ಗುರುವು ಹೇಗಿರಬೇಕೆಂಬ ಬಗ್ಗೆ ನನ್ನ ಚಿಂತನೆ
ಗುರುವೆಂಬುವನು ಬರಿಯ ಬೊಗಳೆ ಬೋಧಕನೇ,
ನುರಿತವರಿಂದ ಅರಿತು, ಅರಿತವರಿಂದ ಕಲಿತು,
ಕಲಿತುದ ಕಾರ್ಯಕ್ಕಿಳಿಸಿ, ಸರಿ ಸಾಧನೆ ಸಾಮಗೈದು,
ಪರಮಗುರುವೇರಿದ ಪದೋನ್ನತ ಪರ್ವತವ – ಅರಿಬೊಮ್ಮ
ಗ್ರಂಥಗಳೋದಿ ತಿಳಿವ, ಪಂಡಿತರೊಡನೆ ಚರ್ಚಿಪ,
ದೇಶ ಬಳಸಿ ಅರಿವ, ಗೆಳೆಯರಲಿ ಗಳಿಪ,
ಕಲಿಸುತ ಕಲಿವ, ಅಜ್ಞಾನಿಯಲೂ ಜ್ಞಾನವರಸುವ,
ಗುರುವು ತಾ ಕಾಣುವ ಗುರುವ ಸಕಲರಲಿ - ಅರಿಬೊಮ್ಮ
ಸೂಸಿರಲಿ ಸ್ನೇಹಗುಣ ಹೊನಲು ಮೆಲುನಗೆ ಹರಿಸಿ,
ಕಷ್ಟಕ್ಕೆ ಮರುಗಿ, ದುಷ್ಟಂಗೆ ತಿರುಗಿ, ಶಿಷ್ಟಂಗೆ ಚಪ್ಪರಿಸಿ,
ವಿಷಯ ಕಾಠಿಣ್ಯವ ಕೆಂದೆಳ್ನೀರ ಸಿಹಿಯಾಗಿಸೆ,
ಗುರುವೇ ಧನ್ಯ ತಾ ಉಪಾಧ್ಯಾಯನು ಶಿಷ್ಯ ಕೋಟಿಗೆ – ಅರಿಬೊಮ್ಮ
ವಿಷಯದ ತನಿ ಹಾಲನು ಕೆಂಪಗೆ ಕಾಸಿ,
ಹಾಲಿಗೆ ವಿಚಾರದ ಕಡು ಹೆಪ್ಪನೆ ಬೆರೆಸಿ,
ಮೊಸರ ಮಂಥನದಿಂದಲೇ ಜ್ಞಾನ ಬೆಣ್ಣೆಯ ಕಡೆಸಿ,
ಗುರುವೇ ಉಣಬಡಿಸೋ ಸುಜ್ಞಾನಾಘವ ಬೆಣ್ಣೆಯ ಕಾಸಿ – ಅರಿಬೊಮ್ಮ
ಇರಲಿ ನಿನ್ನ ಕೋಟಿ ಕೋಟಲೆ ಮನೆಯಂಗಳದಲ್ಲೇ,
ಸುವಿಚಾರ ಸಾರವೇ ತುಂಬಿ ತುಳುಕುತಿರೆ ಮನದಲ್ಲೇ,
ನಗುಮೊಗದಿ ಶಿಷ್ಯ ಸಮಸ್ತಗೆ ನೀ ವಿಷಯ ಬೆಸೆದಲ್ಲೇ
ಗುರುವೇ, ಸಗ್ಗ ಕಂಡರನುಯಾಯಿಗಳು ಪಾಠಶಾಲೆಯಲ್ಲೇ - ಅರಿಬೊಮ್ಮ
No comments:
Post a Comment