Monday, November 14, 2016

ನಮ್ಮ ತಾಯಿಯವರ ತಂಗಿ ಸೌಭಾಗ್ಯ ಚಿಕ್ಕಮ್ಮನವರ ಯಜಮಾನರಾದ, ನಮ್ಮೆಲ್ಲರ ಪ್ರೀತಿಯ ಶ್ರೀ ಆರ್. ತಿಮ್ಮಯ್ಯನವರ ಸ್ಮರಣಾರ್ಥ ಬರೆದ ನನ್ನ ಮತ್ತು ನನ್ನ ಪತ್ನಿಯ ಲೇಖನಗಳು.


ಹೀಗೇ ಚಿಕ್ಕಪ್ಪನವರ ಬಗ್ಗೆ ಒಂದು ನೆನಪು


ಬೆಳಿಗ್ಗೆ ಸವಿನಿದ್ದೆಯಲ್ಲಿದ್ದಾಗಲೇ ಏನೋ ಪಟ ಪಟ ಸದ್ದಾಯಿತು. ನಿಧಾನವಾಗಿ ಕಣ್ಣು ತೆರೆದು ನೋಡಿದರೆ, ನಾನು ಮಲಗಿದ್ದ ಜಾಗದಲ್ಲಿ ಮಾತ್ರ ಹಾಸಿಗೆ ಇದ್ದು, ಸುತ್ತಲೂ ಇದ್ದ ಹಾಸಿಗೆಗಳನ್ನು ತೆಗೆದು ಹಾಕಲಾಗಿತ್ತು. ಇನ್ನೂ ಮಂಜು ಮಂಜಾಗಿದ್ದ ಕಣ್ಣುಗಳನ್ನು ಉಜ್ಜಿಕೊಂಡು ಶಬ್ದ ಬಂದ ಕಡೆ ನೋಡಿದರೆ, ಬಿಳಿ ಪಂಚೆ, ತುಂಬು ತೋಳಿನ ಬಿಳಿ ಬನಿಯನ್ ತೊಟ್ಟ ಅಕಾರವೊಂದು, ಒಂದು ಸಣ್ಣ ಕೋಲಿಗೆ ಬಟ್ಟೆ ಕಟ್ಟಿಕೊಂಡು ಕಿಟಕಿ ಮೇಲಿದ್ದ ಧೂಳನ್ನು ಜಾಡಿಸುತ್ತಿತ್ತು. ಹಾಗೇ ಸಂಪೂರ್ಣ ಎಚ್ಚರವಾಗಿ ನಾನಿದ್ದ ಜಾಗದ ಅಂದಾಜು ಮಾಡುತ್ತ ಹಾಸಿಗೆ ಮೇಲೆ ಎದ್ದು ಕುಳಿತೆ. ನನಗಾಗ ಅರಿವಾಗಿದ್ದು ಹಿಂದಿನ ದಿನ ನಾನು ನಮ್ಮ ಚಿಕ್ಕಪ್ಪನವರ ಮಲೆಬೆನ್ನೂರಿನ ಮನೆಗೆ, ನನ್ನ ಸೋದರ ಮಾವನಾದ ನನ್ನದೇ ವಯಸ್ಸಿನ ಸತೀಶನೊಂದಿಗೆ ಬಂದಿದ್ದು ಮತ್ತು ರಾತ್ರಿ ಒಳ್ಳೆ ಊಟ ಮಾಡಿ ಸುಸ್ತಾಗಿ ಮಲಗಿದ್ದು, ಮತ್ತು ಇದು ನಮಗೆ ಆ ಮನೆಯಲ್ಲಿ ಮೊದಲಿನ ಬೆಳಿಗ್ಗೆ ಆಗಿತ್ತು. ನನಗಾಗ ಸುಮಾರು ಹತ್ತು ವರ್ಷ ವಯಸ್ಸಿರಬಹುದು. ಹಾಸಿಗೆ ಮೇಲೆ ಕುಳಿತು ಮತ್ತೊಮ್ಮೆ ಕಣ್ಣುಜ್ಜಿಕೊಂಡು ನೋಡಿದೆ. ಆ ಮನೆಯ ಯಜಮಾನರೇ ಅಗಿದ್ದರೂ, ಯಾವುದೇ ಸಂಕೋಚವಿಲ್ಲದೇ ಮನೆ ಕೆಲಸ ಮಾಡುತ್ತಿದ್ದರು. ನನ್ನ ಹಾಸಿಗೆ ಸುತ್ತ ಇದ್ದ ಎಲ್ಲಾ ಹಾಸಿಗೆಗಳನ್ನೂ ಅವರೇ ತೆಗೆದಿದ್ದರು.

ನಮ್ಮ ಚಿಕ್ಕಪ್ಪ ತಿಮ್ಮಯ್ಯನವರು ಹಾಗೇ. ಎಲ್ಲಾ ಕೆಲಸಗಳನ್ನೂ ಅವರೇ ಮಾಡಿಕೊಳ್ಳುತ್ತಿದ್ದರು. ಯಾವಾಗಲೂ ಶುಭ್ರ ವಸ್ತ್ರಧಾರಿ. ಮಲೆಬೆನ್ನೂರಿನ ಮನೆಯಲ್ಲಿ ಸ್ನಾನದ ನೀರಿನ ಹಂಡೆಗೆ ಅವರೇ ಕಟ್ಟಿಗೆ ಇಟ್ಟು ಉರಿ ಹಾಕಬೇಕು. ಹಾಗೆ ನೀರೊಲೆಗೆ ಉರಿ ಹಾಕುವಾಗಲೂ ಸುತ್ತ ಮುತ್ತ ಎಲ್ಲೂ ಕಸ ಇರಬಾರದು. ಧಗ ಧಗ ಉರಿಯುವ ಬೆಂಕಿಯೂ ನಮ್ಮ ಚಿಕ್ಕಪ್ಪನವರನ್ನು ಕಂಡರೆ ಶಿಸ್ತಾಗಿ, ಒಲೆಯೊಳಗೇ ಉರಿಯಿತ್ತಿತ್ತು. ಹೊರಗೆ ಎಲ್ಲೂ ಜ್ವಾಲೆ ಸೂಸದೇ, ಹಂಡೆಯ ಹೊರಗೆ ಕಪ್ಪು ಮಸಿ ಬಳಿಯದೇ ಬೆಂಕಿ ಉರಿಯಬೇಕು. ಅಂತಹ ಶಿಸ್ತನ್ನು ನಮ್ಮ ಚಿಕ್ಕಪ್ಪ ಅದಕ್ಕೆ ಕಲಿಸಿದ್ದರು. ಅಂದರೆ, ನೀವು ಅವರು ಮಾಡುವ ಯಾವುದೇ ಕೆಲಸದ ಅಂದಾಜು ಮಾಡಿಕೊಳ್ಳಬೇಕು. ಕೆಲಸಗಳಲ್ಲಿ ಶೇಕಡ ನೂರರಷ್ಟು ತಾದ್ಯಾತ್ಮತೆ. ಮನೆಯ ಎಲ್ಲಾ ಕಿಟಕಿ ಬಾಗಿಲುಗಳೂ ನಮ್ಮ ಚಿಕ್ಕಪ್ಪ ಪ್ರತಿದಿನ ಬಂದು ಮಾತನಾಡಿಸದಿದ್ದರೆ (ಧೂಳು ಒರೆಸದಿದ್ದರೆ) ಬೇಸರ ಮಾಡಿಕೊಳ್ಳುತ್ತಿದ್ದವೇನೋ. ತಮ್ಮ ಎಲ್ಲಾ ಬಟ್ಟೆಗಳನ್ನೂ ತಾವೇ ಶುಭ್ರ ಮಾಡಿಕೊಳ್ಳುತ್ತಿದ್ದರು. ಅವರ ಬಿಳಿ ಬಟ್ಟೆ ಯಾವುದೇ ಜಾಹೀರಾತಿನಲ್ಲಿನ ಬಿಳಿ ಬಟ್ಟೆಗಳನ್ನೂ ಮೀರಿಸುತ್ತಿತ್ತು. ಹಾಗೇ ಪ್ರತಿದಿನವೂ ಮುಖ ಕ್ಷೌರ ಮಾಡಿಕೊಂಡು ಮೀಸೆ ಮತ್ತು ಗಡ್ಡ ಎಂದೂ ನುಣುಪಾಗಿ ಇರುವಂತೆ ನೋಡಿಕೊಳ್ಳಬೇಕು. ಅವರೆಂದಿಗೂ ಕುರುಚಲು ಗಡ್ಡ ಬಿಟ್ಟಿದ್ದನ್ನು ನೋಡೇ ಇಲ್ಲ. ಬಹುಶಃ ಇದಕ್ಕೆ ನಮ್ಮ ಚಿಕ್ಕಮ್ಮನೂ ಕಾರಣ ಇರಬೇಕು!!... ಅವರ ದಿನ ನಿತ್ಯಚರಿ ಶುರುವಾಗುತ್ತಿದ್ದುದೇ ಮನೆ ಕೆಲಸದೊಂದಿಗೆ. ಮುಗಿಯುತ್ತಿದ್ದುದೂ ಮನೆಕೆಲಸದೊಂದಿಗೆ. ಎಲ್ಲದರಲ್ಲೂ ಅದೇ ತಾದ್ಯಾತ್ಮತೆ. ಮನೆಯಲ್ಲಿ ಮಕ್ಕಳಿಗೂ ಇದೇ ಶಿಸ್ತನ್ನು ಕಲಿಸಿದ್ದರು. ಮಕ್ಕಳೆಲ್ಲಾ ಬೆಳಿಗ್ಗೆ ಎದ್ದ ತಕ್ಷಣ ಅವರವರಿಗೆ ಹಂಚಿಕೊಂಡಿದ್ದ ಕೆಲಸ ಅವರವರೇ ಮಾಡಿಕೊಳ್ಳುವ ಅಭ್ಯಾಸ ಬೆಳಿಸಿದ್ದರು . ಮನೆಯಲ್ಲೂ ಎಂದೂ ದನಿಯೆತ್ತಿ ಮಕ್ಕಳನ್ನು ಗದರಿದ್ದು ನೋಡಲಿಲ್ಲ.

ನಮ್ಮ ತಂದೆ ನಾಗಪ್ಪನವರು ಭೋರ್ಗರೆವ ಜಲಪಾತವಾದರೆ, ಚಿಕ್ಕಪ್ಪ ತಿಮ್ಮಯ್ಯನವರು ಪ್ರಶಾಂತವಾಗಿ ಹರಿವ ನದಿ. ಇಬ್ಬರೂ ಶಿಸ್ತಿನ ಸಿಪಾಯಿಗಳೇ. ಇಬ್ಬರೂ ತಮ್ಮ ನೇರ ನುಡಿ, ಸರಳತೆಯನ್ನು ಬಿಟ್ಟುಕೊಡಲಿಲ್ಲ, ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಇಬ್ಬರೂ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿದರು. ನಮ್ಮ ತಂದೆಯ ರೌದ್ರಾವತಾರ ನೋಡಿ ಅಭ್ಯಾಸವಿದ್ದ ನನಗೆ, ನಮ್ಮ ಚಿಕ್ಕಪ್ಪನವರ ಶಾಂತತೆ ನೋಡಿ ಆಶ್ಚರ್ಯವೂ ಅಗುತ್ತಿತ್ತು. ನಮ್ಮ ತಂದೆ ಜೋಕನ್ನು ಸಹ ಜೋರಾಗಿ ಮಾಡಿದರೆ, ಚಿಕ್ಕಪ್ಪನವರು ಮೀಸೆಯಿಲ್ಲದ ತುಟಿಗಳಲ್ಲೇ ತುಳುಕಿಸಿ ಮಂದಹಾಸ ಬೀರುತ್ತ ನಗೆಬಾಂಬನ್ನು ಸಿಡಿಸುತ್ತಿದ್ದರು. ಇವರಿಬ್ಬರನ್ನೂ ನೋಡಿದಾಗ, ಜೀವನದ ಅಂತರಂಗಗಳೆಲ್ಲವೂ ಒಮ್ಮೆ ನಿಗೂಢವಾಗಿಯೂ ಮತ್ತೊಮ್ಮೆ ಅತ್ಯಂತ ಸರಳವಾಗಿಯೂ ಕಾಣಿಸುತ್ತಿತ್ತು.

ಆಂತರಿಕ ಶಿಸ್ತು ಎನ್ನುವುದು ಅಂತರ್ಗತವಾಗಿಸಿಕೊಂಡಿದ್ದ ಚಿಕ್ಕಪ್ಪನರು, ಊಟದಲ್ಲೂ ಅದೇ ಶಿಸ್ತನ್ನು ಅಳವಡಿಸಿಕೊಂಡಿದ್ದರು. ಕೆಲಸಕ್ಕೆ ಹೋಗುವಾಗ ಬೆಳಿಗ್ಗೆ ಮುದ್ದೆ ಸಾರು ಉಂಡು ಹೋಗುತ್ತಿದ್ದರು. ಅವರು ಬೆಳಗಿನ ತಿಂಡಿ ತಿಂದ್ದದ್ದು ನಾನಂತೂ ನೋಡಲಿಲ್ಲ. ನಮ್ಮ ಚಿಕ್ಕಮ್ಮನಿಗೆ ಹುಶಾರಿಲ್ಲದಿದ್ದಾಗ, ಸ್ವಲ್ಪವೂ ಬೇಸರವಿಲ್ಲದೇ, ಪೂರ್ಣ ತೊಡಗಿಸಿಕೊಂಡು ಅವರ ಸೇವೆಯನ್ನು ಮಾಡಿದರು. ನನ್ನ ಪತ್ನಿ ಕೆಲವೊಮ್ಮೆ ನನ್ನ ಬಳಿ “ಹೆಂಡತಿಯ ಸೇವೆ ಮಾಡುವ ಅವರ ಗುಣ ಬೇರಾವ ಗಂಡಸಿಗೂ ಬರುವುದು ಸುಲಭವಲ್ಲ” ಎಂದು ಹೇಳುತ್ತಿದ್ದರೆ, ಮೆಲ್ಲಗೆ ಜಾಗ ಖಾಲಿ ಮಾಡುತ್ತಿದ್ದೆ.

ಚಿಕ್ಕಪ್ಪನವರು ಕೊನೆ ಕಾಲದಲ್ಲೂ ತಮ್ಮ ಸಹಜ ಪ್ರವೃತ್ತಿಯಾದ ತಿಳಿಹಾಸ್ಯ ಬಿಟ್ಟಿರಲಿಲ್ಲ. ತಮಗೆ ಅಪಾರ ನೋವು ಇದ್ದರೂ ನೋಡಬಂದವರ ಮುಖದಲ್ಲಿ ನಗು ಬರಿಸುವ ಗುಣ. ಅವರು ತೀರಿಕೊಂಡದ್ದನ್ನು ನಂಬಲೇ ಸಾಧ್ಯವಿಲ್ಲದಷ್ಟು ಅವರು ಕಣ್ಣಿಗೆ, ಹೃದಯಕ್ಕೆ ತುಂಬಿಕೊಂಡಿದ್ದಾರೆ. ಅವರ ಮೃತದೇಹದ ಅಂತ್ಯಕ್ರಿಯೆ ನಡೆದ ದಿನ ಎಲ್ಲಾ ಮುಗಿದ ಮೇಲೆ ಅವರ ಮನೆಗೆ ಬಂದಾಗ ಅವರು ಮಲಗುತ್ತಿದ್ದ ಮಂಚದ ಮೇಲೆ ಸೊಳ್ಳೆ ಪರದೆ ಹಾಕಲು ಇದ್ದ ಮರದ ಚೌಕಟ್ಟಿನ ಮೇಲೆ ಒಂದು ಹೊಸ ಬಿಳಿ ಚಡ್ದಿ ಹಾಕಿದ್ದು ನೋಡಿದೆ. ಚಿಕ್ಕಪ್ಪನ ಮಗ ನಾಗೇಶ (ನಟರಾಜ್) “ಇದು ನೋಡಿ ಶ್ರೀಧರಣ್ಣ, ಇದನ್ನು ನಮ್ಮ ಅಪ್ಪ, ಆಸ್ಪತ್ರೆಗೆ ಹೋಗುವ ಮುಂಚೆ ತಾವೇ ತೊಳೆದು ಇಟ್ಟಿದ್ದು. ಇದನ್ನು ಹೊಸತು ಎಂದುಕೊಳ್ಳಬೇಡಿ. ಅವರು ಹಾಗೇನೆ.” ಎಂದ. ಕಣ್ಣು ತುಂಬಿ ಬಂತು. ತಮ್ಮ ಒಳಚಡ್ಡಿಯನ್ನೂ ಶುಭ್ರವಾಗಿ ಇಟ್ಟಿರುತ್ತಿದ್ದ, ಚಿಕ್ಕಪ್ಪ, ಜೀವನದಲ್ಲೂ ಶುಭ್ರವಾಗೇ ಬಾಳಿ ಎಲ್ಲರಿಗೂ ತಮ್ಮ ಆದರ್ಶವನ್ನು ಬಾಳಿ ತೋರಿಸುವುದರ ಮೂಲಕ ಜೀವನ ಸಂದೇಶ ನೀಡಿ ಬಂದ ದಾರಿಗೆ ಹೋಗಿಬಿಟ್ಟರು. ಅವರ ನೆನಪಷ್ಟೆ ಈಗ ಉಳಿದಿರುವುದು.
                                                
                                                   ಡಾ. ಎಸ್.ಎನ್. ಶ್ರೀಧರ
                                (ಶ್ರೀ ಆರ್. ತಿಮ್ಮಯ್ಯನವರ ಧರ್ಮಪತ್ನಿಯ ಅಕ್ಕನ ಮಗ)ನಮ್ಮ ಚಿಕ್ಕ ಮಾವ ಹೀಗಿದ್ದರು

ನಮ್ಮಣ್ಣ ಜಯಣ್ಣನೊಂದಿಗೆ ನಮ್ಮ ಚಿಕ್ಕ ಮಾವನವರಾದ ಶ್ರೀ ಆರ್. ತಿಮ್ಮಯ್ಯನವರ ಮನೆಗೆ ಅಳುಕಿನಿಂದಲೇ ಅವರ ಮೈಸೂರಿನ ಮನೆಗೆ ಕಾಲಿಟ್ಟಿದ್ದೆ. ಮೈಸೂರು ವಿಶ್ವವಿದ್ಯಾನಿಲಯದ  ದೂರಶಿಕ್ಷಣದ ನನ್ನ ಎಮ್.. ಕೋರ್ಸ್ ಗಾಗಿ ನಡೆವ ಸಂಪರ್ಕ ತರಗತಿಗಳಿಗೆ ಹಾಜರಾಗಲು ಮೈಸೂರಿನಲ್ಲಿರುವ ಅವರ ಮನೆಯಲ್ಲಿ ಉಳಿದುಕೊಳ್ಳಲು ಜಯಣ್ಣ ನನ್ನನ್ನು ಅವರ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದರು.
ಅಲ್ಲಿವರೆಗೂ ಅಷ್ಟೇನೂ ಹತ್ತಿರದಿಂದ ಅವರನ್ನು ಕಂಡಿರದಿದ್ದರೂ, ನಾನು ಅವರ ಮನೆಗೆ ಕಾಲಿಟ್ಟ ದಿನವೇ ತಮ್ಮ ಸರಳತೆಯ ಮಾತುಗಳಿಂದ ಚಿಕ್ಕ ಮಾವನವರೂ, ಅವರ ಧರ್ಮಪತ್ನಿ ಶ್ರೀಮತಿ ಸೌಭಾಗ್ಯಕ್ಕ, ಅವರ ಮಕ್ಕಳಾದ ಮಾಲಿನಿ, ನಾಗೇಶ ಮತ್ತು ಶಾಲಿನಿ ಅವರ ಸೌಜನ್ಯ ಪೂರಿತ ಸ್ನೇಹಮಯಿ ವರ್ತನೆಯಿಂದ ನನಗೆ ಈ ಮನೆ ಹೊಸತೆಂದು ಅನ್ನಿಸಲೇ ಇಲ್ಲ. ಅವರು ಆಗಿನ್ನೂ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಹೊಸ ಮನೆ ಕಟ್ಟಿಸುತ್ತಿದ್ದರು. ಹೊಸ ಮನೆ ಕಟ್ಟುವಾಗ ಸಮಾನ್ಯವಾಗಿ ಎಲ್ಲರ ಮನದಲ್ಲಿ ಅತೀವ ಒತ್ತಡವಿರುವುದು ಸಹಜ. ನಮ್ಮ ಚಿಕ್ಕಮಾವ ಅದನ್ನೆಲ್ಲಾ ಒಳಗೊಳಗೆ ಅನುಭವಿಸುತ್ತಿದ್ದರೂ, ಅವರು ಎಂದೂ ಅದನ್ನು ತಮ್ಮ ಪತ್ನಿಯವರ ಮೇಲಾಗಲೀ, ಅಥವಾ ಮಕ್ಕಳ ಮೇಲಾಗಲೀ ತೋರಕೊಡದೇ, ತಾವೇ ಅದರ ಹಣಕಾಸಿನ ನಿರ್ವಹಣೆ ಮಾಡುತ್ತಿದ್ದರು. ಅವರು ಎಂದಿಗೂ ಯಾರ ಮೇಲೂ ಸಿಡುಕಿದ್ದಾಗಲೀ, ರೇಗಿದ್ದಾಗಲೀ ಅಥವಾ ಅಸಮಾಧಾನದಿಂದ ಮಾತನ್ನಾಡಿದ್ದನ್ನಾಗಲೀ ನಾನು ಕಂಡಿದ್ದಿಲ್ಲ. ಮನೆಯಲ್ಲಿ ಮಕ್ಕಳು ಮತ್ತು ಚಿಕ್ಕಮಾವನವರು ಶಾಲಾಕಾಲೇಜುಗಳಿಗೆ ಹೊರಟ ಮೇಲೆ, ನಮ್ಮ ಚಿಕ್ಕ ಅತ್ತೆ ಸೌಭಾಗ್ಯಕ್ಕ ತಾವೂ ತಮಗೆ ಮಧ್ಯಾಹ್ನದ ಊಟ ಮತ್ತು ಒಂದು ಛತ್ರಿ ಹಿಡಿದು ಅವರು ಕಟ್ಟಿಸುತ್ತಿದ್ದ ಹೊಸಮನೆ ಬಳಿಗೆ ಹೊರಟುಬಿಡುತ್ತಿದ್ದರು. ಅವರು ಮತ್ತೆ ಮನೆಗೆ ಬರುತ್ತಿದ್ದುದು ಸಂಜೆಯ ಹೊತ್ತಿಗೇನೆ. ಮನೆಯಲ್ಲಿ ಎಲ್ಲರೂ ಅವರವರ ಜವಾಬ್ದಾರಿ ಅರಿತು ತಮ್ಮ ತಮ್ಮ ಕೆಲಸ ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿದ್ದರು
.
ನಮ್ಮ ಚಿಕ್ಕಮಾವ ಯಾವಾಗಲೂ ಶುಭ್ರವಸ್ತ್ರಧಾರಿಯಾಗಿರುತ್ತಿದ್ದರು. ಮನೆಯಲ್ಲಿದ್ದಾಗ, ಬಿಳಿ ಪಂಚೆ ಮತ್ತು ತೋಳಿನ ಬನಿಯನ್ ತೊಟ್ಟಿದ್ದರೆ, ಹೊರಗೆ ಹೋಗುವಾಗ, ಸರಳವಾದ ಪ್ಯಾಂಟು-ಷರಟು ಧರಿಸುತ್ತಿದ್ದರು. ಅವರು ಸದಾ ಚಟುವಟಿಕೆಯ ಚಿಲುಮೆಯಾಗಿರುತ್ತಿದ್ದರು ಮತ್ತು ಶಿಸ್ತು ಮತ್ತು ಶುಚಿತ್ವಕ್ಕೆ ಬಹಳ ಮಹತ್ವ ನೀಡುತ್ತಿದ್ದರು. ನಾನು ಅವರಲ್ಲಿ ಕಂಡ ಈ ಗುಣಗಳನ್ನು ಅವರ ಕೊನೆ ಕ್ಷಣಗಳಲ್ಲೂ ಹಾಗೇ ಉಳಿಸಿಕೊಂಡಿದ್ದರು. ಕೊನೆಕ್ಷಣಗಳಲ್ಲಿ ಕೂಡಾ ವಿನೋದದ ಮಾತನ್ನಾಡಿ ತಮ್ಮನ್ನು ನೋಡಬಂದವರಲ್ಲೂ ಮಂದಹಾಸ ಮೂಡುವಂತೆ ಮಾಡುತ್ತಿದ್ದರು.

ಅವರ ಮಂದಹಾಸದ ಮುಖ, ಸರಳತೆಯ ಜೀವನ ನನ್ನ ಕಣ್ಣಿಗೆ ಕಟ್ಟಿದಂತಿದ್ದು, ಈ ಚಿತ್ರಣ ಎಂದಿಗೂ ಮಾಸದಂತೆ, ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿ ಉಳಿಸಿಕೊಂಡು ನಾವ್ಯಾರೂ ಉಹಿಸಿರದಷ್ಟು ಬೇಗ ನಮ್ಮನ್ನೆಲ್ಲಾ ಅಗಲಿ ಭೌತಿಕವಾಗಿ ಮರೆಯಾಗಿಬಿಟ್ಟರು.
  
                                                        ಶ್ರೀಮತಿ ರತ್ನಶ್ರೀಧರ್
                                (ಶ್ರೀ ಆರ್. ತಿಮ್ಮಯ್ಯನವರ ಧರ್ಮಪತ್ನಿಯ ಅಕ್ಕನ ಸೊಸೆ)


ನವೆಂಬರ್ 7 ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ. ಇಲ್ಲಿ ಕೊಟ್ಟಿರುವುದು ಪೂರ್ಣ ಪಾಠ. ಇದರಲ್ಲಿ ಅಲ್ಪ ಬದಲಾವಣೆಯೊಂದಿಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಯಿತು.


ಕರ್ನಾಟಕದಲ್ಲೇ ಅನಾಥವಾಗುತ್ತಿರುವ ಕನ್ನಡ

ಪ್ರಜಾವಾಣಿಯು ಕನ್ನಡ ರಾಜ್ಯೋತ್ಸವದ ದಿನದಂದು, ಕನ್ನಡದ ಬಗ್ಗೆ ಅನೇಕ ವಿಷಯಗಳನ್ನು ಚೊಕ್ಕದಾಗಿ ನೀಡಿದೆ. ಹಾಗೇ “ಕನ್ನಡದ ಕೆಲಸ: ಅನುಷ್ಠಾನ ಮುಖ್ಯ” ಎಂಬ ಶಿರೋನಾಮೆಯೊಂದಿಗೆ ಖ್ಯಾತ ವಿಮರ್ಶಕರಾದ ಸಿ.ಎನ್. ರಾಮಚಂದ್ರನ್ ಅವರ ಅನಿಸಿಕೆಗಳನ್ನು ಪ್ರಕಟಿಸಿದೆ. ಈ ಲೇಖನಕ್ಕೆ ಪೂರಕವಾಗಿ ಹಾಗೂ ಭಿನ್ನವಾಗಿ ಚರ್ಚಿಸಲು ಈ ಲೇಖನವನ್ನು ಸಿದ್ಧಪಡಿಸಿ, ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಹೀಗೊಂದು ಪ್ರಸಂಗ: ಮನೆಯೊಂದರಲ್ಲಿ ಹಿರಿಯರೊಬ್ಬರ ನಿಧನದ ನಂತರ ಅವರ ಸ್ಮರಣಾರ್ಥ ಒಂದು ಸಂಚಿಕೆಯನ್ನು ಹೊರತರಲು ಮಕ್ಕಳು ಮೊಮ್ಮಕ್ಕಳು ನಿರ್ಧರಿಸಿದರು. ಲೇಖನವನ್ನು ಕೂಢ್ರೀಕರಿಸಿದಾಗ ಮಕ್ಕಳು ಕನ್ನಡದಲ್ಲಿ ನೆನಪುಗಳನ್ನು ಆತ್ಮೀಯತೆಯ ಸವಿ ಹಂಚುವಂತೆ ಬರೆದರೆ, ಪ್ರೀತಿಯ ಮೊಮ್ಮಕ್ಕಳು ಅಜ್ಜನ ಮೇಲಿನ ಪ್ರೇಮವನ್ನು ಇಂಗ್ಲೀಷಿನಲ್ಲಿ ಅದ್ಭುತವಾಗಿ ನಿವೇದಿಸಿದ್ದರು. ಮಕ್ಕಳು, ಮೊಮ್ಮಕ್ಕಳು ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತಾರೆ. ಅಜ್ಜನ ಜೊತೆಗೂ ಅವರ ಬದುಕಿನಲ್ಲಿ ಮುದ್ದಾದ ಕನ್ನಡದಲ್ಲೇ ಮಾತನಾಡಿದ್ದಾರೆ. ಆದರೆ, ಶಿಕ್ಷಣ ಕೊಟ್ಟ ಬಳುವಳಿಯಿಂದ ಕನ್ನಡದಲ್ಲಿ ಬರೆಯಲಾರರು! ಬಹುಶಃ ಅವರ ಮುಂದಿನ ಪೀಳಿಗೆ ಕನ್ನಡ ಲಿಪಿಯನ್ನೇ ಓದಲಾರರು ಎನಿಸಿತ್ತಿದೆ. ಇದರಲ್ಲಿ ಅತಿಶಯೋಕ್ತಿಯೇನಿಲ್ಲ. ನಮ್ಮ ಸ್ನೇಹಿತ ಬಂಧುಗಳೊಡನೆ ಪ್ರವಾಸಕ್ಕೆ ಹೋಗಿದ್ದಾಗ ಅವರ ಮಕ್ಕಳು ಕನ್ನಡ ಬೋರ್ಡ್ ಓದಲು ಬಾರದೇ ಅವರ ಅಪ್ಪ-ಅಮ್ಮ ಅವರನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ನಾನು ಕನಲಿಹೋದ ದಿನಗಳಲ್ಲಿ ಇದೂ ಒಂದು. ಇತ್ತೀಚೆಗೆ, ನಮ್ಮ ಬಡಾವಣೆಯಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ಸುಗಮ ಸಂಗೀತ ಸ್ಪರ್ಧೆ ಏರ್ಪಡಿಸಿದ್ದೆವು. ಅನೇಕ ಮಕ್ಕಳು ಕನ್ನಡ ಗೀತೆಗಳನ್ನು ಇಂಗ್ಲೀಷ್ ಲಿಪಿಯಯಲ್ಲಿ ಬರೆದುಕೊಂಡು ಅದರಲ್ಲಿ ಓದಿ ಬಾಯಿಪಾಠ ಮಾಡುತ್ತಿದ್ದರು. ಆ ಮಕ್ಕಳೆಲ್ಲರೂ ಕನ್ನಡಿಗರೇ, ಕನ್ನಡ ಮಾತನಾಡಬಲ್ಲರು, ಆದರೆ ಕನ್ನಡ ಲಿಪಿಯನ್ನು ಬಳಸಲಾರರು. ದುರಂತವೆಂದರೆ, ಅವರ ಪೋಷಕರಿಗೆ ತಮ್ಮ ಮಕ್ಕಳ ಈ ಸ್ಥಿತಿ ಸಹಜ ಎಂಬಂತೆ ಅನ್ನಿಸಿದ್ದು. ಕೆಲವರಂತೂ, ತಮ್ಮ ಮಕ್ಕಳಿಗೆ ಕನ್ನಡ ಗೊತ್ತಿಲ್ಲ ಎಂಬುದೇ ಮಹಾಸಾಧನೆ ಎಂಬಂತೆ ತೋರಿಸಿಕೊಳ್ಳುತ್ತಿದ್ದರು. ನಾವು ರಾಜ್ಯದ ಹೊರಗೆ ಪ್ರವಾಸ ಹೋದಾಗ ಯಾರಾದರೂ ಕನ್ನಡಿಗರು ಸಿಗುತ್ತಾರೇನೋ ಎಂದು ಹುಡುಕುತ್ತಿದ್ದಾಗ, ಕನ್ನಡ ಮಾತನಾಡದ ಕನ್ನಡಿಗರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ನಮ್ಮ ರಾಜ್ಯದಲ್ಲಿ ಕೂಡ, ಸ್ವತಃ ಕನ್ನಡಿಗರಿಗಿಂತೆ ಅನ್ಯ ಭಾಷಿಕರೇ ಚಂದದ ಕನ್ನಡ ಮಾತನ್ನಾಡುವುದನ್ನು ಕಂಡಿದ್ದೇವೆ. ಕೆಲವು ನಟಿಮಣಿಯರಂತೂ, ಬೇಕೆಂತಲೇ ತಪ್ಪು ತಪ್ಪು ಕನ್ನಡ ಮಾತನ್ನಾಡುತ್ತಾ, ತಮ್ಮ ಇಂಗ್ಲೀಷಿಗೆ ಪರ್ಯಾಯ ಪದಗಳು ಕನ್ನಡದಲ್ಲಿ ಇಲ್ಲವೆಂಬಂತೆ ಹಾವಭಾವ ತೋರ್ಪಡಿಸುತ್ತಾರೆ. ಅವರ ಇಂಗ್ಲೀಷ್ ಭಾಷೆಯೂ ಅಷ್ಟೇ ಕೆಟ್ಟದಾಗಿರುತ್ತದೆಯೆಂಬುದು ತಿಳಿದ ವಿಷಯವೇ.
ಕನ್ನಡ ರಾಜ್ಯೋತ್ಸವ ಮತ್ತೆ ಬಂದಿದೆ. ಎಲ್ಲರಿಗೂ ಮತ್ತೆ ಮತ್ತೆ ಹ್ಯಾಪಿ ರಾಜ್ಯೋತ್ಸವ ಹೇಳುವ ಅವಕಾಶ. ಆದರೆ, ಕನ್ನಡದ ಈಗಿನ ಸ್ಥಿತಿ ಹೇಗಿದೆ. ನಮ್ಮ ಮಕ್ಕಳೇ ಕನ್ನಡ ಲಿಪಿ ಓದಲಾರದ “ಅವಿದ್ಯಾವಂತ”ರಾಗುತ್ತಿದ್ದಾರೆ. ಎಲ್ಲರಿಗೂ ಇಂಗ್ಲೀಷ್ ಬೇಕು, ನಿಜ. ಕನ್ನಡ ಮಾಧ್ಯಮದಲ್ಲಿ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂದು ಕೆಲವು ಸಾಹಿತಿಗಳಂತೆ ನಾನು ಹೇಳಹೊರಟಿಲ್ಲ. ಅದು ಈಗಿನ ಪರಿಸ್ಥಿತಿಯಲ್ಲಿ ಕಾರ್ಯಸಾಧುವಲ್ಲ ಎಂದು ಎಲ್ಲರಿಗೂ ಮನವರಿಕೆಯಾಗಿದೆ. ಸುಪ್ರೀಂ ಕೋರ್ಟು “ಭಾಷಮಾಧ್ಯಮ ಪೋಷಕರ ಆಯ್ಕೆ” ಎಂದು ಆಜ್ಞೆ ಹೊರಡಿಸಿರುವುದರಿಂದ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ಮಾತೃಭಾಷೆಯಲ್ಲಿ ಪ್ರಾರ್ಥಮಿಕ ಶಿಕ್ಷಣ ಕೊಡಿಸಲು, ಸಂವಿಧಾನ ತಿದ್ದುಪಡಿಗೆ ಆಗ್ರಹಿಸಿ, ಪ್ರಧಾನ ಮಂತ್ರಿಗಳಿಗೆ ಎರಡು ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ (ಪ್ರ.ವಾ. ನ.2). ಇದು ಕೇವಲ ಹಾವು ಹೊಡೆಯಲು ಪೊದೆ ಸುತ್ತ ಕೋಲಿನಲ್ಲಿ ಬಡಿದಂತಾಗುತ್ತದೆ. ಏಕೆಂದರೆ, ಮೇಲ್ಮನೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲದೇ, ಇತರೆ ವಿರೋಧ ಪಕ್ಷಗಳ ಸದಸ್ಯರ ಸಹಕಾರವಿಲ್ಲದೇ ಯಾವುದೇ ಕಾನೂನನ್ನು ರೂಪಿಸಲಾಗುವಿದಿಲ್ಲ. ಅಲ್ಲದೇ, ಬಹುತೇಕ ರಾಜಕಾರಣಿಗಳ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲೇ ಓದುತ್ತಿರುತ್ತಾರೆ. ಹಾಗಾಗಿ ಮೇಲೆ ಹೇಳಿದ ಸಂವಿಧಾನ ತಿದ್ದುಪಡಿಗೆ ಅವರ ಬೆಂಬಲ ಸಿಗುವುದು ಕಷ್ಟ.
ಈಗಿನ ಪರಿಸ್ಥಿತಿಯಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಇಂಗ್ಲೀಷ್ ಶಾಲೆಗಳಿಗೆ ಬೇಡಿಕೆ ಹೆಚ್ಚಿ, ಅತ್ಯಂತ ಚೆನ್ನಾಗಿ ನಡೆಯುತ್ತಿರುವ ಸರ್ಕಾರಿ ಶಾಲೆಗಳೂ ಹಾಳು ಬೀಳುವಂತಾಗಿವೆ. ನಗರದ ಮಕ್ಕಳು ಚೆನ್ನಾಗಿ ಇಂಗ್ಲೀಷ್ ಕಲೆಯಬಹುದಾದರೆ, ಅದಕ್ಕಾಗೇ ಅವರಿಗೆ ಉನ್ನತ ಶಿಕ್ಷಣದಲ್ಲಿ, ಹಾಗೂ ಮುಂದೆ ಉದ್ಯೋಗಗಳಲ್ಲಿ ಉತ್ತಮ ಅವಕಾಶ ದೊರೆಯಬಹುದಾದರೆ, ಹಳ್ಳಿ ಮಕ್ಕಳಿಗೆ ಯಾಕೆ ಬೇಡ? ಇತ್ತೀಚೆಗೆ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳಲ್ಲೂ, ಒಂದನೇ ತರಗತಿಯಿಂದಲೂ ಇಂಗ್ಲೀಷ್ ಕಲಿಸುತ್ತಿದ್ದಾರೆ. ಆದರೆ, ಅದರ ಗುಣಮಟ್ಟ ಚರ್ಚಾರ್ಹ ವಿಷಯ. ಈಗಿರುವ ಪರಿಸ್ಥಿತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಕಲಿಸಲು ಕಷ್ಟಸಾಧ್ಯವಾಗಿರುವಾಗ, ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಗುಣಮಟ್ಟದ ಕನ್ನಡ ಕಲಿಸುವ ಪ್ರಯತ್ನ ಬೇಕಾಗಿದೆ.  
ಸಂವಿಧಾನ ತಿದ್ದುಪಡಿಗಿಂತ, ಮನೆ ಮನೆಗಳಲ್ಲಿ ಪೋಷಕರ ಮೂಲಕ ಮಕ್ಕಳಿಗೆ ಕನ್ನಡ ಕಲಿಸಬೇಕಾಗಿದೆ. ಸಾಧ್ಯವಾದರೆ ಶಾಲೆಗಳಲ್ಲಿ ಭಾಷೆಗಳ ಆಯ್ಕೆ ಬಂದಾಗ ಕನ್ನಡವನ್ನೇ ಪ್ರಥಮ ಭಾಷೆಯಾಗಿ ಆಯ್ದುಕೊಳ್ಳಲು ಪೋಷಕರು ಮುತುವರ್ಜಿ ವಹಿಸಬೇಕಾಗಿದೆ. ಕನ್ನಡಕ್ಕೆ ಬದಲಾಗಿ ಸಂಸ್ಕೃತವನ್ನು ಮೊದಲ ಭಾಷೆಯಾಗಿ ಆರಿಸಿಕೊಳ್ಳಲು ವಿದ್ಯಾರ್ಥಿಗಳು ಹಾಗೂ ಪೋಷಕರು ಹಂಬಲಿಸುವುದು, ಅದರ ಪಠ್ಯ ಕಡಿಮೆ ಇದ್ದು, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಸುಲಭವಾಗಿ ಪಡೆಯಬಹುದು ಎಂಬುದೇ ಆಗಿದೆ. ಕನ್ನಡ ಉಪಾಧ್ಯಾಯರುಗಳು ಕೂಡ ಎಷ್ಟೇ ಬರೆದರೂ ಕಡಿಮೆ ಅಂಕ ಕೊಡುತ್ತಾರೆ ಎಂಬುದು ಸಾರ್ವಜನಿಕ ಅಭಿಪ್ರಾಯ. ಆದರೆ, ಅದು ಇತ್ತೀಚೆಗೆ ಹಾಗಿಲ್ಲ ಎಂದು ನನ್ನ ಅನುಭವ. ಕನ್ನಡ ಪ್ರಥಮ ವಿಷಯವಾಗಿ ಓದಿದ ಅನೇಕ ಮಕ್ಕಳು 10 ನೇ ತರಗತಿಯಲ್ಲಿ ನಿಗದಿಯಾಗಿರುವ 125 ಅಂಕಗಳಿಗೆ, 124-125 ಅಂಕಗಳನ್ನು ಪಡೆದಿರುವುದನ್ನು ನಾವು ಕಾಣಬಹುದು. ಇಷ್ಟಿದ್ದರೂ, ಬಹುತೇಕ ಕನ್ನಡ ಉಪಾಧ್ಯಾಯರುಗಳೂ, ಉಪನ್ಯಾಸಕರೂ ತಮ್ಮ ಮಕ್ಕಳಿಗೆ ಪ್ರೌಢಶಾಲೆಯಲ್ಲಿ ಕನ್ನಡದ ಬದಲಿಗೆ ಸಂಸ್ಕೃತವನ್ನೇ ಪ್ರಥಮ ಭಾಷೆಯಾಗಿ ಕೊಡಿಸಿರುವುದರ ನಿದರ್ಶನಗಳು ಸಾಮಾನ್ಯ.  ಇದು ನಾನು ಸಂಪನ್ಮೂಲ ವ್ಯಕ್ತಿಯಾಗಿ, ಪಿ.ಯು.ಸಿ. ಕನ್ನಡ ಉಪನ್ಯಾಸಕರುಗಳಿಗೆ ಕೌಶಲ್ಯ ಕಾರ್ಯಾಗಾರ ನಡೆಸಿಕೊಟ್ಟಾಗ ಕಂಡುಕೊಂಡ ಕಟು ಸತ್ಯ. ನಾನು ಸ್ವತಃ ಕನ್ನಡ ಉಪನ್ಯಾಸಕನಲ್ಲವೆಂದೂ, ಮತ್ತು ತಾಂತ್ರಿಕ ಕಾಲೇಜೊಂದರಲ್ಲಿ ಪ್ರಾಂಶುಪಾಲನಾಗಿ ನಿರ್ವಹಿಸುತ್ತಿದ್ದೇನೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ. 
ಸಂಸ್ಕೃತದ  ಬಳಕೆ ಮನೆಮಾತನಲ್ಲಿ ಇಲ್ಲವಾದ್ದರಿಂದ ಅದನ್ನು ಪ್ರಥಮ ಭಾಷೆಯಾಗಿ ಶಾಲೆಗಳಲ್ಲಿ ಕಲಿಸಲು ಪ್ರಸ್ತುತವಲ್ಲ ಎಂದು ನನ್ನ ಅಭಿಮತ. ಸಂಸ್ಕೃತ ವಿಧ್ವಾಂಸರು, ಸಂಸ್ಕೃತವಿಲ್ಲದೇ ಕನ್ನಡವಿಲ್ಲ ಎಂದು ಸಾಧಿಸಿ ತೋರಬಹುದು. ಇನ್ನೂ ಹೆಚ್ಚಿನ ಮಟ್ಟಿಗೆ ಸಂಸ್ಕೃತವನ್ನು ಕಲಿಯುವ ಅಗತ್ಯವನ್ನು ಪ್ರತಿಪಾದಿಸಬಹುದು. ಸಂಸ್ಕೃತದ ಹಿರಿಮೆ ಮತ್ತು ಕಲಿಕೆ ಬಗ್ಗೆ ನನ್ನಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ. ಆದರೆ, ಮನೆಮಾತಾದ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಯಲು ಅದು ಅಡ್ಡ ಬರಬಾರದು ಎಂಬುದೇ ನನ್ನ ಪ್ರತಿಪಾದನೆ.
ಮನೆಯಲ್ಲಿನ ಕಲಿಕೆ ಶಾಲೆಯ ಕಲಿಕೆಯಷ್ಟೇ ಪರಿಣಾಮಕಾರಿಯಾಗಿರುವುದರಿಂದ, ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಬೇಕಾಗಿದೆ. ಪೋಷಕರು ಮನೆಯಲ್ಲಿ ಕನ್ನಡ ದಿನಪತ್ರಿಕೆಗೆ ಚಂದಾದಾರರಾಗಿ, ಪ್ರತಿನಿತ್ಯ ತಮ್ಮ ಮನೆಗೆ ಕನ್ನಡ ಪತ್ರಿಕೆಯನ್ನು ತರಿಸಿ ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡಬೇಕಾಗಿದೆ. ಇದೇನು ಹೆಚ್ಚಿನ ಖರ್ಚಿನ ಬಾಬತ್ತಲ್ಲ. ದಿನ ಪತ್ರಿಕೆ ಬೆಲೆ ದಿನಕ್ಕೆ ಕೇವಲ 3 ಅಥವಾ 4 ರೂ ಆಗಬಹುದು. ಮಕ್ಕಳಿಗೆ ಬಣ್ಣದ ಚಿತ್ರ ಇರುವ ಚಂದಮಾಮನಂತಹ ಕಥೆ ಪುಸ್ತಕಗಳ ಪರಿಚಯ ಮಾಡಿಕೊಡಿ. ಇತ್ತೀಚೆಗೆ, ಪುರಾಣ, ರಾಮಾಯಣ, ಮಹಾಭಾರತ, ಪಂಚತಂತ್ರ ಕಥೆಗಳು, ಹನಿಗವನಗಳು, ರಾಷ್ಟ್ರಪ್ರೇಮಿ ಕಥೆಗಳು, ಭಾರತದ ಮಹಾಸಾಧಕರು, ಹೀಗೆ ಅನೇಕ ವಿಷಯಗಳನ್ನು ಹೊತ್ತ ಸಣ್ಣ ಸಣ್ಣ ಕನ್ನಡ ಪುಸ್ತಕಗಳು, ಬಣ್ಣ, ಬಣ್ಣದ ಚಿತ್ರಗಳೊಂದಿಗೆ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿವೆ.  ಇಂತಹ ಪುಸ್ತಕಗಳ ಬೆಲೆ ರೂ. 10 ರಿಂದ 20 ರ ಆಸುಪಾಸಿನಲ್ಲಿ ಇರುತ್ತದೆ. ಇವನ್ನು ಮಕ್ಕಳಿಗೆ ವಿಶೇಷ ಸಂಧರ್ಭಗಳಲ್ಲಿ, ಉಡುಗೊರೆಯಾಗಿ ನೀಡಬಹುದು. ಖಂಡಿತ, ಈ ಪುಸ್ತಕಗಳು ಮಕ್ಕಳ ಮನಸ್ಸನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಹಾಗೆಯೇ, ಆಗಾಗ ಕನ್ನಡದಲ್ಲಿ ಸಣ್ಣ ಕಥೆಗಳನ್ನು, ತಮ್ಮ ಪ್ರವಾಸದ ಅನುಭವಗಳನ್ನು ಬರೆಯಲು ಮಕ್ಕಳಿಗೆ ಪ್ರೋತ್ಸಾಹಿಸಿ. ಮುಖ್ಯವಾಗಿ ತಾವು ದೊಡ್ಡವರು ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಿ. ಮಕ್ಕಳಿಗೆ ಕನ್ನಡದ ಸೊಗಡು ಹಿಡಿಸಿದ ಮೇಲೆ ಅವರಾಗೇ ಕನ್ನಡದ ಆರಾಧಕರಾಗುತ್ತಾರೆ.
ಒಂದು ವಿಸ್ಮಯ: ರಾಮನಗರಕ್ಕೆ ಹೋಗುವ ದಾರಿಯಲ್ಲಿ ಒಬ್ಬ ಹಳ್ಳಿಯವನಂತೆ ಕಾಣುವ ವ್ಯಾಪಾರಿ ಹೂ ಮಾರಾಟ ಮಾಡುತ್ತಿದ್ದ. ಯಾವುದೋ ಕುಗ್ರಾಮದ ವಿಳಾಸ ಕೇಳಿದೆ. ನಮಗೆ ಅದರ ದಾರಿಯನ್ನು ಹೇಳುವಾಗ “ರೈಟ್ ತಗೋಳಿ,.. ಲೆಫ್ಟ್ ತಗೋಳಿ” ಅಂತೆಲ್ಲಾ ಹೇಳಿದ. ನಾನು “ಎಲ್ಲಿ ಬಲಕ್ಕೆ ತಿರುಗಬೇಕು?” ಎಂದೆ. ಆತ “ಬಲಕ್ಕೆ ಬೇಡ ಸ್ವಾಮಿ, ರೈಟ್ ಗೆ ತಿರುಕ್ಕೋಳ್ಳಿ” ಎಂದ. ನನ್ನ ಬಾಯಿ ತೆರೆದೇ ಇತ್ತು. ಆತ ಮುಂದುವರೆದು “ನಿಮಗೆ ಡೌಟ್ ಬಂದರೆ ನಂಗೆ ಕಾಲ್” ಕೊಡಿ ಎಂದು, ತನ್ನ ಮೊಬೈಲ್ ನಂಬರನ್ನು “ಡಬಲ್ ಏಯ್ಟ್, ಟ್ರಿಪಲ್ ತ್ರೀ..  “ ಎಂದು ಹೇಳಿದ. ನನಗೆ ಜ್ಞಾನೋದಯವಾಯ್ತು. ನಮ್ಮ ದಿನನಿತ್ಯದ ಜೀವನದಲ್ಲೂ ನಮ್ಮ ಫೋನ್ ನಂಬರನ್ನು “ಎಂಟು, ಎಂಟು...” ಎಂದು ಕನ್ನಡದಲ್ಲಿ ಹೇಳಲು ಮರೆಯುತ್ತಿದ್ದೇವೆ. ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ, ಬಿಗ್ ಬಜಾರ್ ನಂತಹ ಸೂಪರ್ ಮಾರ್ಕೆಟ್ ಗಳಲ್ಲಿ, ಅಲ್ಲಿನ ನೌಕರರನ್ನು ಕೌಂಟರ್ ಗೆ ಕರೆಯಲು ಮೈಕ್ ಮೂಲಕ ಇಂಗ್ಲೀಷಿನಲ್ಲೇ ಉದ್ಘೋಷಣೆ ಮಾಡುತ್ತಾರೆ. ಆ ನೌಕರರೆಲ್ಲರೂ ಕನ್ನಡಿಗರೇ ಆಗಿದ್ದರೂ, ಮತ್ತು ಕನ್ನಡ ಚೆನ್ನಾಗೇ ಮಾತನಾಡಬಲ್ಲವರಾಗಿದ್ದರೂ, ಇಂಗ್ಲೀಷ್ ಘೋಷಣೆ ಅನಿವಾರ್ಯ ಎಂಬಂತೆ ಬಳಕೆಗೆ ತಂದಿದ್ದಾರೆ. ಬಹುತೇಕ ಸಂಧರ್ಭಗಳಲ್ಲಿ ಆ ನೌಕರರ ಹೆಸರು ಬಿಟ್ಟರೆ ಅವರಿಗೆ ಆ ಉದ್ಘೋಷಣೆಗಳಲ್ಲಿ ಬೇರೇನೂ ಅರ್ಥವಾಗುವುದಿಲ್ಲ. ಇಂತಹ ಒಂದು ಪ್ರಕರಣದಲ್ಲಿ, ಕಸ ಗುಡಿಸುವ ಸಿಬ್ಬಂದಿಯೊಬ್ಬರನ್ನು ಹೀಗೇ ಇಂಗ್ಲೀಷಿನಲ್ಲಿ ಮೈಕ್ ನಲ್ಲಿ ಕರೆದಾಗ, ಆಕೆ ಏನೂ ತಿಳಿಯದೇ, ಕೊನೆಗೆ ಆಕೆಯ ಸೂಪರ್ ವೈಸರ್ ಆಕೆಗೆ ತಿಳಿಸಿಹೇಳಿ ಕಳುಹಿಸಿದ್ದನ್ನು ನಾನು ಕಂಡಿದ್ದೇನೆ. ಈ ಸೂಪರ್ ಮಾಲ್ ನವರಿಗೆ ಯಾಕೆ ಇಂತಹ ಇಂಗ್ಲೀಷ್ ಮೋಹ ಎಂದು ಆಶ್ಚರ್ಯ ಪಟ್ಟಿದ್ದೇನೆ.
ಹೆಚ್ಚಿನ ಆಶಯಗಳನ್ನೂ, ಭಾರೀ ಬದಲಾವಣೆಗಳನ್ನೂ ನಿರೀಕ್ಷಿಸದೇ, ಮನೆ ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ, ನಾವು ಕೆಲಸ ಮಾಡುವ ಸ್ಥಳಗಳಲ್ಲಿ, ವ್ಯಾಪಾರ ಮಾಡುವ ಜಾಗಗಳಲ್ಲಿ, ಕನ್ನಡಕ್ಕೆ ಪೂರಕವಾದ ವಾತವರಣವನ್ನು ಉಂಟು ಮಾಡುವುದೇ ಕನ್ನಡಕ್ಕೆ ಪ್ರೋತ್ಸಾಹ ಕೊಟ್ಟಂತೆ ಎಂಬುದು ಈ ಲೇಖನದ ಆಶಯ.

ಡಾ. ಎಸ್.ಎನ್. ಶ್ರೀಧರ
ಪ್ರಾಂಶುಪಾಲರು ಮತ್ತು ನಿರ್ದೇಶಕರು,
ಕೆ.ಎಸ್. ಸ್ಕೂಲ್ ಆಫ಼ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ ಮೆಂಟ್

ಕನಕಪುರ ರಸ್ತೆ, ಬೆಂಗಳೂರು.

Wednesday, June 26, 2013

Beautiful Himalaya Aerial Views

  Mountain Flight From Nepal

Watch these in full screen mode by clicking Scribd. bar at the bottom for good quality pictures.

Sunday, April 14, 2013

Nature and History

  Nature and Hostory by SridharaSN

Watch these in full screen mode by clicking Scribd. bar at the bottom for good quality pictures.


My Vacation

  My Vacation

Watch these in full screen mode by clicking Scribd. bar at the bottom for good quality pictures.

Escape to Nature Photography and Scibling

  Escape to Nature by SridharaSN

Watch these in full screen mode by clicking Scribd. bar at the bottom for good quality pictures.

Tuesday, April 9, 2013

Ajjana nenapugalu


ಅಜ್ಜನ ನೆನಪುಗಳು 


           ಎಪ್ಪತ್ತರ ದಶಕ, ಆಗ ನನಗಿನ್ನೂ 5-10 ವರ್ಷದ ಪ್ರಾಯ. ಆದರೆ ಆಗಿನ ನಮ್ಮ ಸುಂದರ ನೆನೆಪುಗಳು ಇನ್ನೂ ಹಚ್ಚ ಹಸಿರಾಗೇ ಮನದಲ್ಲಿ ನಿಂತಿವೆ. ಶಿವಮೊಗ್ಗದ ನಮ್ಮ ಅಜ್ಜ ’ಗಾಂಧಿ ಬಸಪ್ಪ’ನೆಂದೇ ಹೆಸರಾಗಿದ್ದರು. ಈ ಗಾಂಧಿ ಬಸಪ್ಪನ ಹಿರಿಯ ಮಗಳಾದ ಸೀತಮ್ಮನವರ ಸಂತಾನವೇ, ನಾವು ಐದು ಜನ ಮಕ್ಕಳು. ನಮ್ಮ ತಂದೆ ನಾಗಪ್ಪ, ತಮ್ಮ ಜೀವನದಲ್ಲಿ ಹಾಗೂ ತಮ್ಮ ಉದ್ಯೋಗದಲ್ಲಿ ತುಂಬಾ ಶಿಸ್ತಿನ, ಪ್ರಾಮಾಣಿಕರಾದ, ಯಾರಿಗೂ ಬಗ್ಗದ, ಯಾವುದಕ್ಕೂ  ಜಗ್ಗದ, ಕಡಕ್ ಆದ ವ್ಯಕ್ತಿ. ಮನೆಯಲ್ಲಿ ಕೂಡಾ ಯಾರೂ, ಯಾವಾಗಲೂ ಶಿಸ್ತನ್ನು ಮೀರಬಾರದೆಂಬ ನಿಲುವು. ಹಾಗಾಗಿ, ಮನಸ್ಸು ಬಿಚ್ಚಿ ಕುಣಿಯುವ, ಏನೇ ತಪ್ಪು ಮಾಡಿದರೂ ಯಾರೂ ಶಿಕ್ಷಿಸದ ಅವಕಾಶ ದೊರೆಯುವ ಶಿವಮೊಗ್ಗದ ಅಜ್ಜನ ಮನೆ ನಮಗೆಲ್ಲಾ ಸ್ವರ್ಗಕ್ಕೆ ಸಮಾನವಾದುದು.

            ಎಲ್ಲಾ ಬೇಸಿಗೆ ರಜೆಯಲ್ಲೂ, ಶಿವಮೊಗ್ಗಕ್ಕೆ ಹೋಗುವ ಅವಕಾಶ, ಅದಕ್ಕಾಗಿ ಏನೆಲ್ಲಾ ತಯಾರಿ. ಶಿವಮೊಗ್ಗಕ್ಕೆ ಬೆಂಗಳೂರಿನಿಂದ ಇದ್ದ ಪ್ಯಾಸೆಂಜರ್ ರೈಲಿನ ಸುಮಾರು ಎಂಟು ಗಂಟೆಯ ಪ್ರಯಾಣ. ಚುಕು ಬುಕು ಎನ್ನುತ್ತಾ, ದಟ್ಟ ಕಪ್ಪನೆಯ ಹೊಗೆ ಕಾರುತ್ತಾ ಅಲ್ಲಲ್ಲಿ ಬುಸುಗುಟ್ಟಿಕೊಂಡು ನಿಲ್ಲುತ್ತಾ ಚಲ್ಲಿಸುವ ಉಗಿಬಂಡಿ ನಮಗೆ ಅನೂಹ್ಯ ಅನುಭವ ನೀಡುವ ಮಾಯಾಲೋಕದ ವಾಹನ. ಉಗಿಬಂಡಿಯ ಸೀಮಿತ ಶಕ್ತಿಯಿಂದಾಗಿ ಅದಕ್ಕೆ ಬೀರೂರು ಜಂಕ್ಷನ್ ನಲ್ಲಿ ಸುಮಾರು ಒಂದು ಗಂಟೆಯ ಎಂಜಿನ್ ಬದಲಿಸುವ ನೆಪದಲ್ಲಿ ಹಾಲ್ಟ್. ಅಲ್ಲಿ ಆಗ ತೆರೆದುಕೊಳ್ಳುತ್ತಿದ್ದುದು ಚಿತ್ರಾನ್ನ-ಮೊಸರನ್ನದ ಬುತ್ತಿ. ಈರುಳ್ಳಿ-ಕೊತ್ತಂಬರಿ ಸೊಪ್ಪು ಹಾಕಿ ಅನ್ನವನ್ನು ನಾದಿ ನಮ್ಮಮ್ಮ ಮಾಡಿಟ್ಟುಕೊಂಡ ಮೊಸರನ್ನದ ರುಚಿ ಯಾವುದಕ್ಕೂ ಹೋಲಿಸಲಾಗದು. ಎಲ್ಲಾ ಮಕ್ಕಳೂ ಚಕ್ಕಮಕ್ಕಳ ಹಾಕಿಕೊಂಡು, ನಮ್ಮಮ್ಮ ಊಟದ ಎಲೆಯಲ್ಲಿ (((ಮುತ್ತುಗದ ಎಲೆಯಲ್ಲಿ)  ಹಾಕಿಕೊಡುವ ಚಿತ್ರಾನ್ನ-ಮೊಸರನ್ನದ ಊಟಕ್ಕೆ ಕವ-ಕವ ಎನ್ನುತ್ತಾ, ಹೊಟ್ಟೆ ಬಿರಿಯುವಷ್ಟು ತಿನ್ನುತ್ತಿದ್ದೆವು. ನೀರು ಕುಡಿಯಲು ಆಗ ಇರುತ್ತಿದ್ದುದೇ ರೈಲು ಚೆಂಬು ಎನಿಸಿಕೂಳ್ಳುತ್ತಿದ್ದ, ತಿರುಪು ಇದ್ದ ಮುಚ್ಚಳ ಹೊಂದಿದ್ದ ತಾಮ್ರದ ಕಮಂಡಲ ರೀತಿಯ ಚೊಂಬು. ಅದರ ಜೊತೆಗೆ ಒಂದೆರಡು ತಾಮ್ರದ ಕುಡಿಯುವ ನೀರಿನ ಲೋಟಗಳು. ರೈಲ್ವೆ ಪ್ಲಾಟ್ ಫ಼ಾರಂನಲ್ಲಿ ಹಾಕಿರುವ ನಲ್ಲಿಯಲ್ಲಿ ನೀರು ಹಿಡಿದು ಕುಡಿದರೂ ಏನೂ ಹೆಚ್ಚು ಕಮ್ಮಿ ಆಗದಿರುತ್ತಿದ್ದ ಕಾಲ. 

        ಊಟ ಮಾಡಿ ಮುಗಿಸುತ್ತಿದ್ದಂತೆ ರೈಲು ಸಿಳ್ಳು ಹಾಕಿ ಮತ್ತೆ ಚುಕು ಬುಕು ಸಪ್ಪಳ ಮಾಡುತ್ತಾ ಹೊರಟು ಬಿಡುತ್ತಿತ್ತು. ಶಿವಮೊಗ್ಗದಲ್ಲಿ ರೈಲಿನಿಂದ ಇಳಿದ ನಂತರ ಪ್ಲಾಟ್ ಫ಼ಾರಂ ಹೊರಗೆ ಕಾದಿರುತ್ತಿದ್ದ ಜಟಕಾ ಬಂಡಿಯವರ ಪೈಪೋಟಿ ಮಧ್ಯೆ ಯಾವುದಾದರು ಒಂದು ಟಾಂಗಾ ಹಿಡಿದು ಹೊರಟರೆ, ಮಕ್ಕಳಾದ ನಮಗೆ, ಕುದುರೆ ಹತ್ತಿ ಸವಾರಿ ಹೊರಟ ಶಿವಪ್ಪ ನಾಯಕನಿಗಿಂತ ಹೆಚ್ಚಿನ ಗತ್ತು. ಟಾಂಗಾವಾಲನಿಗೆ ಮನೆ ವಿಳಾಸ ಹೇಳದೇ, ಕೇವಲ “ಗಾಂಧಿ ಬಸಪ್ಪನವರ ಮನೆ” ಎಂದು ಹೇಳಿದರೆ ಸಾಕಿತ್ತು. ಸೀದಾ ಅಜ್ಜನ ಮನೆಗೆ ತಂದು ಬಿಡುತ್ತಿದ್ದರು. ಚಿಕ್ಕ ಮಕ್ಕಳಾದ ನಮಗೆ ಅದೇ ಬೆರಗು. ನಮ್ಮಜ್ಜ ಈ ಊರಿನಲ್ಲಿ ಎಷ್ಟು ಹೆಸರುವಾಸಿ ಎಂಬ ಹೆಮ್ಮೆ. ಮನೆಗೆ ಬಂದು ಇಳಿಯುತ್ತಿದ್ದಂತೇ ಎಲ್ಲಿಲ್ಲದ ಉತ್ಸಾಹದದಿಂದ ಮನೆಯೊಳಗೆ ಓಡಿ ಬಿಡುತ್ತಿದ್ದೆವು.     
      
        ನಮ್ಮ ಅಜ್ಜ ಗಾಂಧಿ ಅನುಯಾಯಿ. ಹಾಗಾಗಿ ಖಾದಿಯೇ ಅವರ ದಿರಿಸು. ಬಿಳಿ ಕಚ್ಚೆ, ಬಿಳಿ ಜುಬ್ಬ, ತಲೆಯ ಮೇಲೆ ಒಂದು ಗಾಂಧಿ ಟೋಪಿ. ಇವಿಷ್ಟು ಅವರು ಹೊರಟಾಗ ಹಾಕಿಕೊಳ್ಳುವ ಶಿಸ್ತಿನ ಉಡುಪು. ಮನೆಯಲ್ಲಿ ಒಂದು ಉರುಟು ಪಂಚೆ, ಅದೇ ಬಟ್ಟೆಯಲ್ಲಿ ಹೊಲೆಸಿಕೊಂಡ ಚಿಕ್ಕ ತೋಳಿನ ಬನಿಯನ್. ಎಲ್ಲವೂ ಶುಭ್ರ ಬಿಳುಪು. ಅವರು ಜೀವಿತದ ಕೊನೆವರಗೂ ತಮ್ಮ ಬಟ್ಟೆ ತಾವೇ ಸ್ವಚ್ಛ ಮಾಡಿಕೊಳ್ಳುತ್ತಿದ್ದರು. ಅವರ ಬಟ್ಟೆಗಳನ್ನು ಬೇರೆಯವರು ಒಗೆದದ್ದು (ಶುಭ್ರ ಮಾಡಿದ್ದು) ನಾವಂತೂ ಕಂಡಿಲ್ಲ. ಹಿಂದಿನ ರಾತ್ರಿ ಯಾವುದೋ ಒಂದು ಸೋಪಿನ ಬಾರನ್ನು ತುರಿದು ಅದರ ಪುಡಿಯನ್ನು ನೀರಿಗೆ ಹಾಕಿ ಅದರಲ್ಲಿ ತಮ್ಮ ಬಟ್ಟೆ ನೆನೆಸಿ ಇಟ್ಟರೆ, ಮಾರನೇ ದಿನ, ಬೆಳ್ಳಂಬೆಳಗ್ಗೆ ಎದ್ದು ತಲೆಗೆ ಒಂದು ಟವೆಲ್ ಸುತ್ತಿ, ಒಗೆಯುವ ಕಲ್ಲಿನ ಬಳಿ ನಿಂತು, ತಮ್ಮ ಎಲ್ಲಾ ಬಟ್ಟೆಗಳನ್ನೂ ತಾವೇ ಒಗೆದು, ನಂತರ ಒಣಗಲು ಹಾಕಿ, ಸಾಯಂಕಾಲ ಅವೆಲ್ಲವನ್ನೂ, ತಾವೇ ಕೈಯಲ್ಲಿ ತಿದ್ದಿ ತೀಡಿ ತಮ್ಮ ರೂಮಿನಲ್ಲಿರುವ ಗಾಜಿನ ಬಾಗಿಲು ಇರುವ ಸಣ್ಣ ಬೀರುವಿನಲ್ಲಿ ಒಪ್ಪ ಓರಣ ಮಾಡಿ ಜೋಡಿಸಿಡುತ್ತಿದ್ದರು.  
       
      ನಮ್ಮ ಅಜ್ಜ ಯಾವುದೇ ಬಟ್ಟೆಗೆ ಇಸ್ತ್ರಿ ಮಾಡಿಡದಿದ್ದರೂ, ಬೆಳಿಗ್ಗೆ, ತಿದ್ದಿ ತೀಡಿದಂತಹ ಜುಬ್ಬಾ ಮತ್ತು ಕಚ್ಚೆ ನೋಡಿದಾಗಲೆಲ್ಲಾ ಆಶ್ಚರ್ಯ ಪಡುತ್ತಿದ್ದೆವು. ಇದಕ್ಕೆ ಕಾರಣ ನಮ್ಮ ಅಜ್ಜ ಕೈಯಲ್ಲೇ ಅವನ್ನು ತಿದ್ದುತ್ತಿದ್ದುದು ಮತ್ತು ಕೆಲವೊಮ್ಮೆ ತಲೆದಿಂಬಿನ ಕೆಳಗೆ ರಾತ್ರಿ ಇಟ್ಟು ಮಲಗಿದ್ದು, ಬೆಳಿಗ್ಗೆ ಎದ್ದರೆ, ಖಾದಿ ಬಟ್ಟೆ ಇಸ್ತ್ರಿ ಮಾಡಿಟ್ಟಿದ್ದಂತೇ ಇರುತ್ತಿತ್ತು. ನಮ್ಮ ಅಜ್ಜನ ರೂಮಿನಲ್ಲಿ ಕೆಲವು ಸುಭಾಷಿತಗಳನ್ನೂ, ಕೆಲವು ನೀತಿ ಮಾತುಗಳನ್ನೂ ದೊಡ್ಡ ಬೋರ್ಡ್ ಮೇಲೆ ಬರೆದು ಒಂದು ಗೋಡೆ ತುಂಬಾ ಹಾಕಿದ್ದರು. ಅದರಲ್ಲಿ ಒಂದು ನೀತಿಮಾತು “ಪ್ರತಿಯೊಬ್ಬರೂ ತಮ್ಮ ಕೈ, ಬಾಯಿ ಮತ್ತು ಕಚ್ಚೆ ಶುದ್ಧವಾಗಿಟ್ಟಿರಬೇಕು” ಎಂದಿತ್ತು. ಆಗ ಸಣ್ಣ ಹುಡುಗನಾದ ನನಗೆ, ಅದಕ್ಕೇ ನಮ್ಮ ಅಜ್ಜ ಯಾವಾಗಲೂ, ತಮ್ಮ ಕೈ, ಬಾಯಿ ತೊಳೆದುಕೊಂಡು ಸ್ವಚ್ಛ ಇಟ್ಟುಕೊಳ್ಳುವುದಲ್ಲದೇ, ತಮ್ಮ ಕಚ್ಚೆಯನ್ನೂ ಶುಭ್ರವಾಗಿ ತೊಳೆದು ಇಟ್ಟುಕೊಂಡಿರುತ್ತಾರೆ ಎಂದುಕೊಂಡಿದ್ದೆ. ಸ್ವಲ್ಪ ದೊಡ್ಡವನಾದ ಮೇಲೆ, ಕಚ್ಚೆ ಅಂದರೆ ಅದರೊಳಗಿನ ಕುಂಡೆಯನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಬರೆಸಿದ್ದಾರೆ ಎಂದುಕೊಂಡ್ಡಿದ್ದೆ. ಈ ನೀತಿಮಾತಿನ ವಿಶಾಲ ಅರ್ಥ ತಿಳಿಯಲು ನನಗೆ ಸುಮಾರು ಹದಿನೈದು ವರ್ಷ ವಯಸ್ಸಾಗಬೇಕಾಯ್ತು.

ನಮ್ಮ ಅಜ್ಜನದು, ಗಡಿಯಾರದಂತಹ ಜೀವನ ಕ್ರಮ. ಬೆಳಿಗ್ಗೆ ಐದು ಗಂಟೆಗೆ ಎದ್ದು, ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿಕೊಂಡು, ಮನೆಯ ಎಲ್ಲಾ ಮಕ್ಕಳೊಂದಿಗೆ ಮತ್ತು ದೊಡ್ಡವರೊಂದಿಗೆ ಪ್ರಾರ್ಥನಾ ಕೊಠಡಿಯಲ್ಲಿ ಒಂದೆರಡು ದೇವರ ಸ್ತುತಿಗಳನ್ನು (ಇದರಲ್ಲಿ, “ಏಳು ನಾರಾಯಣ,... ಏಳಯ್ಯ ಬೆಳಗಾಯಿತು...” ಕಡ್ಡಾಯ ಪ್ರಾರ್ಥನೆ) ಹಾಡಿದ ನಂತರ ಮುಂದಿನ ಎಲ್ಲಾ ದೈನಂದಿನ ಕಾರ್ಯಕ್ರಮಗಳು ಚಾಲು. ಪ್ರಾರ್ಥನಾ ಕೊಠಡಿಗೆ ಯಾರು ಬರುವುದು ತಡವಾದರೂ, ನಮ್ಮಜ್ಜ ಅಲ್ಲಿ ಕುಳಿತು ಏರುದನಿಯಲ್ಲಿ “ಏಳು ನಾರಾಯಣ,...” ಎಂದು ಹಾಡಲು ಶುರು ಮಾಡಿದರೆ, ಉಳಿದ ಎಲ್ಲಾ ಸದಸ್ಯರೂ, ಎಲ್ಲಾ ಕೆಲಸಗಳನ್ನು ಅಲ್ಲಲ್ಲೇ ಬಿಟ್ಟು, ತಡಬಡಾಯಿಸಿಕೊಂಡು ಓಡಿ ಬಂದು ಕುಳಿತುಕೊಂಡು ಪ್ರಾರ್ಥನೆಗೆ ದನಿ ಕೂಡಿಸಲೇಬೇಕು. ಈ ಬೆಳಗಿನ ಪ್ರಾರ್ಥನೆ ಮುಗಿದ ತಕ್ಷಣ ಮನೆಯ ಹೆಂಗಸರು, ಅಡಿಗೆಮನೆಗೆ ಓಡಿ ಹೋಗಿ ಅಡುಗೆ ಕೆಲಸ ಶುರು ಮಾಡುತ್ತಿದ್ದರು. ಅಜ್ಜ ತಮ್ಮ ರೂಮಿಗೆ ಹೋಗಿ, ಅಲ್ಲೇ ಅಟಾಚ್ಡ್ ಬಚ್ಚಲು ಮನೆಯಲ್ಲಿ ತಣ್ಣೀರಿನ ಸ್ನಾನ ಮಾಡಬೇಕು. ಆ ಸ್ನಾನ ಮಾಡುವಾಗ ದೊಡ್ಡ ದನಿಯಲ್ಲಿ “ಶ್ರೀ ಹರಿ,... ಶ್ರೀ ಹರಿ,... ಶ್ರೀ ರಾಮ, ಶ್ರೀ ರಾಮ, ಜಯ ಜಯ ರಾಮ...” ಎಂದು ಜೋರಾಗಿ ಹಾಡಿಕೊಳ್ಳಬೇಕು. ಇನ್ನೊಂದು ವಿಷಯ, ನಮ್ಮಜ್ಜ ತಮ್ಮ ಹಲ್ಲುಜ್ಜುತ್ತಿದ್ದುದು, ಕೇವಲ ಪುಡಿ ಉಪ್ಪಿನಿಂದ. ಯವತ್ತೂ ಪೇಸ್ಟ್ ಬಳಸಿದವರಲ್ಲ. ಹಾಗಾಗಿ, ಅವರ ಬಚ್ಚಲು ಮನೆಯಲ್ಲಿ ಒಂದು ಬಟ್ಟಲಿನಲ್ಲಿ ಉಪ್ಪಿನ ಪುಡಿ ಇರಲೇ ಬೇಕು, ಜೊತೆಗೆ ಅರ್ಧ ಕತ್ತರಿಸಿ ಇಟ್ಟ ಲೈಫ಼್ ಬಾಯ್ ಸೋಪು. ಆಗಿನ ಲೈಫ಼್ ಬಾಯ್ ಸೋಪು ಈಗಿನಂತೆ ಬಣ್ಣ ಬಣ್ಣಗಳಲ್ಲಿ ಇರಲಿಲ್ಲ. ನಸು ಕೆಂಪು ಬಣ್ಣದ, ಎಷ್ಟು ಬಳಸಿದರೂ, ಬೇಗ ಕರಗದ ಗಟ್ಟಿ ಇಟ್ಟಿಗೆಯಂತಹದಾಗಿತ್ತು. ಎಲ್ಲರ ಮನೆಯಲ್ಲೂ ಅದೇ ಸೋಪು. ರೇಡಿಯೋದಲ್ಲಿ ಬರುತ್ತಿದ್ದ “ಲೈಫ಼್ ಬಾಯ್ ಎಲ್ಲಿದೆಯೋ.. ಅಲ್ಲಿದೇ ಅರೋಗ್ಯ..” ಎನ್ನುವ ಜಾಹೀರಾತು ಎಲ್ಲರಿಗೂ ಚಿರಪರಿಚಿತ. ಆ ಸೋಪು ಕೂಡ ಬೇಗ ಖರ್ಚಾಗದಿರಲಿ ಎಂದು ಎಲ್ಲರ ಮನೆಯಲ್ಲೂ ಅದನ್ನು ಅರ್ಧಕ್ಕೆ ತುಂಡು ಮಾಡಿ ಬಚ್ಚಲಲ್ಲಿ ಇಡುತ್ತಿದ್ದರು. 

ನಾ ಶಿವಮೊಗ್ಗಕ್ಕೆ ಹೋದಾಗ, ಅದೇ ಬಚ್ಚಲಲ್ಲಿ ಸ್ನಾನ ಮಾಡುವಾಗ, ಅಜ್ಜನಂತೆಯೇ, “ಶ್ರೀ ಹರಿ,... ಶ್ರೀ ಹರಿ,... ಶ್ರೀ ರಾಮ, ಶ್ರೀ ರಾಮ, ಜಯ ಜಯ ರಾಮ...” ಎಂದು ಜೋರಾಗಿ ಹಾಡಿಕೊಂಡು, ನಂತರ ಲೈಫ಼್ ಬಾಯ್ ಹಾಡೂ ಕೂಡಾ ಹಾಡುತ್ತಿದ್ದೆ. ಅಗೆಲ್ಲಾ ನಮ್ಮ ಬಸಪ್ಪಜ್ಜ ರೂಮಿನಿಂದಲೇ, ನನಗೆ ಪೀತಿಯಿಂದ, “ಪೋಕರಿ,... ಪೋಕರಿ... , ರೇಡಿಯೋ ಹಾಡು ಹೇಳುತ್ತಾನೆ. ರಾಮಾಂಜನೇಯ ಸೀತರನ್ನು ನೆನೆಸಿಕೊಳ್ಳೋ” ಅನ್ನುತ್ತಿದ್ದರು. ಅದಕ್ಕೆ, ನಾನು, “ರಾಮ ನಿಮ್ಮ ದೇವರ ಕೋಣೆಯಲ್ಲಿದಾನೆ, ಸೀತ ನಮ್ಮಮ್ಮ, ಇನ್ನು ನಾನೇ ಆಂಜನೇಯ.. ಇನ್ಯಾಕೆ ಅವರೆಲ್ಲರ ಹೆಸರು” ಅಂತ ವಾಪಸ್ಸು ಜವಾಬು ಕೊಟ್ಟರೆ, “ಪೋಕರಿ,... ಪೋಕರಿ... , ನಿಮಗೆಲ್ಲಾ ನಿಮ್ಮಪ್ಪ ನಾಗಪ್ಪನೇ ಸರಿ. ಆತ ಇಷ್ಟು ಬಿಗಿ ಇದ್ದೂ, ನೀವೆಲ್ಲಾ ಎಷ್ಟೋಂದು ತುಂಟರು. ಅವನೇನಾದರೂ ಸ್ವಲ್ಪ ಸಡಿಲ ಬಿಟ್ಟಿದ್ದರೆ, ನಿಮ್ಮನ್ನೆಲ್ಲಾ ಮರದ ಮೇಲೇ ನೋಡಬೇಕಾಗುತ್ತಿತ್ತು” ಎಂದು ಜೋರಾಗಿ ನಗುತ್ತಿದ್ದರು.

ನಮ್ಮಜ್ಜನ ನಗುವೇ ಒಂದು ಅನೂಹ್ಯ. ಆ ದೊಡ್ಡ ಶಬ್ದದ “ಹಿ..ಹಿ ಹಿ..” ಎಂಬ, ತಮಾಷೆಯಾಗಿದ್ದರೂ ಗಾಂಭಿರ್ಯ ತುಂಬಿದ ನಗು ಎಷ್ಟೇ ದೂರವಿದ್ದರೂ ಗುರುತಿಸಬಹುದಾದ ವಿಶಿಷ್ಟ ದೇಶಾವರಿ ನಗು. ಈ ನಗು, ಕೆಲವೊಮ್ಮೆ ಹಾಸ್ಯಕ್ಕಾಗಿದ್ದರೆ, ಕೆಲವೊಮ್ಮೆ ತಮಗೆ ಅರ್ಥವಾಗದ ಮಾತುಗಳನ್ನು ತಳ್ಳಿಹಾಕಲು ಬಳಸುತ್ತಿದ್ದರು. ಹಾಗಾಗೇ ನಮ್ಮ ತಂದೆ, ನಮ್ಮ ಅಮ್ಮನ ಮುಂದೆ, “ನಿಮ್ಮಪ್ಪನ ನಗು ಹೇಗೇ ಸೀತಾ..?” ಅನ್ನುತ್ತಾ ಅಣಕಿಸಿಕೊಂಡು ನಗುವರು. ನಮ್ಮಮ್ಮ, “ನಮ್ಮಪ್ಪ ಮಹಾಪುರುಷ, ಅವರ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ ಅನ್ನುತ್ತಿದ್ದರು.” ನಾನು, ನಮ್ಮಪ್ಪನ ಮುಂದೆ ಬಾಯಿ ಬಿಚ್ಚಿ ನಗುವ ಅವಕಾಶ ಇಲ್ಲದ್ದರಿಂದ ಹಿತ್ತಲಿಗೆ ಓಡಿ ಹೋಗಿ, “ನಮ್ಮಜ್ಜ ನಗುವುದು, ಹಾಗಲ್ಲಾ, ಹೀಗೆ... ಅನ್ನುತ್ತಾ...” ನಮ್ಮಜ್ಜನ ನಗುವನ್ನು ಪ್ರಾಕ್ಟೀಸ್ ಮಾಡುತ್ತಿದ್ದೆ.

ಅದಿರಲಿ, ನಮ್ಮಜ್ಜ, ಬೇಸಿಗೆ ಇರಲಿ, ಚಳಿ ಇರಲಿ, ಮಳೆ ಇರಲಿ, ಯಾವಾಗಲೂ, ತಣ್ಣೀರಿನಲ್ಲೇ ಸ್ನಾನ ಮಾಡುತ್ತಿದ್ದರು. ನಾವು ಅದೇ ತಣ್ಣೀರಿನಲ್ಲಿ ಸ್ನಾನ ಮಾಡಿದರೆ, ಚಳಿಗಾಲದಲ್ಲಿ ತಡೆಯಲು ಆಗುತ್ತಿರಲಿಲ್ಲ. ಆಗೆಲ್ಲಾ, ಈ ಚಳಿ ತಡೆಯಲಾಗದೇ ನಮ್ಮಜ್ಜ ಹೀಗೆ ಹಾಡು ಹೇಳುತ್ತಿದ್ದಾರೆ, ಎಂದುಕೊಳ್ಳುತ್ತಿದ್ದೆ. ಈ ಚಳಿಯಲ್ಲಿ ಸ್ನಾನ ಮಾಡುವುದು ಯಾಕೆ? ಮತ್ತೆ ರಾಮ ರಾಮ.. ಅಂತ ಹೇಳಿಕೊಳ್ಳುವುದು ಏಕೆ ಎಂದುಕೊಳ್ಳುತ್ತಿದ್ದೆ. ಆದರೆ, ಬೆಂಗಳೂರಿನ ನಮ್ಮ ಮನೆಗೆ ಬಂದಿದ್ದಾಗಲೂ, ಆಗಿನ ಬೆಂಗಳೂರಿನ ಚಳಿಯಲ್ಲೂ ನಮ್ಮಜ್ಜ ತಣ್ಣೀರಿನ ಸ್ನಾನ ಮಾಡುವುದನ್ನು ಕಂಡಾಗ ಬೆರಗಾಗಿದ್ದೆ.  ನಮ್ಮಜ್ಜ ತಾನು ನಂಬಿದ್ದ ವಿಚಾರಗಳಲ್ಲಿ ಯಾವುದಕ್ಕೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ವಯಸ್ಸಾದಂತೆ ಎರಡು ಬಾರಿ ಹಾಸಿಗೆ ಹಿಡಿದಾಗಲೂ, ಸ್ವಲ್ಪ ಚೇತರಿಸಿಕೊಂಡ ಕ್ಷಣದಲ್ಲೇ, ಮಾರನೇ ದಿನವೇ ಎಂದಿನಂತೆ ತಮ್ಮ ದಿನಚರಿ ಇರಬೇಕು ಎಂದು ಬಯಸುತ್ತಿದ್ದರು. ಬೆಳಿಗ್ಗೆ ಬೇಗ ಏಳುವುದು, ತಣ್ಣೇರಿನ ಸ್ನಾನ ಮಾಡುವುದು, ಪ್ರಾರ್ಥನೆ ಮಾಡುವುದು, ಇತ್ಯಾದಿ ಹಾಗಾಗೇ ನಡೆಯಬೇಕೆಂದು ಬಯಸುತ್ತಿದ್ದರು ಮತ್ತು ಹಾಗೇ ನಡೆಯುತ್ತಿದ್ದರು.  ಆ ಮನಸ್ಸಿನ ಧೃಢತೆ, ಈಗಲೂ ಬೆರಗನ್ನು ತರುತ್ತದೆ.  ನಮ್ಮ ತಂದೆ ನಾಗಪ್ಪನವರ ಅತೀವ ಪ್ರಾಮಾಣಿಕತೆ, ಮೂಗಿನ ನೇರಕ್ಕೆ ನಡೆಯುವ ಛಲ, ಜೀವನವನ್ನು ಕಷ್ಟಪಟ್ಟು ನಡೆಸಬೇಕೆಂಬ ಹಠ, ಯಾರಿಗೂ ಬಗ್ಗದ, ಡೊಗ್ಗು ಸಲಾಮು ಹೊಡೆಯದ ಗುಣಗಳು ನನ್ನಲ್ಲಿ ಒಂದು ಕಡೆ ಪ್ರಭಾವ ಬೀರಿದರೆ, ಇನ್ನೊಂದೆಡೆ, ನಮ್ಮಜ್ಜನ ಸರಳತೆ, ಕಷ್ಟಗಳನ್ನು ನಗು ನಗುತ್ತಾ ಸ್ವೀಕರಿಸುವ, ಕೆಲವೊಮ್ಮೆ ದೇಶಾವರಿ ನಗು ನಗುತ್ತಾ ಎಲ್ಲ ದುಃಖ ದುಮ್ಮಾನಗಳನ್ನೂ ಹುಡಿ ಹಾರಿಸುವ ಸ್ವಭಾವ ನನ್ನಲ್ಲಿ ಆಳವಾಗಿ ಬೇರೂರಿವೆ.

ಇನ್ನು ಮತ್ತೆ ನಮ್ಮಜ್ಜನ ದಿನಚರಿಗೆ ಬಂದರೆ, ಸ್ನಾನವಾದ ನಂತರ, ತಮ್ಮ ಉರುಟು ಪಂಚೆ ಉಟ್ಟು, ಮೇಲಿನ ಮೈಯನ್ನು ಹಾಗೇ ಬಿಟ್ಟುಕೊಂಡು, ಮನೆಯ ಕಾಂಪೌಂಡಿನಲ್ಲಿ ಬೆಳೆದಿದ್ದ ಗಿಡಗಳಿಂದ, ಹೂ ಬಿಡಿಸಿ, ದೇವರ ಮನೆಗೆ ತಲುಪಿಸಿ, ನಂತರ, ದೇವರ ಮನೆಯಲ್ಲಿ ಮತ್ತೆ ದೀರ್ಘ ಪ್ರಾರ್ಥನೆಗೆ ಕುಳಿತರೆ, ಅವರೊಂದಿಗೆ ಎಲ್ಲರೂ ಹಾಡಬೇಕು. ಭಗವತ್ ಗೀತೆಯ ಚರಣಗಳು, ಕೇಶವನನ್ನು ಕುರಿತ ಪ್ರಾರ್ಥನೆಗಳು, ಹಾಗೇ ಕೊನೆಗೆ “ಸರ್ವೇ ಸುಖಿನೋಭವಂತು...” ಹಾಡಿನೊಂದಿಗೆ ಕೊನೆಗೊಳ್ಳಬೇಕು. ನಂತರ ಅತ್ಯಂತ ದೀರ್ಘವಾಗಿ ಉಸಿರಾಡಿಕೊಂಡು, ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರು. ಈ ಪ್ರಾರ್ಥನೆಯ ಕೊನೆಯಲ್ಲಿ ಮಾತ್ರ ಕಣ್ಣು ಮುಚ್ಚಿ ಕೈ ಮುಗಿಯುತ್ತಾ ಕುಳಿತರೆ, ನಮಸ್ಕಾರದ ಒಂದೊಂದು ಭಂಗಿಗೂ ಬಹಳ ಸಮಯ ಹಿಡಿಯುತ್ತಿತ್ತು. ಆಗ ತುಂಬಾ ಸಮಯ ಆಯಿತೆಂದು ನನಗನಿಸಿದರೆ, ಮುಚ್ಚಿದ ಕಣ್ಣನ್ನು ಕಿರಿದಾಗಿ ತೆರೆದು, ನಮಸ್ಕಾರ ಯಾವ ಹಂತದಲ್ಲಿದೆ ಎಂಬುದನ್ನು ನೋಡಿಕೊಂಡು ಮತ್ತೆ ಕಣ್ಣು ಮುಚ್ಚಿಕೊಳ್ಳುತ್ತಿದ್ದೆ. 

ನಮ್ಮಜ್ಜ ದೇವರ ಪ್ರಾರ್ಥನೆಯಲ್ಲಿ ಎಲ್ಲವನ್ನೂ ಮರೆತು, ದೇವರ ಧ್ಯಾನದಲ್ಲಿ ಮುಳುಗಿದ್ದಾಗ ಅವರು ರಾಮದೇವರ ಪಟವನ್ನು ತದೇಕಚಿತ್ತವಾಗಿ ನೋಡುತ್ತಾ ಇದ್ದರೆ, ಎಲ್ಲರಿಗೂ ಭಕ್ತಿ ಭಾವ ತುಂಬಿ ಬರುತ್ತಿತ್ತು. ನಮ್ಮಜ್ಜ, ರಾಮ ದೇವರನ್ನು ಬಿಟ್ಟು ಬೇರೆ ಯಾವ ದೇವರನ್ನೂ ಪೂಜಿಸುತ್ತಿರಲಿಲ್ಲ. ಬೆಂಗಳೂರಿನ ನಮ್ಮ ಮನೆಗೆ ಅಜ್ಜ ಬಂದಾಗಲೆಲ್ಲಾ ನಮ್ಮ ಮನೆಯ ದೇವರ ಮನೆಯಲ್ಲಿದ್ದ ನಮ್ಮಮ್ಮ ಜೋಡಿಸಿಟ್ಟ ಅನೇಕ ದೇವರ ಪಟಗಳನ್ನು ನೋಡಿ “ಹುಚ್ಚಿ, ಹುಚ್ಚಿ,.. ರಾಮದೇವರನ್ನು ಪ್ರಾರ್ಥಿಸಿಕೋ, ಅಷ್ಟೇ ಸಾಕು. ಸುಮ್ಮನೇ ಇಷ್ಟೋಂದು ಪಟಗಳನ್ನು ಇಟ್ಟಿದ್ದೀಯಲ್ಲಾ..” ಎಂದು ಆಕ್ಷೇಪ ಮಾಡಿತ್ತಿದ್ದರು.

ನಮ್ಮಜ್ಜನ ದೇವರ ಕೋಣೆಯಲ್ಲಿ, ರಾಮದೇವರ ಪಟ್ಟಾಭಿಷೇಕದ ಒಂದು ದೊಡ್ಡ ಫೋಟೋವನ್ನು, ಆಳೆತ್ತರದ ಸುಂದರವಾದ ಕಲಾಕೃತಿಯ ಮರದ ಮಂಟಪದ ಮಧ್ಯೆ ಕೂಡಿಸಿ, ಆ ಮಂಟಪಕ್ಕೆ ಸಣ್ಣ ಸಣ್ಣ ವಿದ್ಯುತ್ ದೀಪಗಳ ಅಲಂಕಾರ ಮಾಡಿ, ವೈಭವವಾಗಿ ಕಾಣುವಂತೆ ಇಡುತ್ತಿದ್ದರು. ರಾಮದೇವರ ಪಟ್ಟಾಭಿಷೇಕದ ಪಟದಲ್ಲಿ, ರಾಮ, ಸೀತ, ಲಕ್ಷ್ಮಣರು ನಿಂತುಕೊಂಡು ಆಶೀರ್ವಾದ ಮಾಡುತ್ತಿದ್ದರೆ, ಕಣ್ಣುಗಳನ್ನು ಅರ್ಧ ಮುಚ್ಚಿ ಮಂಡಿಯೂರಿ ಕುಳಿತ ಆಂಜನೇಯನು, ಎರಡು ಕೈಗಳನ್ನು ವಿನೀತವಾಗಿ ಜೋಡಿಸಿ, ರಾಮಸೀತರ ಪಾದವನ್ನೇ ನೋಡುತ್ತಾ ಭಕ್ತಿ ಭಾವದಿಂದ ಪೂಜಿಸುತ್ತಿರುವ ದೃಶ್ಯ ನನಗಂತೂ ಕಣ್ಣು ತುಂಬಿ ಮನತುಂಬಿ ಶಾಶ್ವತವಾಗಿ ಕುಳಿತಿದೆ. ಇದೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ, ನಮ್ಮಜ್ಜ, ಥೇಟ್ ಪಟದಲ್ಲಿನ ಆಂಜನೇಯನ ರೀತಿಯಲ್ಲಿ, ಅರೆ ಕಣ್ಣು ಮುಚ್ಚಿ ಪ್ರಾರ್ಥನೆ ಮಾಡುತ್ತಿದ್ದರೆ, ಆಂಜನೇಯನ ಭಕ್ತಿಗಿಂತ, ನಮ್ಮಜ್ಜನ ಭಕ್ತಿ ಹೆಚ್ಚು ಅನ್ನಿಸುತ್ತಿತ್ತು. ಹಾಗೇ ದೀರ್ಘದಂಡ ನಮಸ್ಕಾರ ಮಾಡಿ ಎದ್ದರೆ ನಮ್ಮಜ್ಜ ಯಾವುದೋ ಲೋಕದಿಂದ, ಈ ಲೋಕಕ್ಕೆ ಇಳಿದು ಬಂದಂತೆ ಅನ್ನಿಸಿತ್ತಿತ್ತು. ಪ್ರಾರ್ಥನೆ ಮುಗಿಸಿ ದೇವರ ಕೋಣೆಯಿಂದ ನಮ್ಮಜ್ಜ ಆಚೆ ಬಂದರೆ, ಅಲೌಕಿಕ ಲೋಕದಿಂದ ಲೌಕಿಕ ಲೋಕಕ್ಕೆ ಧಿಡೀರನೆ ಬಂದಿಳಿದ ದೂತನಂತೆ, ತಕ್ಷಣ ಅಲ್ಲಿದ್ದ ಎಲ್ಲಾ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ, ನಗಿಸಿ, ತಾವು ತಮ್ಮ ದೈನಂದಿನ ದಿರಿಸು ಧರಿಸಿ ಬರಲು ತಮ್ಮ ರೂಮಿಗೆ ಹೂಗುತ್ತಿದ್ದರು. ಅವರು ಬರುವಷ್ಟರಲ್ಲಿ ನಾವೆಲ್ಲಾ ಸೇರಿ, ನಡುಮನೆಯಲ್ಲಿ ತಿಂಡಿ ತಿನ್ನಲು ಚಾಪೆಗಳನ್ನೂ, ತಟ್ಟೆ ಲೋಟಗಳನ್ನೂ ಜೋಡಿಸಿ ಇಡುತ್ತಿದ್ದೆವು. ಸುಮಾರು 10 ರಿಂದ 20 ಜನ ಒಟ್ಟಿಗೆ ತಿಂಡಿಗೆ ಕೂರುತ್ತಿದ್ದೆವು. ಅಜ್ಜ, ಬಿಳಿ ಕಚ್ಚೆ, ಜುಬ್ಬಾ ಧರಿಸಿ, ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು, ಬಂದು ನಮ್ಮೆಲ್ಲರ ಜೊತೆ ತಿಂಡಿಗೆ ಕೂರುತ್ತಿದ್ದರು.

ಶಿವಮೊಗ್ಗದ ಅಜ್ಜನ ಮನೆಯ ಸುಪ್ರಸಿದ್ದ ತಿಂಡಿ ಎಂದರೆ, ಹುಳಿ ಚಿತ್ರಾನ್ನ. ಚಿತ್ರಾನ್ನದ ಗೊಜ್ಜು ದಿನದ ಎಲ್ಲಾ ವೇಳೆಯಲ್ಲೂ ಅಡುಗೆಮನೆಯಲ್ಲಿ ಸಿದ್ಧವಿರುತ್ತಿತ್ತು. ಅಜ್ಜನ ಮನೆಯ ಇನ್ನೊಂದು ಪ್ರಸಿದ್ದ ವ್ಯಂಜನವೆಂದರೆ, ಕೆಂಡದ ಮೇಲೆ ಸುಟ್ಟ ಹುರುಳಿ ಹಪ್ಪಳ. ಬೇಸಿಗೆ ರಜದಲ್ಲಿ, ಅಜ್ಜನ ಮನೆಯಲ್ಲಿ, ಬೆಳಿಗ್ಗೆ ಹುರುಳಿ ಹಪ್ಪಳದ ಹಿಟ್ಟನ್ನು, ಗಂಡು ಮಕ್ಕಳಾದ ನಾವುಗಳು ಒರಳಲ್ಲಿ ಕುಟ್ಟಿ ಕುಟ್ಟಿ ಹದಕ್ಕೆ ತಂದು ಅದರ ಮೇಲೆ ಒದ್ದೆ ಬಟ್ಟೆ ಹಾಕಿಟ್ಟು ನಂತರ ಮಧ್ಯಾಹ್ನ ಅದನ್ನು ಒತ್ತಿಕೊಡುವ ಹೆಂಗಸರುಗಳಿಂದ ಪಡೆದು, ಮನೆ ಮೇಲೆ ಹಾಸಿದ ಹಳೆ ಪಂಚೆ ಮೇಲೆ ಒಣಗಿ ಹಾಕಿ, ನಂತರ ಕಾಗೆಗಳಿಂದ ಅವುಗಳನ್ನು ರಕ್ಷಿಸಿ, ಒಣಗಿದ ಹಪ್ಪಳಗಳನ್ನು ದೊಡ್ಡ ಡಬ್ಬಾಗಳಲ್ಲಿ ತುಂಬಿ ಇಡುತ್ತಿದ್ದೆವು. ಈ ಹುರುಳಿ ಹಪ್ಪಳ, ಕೆಂಡದ ಮೇಲೆ ಸುಟ್ಟರೆ, ಚಿತ್ರಾನ್ನದ ಜೊತೆಗೆ ಒಳ್ಳೆ ಕುರುಕು ವ್ಯಂಜನ ಅಂತ ನನಗೆ ಗೊತ್ತಾಗಿದ್ದೇ ನಮ್ಮ ಅಜ್ಜನ ಮನೆಯಲ್ಲಿ. ಹುರುಳಿ ಹಪ್ಪಳ ಇಲ್ಲದ್ದಿದ್ದರೆ, ನಮ್ಮಜ್ಜನ ತಿಂಡಿ ಮತ್ತು ಊಟ ಎರಡೂ ಅಪೂರ್ಣ. ತಿಂಡಿಯ ಕೊನೆಯಲ್ಲಿ ಚೆನ್ನಾಗಿ ಕಾಯಿಸಿದ ಗಟ್ಟಿ ಹಾಲು, ಲೋಟದ ತುಂಬಾ ಕೊಡುತ್ತಿದ್ದರು. ಅಜ್ಜ ಅದರಲ್ಲಿ ಸ್ವಲ್ಪ ಉಳಿಸಿ, ಮನೆಯಲ್ಲಿದ್ದ ಉಗ್ರ ಸ್ವರೂಪಿ ನಾಯಿ “ರಾಜು”ಗೆ ಹಾಕಿ, ನಂತರ ಹೊರಡುತ್ತಿದ್ದರು.

ಅಜ್ಜನ ಕಚ್ಚೆ ಪಂಚೆಯಂತೆ ಅವರ ಅವಿನಾಭಾವದ ಇನ್ನೊಂದು ವಸ್ತು, ಅವರ “ಸುವೇಗ” ಮೊಪೆಡ್. ಆಗ ಇದ್ದ ಒಂದೇ ಮೊಪೆಡ್ ಎಂದರೆ, ಸುವೇಗ, ಅಷ್ಟೇನೂ ಬಲಯುತವಾಗಿರದ ಇಂಜಿನ್ ಹೊಂದಿದ್ದ ಸುವೇಗವನ್ನು ಏರುದಾರಿಯಲ್ಲಿ ಪೆಡಲ್ ಮಾಡಿಕೊಂಡೇ ಹೋಗಬೇಕಾಗಿತ್ತು. ಅಂತಹ ಸುವೇಗಾ ಒಂದರಲ್ಲಿ ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಗೆ ತಮ್ಮ ಕೆಲಸಕ್ಕೆ ಹೊರಟುಬಿಟ್ಟರೆ, ಮತ್ತೆ ವಾಪಸ್ಸಾಗುತ್ತಿದ್ದುದು, ಸರಿಯಾಗಿ ಮಧ್ಯಾಃಹ್ನ 12 ಗಂಟೆಗೆ. ತಕ್ಷಣ ಮನೆ ದಿರಿಸು ತೊಟ್ಟು 12.30 ಕ್ಕೆ ಊಟಕ್ಕೆ ಕುಳಿತಿಕೊಳ್ಳುತ್ತಿದ್ದರು. ಊಟದ ನಂತರ, ಒಂದು ಗಂಟೆ ನಿದ್ದೆ, ನಂತರ, ರೂಮಿನಲ್ಲೇ ಅಧ್ಯಯನ, ನಂತರ, ಸುಮಾರು 2 ಗಂಟೆಗೆ ಮತ್ತೆ ಕೆಲಸಕ್ಕೆ. ಮನೆಗೆ ವಾಪಸಾಗುತ್ತಿದ್ದುದು, ಸಂಜೆ ಸುಮಾರು 5 ಗಂಟೆಗೆ. ರಾತ್ರಿ ಏಳರವರೆಗೆ, ವ್ಯವಹಾರದ ಲೆಕ್ಕ ಬರೆದು, ಮತ್ತೆ ಸಾಯಂಕಾಲದ ಪ್ರಾರ್ಥನೆ, ನಂತರ ಊಟ, ಅಮೇಲೆ ಮಕ್ಕಳು ಮೊಮ್ಮಕ್ಕಳೊಂದಿಗೆ ಸ್ವಲ್ಪ ಹರಟೆ. ರಾತ್ರಿ ಹತ್ತಕ್ಕೆಲ್ಲಾ ಕಣ್ತುಂಬಾ ನಿದ್ದೆ. ಎಲ್ಲವೂ ಗಡಿಯಾರದಂತೆ ಕರಾರುವಾಕ್ಕು. ಇದು ನಮ್ಮಜ್ಜನ ದಿನಚರಿ.

ಶನಿವಾರ ಮನೆಯಲ್ಲಿ ಸಂಜೆ ಸಡಗರ. ಆ ದಿನ ಸಂಜೆ ಐದು ಗಂಟೆಗೆಲ್ಲಾ ನಾವು ಮಕ್ಕಳೆಲ್ಲಾ ಸೇರಿ, ನಡುಮನೆಯಲ್ಲಿ ದೊಡ್ಡ ಪರದೆ ಕಟ್ಟಿ, ರಾಮನ ಫೋಟೋ ತಂದು ವೇದಿಕೆ ಕಟ್ಟಿ, ಹೂವಿನ ಅಲಂಕಾರ ಮಾಡಿ, ಭಜನೆಗೆ ಕೂತರೆ, ಸುಮಾರು ಏಳು ಗಂಟೆಯವರೆಗೆ ಭಕ್ತಿರಸದ ಹೊಳೆ ಹರಿಯುತ್ತಿತ್ತು. ನಂತರದ್ದೇ ನಿಜವಾದ ನಂದಗೋಕುಲದ ಅವತಾರ. ಎಲ್ಲಾ ಮೊಮ್ಮಕ್ಕಳೂ, ಮರಿಮಕ್ಕಳೂ ಅಜ್ಜನ ಜೊತೆ ಅಂಗಳದಲ್ಲಿ ಕುಳಿತರೆ, ಮಂಡಕ್ಕಿ-ಕಾರ ಸೇವೆ ಶುರು. ಮೆಲ್ಲಗೆ ಮಂಡಕ್ಕಿ ಮೆಲ್ಲುತ್ತಾ, ಅಜ್ಜನ ನೀತಿಕತೆಗಳನ್ನು ಕೇಳುತ್ತಾ ಯಾವುದೋ ಲೋಕಕ್ಕೆ ಹೋಗಿಬಿಡುತ್ತಿದ್ದೆವು. ಈ ಸಂದರ್ಭದಲ್ಲಿ ಅಜ್ಜನಿಗೆ ತರಲೆ ಪ್ರಶ್ನೆ ಕೇಳಿ ಅವರ ಕಾಲೆಳೆಯುವ ಕೆಲಸ ನನ್ನದಾಗಿತ್ತು. ಆಗೆಲ್ಲಾ ಅವರಿಂದ ಬರಿತ್ತಿದ್ದ ಉದ್ಘಾರ “...ಪೋಕರಿ,...ಪೋಕರಿ...” ನಂತರ ದೇಶಾವರಿ ನಗು. ಅಜ್ಜ ಈ ರೀತಿ ಮಕ್ಕಳ ಜೊತೆ ಸದರದಿಂದ ಇರುವುದೇ ನಮಗೆ ಆಶ್ಚರ್ಯ ಮತ್ತು ಖುಷಿಯ ಸಂಗತಿಯಾಗಿತ್ತು. ಯಾರೋ ನಮ್ಮ ವಯಸ್ಸಿನ ಮಕ್ಕಳ ಜೊತೆ ಆಡಿದಷ್ಟೇ ಸಹಜವಾಗಿ ಅಜ್ಜನ ಜೊತೆಗೆ ಆಡುತ್ತಿದ್ದೆವು.

ನಾನು ಸ್ವಲ್ಪ ಬೆಳೆದಂತೆಲ್ಲಾ, ಅಜ್ಜನನ್ನು ಸ್ವಲ್ಪ ಸ್ವಲ್ಪವೇ ಅರಿಯಲು ಪ್ರಯತ್ನಿಸುತ್ತಿದ್ದೆ. ಬೆಂಗಳೂರಿಗೆ ಅಜ್ಜ ಬಂದರೆ ಅಜ್ಜನ ಎಲ್ಲಾ ಕೆಲಸಗಳಿಗೂ ಹೆಗಲು ಕೊಟ್ಟು ಅವರೊಂದಿಗೆ ಸುತ್ತಲು ಹೊರಟುಬಿಡುತ್ತಿದ್ದೆ. ಅವರು ಗಾಂಧಿವಾದಿಯಾಗಿದ್ದರೂ, ತಮ್ಮ ಕುಲಸ್ತರ ಏಳಿಗೆಗೆ ತುಂಬಾ ಕಾಳಜಿ ವಹಿಸುತ್ತಿದ್ದರು. ಒಮ್ಮೆ ಇದೇ ವಿಷಯಕ್ಕೆ ಅವರ ಜೊತೆ ಮಾತಿಗೆ ಇಳಿದಾಗ, “ಅಜ್ಜ, ಗಾಂಧಿತಾತ ಎಲ್ಲಾ ಜಾತಿಯವರೂ ಒಂದೇ ಅಂದರೆ, ನೀವ್ಯಾಕೆ ನಮ್ಮ  ಜನಾಂಗದವರ ಪರವಾಗಿ ಮಾತ್ರ ಕೆಲಸ ಮಾಡುತ್ತೀದ್ದೀರ” ಎಂದರೆ, “ಅಯ್ಯೋ, ಪೋಕರಿ, ಅದು ಹಾಗಲ್ಲಾ, ಸಮಾಜಸೇವೆಗೆ ಇದೊಂದು ದಾರಿ ಅಷ್ಟೆ. ಈ ದಿನ ನಿನಗೇ ಗೊತ್ತಿರುವಂತೆ, ಸಮಾಜದ ಮೇಲ್ವರ್ಗದವರಾದ ಬ್ರಾಹ್ಮಣರಿಗೆ, ವೀರಶೈವರಿಗೆ, ಕೆಳವರ್ಗದ ಕುರುಬರಿಗೆ, ಈಡಿಗರಿಗೆ, ದಲಿತರಿಗೆ, ಎಲ್ಲಾ ಮಕ್ಕಳ ಅಭ್ಯಾಸಕ್ಕಾಗಿ ಮುಖ್ಯ ನಗರಗಳಲ್ಲಿ ಉಚಿತ ಹಾಸ್ಟೆಲ್ ಗಳಿವೆ. ಆದರೆ, ತೀರ ಹಿಂದುಳಿದ ನಮ್ಮ ಜನಾಂಗದವರಿಗೆ ಈ ರೀತಿಯ ಸೌಲಭ್ಯವಿಲ್ಲ. ನಿಮ್ಮಪ್ಪ ಕೂಡ ದಾವಣಗೆರೆಯ ಯಾವುದೋ ಜನಾಂಗದ ಉಚಿತ ಹಾಸ್ಟೆಲ್ ನಲ್ಲಿ ಇದ್ದುಕೊಂಡು, ಊಟಕ್ಕೆ “ವಾರಾನ್ನ” ಮಾಡಿಕೊಂಡು ಬೆಳೆದವರೇನೆ. ಅವರಿಗೆ ಈ ಹಾಸ್ಟೆಲ್ ಗಳಲ್ಲಿ ವಸತಿ ಸಿಗುತ್ತಿತ್ತು. ಆದರೆ, ಊಟಕ್ಕೆ, ವಾರದ ಒಂದೊಂದು ದಿನ ಒಬ್ಬೊಬ್ಬ ದಾನಿಗಳ ಮನೆಯಲ್ಲಿ ಊಟ. ಆ ದಿನ ಅವರ ಮನೆಯ ಎಲ್ಲಾ ಕೆಲಸಗಳೂ ಇವರ ಪಾಲಿಗೆ, ಬಾವಿಯಿಂದ ನೀರು ಸೇದಿ ಹಾಕುವುದು, ಸೌದೆ ಒಡೆಯುವುದು.. ಇತ್ಯಾದಿ. ಹೀಗೆ ನಿಮ್ಮಪ್ಪ ಹಳ್ಳಿಯಿಂದ ಬಂದು ಓದಿಕೊಂಡರು. ಅವರಂತಹ ಪ್ರತಿಭಾನ್ವಿತ ಬಡವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದಲೇ ನಾನು ನಮ್ಮ ಕುಲಸ್ತರ ಸಮಾಜದ ಏಳಿಗೆಗೆ ಈ ರೀತಿ ಕೆಲಸ ಮಾಡಿತ್ತಿದ್ದೇನೆ. ಮುಂದೆ ನಾವು ಕಟ್ಟಲಿರುವ ಹಾಸ್ಟೆಲ್ ನಲ್ಲಿ ನಮ್ಮ ಕುಲಸ್ತರ ಜೊತೆಗೆ ಎಲ್ಲಾ ಹಿಂದುಳಿದ ಜನಾಂಗದ ಮಕ್ಕಳೂ ಇರುತ್ತಾರೆ” ಎಂದರು.

ನಂತರ ಹರಸಾಹಸ ಪಟ್ಟು ಬೆಂಗಳೂರಿನಲ್ಲಿ ನಮ್ಮ ಕುಲಸ್ತರ ಉಚಿತ ಹಾಸ್ಟೆಲ್ ಒಂದನ್ನು ಸ್ಥಾಪಿಸುವುದರಲ್ಲಿ ಮಹತ್ವವಾದ ಪಾತ್ರ ವಹಿಸಿದ್ದರು. ಅವರು ನಮ್ಮ ಜನಾಂಗದವರ ಅಖಿಲ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದಾಗ, ರಾಜ್ಯದ ಉದ್ದಗಲಕ್ಕೂ ಓಡಾಡಿ, ಜನಾಂಗದಲ್ಲಿ ಸ್ವಲ್ಪ ಮಟ್ಟಿಗೆ ಅನುಕೂಲಸ್ತ ಇರುವರ ಮನ ಒಲಿಸಿ ಹಣ ಸಂಗ್ರಹಿಸಿ, ಹಾಸ್ಟೆಲ್ ನಿರ್ಮಾಣಕ್ಕಾಗಿ ತುಂಬಾ ಕಷ್ಟಪಟ್ಟರು. ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ, ತಮ್ಮ ಸ್ವಂತ ಹಣದಿಂದ ಈ ಓಡಾಟಕ್ಕೆ ಎಗ್ಗಿಲ್ಲದೇ ಖರ್ಚು ಮಾಡುತ್ತಿದ್ದರು. ಅವರ ಜೊತೆ ಅವರ ಅನೇಕ ಸ್ನೆಹಿತರುಗಳು ಹೆಗಲು ಕೊಟ್ಟು ಕೆಲಸ ಮಾಡಿರುವುದನ್ನೂ ಮರೆಯಲು ಹಾಗಿಲ್ಲ. ಆ ಮಹನೀಯರ ಹೆಸರುಗಳೆಲ್ಲಾ ನನಗೆ ಈಗ ನೆನಪಿಲ್ಲ. ಆದರೆ, ಈ ಮಹನೀಯರು, ನಮ್ಮ ಅಜ್ಜನ ಎಲ್ಲಾ ಕಾರ್ಯಕ್ರಮಗಳ ಅನುಮೋದಕರೂ, ಬೆಂಬಲಿಗರೂ ಆಗಿದ್ದರು. ನಮ್ಮ ಅಜ್ಜ ಈ ಹಾಸ್ಟೆಲ್ ನಿರ್ಮಾಣಕ್ಕಾಗಿ ಎಷ್ಟೋಂದು ತಲೆ ಕೆಡಿಸಿಕೊಂಡಿದ್ದರೆಂದರೆ, ತಿಂಗಳಿಗೊಮ್ಮೆ ಬೆಂಗಳೂರಿಗೆ ಬಂದು, ಗೊತ್ತಿದ್ದ ಎಲ್ಲರ ಮನೆಗೆ ಹೋಗುತ್ತಿದ್ದರು. ಆಗೆಲ್ಲಾ ಅವರಿಗೆ ಸಾಥ್ ನೀಡುತ್ತಿದ್ದುದು ನಾನು. ಅಜ್ಜನನ್ನು ಕರೆದುಕೊಂಡು, ಸಿಟಿ ಬಸ್ಸಿನಲ್ಲಿ ಅಡ್ರೆಸ್ಸ್ ಹಿಡಿದುಕೊಂಡು ಹೊರಟರೆ, ವಾಪಸ್ಸು ಬರುತ್ತಿದ್ದುದು ಸಾಯಂಕಾಲಕ್ಕೇನೆ. ಮಧ್ಯೆ ಊಟ ಸಿಕ್ಕರೆ ಉಂಟು, ಇಲ್ಲದ್ದಿದ್ದರೆ ಒಂದು ಅಥವಾ ಎರಡು ಬಾಳೆಹಣ್ಣನ್ನು ತಿಂದು ನೀರು ಕುಡಿದು ಮತ್ತೊಬ್ಬರ ಮನೆ ಹುಡುಕಾಟ. ಎಲ್ಲರ ಮನೆಯಲ್ಲೂ ಅಜ್ಜನ ಭಾಷಣ ಮತ್ತು ಉದಾರ ದಾನಕ್ಕಾಗಿ ಮನವೊಲಿಕೆ. ತುಂಬಾ ಬಳಲಿದ್ದರೂ ತೋರಿಸಿಕೊಳ್ಳದೇ ಮತ್ತೆ ಮುಂದಿನ ಮನೆ ಅಥವಾ ಪರಿಚಿತರು ಇರುವ ಕಛೇರಿಗೆ ಪಯಣ. ಒಂದು ಪ್ರಕರಣ ನನಗೆ ಇನ್ನೂ ನೆನೆಪಿದೆ. ಆ ದಿನ ಮಟ ಮಟ ಮಧ್ಯಾಹ್ನ, ಸುಮಾರು ಎರಡು ಮನೆಗಳಲ್ಲಿ ಯವುದೇ ಚಂದಾ ವಸೂಲಿಯಾಗಿರಲ್ಲಿಲ್ಲ. ಹೊಟ್ಟೆ ಹಸಿವು, ಏನೂ ದಕ್ಕದ್ದಕ್ಕೆ ಬೇಸರ. ಇವೆಲ್ಲದರ ಮಧ್ಯೆ, ಮತ್ತೊಬ್ಬರ ಮನೆಗೆ ಬಸವಳಿದುಕೊಂಡು ಹೋದಾಗ, ಅವರ ಮನೆಯೊಳಗಿನಿಂದ ಘಮ ಘಮ ಸಾರು, ಹಪ್ಪಳ ಕರೆದ ವಾಸನೆ ಬರುತ್ತಿದ್ದರೂ, ಊಟಕ್ಕೆ ಕರೆಯದೇ, ಬರಿಯ ಮಜ್ಜಿಗೆ ಕೊಟ್ಟು ಸಾಗಹಾಕಿದರು. ಆಗಲೂ ನಮ್ಮಜ್ಜ, ಆ ಮನೆಯವರಿಗೆ ಹೃತ್ಪೂರ್ವಕವಾಗಿ ವಂದಿಸಿ, “ದೇವರು ನಿಮ್ಮ ಮೂಲಕ ನಮಗೆ ಮಜ್ಜಿಗೆ ಕೊಟ್ಟ” ಎಂದು ಹೇಳಿ ನಿರಾಕಾರ ದೇವರಂತೆ ಮುಂದೆ ನಡೆದರು.

ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಸರ್ಕಾರೀ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ನಮ್ಮ ಜನಾಂಗದ ಒಬ್ಬರನ್ನು ನೋಡಲು ಬೆಳಿಗ್ಗೆಯೇ ಯಥಾಪ್ರಕಾರ, ನಾನು ಮತ್ತು ನಮ್ಮ ಅಜ್ಜ, ಸಿಟಿ ಬಸ್ಸಿನಲ್ಲಿ ಹೋದೆವು. ಆ ವೈದ್ಯರ ಕೊಠಡಿ ಮುಂದೆ ಅವರನ್ನು ನೋಡಲು ಕುಳಿತ ರೋಗಿಗಳ ಮಧ್ಯೆ ಕುಳಿತೆವು. ಸುಮಾರು ಅರ್ಧ ಗಂಟೆ ತಡವಾಗಿ ಬಂದ ವೈದ್ಯರನ್ನು ಕಂಡು ನಮ್ಮ ಅಜ್ಜ ಎಂದು ನಿಂತು ದೇಶಾವರೀ ನಗೆ ಬೀರುತ್ತಾ ಕೈ ಮುಗಿದು, “ನಮಸ್ಕಾರ ಡಾಕ್ಟರೇ,...” ಎಂದರು. ಅದನ್ನು ಕಂಡ ತಕ್ಷಣ ಆ ಡಾಕ್ಟರು ಮುಖ ಹುಳ್ಳಗೆ ಮಾಡಿಕೊಂಡು, ಸ್ವಲ್ಪ ಕೂತಿರಿ, ಇವರಿಗೆಲ್ಲಾ ಚಿಕಿತ್ಸೆ ಕೊಟ್ಟು ನಂತರ ಮಾತಾನುಡುತ್ತೇನೆ ಎಂದು ಒಳಗೆ ಹೋದರು. ಸುಮಾರು ಎರಡು ಗಂಟೆಯವರಿಗೆ ನಮ್ಮಿಬ್ಬರಿಗೂ, ಬೆಂಚ್ ಕಾಯುವ ಕೆಲಸ. ಆ ರೂಮಿನೊಳಗೆ ಹೋಗಿ ಹೊರಗೆ ಬರುತ್ತಿದ್ದ ನರ್ಸ್ ಗಳನ್ನೂ, ಬೇರೆ ಡಾಕ್ಟರುಗಳನ್ನೂ, ತೋರಿಸಲು ಹೋಗಿ ಬರುತ್ತಿದ್ದ ರೋಗಿಗಳನ್ನೂ ನೋಡುತ್ತಾ ಕುಳಿತೆವು. ನಂತರ, ಆಚೆ ಬಂದ ನಮ್ಮ ಪರಿಚಿತ ಡಾಕ್ಟರ್, ಬೇರೆಲ್ಲಿಗೋ ಹೋಗುತ್ತಿದ್ದುದನ್ನು ಕಂಡು, ನಾನು ಅವರ ಹಿಂದೆ ಓಡಿದೆ. ಆ ಡಾಕ್ಟರು, “ಕೂತಿರಯ್ಯ, ವಾರ್ಡ್ ಗೆ ಹೋಗಿ ಬರುತ್ತೇನೆ..” ಎಂದು ಸಣ್ಣ ದನಿಯಲ್ಲಿ ಗದರಿ ಹೋದರು. ನಾನು ವಾಪಸ್ಸು ಬಂದು ಅಜ್ಜನಿಗೆ ಅದನ್ನೇ ಹೇಳಿದೆ. ಮತ್ತೆ ಸುಮಾರು ಒಂದೂವರೆ ಗಂಟೆ ಆಯ್ತು. ಡಾಕ್ಟರ ಸುಳಿವಿಲ್ಲ. ನಾನು ತಡೆಯಲಾರದೇ, ಆ ಡಾಕ್ಟರು ಹೋಗಿದ್ದ ವಾರ್ಡ್ ಕಡೆ ಹೋಗಿ ಹುಡುಕಿದೆ. ಎಲ್ಲೂ ಕಾಣಲಿಲ್ಲ. ಅಲ್ಲಿ ಇದ್ದ ನರ್ಸ್ ಒಬ್ಬರನ್ನು ವಿಚಾರಿಸಿದೆ. “ಅವರು ಊಟಕ್ಕೆ ಹೋದರು. ಮತ್ತೆ ಬರುವುದು ಯಾವಾಗಲೋ..” ಎಂದರು. ಸಪ್ಪೆ ಮುಖದಿಂದ ವಾಪಸ್ಸು ಬಂದು ಅಜ್ಜನಿಗೆ ಹೇಳಿದೆ. ಆ ಮನುಷ್ಯ ನಮಗೆ, “ಚಂದಾ ಕೊಡಲಾಗುವುದಿಲ್ಲ ಎಂದು ನೇರವಾಗಿ ಹೇಳಬಹುದಿತ್ತು. ಆದರೆ, ಹೀಗೆ ಬೆಳಿಗ್ಗೆಯಿಂದ, ಮಧ್ಯಾಹ್ನದವರೆಗೆ ಕಾಯಿಸಿ, ಇನ್ನೊಂದು ಬಾಗಿಲ ಮೂಲಕ ಹೋರಟು ಹೋದರಲ್ಲ” ಎಂದು ಬೈದುಕೊಂಡೆ. ಆದರೆ ನಮ್ಮಜ್ಜ, ಅದೇ ದೊಡ್ಡ ದೇಶಾವರಿ ನಗು ನಕ್ಕು, “ಪೋಕರಿ.., ಪೋಕರಿ,.. ನನ್ನ ನೋಡಿ ಹೆದರಿ ಓಡಿ ಬಿಟ್ಟ., ಅಯಿತು ನಡಿ, ಮುಂದಿನ ಮನೆಯವರಾರು ನೋಡು.” ಎನ್ನುತ್ತಾ ಎದ್ದರು. ನಮ್ಮಜ್ಜನ ಮುಖದಲ್ಲಿ ಸ್ವಲ್ಪವೂ ಕೋಪವಿರಲಿಲ್ಲ. ಈ ಸ್ಥಿತಪ್ರಜ್ಞತೆ ಕಂಡು ನಾನಂತೂ ದಂಗಾಗಿದ್ದೆ. ಇವೆಲ್ಲಾ ನನಗೆ ನನ್ನ ಜೀವನದಲ್ಲಿ ಮರೆಯಲಾರದ ಪಾಠಗಳನ್ನು ಕಲಿಸಿವೆ. ಇವೆಲ್ಲದರ ನಡುವೆ, ಆಷ್ಟೇನೂ ಸ್ಥಿತಿವಂತರಲ್ಲದ ಅನೇಕರು, ತಮ್ಮ ಕೈಲಾದ ಧನ ಸಹಾಯ ಮಾಡುತ್ತಿದ್ದುದು, ಹಾಗೇ ನಮ್ಮಜ್ಜನ ಮೇಲಿನ ಅಭಿಮಾನದಿಂದ ತಾವೇ ಗೇಟಿನವರೆಗೆ ಬಂದು ಬೀಳ್ಕೊಟ್ಟು, ಸ್ವಪ್ರೇರಣೆಯಿಂದ ರಸೀದಿ ಪುಸ್ತಕ ಪಡೆದು ಎಷ್ಟೋ ಅಷ್ಟು ಹಣ ಸಂಗ್ರಹ ಮಾಡಿ ಸಹಾಯ ಮಾಡಿದ ಸಹೃದಯರೂ ಇದ್ದರು.

ಈ ಹಾಸ್ಟೆಲ್ ನಿರ್ಮಾಣಕ್ಕೆ ಚಂದಾ ಎತ್ತಲು, ಸಂಘದ ವತಿಯಿಂದ ನಮ್ಮಜ್ಜ ರಸೀದಿ ಪುಸ್ತಕಗಳನ್ನು ಮುದ್ರಿಸಿ, ಪರಿಚಿತರೆಗೆಲ್ಲಾ ತಲುಪಿಸಿ, ಸಾರ್ವಜನಿಕರಿಂದಲೂ ಸಂಗ್ರಹ ಮಾಡಿಕೊಡಲು ವಿನಂತಿಸುತ್ತಿದ್ದರು. ಮತ್ತೊಮ್ಮೆ ಬೆಂಗಳೂರಿಗೆ ಬಂದರೆ ಅವರ ಮನೆಗೆ ಹೋಗಿ, ಹಣ ಸಂಗ್ರಹ ಆಗಿದ್ದರೆ, ಅದನ್ನು ಪಡೆದುಕೊಂಡು, ಇಲ್ಲದ್ದಿದ್ದರೆ, ರಸೀದಿ ಪುಸ್ತಕ ವಾಪಸ್ಸು ಪಡೆದು ಮತ್ತೊಬ್ಬರ ವಿಳಾಸ ಪಡೆದು ಮುಂದೆ ಹೋಗುತ್ತಿದ್ದರು. ಈ ಪ್ರಕರಣದಲ್ಲಿ, ಅನೇಕರು, ರಸೀದಿ ಪುಸ್ತಕವನ್ನೂ ವಾಪಸ್ಸು ಕೊಡದೇ ತುಂಬಾ ಸತಾಯಿಸಿದರು. ಇಂತಹ ಒಂದು ಪ್ರಕರಣದಲ್ಲಿ, ಆ ಮಹನೀಯರಿಗೆ ಉದ್ದೇಶಿಸಿ ಬರೆದ ಪತ್ರವನ್ನು ನನ್ನ ಕೈಗೆ ಕೊಟ್ಟು, ಅವರು ಸಿಕ್ಕಾಗ ಅವರಿಗೆ ಕೊಟ್ಟು, ಹಣ ಸಂಗ್ರಹವಾಗಿದ್ದರೆ ಆ ಹಣ ಮತ್ತು ರಸೀದಿ ಪುಸ್ತಕ ವಾಪಸ್ಸು ಪಡೆಯಲು ಹೇಳಿಕೊಟ್ಟು ವಾಪಸ್ಸು ಶಿವಮೊಗ್ಗಕ್ಕೆ ಹೋಗಿಬಿಟ್ಟರು. ಬೆಂಗಳೂರಿನ ಅವರ ಮನೆಗೆ ಅನೇಕ ಬಾರಿ ಹೋದರೂ ನನಗೆ ಅವರ ದರ್ಶನ ಆಗಲಿಲ್ಲ. ನಮ್ಮಜ್ಜ ತಮ್ಮ ಕೈಯಿಂದ ಬರೆದುಕೊಟ್ಟ ಆ ಪತ್ರ ನನ್ನ ಬಳಿ ನನ್ನ ನೆಚ್ಚಿನ ದಾಖಲೆಯಾಗಿ ಉಳಿದುಹೋಯಿತು. ಈ ಪತ್ರದ ನಕಲನ್ನು ಇಲ್ಲಿ ಕೊಟ್ಟಿದ್ದೇನೆ.ಅಜ್ಜನ ಇನ್ನೊಂದು ಗುಣ ವಿಶೇಷಣವೆಂದರೆ, ತಾವು ನಂಬಿದ ತತ್ತ್ವಗಳನ್ನು ತಾವು ಎಷ್ಟೇ ಕಟ್ಟುನಿಟ್ಟಾಗಿ ಆಚರಿಸುತ್ತಿದ್ದರೂ, ಬೇರೆಯವರ ಮೇಲೆ ಹೇರಲು ಹೋಗುತ್ತಿರಲಿಲ್ಲ. ಒಂದು ಉದಾಹರಣೆಯೆಂದರೆ, ತಾವು ಮಾಂಸಾಹಾರ ತ್ಯಜಿಸಿದ್ದರೂ, ತಮ್ಮ ಮನೆಯರಿಗೆ ಅದನ್ನು ತ್ಯಜಿಸಲು ಒತ್ತಾಯ ಹೇರಲಿಲ್ಲ. ತಮ್ಮ ಮನೆಯಲ್ಲಿ ಮಾಂಸಾಹಾರ ತಯಾರಿಸಿ ಒಟ್ಟಿಗೆ ಊಟಕ್ಕೆ ಬಡಿಸಿದರೆ, ತಾವು ಮಾತ್ರ ಸಸ್ಯಾಹಾರ ಸೇವೆಸಿ ತೃಪ್ತಿಯಿಂದ ಎದ್ದುಬಿಡುತ್ತಿದ್ದರು. ತಾವು ತಣ್ಣೀರಿನ ಸ್ನಾನ ಮಾಡುತ್ತಿದ್ದರೂ, ಮನೆಯೊಳಗಿನ ಇನ್ನೊಂದು ಸ್ನಾನದ ಮನೆಯಲ್ಲಿ, ಸೌದೆಯ ಒಲೆ ಹಚ್ಚಿದ ಹಂಡೆ ಕೂಡಿಸಿ, ಬೇರೆಯವರಿಗೆ ಬಿಸಿನೀರಿನ ಸ್ನಾನಕ್ಕೆ ಅನುವು ಮಾಡಿಕೊಟ್ಟಿದ್ದರು.

ನನ್ನ ಅಜ್ಜನ ಅಧ್ಯಯನಶೀಲತೆ ನನಗೆ ಬೆರಗು ತಂದಿತ್ತು. ಪ್ರೈಮರಿ ಸ್ಕೂಲನ್ನು ದಾಟದ ನಮ್ಮಜ್ಜ, ಸ್ವಂತ ಪ್ರಯತ್ನದಿಂದ ಕನ್ನಡ ಚೆನ್ನಾಗಿ ಓದುತ್ತಿದ್ದರು ಹಾಗೂ ಬರೆಯುತ್ತಿದ್ದರು. ಅವರ ಬಳಿಯಲ್ಲಿ, ರಾಮಕೃಷ್ಣ ಮಠದವರು ಪ್ರಕಟಿಸಿದ ಪುಸ್ತಕಗಳಿದ್ದವು. ಅವುಗಳನ್ನು ತಮ್ಮ ಬಿಡುವಿನ ವೇಳೆ ಓದುತ್ತಿದ್ದರು ಹಾಗೂ ಅಲ್ಲಿನ ವಿಷಯಗಳ ಬಗ್ಗೆ ವಿಚಾರವಂತರ ಜೊತೆಗೆ ಚರ್ಚಿಸುತ್ತಿದ್ದರು. ತಮ್ಮ ಇಳಿವಯಸ್ಸಿನಲ್ಲಿ ಹಿಂದಿ ಪುಸ್ತಕ ಓದಲು ಕಲಿಯುತ್ತಿದ್ದರು. ಎಲ್ಲವೂ ಸ್ವಪ್ರಯತ್ನವೇ. ಅವರ ಈ ನಿರಂತರ ಓದುವ ಬರೆಯುವ ಹವ್ಯಾಸ ನನಗಂತೂ ಮಾದರಿ.

ಮುಂದೆ ಒಮ್ಮೆ ಶಿವಮೊಗ್ಗಕ್ಕೆ ಹೋದಾಗ ನನ್ನ ಬಳಿ ಇದ್ದ “ಕ್ಲಿಕ್-4 ಎಂಬ ಬ್ಲಾಕ್ ಅಂಡ್ ವೈಟ್ ರೋಲ್ ಫಿಲ್ಂನ ಕ್ಯಾಮೆರಾ ತೆಗೆದುಕೊಂಡು, “ಅಜ್ಜಾ, ನಿನ್ನ ನೆನೆಪಿನ ಎಲ್ಲಾ ಸ್ಥಳಗಳನ್ನೂ ತೋರಿಸು” ಎಂದಾಗ, ಅವರದೇ ಸುವೇಗಾದಲ್ಲಿ, ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಅವರ ಜೀವನದ ಒಡನಾಟದ ಜಾಗಗಳಿಗೆ ಕರೆದುಕೊಂಡು ಹೋಗಿ, ಫೋಟೋಗೆ ಪೋಸ್ ಕೊಟ್ಟರು. ಆ ಜಾಗದ ಎಲ್ಲಾ ವಿವರಗಳನ್ನೂ ನನ್ನ ಮುಂದೆ ವಿವರವಾಗಿ ಹೇಳುತ್ತಾ ಭಾವುಕರಾಗಿ ಬಿಡುತ್ತಿದ್ದರು. ಅವರ ಹಳೆಯ ನಾಡಹೆಂಚಿನ ಮನೆ ಮುಂದೆ ಅತಿಭಾವುಕರಾಗಿ ಬಿಕ್ಕಿದ್ದರು. ತಾವು ಹುಟ್ಟಿ ಬೆಳೆದ ಜಾಗಗಳು, ತಾವು ಕಂಟ್ರಾಕ್ಟ್ ಮಾಡಿಸಿದ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು, ಕೊನೆಗೆ, ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿ ಪೋಲೀಸ್ ಬಂದಿಯಾಗಿದ್ದ ಶಿವಮೊಗ್ಗ  ಜೈಲ್ ಎಲ್ಲದರ ಮುಂದೆ, ಸಣ್ಣ ಹುಡುಗನ ಹಾಗೆ ಉತ್ಸಾಹದಿಂದ ಫೋಟೋ ತೆಗೆಸಿಕೊಂಡರು. ನಂತರ, “ನನ್ನ ಜೀವನದ ದಾಖಲೆ ಮಾಡಲು ನೀನೇ ಸರಿ” ಅಂದಿದ್ದರು. ದುರದೃಷ್ಟವಶಾತ್, ಅವರ ಜೀವನದ ಇನ್ನೂ ಹೆಚ್ಚಿನ ಎಲ್ಲಾ ವಿವರಗಳನ್ನು ಅವರ ಬಾಯಿಂದಲೇ ಕೇಳಿ ದಾಖಲಿಸುವ ಆಸೆ, ನನ್ನಲ್ಲಿ ಹಾಗೇ ಉಳಿದುಹೋಯಿತು. ನನ್ನ ವಿಧ್ಯಾಭ್ಯಾಸದ ಮಧ್ಯೆ ಶಿವಮೊಗ್ಗಕ್ಕೆ ಹೋಗಿ ಬರುವುದು ತಪ್ಪಿಹೋಗಿ, ಈ ಅವಕಾಶ ಕಳೆದುಕೊಂಡೆ.

ಅಜ್ಜನ ಜೀವನವೇ ನನಗೆ ಒಂದು ವಿಸ್ಮಯವಾಗಿ ಉಳಿದಿದೆ. ಕೂಲಿಯಾಗಿ ಜೀವನ ಪ್ರಾರಂಭಿಸಿ, ಸರ್ಕಾರೀ ಕಂಟ್ರಾಕ್ಟರ್ ಆಗಿ, ತುಂಬು ಸಂಸಾರ ನಿರ್ವಹಿಸಿ, ಗಾಂಧೀ ತತ್ತ್ವಗಳನ್ನು ಅನುಸರಿಸಿ, ಕೊನೆಯವರೆಗೂ ಯಾರ ಮುಂದೆಯೂ ಸ್ವಂತಕ್ಕಾಗಿ ಬೇಡದೇ, ನಂಬಿದ ಎಲ್ಲರಿಗೂ, ಅವರವರಿಗೆ ಸ್ಪಷ್ಟ ದಾರಿ ತೋರಿಸಿ, ತಮ್ಮಷ್ಟಕ್ಕೆ ತಾವು ಬೇರೊಂದು ಲೋಕಕ್ಕೆ ನಡೆದುಬಿಟ್ಟರು. ಗಾಂಧೀತಾತನ ಕಣ್ಣಾರೆ ನೋಡದ ನಮಗೆ, ನಮ್ಮಜ್ಜ  “ನಮ್ಮ” ಗಾಂಧೀ ತಾತನಾಗೇ ಉಳಿದುಬಿಟ್ಟರು.

Sunday, March 24, 2013

kanalidaLu Kamaliಭಾರತದಲ್ಲಿ ಜನಿಸಿ, ಹೆಣ್ಣಾದ ಮಾತ್ರಕ್ಕೆ ಪಡಬಾರದ ಪಾಡನ್ನು ಪಟ್ಟು ಅನುಭವಿಸುವ ಒಂದು ನತದೃಷ್ಟ ಹೆಣ್ಣಿನ ಅನುಭವವನ್ನು ಕಟ್ಟಿಕೊಡುವ ಪ್ರಯತ್ನ ಇದು. 


ಕನಲಿದಳು ಕಮಲಿ

ಭ್ರೂಣದಲಿ
ಹೆಣ್ಣಾಯಿತೆಂದು
ಹಣ್ಣಾಗುವ ಮೊದಲೇ,
ಹೊಸಕುವ ಹೀನಕೃತ್ಯಕೆ
ತುತ್ತಾಗಿ ಬದುಕುಳಿದ ಕೂಸಾಗಿ
ಕೊನರಿದಳು ಕಮಲಿ.

’ವಂಶಧ್ದಾರಕ’ ಅಣ್ಣನ
ವೈಭೋಗದ ನಡುವಲಿ,
ಅವನುಂಡುಳಿದುದನುಂಡು
ಚಳಿಯಲಿ ನಡುಗಿ, ಗೋಣಿಯಲಿ
ಮುದುರಿ ಸೊಪ್ಪಾಗಿ ಮಲಗಿ
ನಡುಗಿದಳು ಕಮಲಿ.

ಮೈಯರಳಿ, ಮನವರಳುವ
ಮುನ್ನವೇ ’ಮದುವೆ’ಗೆ ತುತ್ತಾಗಿ,
ಬಲವಂತದಲಿ, ಮೊಗ್ಗ ಹಿಚುಕುವ
’ಗಂಡ’ನ ಕ್ರೌರ್ಯಕೆ ತುತ್ತಾಗಿ,
’ಸಂಸಾರ’ದ ನೊಗಕೆ, ಎಳೆ ಹೆಗಲ
ನೀಡಿ, ಬಸವಳಿದಳು ಕಮಲಿ
  
ಸಂಸಾರವರಿಯದ ಮುಗುದೆ,
ಗೊಂಬೆಯೊಡನಾಡುವ ವಯದಲಿ,
ಬಸಿರೊಳಗೊಂದು ಗೊಂಬೆಯುದಿಸೆ,
ಪಿಂಡಕೆ ರಕ್ತಮಾಂಸವನೆರೆದು
ಕೂಸಿಗೆ ತಾಯಾದ ಕೂಸಾಗಿ,
ಕನಲಿದಳು ಕಮಲಿ.

ಬಸಿರು ಬಾಣಂತನದಲಿ
ಹಸಿರು ಕಳೆದ ಒಣಲತೆಯಾಗಲು,
ಹದಿಹರೆಯದಲಿ ಮುಪ್ಪಡರೆ,
ಪತಿಯು ಚಟಕೆ ಬಲಿಯಾಗಿ,
ಫಕ್ಕನುದುರಿದ ಕೊರಡಾಗೆ, ವೈಧವ್ಯದಲಿ
ಕರಗಿದಳು ಕಮಲಿ.

ಎಳೆಮೊಳಕೆಗಳ ಕುಡಿಕಾದು,
ಸಸಿಪೊರೆದು ಮರವಾಗಿಸೆ,
ಕೊಂಬೆ ಕೊಂಬೆಯಲಿ ಫಲ ತೂಗಿ
ರೆಕ್ಕೆ ಬಲಿತ ಹಕ್ಕಿ ಗೂಡ ತೊರೆದು
ಬಾನಂಗಳಕೆ ಪುರ್ರೆಂದು ಹಾರಲು,
ಕೊರಗಿದಳು ಕಮಲಿ.

ವಿಧಿಯಾಟಕೆ ಆಡೊಂಬಲವಾಗಿ,
ಮೈ ಮನಗಳ ಸಕಲ ವ್ಯಾಧಿಗಳಲಿ
ಸವೆ ಸವೆದು, ಗಂಧವಡರೆ,
ಸಕಲರನು ಕ್ಷಮಿಸು ದೇವ ದೇವನೆನುತ
ಧರೆಯೊಳಗೆ ಧರಿತ್ರಿಯಾಗಿ

ಕಮರಿದಳು ಕಮಲಿ.