂಜೆ ಐದು ಗಂಟೆಗೆಲ್ಲಾ ನಾವು ಮಕ್ಕಳೆಲ್ಲಾ ಸೇರಿ, ನಡುಮನೆಯಲ್ಲಿ ದೊಡ್ಡ ಪರದೆ ಕಟ್ಟಿ, ರಾಮನ ಫೋಟೋ ತಂದು ವೇದಿಕೆ ಕಟ್ಟಿ, ಹೂವಿನ ಅಲಂಕಾರ ಮಾಡಿ, ಭಜನೆಗೆ ಕೂತರೆ, ಸುಮಾರು ಏಳು ಗಂಟೆಯವರೆಗೆ ಭಕ್ತಿರಸದ ಹೊಳೆ ಹರಿಯುತ್ತಿತ್ತು. ನಂತರದ್ದೇ ನಿಜವಾದ ನಂದಗೋಕುಲದ ಅವತಾರ. ಎಲ್ಲಾ ಮೊಮ್ಮಕ್ಕಳೂ, ಮರಿಮಕ್ಕಳೂ ಅಜ್ಜನ ಜೊತೆ ಅಂಗಳದಲ್ಲಿ ಕುಳಿತರೆ, ಮಂಡಕ್ಕಿ-ಕಾರ ಸೇವೆ ಶುರು. ಮೆಲ್ಲಗೆ ಮಂಡಕ್ಕಿ ಮೆಲ್ಲುತ್ತಾ, ಅಜ್ಜನ ನೀತಿಕತೆಗಳನ್ನು ಕೇಳುತ್ತಾ ಯಾವುದೋ ಲೋಕಕ್ಕೆ ಹೋಗಿಬಿಡುತ್ತಿದ್ದೆವು. ಈ ಸಂದರ್ಭದಲ್ಲಿ ಅಜ್ಜನಿಗೆ ತರಲೆ ಪ್ರಶ್ನೆ ಕೇಳಿ ಅವರ ಕಾಲೆಳೆಯುವ ಕೆಲಸ ನನ್ನದಾಗಿತ್ತು. ಆಗೆಲ್ಲಾ ಅವರಿಂದ ಬರಿತ್ತಿದ್ದ ಉದ್ಘಾರ “...ಪೋಕರಿ,...ಪೋಕರಿ...” ನಂತರ ದೇಶಾವರಿ ನಗು. ಅಜ್ಜ ಈ ರೀತಿ ಮಕ್ಕಳ ಜೊತೆ ಸದರದಿಂದ ಇರುವುದೇ ನಮಗೆ ಆಶ್ಚರ್ಯ ಮತ್ತು ಖುಷಿಯ ಸಂಗತಿಯಾಗಿತ್ತು. ಯಾರೋ ನಮ್ಮ ವಯಸ್ಸಿನ ಮಕ್ಕಳ ಜೊತೆ ಆಡಿದಷ್ಟೇ ಸಹಜವಾಗಿ ಅಜ್ಜನ ಜೊತೆಗೆ ಆಡುತ್ತಿದ್ದೆವು.

ನಾನು ಸ್ವಲ್ಪ ಬೆಳೆದಂತೆಲ್ಲಾ, ಅಜ್ಜನನ್ನು ಸ್ವಲ್ಪ ಸ್ವಲ್ಪವೇ ಅರಿಯಲು ಪ್ರಯತ್ನಿಸುತ್ತಿದ್ದೆ. ಬೆಂಗಳೂರಿಗೆ ಅಜ್ಜ ಬಂದರೆ ಅಜ್ಜನ ಎಲ್ಲಾ ಕೆಲಸಗಳಿಗೂ ಹೆಗಲು ಕೊಟ್ಟು ಅವರೊಂದಿಗೆ ಸುತ್ತಲು ಹೊರಟುಬಿಡುತ್ತಿದ್ದೆ. ಅವರು ಗಾಂಧಿವಾದಿಯಾಗಿದ್ದರೂ, ತಮ್ಮ ಕುಲಸ್ತರ ಏಳಿಗೆಗೆ ತುಂಬಾ ಕಾಳಜಿ ವಹಿಸುತ್ತಿದ್ದರು. ಒಮ್ಮೆ ಇದೇ ವಿಷಯಕ್ಕೆ ಅವರ ಜೊತೆ ಮಾತಿಗೆ ಇಳಿದಾಗ, “ಅಜ್ಜ, ಗಾಂಧಿತಾತ ಎಲ್ಲಾ ಜಾತಿಯವರೂ ಒಂದೇ ಅಂದರೆ, ನೀವ್ಯಾಕೆ ನಮ್ಮ  ಜನಾಂಗದವರ ಪರವಾಗಿ ಮಾತ್ರ ಕೆಲಸ ಮಾಡುತ್ತೀದ್ದೀರ” ಎಂದರೆ, “ಅಯ್ಯೋ, ಪೋಕರಿ, ಅದು ಹಾಗಲ್ಲಾ, ಸಮಾಜಸೇವೆಗೆ ಇದೊಂದು ದಾರಿ ಅಷ್ಟೆ. ಈ ದಿನ ನಿನಗೇ ಗೊತ್ತಿರುವಂತೆ, ಸಮಾಜದ ಮೇಲ್ವರ್ಗದವರಾದ ಬ್ರಾಹ್ಮಣರಿಗೆ, ವೀರಶೈವರಿಗೆ, ಕೆಳವರ್ಗದ ಕುರುಬರಿಗೆ, ಈಡಿಗರಿಗೆ, ದಲಿತರಿಗೆ, ಎಲ್ಲಾ ಮಕ್ಕಳ ಅಭ್ಯಾಸಕ್ಕಾಗಿ ಮುಖ್ಯ ನಗರಗಳಲ್ಲಿ ಉಚಿತ ಹಾಸ್ಟೆಲ್ ಗಳಿವೆ. ಆದರೆ, ತೀರ ಹಿಂದುಳಿದ ನಮ್ಮ ಜನಾಂಗದವರಿಗೆ ಈ ರೀತಿಯ ಸೌಲಭ್ಯವಿಲ್ಲ. ನಿಮ್ಮಪ್ಪ ಕೂಡ ದಾವಣಗೆರೆಯ ಯಾವುದೋ ಜನಾಂಗದ ಉಚಿತ ಹಾಸ್ಟೆಲ್ ನಲ್ಲಿ ಇದ್ದುಕೊಂಡು, ಊಟಕ್ಕೆ “ವಾರಾನ್ನ” ಮಾಡಿಕೊಂಡು ಬೆಳೆದವರೇನೆ. ಅವರಿಗೆ ಈ ಹಾಸ್ಟೆಲ್ ಗಳಲ್ಲಿ ವಸತಿ ಸಿಗುತ್ತಿತ್ತು. ಆದರೆ, ಊಟಕ್ಕೆ, ವಾರದ ಒಂದೊಂದು ದಿನ ಒಬ್ಬೊಬ್ಬ ದಾನಿಗಳ ಮನೆಯಲ್ಲಿ ಊಟ. ಆ ದಿನ ಅವರ ಮನೆಯ ಎಲ್ಲಾ ಕೆಲಸಗಳೂ ಇವರ ಪಾಲಿಗೆ, ಬಾವಿಯಿಂದ ನೀರು ಸೇದಿ ಹಾಕುವುದು, ಸೌದೆ ಒಡೆಯುವುದು.. ಇತ್ಯಾದಿ. ಹೀಗೆ ನಿಮ್ಮಪ್ಪ ಹಳ್ಳಿಯಿಂದ ಬಂದು ಓದಿಕೊಂಡರು. ಅವರಂತಹ ಪ್ರತಿಭಾನ್ವಿತ ಬಡವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದಲೇ ನಾನು ನಮ್ಮ ಕುಲಸ್ತರ ಸಮಾಜದ ಏಳಿಗೆಗೆ ಈ ರೀತಿ ಕೆಲಸ ಮಾಡಿತ್ತಿದ್ದೇನೆ. ಮುಂದೆ ನಾವು ಕಟ್ಟಲಿರುವ ಹಾಸ್ಟೆಲ್ ನಲ್ಲಿ ನಮ್ಮ ಕುಲಸ್ತರ ಜೊತೆಗೆ ಎಲ್ಲಾ ಹಿಂದುಳಿದ ಜನಾಂಗದ ಮಕ್ಕಳೂ ಇರುತ್ತಾರೆ” ಎಂದರು.

ನಂತರ ಹರಸಾಹಸ ಪಟ್ಟು ಬೆಂಗಳೂರಿನಲ್ಲಿ ನಮ್ಮ ಕುಲಸ್ತರ ಉಚಿತ ಹಾಸ್ಟೆಲ್ ಒಂದನ್ನು ಸ್ಥಾಪಿಸುವುದರಲ್ಲಿ ಮಹತ್ವವಾದ ಪಾತ್ರ ವಹಿಸಿದ್ದರು. ಅವರು ನಮ್ಮ ಜನಾಂಗದವರ ಅಖಿಲ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದಾಗ, ರಾಜ್ಯದ ಉದ್ದಗಲಕ್ಕೂ ಓಡಾಡಿ, ಜನಾಂಗದಲ್ಲಿ ಸ್ವಲ್ಪ ಮಟ್ಟಿಗೆ ಅನುಕೂಲಸ್ತ ಇರುವರ ಮನ ಒಲಿಸಿ ಹಣ ಸಂಗ್ರಹಿಸಿ, ಹಾಸ್ಟೆಲ್ ನಿರ್ಮಾಣಕ್ಕಾಗಿ ತುಂಬಾ ಕಷ್ಟಪಟ್ಟರು. ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ, ತಮ್ಮ ಸ್ವಂತ ಹಣದಿಂದ ಈ ಓಡಾಟಕ್ಕೆ ಎಗ್ಗಿಲ್ಲದೇ ಖರ್ಚು ಮಾಡುತ್ತಿದ್ದರು. ಅವರ ಜೊತೆ ಅವರ ಅನೇಕ ಸ್ನೆಹಿತರುಗಳು ಹೆಗಲು ಕೊಟ್ಟು ಕೆಲಸ ಮಾಡಿರುವುದನ್ನೂ ಮರೆಯಲು ಹಾಗಿಲ್ಲ. ಆ ಮಹನೀಯರ ಹೆಸರುಗಳೆಲ್ಲಾ ನನಗೆ ಈಗ ನೆನಪಿಲ್ಲ. ಆದರೆ, ಈ ಮಹನೀಯರು, ನಮ್ಮ ಅಜ್ಜನ ಎಲ್ಲಾ ಕಾರ್ಯಕ್ರಮಗಳ ಅನುಮೋದಕರೂ, ಬೆಂಬಲಿಗರೂ ಆಗಿದ್ದರು. ನಮ್ಮ ಅಜ್ಜ ಈ ಹಾಸ್ಟೆಲ್ ನಿರ್ಮಾಣಕ್ಕಾಗಿ ಎಷ್ಟೋಂದು ತಲೆ ಕೆಡಿಸಿಕೊಂಡಿದ್ದರೆಂದರೆ, ತಿಂಗಳಿಗೊಮ್ಮೆ ಬೆಂಗಳೂರಿಗೆ ಬಂದು, ಗೊತ್ತಿದ್ದ ಎಲ್ಲರ ಮನೆಗೆ ಹೋಗುತ್ತಿದ್ದರು. ಆಗೆಲ್ಲಾ ಅವರಿಗೆ ಸಾಥ್ ನೀಡುತ್ತಿದ್ದುದು ನಾನು. ಅಜ್ಜನನ್ನು ಕರೆದುಕೊಂಡು, ಸಿಟಿ ಬಸ್ಸಿನಲ್ಲಿ ಅಡ್ರೆಸ್ಸ್ ಹಿಡಿದುಕೊಂಡು ಹೊರಟರೆ, ವಾಪಸ್ಸು ಬರುತ್ತಿದ್ದುದು ಸಾಯಂಕಾಲಕ್ಕೇನೆ. ಮಧ್ಯೆ ಊಟ ಸಿಕ್ಕರೆ ಉಂಟು, ಇಲ್ಲದ್ದಿದ್ದರೆ ಒಂದು ಅಥವಾ ಎರಡು ಬಾಳೆಹಣ್ಣನ್ನು ತಿಂದು ನೀರು ಕುಡಿದು ಮತ್ತೊಬ್ಬರ ಮನೆ ಹುಡುಕಾಟ. ಎಲ್ಲರ ಮನೆಯಲ್ಲೂ ಅಜ್ಜನ ಭಾಷಣ ಮತ್ತು ಉದಾರ ದಾನಕ್ಕಾಗಿ ಮನವೊಲಿಕೆ. ತುಂಬಾ ಬಳಲಿದ್ದರೂ ತೋರಿಸಿಕೊಳ್ಳದೇ ಮತ್ತೆ ಮುಂದಿನ ಮನೆ ಅಥವಾ ಪರಿಚಿತರು ಇರುವ ಕಛೇರಿಗೆ ಪಯಣ. ಒಂದು ಪ್ರಕರಣ ನನಗೆ ಇನ್ನೂ ನೆನೆಪಿದೆ. ಆ ದಿನ ಮಟ ಮಟ ಮಧ್ಯಾಹ್ನ, ಸುಮಾರು ಎರಡು ಮನೆಗಳಲ್ಲಿ ಯವುದೇ ಚಂದಾ ವಸೂಲಿಯಾಗಿರಲ್ಲಿಲ್ಲ. ಹೊಟ್ಟೆ ಹಸಿವು, ಏನೂ ದಕ್ಕದ್ದಕ್ಕೆ ಬೇಸರ. ಇವೆಲ್ಲದರ ಮಧ್ಯೆ, ಮತ್ತೊಬ್ಬರ ಮನೆಗೆ ಬಸವಳಿದುಕೊಂಡು ಹೋದಾಗ, ಅವರ ಮನೆಯೊಳಗಿನಿಂದ ಘಮ ಘಮ ಸಾರು, ಹಪ್ಪಳ ಕರೆದ ವಾಸನೆ ಬರುತ್ತಿದ್ದರೂ, ಊಟಕ್ಕೆ ಕರೆಯದೇ, ಬರಿಯ ಮಜ್ಜಿಗೆ ಕೊಟ್ಟು ಸಾಗಹಾಕಿದರು. ಆಗಲೂ ನಮ್ಮಜ್ಜ, ಆ ಮನೆಯವರಿಗೆ ಹೃತ್ಪೂರ್ವಕವಾಗಿ ವಂದಿಸಿ, “ದೇವರು ನಿಮ್ಮ ಮೂಲಕ ನಮಗೆ ಮಜ್ಜಿಗೆ ಕೊಟ್ಟ” ಎಂದು ಹೇಳಿ ನಿರಾಕಾರ ದೇವರಂತೆ ಮುಂದೆ ನಡೆದರು.

ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಸರ್ಕಾರೀ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ನಮ್ಮ ಜನಾಂಗದ ಒಬ್ಬರನ್ನು ನೋಡಲು ಬೆಳಿಗ್ಗೆಯೇ ಯಥಾಪ್ರಕಾರ, ನಾನು ಮತ್ತು ನಮ್ಮ ಅಜ್ಜ, ಸಿಟಿ ಬಸ್ಸಿನಲ್ಲಿ ಹೋದೆವು. ಆ ವೈದ್ಯರ ಕೊಠಡಿ ಮುಂದೆ ಅವರನ್ನು ನೋಡಲು ಕುಳಿತ ರೋಗಿಗಳ ಮಧ್ಯೆ ಕುಳಿತೆವು. ಸುಮಾರು ಅರ್ಧ ಗಂಟೆ ತಡವಾಗಿ ಬಂದ ವೈದ್ಯರನ್ನು ಕಂಡು ನಮ್ಮ ಅಜ್ಜ ಎಂದು ನಿಂತು ದೇಶಾವರೀ ನಗೆ ಬೀರುತ್ತಾ ಕೈ ಮುಗಿದು, “ನಮಸ್ಕಾರ ಡಾಕ್ಟರೇ,...” ಎಂದರು. ಅದನ್ನು ಕಂಡ ತಕ್ಷಣ ಆ ಡಾಕ್ಟರು ಮುಖ ಹುಳ್ಳಗೆ ಮಾಡಿಕೊಂಡು, ಸ್ವಲ್ಪ ಕೂತಿರಿ, ಇವರಿಗೆಲ್ಲಾ ಚಿಕಿತ್ಸೆ ಕೊಟ್ಟು ನಂತರ ಮಾತಾನುಡುತ್ತೇನೆ ಎಂದು ಒಳಗೆ ಹೋದರು. ಸುಮಾರು ಎರಡು ಗಂಟೆಯವರಿಗೆ ನಮ್ಮಿಬ್ಬರಿಗೂ, ಬೆಂಚ್ ಕಾಯುವ ಕೆಲಸ. ಆ ರೂಮಿನೊಳಗೆ ಹೋಗಿ ಹೊರಗೆ ಬರುತ್ತಿದ್ದ ನರ್ಸ್ ಗಳನ್ನೂ, ಬೇರೆ ಡಾಕ್ಟರುಗಳನ್ನೂ, ತೋರಿಸಲು ಹೋಗಿ ಬರುತ್ತಿದ್ದ ರೋಗಿಗಳನ್ನೂ ನೋಡುತ್ತಾ ಕುಳಿತೆವು. ನಂತರ, ಆಚೆ ಬಂದ ನಮ್ಮ ಪರಿಚಿತ ಡಾಕ್ಟರ್, ಬೇರೆಲ್ಲಿಗೋ ಹೋಗುತ್ತಿದ್ದುದನ್ನು ಕಂಡು, ನಾನು ಅವರ ಹಿಂದೆ ಓಡಿದೆ. ಆ ಡಾಕ್ಟರು, “ಕೂತಿರಯ್ಯ, ವಾರ್ಡ್ ಗೆ ಹೋಗಿ ಬರುತ್ತೇನೆ..” ಎಂದು ಸಣ್ಣ ದನಿಯಲ್ಲಿ ಗದರಿ ಹೋದರು. ನಾನು ವಾಪಸ್ಸು ಬಂದು ಅಜ್ಜನಿಗೆ ಅದನ್ನೇ ಹೇಳಿದೆ. ಮತ್ತೆ ಸುಮಾರು ಒಂದೂವರೆ ಗಂಟೆ ಆಯ್ತು. ಡಾಕ್ಟರ ಸುಳಿವಿಲ್ಲ. ನಾನು ತಡೆಯಲಾರದೇ, ಆ ಡಾಕ್ಟರು ಹೋಗಿದ್ದ ವಾರ್ಡ್ ಕಡೆ ಹೋಗಿ ಹುಡುಕಿದೆ. ಎಲ್ಲೂ ಕಾಣಲಿಲ್ಲ. ಅಲ್ಲಿ ಇದ್ದ ನರ್ಸ್ ಒಬ್ಬರನ್ನು ವಿಚಾರಿಸಿದೆ. “ಅವರು ಊಟಕ್ಕೆ ಹೋದರು. ಮತ್ತೆ ಬರುವುದು ಯಾವಾಗಲೋ..” ಎಂದರು. ಸಪ್ಪೆ ಮುಖದಿಂದ ವಾಪಸ್ಸು ಬಂದು ಅಜ್ಜನಿಗೆ ಹೇಳಿದೆ. ಆ ಮನುಷ್ಯ ನಮಗೆ, “ಚಂದಾ ಕೊಡಲಾಗುವುದಿಲ್ಲ ಎಂದು ನೇರವಾಗಿ ಹೇಳಬಹುದಿತ್ತು. ಆದರೆ, ಹೀಗೆ ಬೆಳಿಗ್ಗೆಯಿಂದ, ಮಧ್ಯಾಹ್ನದವರೆಗೆ ಕಾಯಿಸಿ, ಇನ್ನೊಂದು ಬಾಗಿಲ ಮೂಲಕ ಹೋರಟು ಹೋದರಲ್ಲ” ಎಂದು ಬೈದುಕೊಂಡೆ. ಆದರೆ ನಮ್ಮಜ್ಜ, ಅದೇ ದೊಡ್ಡ ದೇಶಾವರಿ ನಗು ನಕ್ಕು, “ಪೋಕರಿ.., ಪೋಕರಿ,.. ನನ್ನ ನೋಡಿ ಹೆದರಿ ಓಡಿ ಬಿಟ್ಟ., ಅಯಿತು ನಡಿ, ಮುಂದಿನ ಮನೆಯವರಾರು ನೋಡು.” ಎನ್ನುತ್ತಾ ಎದ್ದರು. ನಮ್ಮಜ್ಜನ ಮುಖದಲ್ಲಿ ಸ್ವಲ್ಪವೂ ಕೋಪವಿರಲಿಲ್ಲ. ಈ ಸ್ಥಿತಪ್ರಜ್ಞತೆ ಕಂಡು ನಾನಂತೂ ದಂಗಾಗಿದ್ದೆ. ಇವೆಲ್ಲಾ ನನಗೆ ನನ್ನ ಜೀವನದಲ್ಲಿ ಮರೆಯಲಾರದ ಪಾಠಗಳನ್ನು ಕಲಿಸಿವೆ. ಇವೆಲ್ಲದರ ನಡುವೆ, ಆಷ್ಟೇನೂ ಸ್ಥಿತಿವಂತರಲ್ಲದ ಅನೇಕರು, ತಮ್ಮ ಕೈಲಾದ ಧನ ಸಹಾಯ ಮಾಡುತ್ತಿದ್ದುದು, ಹಾಗೇ ನಮ್ಮಜ್ಜನ ಮೇಲಿನ ಅಭಿಮಾನದಿಂದ ತಾವೇ ಗೇಟಿನವರೆಗೆ ಬಂದು ಬೀಳ್ಕೊಟ್ಟು, ಸ್ವಪ್ರೇರಣೆಯಿಂದ ರಸೀದಿ ಪುಸ್ತಕ ಪಡೆದು ಎಷ್ಟೋ ಅಷ್ಟು ಹಣ ಸಂಗ್ರಹ ಮಾಡಿ ಸಹಾಯ ಮಾಡಿದ ಸಹೃದಯರೂ ಇದ್ದರು.

ಈ ಹಾಸ್ಟೆಲ್ ನಿರ್ಮಾಣಕ್ಕೆ ಚಂದಾ ಎತ್ತಲು, ಸಂಘದ ವತಿಯಿಂದ ನಮ್ಮಜ್ಜ ರಸೀದಿ ಪುಸ್ತಕಗಳನ್ನು ಮುದ್ರಿಸಿ, ಪರಿಚಿತರೆಗೆಲ್ಲಾ ತಲುಪಿಸಿ, ಸಾರ್ವಜನಿಕರಿಂದಲೂ ಸಂಗ್ರಹ ಮಾಡಿಕೊಡಲು ವಿನಂತಿಸುತ್ತಿದ್ದರು. ಮತ್ತೊಮ್ಮೆ ಬೆಂಗಳೂರಿಗೆ ಬಂದರೆ ಅವರ ಮನೆಗೆ ಹೋಗಿ, ಹಣ ಸಂಗ್ರಹ ಆಗಿದ್ದರೆ, ಅದನ್ನು ಪಡೆದುಕೊಂಡು, ಇಲ್ಲದ್ದಿದ್ದರೆ, ರಸೀದಿ ಪುಸ್ತಕ ವಾಪಸ್ಸು ಪಡೆದು ಮತ್ತೊಬ್ಬರ ವಿಳಾಸ ಪಡೆದು ಮುಂದೆ ಹೋಗುತ್ತಿದ್ದರು. ಈ ಪ್ರಕರಣದಲ್ಲಿ, ಅನೇಕರು, ರಸೀದಿ ಪುಸ್ತಕವನ್ನೂ ವಾಪಸ್ಸು ಕೊಡದೇ ತುಂಬಾ ಸತಾಯಿಸಿದರು. ಇಂತಹ ಒಂದು ಪ್ರಕರಣದಲ್ಲಿ, ಆ ಮಹನೀಯರಿಗೆ ಉದ್ದೇಶಿಸಿ ಬರೆದ ಪತ್ರವನ್ನು ನನ್ನ ಕೈಗೆ ಕೊಟ್ಟು, ಅವರು ಸಿಕ್ಕಾಗ ಅವರಿಗೆ ಕೊಟ್ಟು, ಹಣ ಸಂಗ್ರಹವಾಗಿದ್ದರೆ ಆ ಹಣ ಮತ್ತು ರಸೀದಿ ಪುಸ್ತಕ ವಾಪಸ್ಸು ಪಡೆಯಲು ಹೇಳಿಕೊಟ್ಟು ವಾಪಸ್ಸು ಶಿವಮೊಗ್ಗಕ್ಕೆ ಹೋಗಿಬಿಟ್ಟರು. ಬೆಂಗಳೂರಿನ ಅವರ ಮನೆಗೆ ಅನೇಕ ಬಾರಿ ಹೋದರೂ ನನಗೆ ಅವರ ದರ್ಶನ ಆಗಲಿಲ್ಲ. ನಮ್ಮಜ್ಜ ತಮ್ಮ ಕೈಯಿಂದ ಬರೆದುಕೊಟ್ಟ ಆ ಪತ್ರ ನನ್ನ ಬಳಿ ನನ್ನ ನೆಚ್ಚಿನ ದಾಖಲೆಯಾಗಿ ಉಳಿದುಹೋಯಿತು. ಈ ಪತ್ರದ ನಕಲನ್ನು ಇಲ್ಲಿ ಕೊಟ್ಟಿದ್ದೇನೆ.



ಅಜ್ಜನ ಇನ್ನೊಂದು ಗುಣ ವಿಶೇಷಣವೆಂದರೆ, ತಾವು ನಂಬಿದ ತತ್ತ್ವಗಳನ್ನು ತಾವು ಎಷ್ಟೇ ಕಟ್ಟುನಿಟ್ಟಾಗಿ ಆಚರಿಸುತ್ತಿದ್ದರೂ, ಬೇರೆಯವರ ಮೇಲೆ ಹೇರಲು ಹೋಗುತ್ತಿರಲಿಲ್ಲ. ಒಂದು ಉದಾಹರಣೆಯೆಂದರೆ, ತಾವು ಮಾಂಸಾಹಾರ ತ್ಯಜಿಸಿದ್ದರೂ, ತಮ್ಮ ಮನೆಯರಿಗೆ ಅದನ್ನು ತ್ಯಜಿಸಲು ಒತ್ತಾಯ ಹೇರಲಿಲ್ಲ. ತಮ್ಮ ಮನೆಯಲ್ಲಿ ಮಾಂಸಾಹಾರ ತಯಾರಿಸಿ ಒಟ್ಟಿಗೆ ಊಟಕ್ಕೆ ಬಡಿಸಿದರೆ, ತಾವು ಮಾತ್ರ ಸಸ್ಯಾಹಾರ ಸೇವೆಸಿ ತೃಪ್ತಿಯಿಂದ ಎದ್ದುಬಿಡುತ್ತಿದ್ದರು. ತಾವು ತಣ್ಣೀರಿನ ಸ್ನಾನ ಮಾಡುತ್ತಿದ್ದರೂ, ಮನೆಯೊಳಗಿನ ಇನ್ನೊಂದು ಸ್ನಾನದ ಮನೆಯಲ್ಲಿ, ಸೌದೆಯ ಒಲೆ ಹಚ್ಚಿದ ಹಂಡೆ ಕೂಡಿಸಿ, ಬೇರೆಯವರಿಗೆ ಬಿಸಿನೀರಿನ ಸ್ನಾನಕ್ಕೆ ಅನುವು ಮಾಡಿಕೊಟ್ಟಿದ್ದರು.

ನನ್ನ ಅಜ್ಜನ ಅಧ್ಯಯನಶೀಲತೆ ನನಗೆ ಬೆರಗು ತಂದಿತ್ತು. ಪ್ರೈಮರಿ ಸ್ಕೂಲನ್ನು ದಾಟದ ನಮ್ಮಜ್ಜ, ಸ್ವಂತ ಪ್ರಯತ್ನದಿಂದ ಕನ್ನಡ ಚೆನ್ನಾಗಿ ಓದುತ್ತಿದ್ದರು ಹಾಗೂ ಬರೆಯುತ್ತಿದ್ದರು. ಅವರ ಬಳಿಯಲ್ಲಿ, ರಾಮಕೃಷ್ಣ ಮಠದವರು ಪ್ರಕಟಿಸಿದ ಪುಸ್ತಕಗಳಿದ್ದವು. ಅವುಗಳನ್ನು ತಮ್ಮ ಬಿಡುವಿನ ವೇಳೆ ಓದುತ್ತಿದ್ದರು ಹಾಗೂ ಅಲ್ಲಿನ ವಿಷಯಗಳ ಬಗ್ಗೆ ವಿಚಾರವಂತರ ಜೊತೆಗೆ ಚರ್ಚಿಸುತ್ತಿದ್ದರು. ತಮ್ಮ ಇಳಿವಯಸ್ಸಿನಲ್ಲಿ ಹಿಂದಿ ಪುಸ್ತಕ ಓದಲು ಕಲಿಯುತ್ತಿದ್ದರು. ಎಲ್ಲವೂ ಸ್ವಪ್ರಯತ್ನವೇ. ಅವರ ಈ ನಿರಂತರ ಓದುವ ಬರೆಯುವ ಹವ್ಯಾಸ ನನಗಂತೂ ಮಾದರಿ.

ಮುಂದೆ ಒಮ್ಮೆ ಶಿವಮೊಗ್ಗಕ್ಕೆ ಹೋದಾಗ ನನ್ನ ಬಳಿ ಇದ್ದ “ಕ್ಲಿಕ್-4 ಎಂಬ ಬ್ಲಾಕ್ ಅಂಡ್ ವೈಟ್ ರೋಲ್ ಫಿಲ್ಂನ ಕ್ಯಾಮೆರಾ ತೆಗೆದುಕೊಂಡು, “ಅಜ್ಜಾ, ನಿನ್ನ ನೆನೆಪಿನ ಎಲ್ಲಾ ಸ್ಥಳಗಳನ್ನೂ ತೋರಿಸು” ಎಂದಾಗ, ಅವರದೇ ಸುವೇಗಾದಲ್ಲಿ, ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಅವರ ಜೀವನದ ಒಡನಾಟದ ಜಾಗಗಳಿಗೆ ಕರೆದುಕೊಂಡು ಹೋಗಿ, ಫೋಟೋಗೆ ಪೋಸ್ ಕೊಟ್ಟರು. ಆ ಜಾಗದ ಎಲ್ಲಾ ವಿವರಗಳನ್ನೂ ನನ್ನ ಮುಂದೆ ವಿವರವಾಗಿ ಹೇಳುತ್ತಾ ಭಾವುಕರಾಗಿ ಬಿಡುತ್ತಿದ್ದರು. ಅವರ ಹಳೆಯ ನಾಡಹೆಂಚಿನ ಮನೆ ಮುಂದೆ ಅತಿಭಾವುಕರಾಗಿ ಬಿಕ್ಕಿದ್ದರು. ತಾವು ಹುಟ್ಟಿ ಬೆಳೆದ ಜಾಗಗಳು, ತಾವು ಕಂಟ್ರಾಕ್ಟ್ ಮಾಡಿಸಿದ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು, ಕೊನೆಗೆ, ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿ ಪೋಲೀಸ್ ಬಂದಿಯಾಗಿದ್ದ ಶಿವಮೊಗ್ಗ  ಜೈಲ್ ಎಲ್ಲದರ ಮುಂದೆ, ಸಣ್ಣ ಹುಡುಗನ ಹಾಗೆ ಉತ್ಸಾಹದಿಂದ ಫೋಟೋ ತೆಗೆಸಿಕೊಂಡರು. ನಂತರ, “ನನ್ನ ಜೀವನದ ದಾಖಲೆ ಮಾಡಲು ನೀನೇ ಸರಿ” ಅಂದಿದ್ದರು. ದುರದೃಷ್ಟವಶಾತ್, ಅವರ ಜೀವನದ ಇನ್ನೂ ಹೆಚ್ಚಿನ ಎಲ್ಲಾ ವಿವರಗಳನ್ನು ಅವರ ಬಾಯಿಂದಲೇ ಕೇಳಿ ದಾಖಲಿಸುವ ಆಸೆ, ನನ್ನಲ್ಲಿ ಹಾಗೇ ಉಳಿದುಹೋಯಿತು. ನನ್ನ ವಿಧ್ಯಾಭ್ಯಾಸದ ಮಧ್ಯೆ ಶಿವಮೊಗ್ಗಕ್ಕೆ ಹೋಗಿ ಬರುವುದು ತಪ್ಪಿಹೋಗಿ, ಈ ಅವಕಾಶ ಕಳೆದುಕೊಂಡೆ.

ಅಜ್ಜನ ಜೀವನವೇ ನನಗೆ ಒಂದು ವಿಸ್ಮಯವಾಗಿ ಉಳಿದಿದೆ. ಕೂಲಿಯಾಗಿ ಜೀವನ ಪ್ರಾರಂಭಿಸಿ, ಸರ್ಕಾರೀ ಕಂಟ್ರಾಕ್ಟರ್ ಆಗಿ, ತುಂಬು ಸಂಸಾರ ನಿರ್ವಹಿಸಿ, ಗಾಂಧೀ ತತ್ತ್ವಗಳನ್ನು ಅನುಸರಿಸಿ, ಕೊನೆಯವರೆಗೂ ಯಾರ ಮುಂದೆಯೂ ಸ್ವಂತಕ್ಕಾಗಿ ಬೇಡದೇ, ನಂಬಿದ ಎಲ್ಲರಿಗೂ, ಅವರವರಿಗೆ ಸ್ಪಷ್ಟ ದಾರಿ ತೋರಿಸಿ, ತಮ್ಮಷ್ಟಕ್ಕೆ ತಾವು ಬೇರೊಂದು ಲೋಕಕ್ಕೆ ನಡೆದುಬಿಟ್ಟರು. ಗಾಂಧೀತಾತನ ಕಣ್ಣಾರೆ ನೋಡದ ನಮಗೆ, ನಮ್ಮಜ್ಜ  “ನಮ್ಮ” ಗಾಂಧೀ ತಾತನಾಗೇ ಉಳಿದುಬಿಟ್ಟರು.

No comments:

Post a Comment