ಟ್ರಾಫಿಕ್(ನಲ್ಲೆ)
ಈ ಟ್ರಾಫಿಕ್ ಗೊಂಡಾರಣ್ಯದಲಿ
ಕಿಷ್ಕಿಂದೆ ಜಾಗದಲಿ ನುಸುಳುವ
ಟೂ ವ್ಹೀಲರ್, ಆಟೋಗಳಂತೆ,
ಎಲ್ಲಿಂದಲೋ ನನ್ನ ಎದೆಯೊಳಗೆ
ತೆವಳಿ, ಜಾಗ ಕೊಡೆಂದು
ದೊಡ್ಡದಾಗಿ ಹಾರ್ನ್ ಮಾಡಿ
ಇಲ್ಲದಿರುವ ಹಕ್ಕಿಗೆ
ಗುದ್ದಾಟ ಮಾಡುತ್ತಿರುವ
ಗುಮ್ಮನ ಗುಸ್ಕಿಯೇ
ಕೇಳಿಲ್ಲಿ,
ಆಂಬುಲೆನ್ಸ್ ಗೇ ಜಾಗ ಬಿಡದ
ಕಲ್ಲೆದೆಯ ಜನ ಜಂಗುಳಿಯಲಿ,
ಬಿದ್ದವರ ತುಳಿಯುತ್ತಾ ನಡೆವ
ಕಠೋರ ಕರ್ಮಠರ ನಡುವೆ
ಕಿಕ್ಕಿರಿದ ವಾಹನ ಜಂಗುಳಿ ಮೇಲೆ,
ನನ್ನೆದೆಗೆ ನೇರ ಸೇತುವೆ ಕಟ್ಟುವ
ಅದರಲ್ಲಿ ಒಬ್ಬಳೇ ಹಾರಿಬರುವ
ಕನಸ ಕಂಡ ಸುಂದಾರಂಗಿಯೇ,
ಕೇಳಿಲ್ಲಿ ಕಮಲಾಂಗಿಯೇ,
ಎಲ್ಲೋ ಉದ್ಭವಿಸುವ ಅವಾಂತರಕೆ
ಇನ್ನೆಲ್ಲೋ ಆಗುವ ಟ್ರಾಫಿಕ್ ಜಾಮ್,
ಕಾಣದ ರಸ್ತೆಗುಂಡಿಯಲಿ ಕವಿಚಿ,
ಬಿದ್ದ ಹೆಲ್ಮೆಟ್ ಇಲ್ಲದ ಸವಾರ,
ಯಾವುದೋ ನೆಪದಲಿ ನನ್ನ
ಜೀವನದಂಗಳಕೆ ಬಿದ್ದ ನೀನು,
ನನ್ನೇ ಪರಿಣಯಕೆ
ಕರೆವ
ನನ್ನ ಪಂಚರಂಗಿ ಗಿಳಿಯೇ,
ಕೇಳಿಲ್ಲಿ! ನನ್ನ ಕೋಗಿಲೆಯೇ,
ಕೈ ತೋರಿದ ಟ್ರಾಫಿಕ್ ಪೇದೆಗೇ
ಕೈ ಕೊಟ್ಟು, ವಾಹನಗಳ ಸುಳಿಯಲ್ಲಿ
ಸುತ್ತಿ ಸುಳಿದು, ಗಲ್ಲಿಗಳ ಹೊಕ್ಕು,
ಯಾರಿಗೋ ಡಿಕ್ಕಿ ಹೊಡೆದು,
ತಿರುಗಿ ನೋಡದೇ ಪರರಿಯಾಗುವ
ನನಗೇ ನಿನ್ನ ಕೆಂಪು ಸಿಗ್ನಲ್ಲೇ!!
ಸದ್ದು ಮಾಡದೇ ನುಗ್ಗುವ
ಸಿರಿವಂತರ ಕಾರಿನಂತಹವಳೇ, ಕೇಳೇ,
ಮೂರು ಕಾಲಿನ ಆಟೋ ಮಲ್ಲಿಯೇ,
ನನ್ನೀ ಬದುಕಿನ್ನೂ ಮೈನರ್,
ಹೆಸರಿಗೆ ಮಾತ್ರ ಓನರ್,
ಖಾಲಿ ಜೇಬಿಗಿನ್ನೂ ದೊರೆತಿಲ್ಲ
ಫಿಟ್ ನೆಸ್ ಸರ್ಟಿಫಿಕೇಟು,
ಮದುವೆಗಂತೂ ಇಲ್ಲವೇ ಇಲ್ಲ ಪರ್ಮಿಟ್ಟು
ಸೋಲುಗಳಿಗಿಲ್ಲ ಯಾವುದೇ ಲಿಮಿಟ್ಟು
ಲೈಸೆನ್ಸೇ ಇಲ್ಲದೇ ಗಾಡಿ
ತಳ್ಳುವ ನನಗೇಕೆ ಈ ಪಿಲಿಯನ್ನು!!
ಗಿಣಿಯೇ, ಇನ್ನು ತೊರೆಯೇ ನನ್ನೆದೆಯನ್ನು!!
--ಡಾ. ಎಸ್.ಎನ್. ಶ್ರೀಧರ
No comments:
Post a Comment