Saturday, March 9, 2013

ಹೀಗೊಂದು ಛಾಯಾ(ಗ್ರಹಣ)ದ ಕಥೆ

ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲಘುಹಾಸ್ಯಲೇಖನ
ಹೀಗೊಂದು ಛಾಯಾಗ್ರಹಣದ ಕಥೆ

19ನೇ ಮಾರ್ಚ್ 2007, ಸರ್ವಜಿತು ಉಗಾದಿಯ ಉದಯರಾಗ, ಬೆಳಿಗ್ಗೆ 5.45  ಗಂಟೆ. ಇನ್ನೂ ಚುಮು ಚುಮು ಬೆಳಕು. ಸೂರ್ಯೋದಯ 6.05 ಕ್ಕೆ ಎಂದಿದ್ದರೂ, ಸೂರ್ಯಗ್ರಹಣದ ಛಾಯಾಗ್ರಹಣದ ಹುಚ್ಚಿನಲ್ಲಿ ಅಷ್ಟೊತ್ತಿಗೆಲ್ಲಾ ಮನೆ ಮಾಳಿಗೆ ಹತ್ತಿ ಕೂತಿದ್ದೆ. ಕ್ಯಾಮೆರಾ ಮತ್ತು ಜೊತೆಗಿನ ಪರಿಕರಗಳನ್ನೆಲ್ಲಾ ಜೋಡಿಸಿಟ್ಟುಕೊಂಡು ಇನ್ನೂ ಸೂರ್ಯೋದಯವಾಗಲಿಲ್ಲವಲ್ಲಾ ಎಂದು ಕಾತುರ ಪಡುತ್ತಾ ಕೆಳಗಿನ ಬೀದಿಯತ್ತ ಕಣ್ಣು ಹಾಯಿಸಿದೆ. ಬೀದಿಯಲ್ಲಿ ಒಂದೇ ಒಂದು ಮಾನವ ಜಂತುವಿನ ಸುಳಿವೂ ಇಲ್ಲ. ಹಿಂದಿನ ದಿನ ರಾತ್ರಿಯೇ ಸಂಪ್ರದಾಯವಾದೀ ಜನರೆಲ್ಲಾ ತಮ್ಮ ತಮ್ಮ ರಾಶಿಗೆ ಸಂಬಂಧಪಟ್ಟಂತೆ ಪೂಜೆಗೆ ದೇವಸ್ತಾನಗಳಲ್ಲಿ ಪೂಜೆಗೆ ಮುಂಗಡ ಬುಕಿಂಗ್ ಮಾಡಿ, ಮನೆ ಬಾಗಿಲು ಕಿಟಕಿ ಜಡಿದು, ಧರ್ಬೆ ತುಂಡುಗಳನ್ನು ನೀರಿನಲ್ಲಿ, ಪಾತ್ರೆಗಳಲ್ಲಿ, ಹಾಸಿಗೆಗಳಲ್ಲಿ ಹಾಕಿ ಅಘೋಷಿತ ಬಂದ್ ಆಚರಿಸುತ್ತಿದ್ದರು. ಮುಂಜಾನೆ ಆರು ಗಂಟೆಯಾದರೂ ನಾಯಿಗಳನ್ನು ಹಿಡಿದುಕೊಂಡು ಬಂದು ಬೇರೆಯವರ ಮನೆ ಮುಂದೆ ಗಲೀಜು ಮಾಡಿಸುವ ಜನರ ದರ್ಶನವೂ ಇಲ್ಲ. ಹಾಗೇ ಓಡಾಡಿಕೊಂಡಿದ್ದ ಬೀದಿ ನಾಯಿಗಳನ್ನೂ ಕಾರ್ಪೋರೇಶನ್ನಿನವರು ಈ ಮೊದಲೇ ತುರುಬಿಕೊಂಡು ಹೋಗಿದ್ದರು. ಒಟ್ಟಿನಲ್ಲಿ ಎಲ್ಲವೂ ಭಣ, ಭಣ.
            ಆರು ಗಂಟೆ  ಐದು ನಿಮಿಷಕ್ಕೆ ಹೊಂಬೆಳಗು. ಜಗವೆಲ್ಲಾ ತೊಯ್ದ ಸೂರ್ಯನ ದರ್ಶನ, ದೂರದ ಅಪಾರ್ಟ್ ಮೆಂಟಿನ ಹಿಂದೆ ಅಗೋಚರ. ನಿಂತಲ್ಲೇ ಚಡಪಡಿಕೆ. ಸೂರ್ಯ ಅಪಾರ್ಟಮೆಂಟ್ ಮೇಲೇರಿ ಬರಷ್ಟರಲ್ಲಿ ಪಾರ್ಶ್ವಗ್ರಹಣದ ಬಹುಭಾಗವನ್ನು ತಪ್ಪೀಸಿಕೊಂಡೆನೆಂಬ ಅತಂಕ. ಅಗೋ ಬಂದ, ಜಗದ ನಾಯಕ ಸೂರಪ್ಪ, ತನ್ನ ತಲೆಯನ್ನು ಓರೆ ಮಾಡಿಕೊಂಡು ಅಪಾರ್ಟಮೆಂಟ್ ಮೇಲೇರಿದ. ಅಷ್ಟರಲ್ಲೇ ಪಾರ್ಶ್ವಗ್ರಹಣ ಶುರುವಾಗಿತ್ತು. ಮಾಧ್ಯಮದವೆರೆದುರು ಅರೆಬರೆ ಮುಖ ಮುಚ್ಚಿಕೊಳ್ಳುವ ಗಣ್ಯ ವ್ಯಕ್ತಿಗಳ ಅಪರಾಧಿ ಪುತ್ರರೆ ರೀತಿಯಲ್ಲಿ ತುಸುವೇ ತನ್ನಿರುವನ್ನು ತೋರುತ್ತಾ, ತುಸುವೇ ಮರೆಮಾಚುತ್ತಾ, ಮೇಲೇರಿ ಬಂದ. ಇಂತಹ ಸಂಧರ್ಭಕ್ಕೆಂದೇ ತರಿಸಿಕೊಂಡಿದ್ದ ವಿಶೇಷ ಕಪ್ಪು ಫಿಲಂನ ಮೂಲಕ ಆತನನ್ನು ನೋಡಿದೆ. ನಾಚಿಕೆಯಿಂದ ಕೆಂಪಾಗಿದ್ದ ಸೂರ್ಯನ ಬಲತಲೆಯ ಭಾಗ ಚಂದ್ರನಿಂದ ಮರೆಯಾಗಿತ್ತು.
            ಅದೇ ಫಿಲಂನ್ನು ಕ್ಯಾಮೆರಾಲೆನ್ಸ್ ಮುಂದೆ ಒತ್ತಿ ಹಿಡಿದು ಕ್ಯಾಮೆರಾದ ಅಪರ್ಚರ್, ಎಕ್ಸ್ ಪೋಶರ್ ಟೈಮ್, ಫೋಕಲ್ ಲೆಂಗ್ತ್ ಗಳನ್ನು ಸೂಕ್ತವಾಗಿ ಬದಲಾಯಿಸುತ್ತಾ ಚಕಚಕನೆ ಸೂರ್ಯನ ಬಿಂಬಗಳನ್ನು ಬಾಚಿಕೊಳ್ಳತೊಡಗಿದೆ. ಡಿಜಿಟಲ್ ಕ್ಯಾಮೆರಾ ಆದ್ದರಿಂದ ಫೋಟೋದ ಫಿಲಂ ರೋಲ್ ಮತ್ತು ಅದರ ಸಂಸ್ಕರಣೆ ವೆಚ್ಚದ ತಲೆನೋವು ಇರಲಿಲ್ಲ. ಸುಮಾರು ಮೂವತ್ತರಿಂದ ನಲ್ವತ್ತು ಫೋಟೋಗಳ ಭಂಡಾರವನ್ನೇ ತುಂಬಿಕೊಂಡೆ. ಅಷ್ಟರಲ್ಲೆ, ಮಗನ ಮತ್ತು ಮಡದಿಯ ಆಗಮನ. ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅವರಿಗೂ ಸೂರ್ಯನನ್ನು ಫಿಲಂ ಮೂಲಕ ತೋರಿಸುತ್ತಾ ನನ್ನ ಛಾಯಾಗ್ರಹಣವನ್ನೂ ಮುಂದುವರೆಸಿದೆ. ಈ ಮಧ್ಯೆ ನನ್ನ ಮಡದಿ ತಂದಿದ್ದ ನನ್ನ ಬೆಳಗಿನ ಪೇಯ, ನಿಂಬೆಹಣ್ಣಿನ ಹುಳಿ ಹಿಂಡಿದ ಬೆಚ್ಚಗಿನ ನೀರನ್ನೂ ಗುಟುಕಿಸುತ್ತಿದ್ದೆ. ಮೊದಲ ಕಪ್ಪನ್ನು ಸೂರ್ಯನಿಗೇ ಎತ್ತಿ ತೋರಿ ಚೀರ್ಸ್ ಹೇಳಿ ಗಟಗಟ ಕುಡಿದೆ. ಸೂರ್ಯ ಬೆವರು ಒರಸಿಕೊಂಡು ನಿಟ್ಟುಸಿರು ಬಿಟ್ಟಂತಾಯ್ತು. ಅಷ್ಟರಲ್ಲಿ, ಆಗಸದಲ್ಲಿ ಚಂದ್ರ ಸೂರ್ಯನ ಮೇಲ್ಬಾಗದಲ್ಲಿ ಸವಾರಿ ಮಾಡುತ್ತಾ, ಬಲಗಡೆ ಅಂಚಿನಲ್ಲೇ ಓಡುತ್ತಾ ಕೊನೆಗೆ ಗಡಿಯಾರದ 9ರ ಅಂಕೆಯ ಜಾಗದಲ್ಲಿ ನಿರ್ಗಮಿಸಿ ಗ್ರಹಣದ ತನ್ನ ಕೆಲಸ ಮುಗಿಸಿದ. ಸೂರ್ಯ ಕಳಂಕದ ಕಲೆ ತೊಳೆದುಕೊಂಡು ಹೂ ನಗೆ ಬೀರಿ, ’ನನ್ನ ಕೆಲಸ ಇನ್ನೂ ಇದೆ, ಅಪ್ಪಾ..’ ಎನ್ನುತ್ತಾ ಹೊರಟ. ಸೂರ್ಯನ ಮೊಗದಲ್ಲೀಗ ಗಣಿ ಲಂಚದ ಆಪಾದನೆಯನ್ನು ಕೊಡವಿಕೊಂಡ ಕುಮಾರಸ್ವಾಮಿಗಳ ನಿರಾತಂಕ ಕಳೆ. ಕೊನೆಗೂ ಕುರ್ಚಿ ಗಳಿಸಿದ ಯಡಿಯೂರಪ್ಪನವರ ವಿಭೂತಿ ಬಳೆದ ಅರಳಿದ ಮೊಗದ ಮಿಂಚು ನಗೆ.
            ನನ್ನ ಕೆಲಸವೂ ಮುಗಿದಿತ್ತು. ಪಕ್ಕದ ಮನೆಯವರು ಪಂಚಾಂಗ ನೋಡಿಕೊಳ್ಳುತ್ತಾ, “ಗ್ರಹಣ ಬಿಟ್ಟಿತೂ,... ಬೇಗ, ಬೇಗ ನೀರನ್ನು ಚೆಲ್ಲಿ ....” ಎನ್ನುತ್ತಾ ಚುರುಕಾದರು. ನಾಯಿಗಳ ಯಜಮಾನರು ಒಬ್ಬೊಬ್ಬರಾಗಿ ತಮ್ಮ ನಾಯಿಯ ಹೊಟ್ಟೆಯ ಒತ್ತಡ ಕಡಿಮೆ ಮಾಡಲು ಯಾರ ಮನೆ ಮುಂದಿನ ಅಂಗಳ ಚೆನ್ನಾಗಿದೆ ಎನ್ನುತ್ತಾ ಸರ್ವೆ ಮಾಡುತ್ತಾ ಹೊರಟರು. ಅಷ್ಟರಲ್ಲಿ ಎಲ್ಲರ ಮನೆ ಮುಂದೂ ನೀರು ಚೆಲ್ಲುವ , ರಂಗೋಲೆ ಹಾಕುವ ಕಾರ್ಯಕ್ರಮ ಶುರುವಾಗಿದ್ದರಿಂದ ನಾಯಿಗಳ ಚೈನನ್ನು ಬಲವಾಗಿ ಎಳೆದುಕೊಂಡು ಹೊರಟಿದ್ದರು. ನನ್ನ ಕ್ಯಾಮೆರಾ ಸ್ಟಾಂಡನ್ನು ತೆಗೆದು ಒಳಗೆ ಬಂದು, ಕ್ಯಾಮೆರಾವನ್ನು ಲ್ಯಾಪ್ ಟಾಪ್ಗೆ ಜೋಡಿಸಿ, ಸೂಕ್ತ ಫೋಟೋಗಳನ್ನು ಆರಿಸಿಕೊಳ್ಳುತ್ತಾ ಕುಳಿತೆ. ಅಷ್ಟರಲ್ಲಿ ನನ್ನ ಜೀವನದ ನಲವತ್ತು ವರ್ಷಗಳ ಸಂಗಾತಿ ಮನೆ ಅಂಗಳ ತಲುಪಿದ ಸದ್ದಾಯಿತು. ಮನೆ ಪೇಪರಿನವನು ಹಾಕಿದ ಪ್ರಜಾವಾಣಿಯನ್ನು ಬಾಚಿ ತಂದು ತೊಡೆ ಮೇಲಿಟ್ಟುಕೊಂಡು ಅರೆಮನಸ್ಸಿನಲ್ಲಿ ಲ್ಯಾಪ್ ಟಾಪಿನಲ್ಲಿ ಕೆಲಸ ಮಾಡತೊಡಗಿದೆ. ಮಡದಿ ಬಂದು “ಸವತಿಯನ್ನು ಬೆಳಿಗ್ಗೆನೇ ತೊಡೆ ಮೇಲೇರಿಸಿಕೊಂಡರಾ! ಇನ್ನು ಓದು ಮುಗಿಯುವವರೆಗೆ ಯಾರ ಮಾತೂ ನಿಮಗೆ ಕೇಳಿಸೋಲ್ಲ” ಎನ್ನುತ್ತಾ ಕಾಫಿ ಬಟ್ಟಲನ್ನು ಕಿಕ್ಕಿ ಹೋದಳು. ಅಲ್ಲೇ ಠಿಕಾಣಿ ಹೂಡಿದ್ದ ಮಗರಾಯ, “ಅಪ್ಪಾ, ಗ್ರಹಣದ ಸಮಯದಲ್ಲಿ ಏನೂ ತಿನ್ನಬಾರದಂತೆ, ಕುಡಿಯಬಾರದಂತೆ. ಆದರೂ ನೀನ್ಯಾಕೆ ಆ ನಿಂಬೆ ನೀರು ಕುಡಿದೆ?” ಎಂದು ತನ್ನ ಕಾಫಿ ಕಪ್ ಕೈಗೆತ್ತಿಕೊಂಡ. ತಕ್ಷಣ ಡಾ.ಎಚ್. ನರಸಿಂಹಯ್ಯನವರು ನೆನೆಪಾದರು. ಹೀಗೇ, ಗ್ರಹಣದ ಒಂದು ದಿನ ಮಟ ಮಟ ಮಧ್ಯಾನ್ಹ ರಸ್ತೆ ಮಧ್ಯೆ ತಟ್ಟೆ ಹಿಡಿದು ಊಟ ಮಾಡಿ ಜೀರ್ಣಿಸಿಕೊಂಡಿದ್ದನ್ನು ತಮ್ಮ ’ಹೋರಾಟದ ಹಾದಿ’ಯಲ್ಲಿ ದಾಖಲಿಸಿದ್ದರು. ಅದನ್ನೇ ಮಗನಿಗೆ ತಿಳಿಸಿದೆ. ಮಡದಿ, “ಸಾಕು ಬನ್ರೀ, ಮುಂದಿನದ್ದನ್ನು ನೋಡಿ...” ಎನ್ನುತ್ತಾ ಬೆಚ್ಚಗೆ ಕಾಯಿಸಿದ ಎಣ್ಣೆಯನ್ನು ಬಟ್ಟಲೊಳಗೆ ಹಾಕಿಕೊಂಡು ತಂದಳು. ವರ್ಷಕ್ಕೊಂದು ಬಾರಿಯಾದರೂ ಸಿಗುವ ಮಡದಿಯ ಕೈಯಿನ ಎಣ್ಣೆ ನೀರಿನ ಸ್ನಾನದ ಸೇವೆಯ ಸುಖವನ್ನು ನೆನೆಯುತ್ತಾ ಲ್ಯಾಪ್ ಟಾಪ್ ಮುಚ್ಚಿಟ್ಟು, ಛಾಯಾಗ್ರಹಣಾಯಾಣಕ್ಕೆ ಮಂಗಳ ಹಾಡಿ ಎದ್ದೆ.


---ಡಾ. ಎಸ್.ಎನ್. ಶ್ರೀಧರ




ಚಿತ್ರ ಮತ್ತು ಲೇಖನ ಎಸ್. ಎನ್. ಶ್ರೀಧರ
 






No comments:

Post a Comment