ಸುಧಾದಲ್ಲಿ ಪ್ರಕಟವಾದ ಪ್ರವಾಸ ಲೇಖನ
18 ಅಕ್ಟೊಬರ್ 2012
18 ಅಕ್ಟೊಬರ್ 2012
ಮಾರಿಷಸ್ ನಲ್ಲೊಂದು ಶಿವಾಲಯ
ಬೆಂಗಳೂರಿನಿಂದ ಸುಮಾರು 4,200 ಕಿ.ಮೀ. ದೂರದಲ್ಲಿ, ಹಿಂದೂಮಹಾಸಾಗರದ ಮಧ್ಯೆ, ದಕ್ಷಿಣ ಆಫ಼್ರಿಕಾ ಮತ್ತು
ಮಡಗಾಸ್ಕರ್ ದ್ವೀಪದ ಬಳಿ ಇರುವ ಮಾರಿಷಸ್ ನಲ್ಲಿ ಶಿವನ ಸ್ತುತಿ ’ಭಂ ಭಂ
ಭೋಲೆ’ ಕೇಳಿ ಆಶ್ಚರ್ಯ ಆಯಿತು. ದೂರದ
ದಿಲ್ಲಿಯಲ್ಲಿ ರಾಗಿಮುದ್ದೆ ಸೊಪ್ಪು ಸಾರು ಕಂಡಾಗ ಆದಂತಹ ಅನುಭವವಾಯಿತು. ಮಾರಿಷಸ್ ನಲ್ಲಿರುವ ಜೆ.ಎಸ್.ಎಸ್.
ಇಂಜಿನಿಯರಿಂಗ್ ಕಾಲೇಜಿಗೆ ಪರೀಕ್ಷಿಕನಾಗಿ ವಿ.ಟಿ.ಯು.ನಿಂದ ನಿಯೋಜಿತಗೊಂಡು ಈ ಸುಂದರ ದ್ವೀಪಕ್ಕೆ ಭೇಟಿಕೊಟ್ಟಾಗ
ನನಗಾದ ಕುತೂಹಲ ಮಿಶ್ರಿತ ಆಶ್ಚರ್ಯ ಇದು.
ಈ ಮಾರಿಷಸ್ ಎಂಬ ದ್ವೀಪ ಪ್ರಪಂಚದ ಭೂಪಟದಲ್ಲಿ
ದಕ್ಷಿಣ ಆಫ಼್ರಿಕ ದೇಶದ ಪೂರ್ವದಿಕ್ಕಿನಲ್ಲಿ ಹಿಂದೂಮಹಾಸಾಗರದಲ್ಲಿ ಸಣ್ಣ ಚುಕ್ಕೆಯಾಗಿ
ಕಾಣುತ್ತದೆ. ೬೦ ಕಿ.ಮೀ ಉದ್ದ, ೪೦ ಕಿ.ಮೀ. ಅಗಲ ಇರುವ ಈ ಸಣ್ಣ
ದ್ವೀಪದಲ್ಲಿ ಏನುಂಟು ಏನಿಲ್ಲ. ಸುಮಾರು ಏಳೆಂಟು ಮಳೆಗಾಲದ ನದಿಗಳು,
ಅವುಗಳಿಗೆ ಕಟ್ಟಿದ ಸಣ್ಣ ಅಣೆಕಟ್ಟುಗಳು ಮತ್ತು ಅವುಗಳ ಪುಟ್ಟ ಪುಟ್ಟ
ಜಲಾಗಾರಗಳು, , ಸುಪ್ರಸಿದ್ಧ ಸುಂದರ ಜಲಪಾತಗಳು, ಸಣ್ಣವೇ ಆದರೂ ದಟ್ಟವಾದ ಕಾಡುಗಳು, ಅಲ್ಲಲ್ಲೇ ಧುತ್ತೆಂದು
ನಿಲ್ಲುವ ಅತಿ ಎತ್ತರದ ಬೆಟ್ಟಗುಡ್ಡಗಳ ಸಾಲು, ಎಲ್ಲಕ್ಕಿಂತ ಹೆಚ್ಚಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆವ, ಪ್ರಶಾಂತವಾದ ಸುಂದರವಾದ ಸಮುದ್ರ ತೀರಗಳು.
ಈ ದ್ವೀಪ ಹುಟ್ಟಿದ್ದೇ ಸಮುದ್ರದೊಳಗಿನ ಅಗ್ನಿಪರ್ವತವೊಂದರ ಫ಼ೂತ್ಕಾರದಿಂದ, ಹಾಗಾಗೇ ಇಡೀ ದ್ವೀಪದಲ್ಲಿ ಬೆಟ್ಟಗಳ ಸಾಲೇ ಇದೆ. ಅಲ್ಲದೇ,
ನೆಲವೆಲ್ಲಾ ಈಗಲೂ ಲಾವಾರಸದ ಕಲ್ಲುಗಳಿಂದಲೇ ಕೂಡಿದೆ. ಇಂತಹ
ಅಗ್ನಿಪರ್ವತಗಳು ತಣ್ಣಗಾಗಿ, ಬಾಯಿಯ ಕುಳಿ ತೆರೆದುಕೊಂಡು ಮಿಲಿಯಾಂತರ ವರ್ಷಗಳ ಹಿಂದಿನ
ರೌದ್ರಾವತಾರದ ಸಾಕ್ಷಿಯಾಗಿ ಕುಳಿತಿರುತ್ತವೆ. ರಾಜ್ಯ, ಕೋಶ ಕಳೆದುಕೊಂಡು ಗತ ವೈಭವವನ್ನು ಮೆಲುಕು ಹಾಕುತ್ತಾ ಕಾಲ ತಳ್ಳುವ ರಾಜವಂಶದವರ ಸ್ಥಿತಿ
ಇವಕ್ಕೆ. ಮಾರಿಷಸ್ ದ್ವೀಪದಲ್ಲಿರುವ ಇಂತಹ ಎರಡು ತಾಣಗಳಲ್ಲಿ ಒಂದಾದ ’ದಿ ಗ್ರ್ಯಾಂಡ್ ಬೇಸಿನ್’ ಎಂದು ಕರೆಸಿಕೊಳ್ಳುವ, ಲಕ್ಷಾಂತರ ವರ್ಷಗಳ ಒಂದು ಹಳೆಯ
ಅಗ್ನಿಪರ್ವತವೊಂದರ ತಲೆಯ ಮೇಲೆ ದೊಡ್ಡಕುಳಿ ಬಿದ್ದು ತಣ್ಣಗಾಗಿ, ಅದರಲ್ಲಿ
ನೀರು ತುಂಬಿ ಸುತ್ತಲೂ ಕಾಡು ಬೆಳೆದು ಸುಂದರವಾದ ಪ್ರಕೃತಿ ರೂಪುಗೊಂಡಿದೆ. ಈ ಗ್ರ್ಯಾಂಡ್ ಬೇಸಿನ್ ಈಗ ಅಲ್ಲಿ ’ಗಂಗಾ ತಾಲಾಬ್’ ಎಂದು ಪ್ರಸಿದ್ಧವಾಗಿ, ಅಲ್ಲಿನ ಹಿಂದೂಗಳ ಶ್ರದ್ಧೆಯ
ಕೇಂದ್ರವಾಗಿದೆ. ಇದರಲ್ಲಿ ಕುಳಿಯು ಅನಿಯಮಿತ ಅಕಾರದಲ್ಲಿ ಸುಮಾರು ೧೨೦೦ ಮೀ. ಉದ್ದ,
೫೦೦ ಮೀ. ಅಗಲ ಇದ್ದು, ಶುದ್ಧ ನೀರಿನಿಂದ ತುಂಬಿದೆ. ಈ ಕುಳಿಯಲ್ಲೇ ಪ್ರಾಕೃತಿಕವಾದ ನೀರಿನ ಬುಗ್ಗೆಗಳಿವೆ ಎಂದು ನಂಬಲಾಗಿದೆ. ಅಲ್ಲದೇ, ಸುತ್ತಲಿನ ಗುಡ್ಡ ಬೆಟ್ಟಗಳಿಂದ ಹರಿದ ಬಂದ ನೀರು
ಶೇಖರಣೆಯಾಗಿದ್ದು, ಯಾವ
ವರ್ಷದಲ್ಲೂ ಈ ಸುಂದರ ಕೊಳ ಬತ್ತಿದ್ದಿಲ್ಲವಂತೆ. ಈ ಸರೋವರದ ಮಧ್ಯೆ ಆಳ
ಸುಮಾರು 60 ಅಡಿ ಆಳ ಇದೆ ಅಂದಾಜಿಸಲಾಗಿದೆ. ಭಾರತದಿಂದ ಬ್ರಿಟಿಶರು
ಕರೆತಂದ ಭಾರತೀಯರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಹಿಂದೂಗಳು ಈ ಪ್ರದೇಶದಲ್ಲಿ ಶಿವನ
ಗಂಗೆಯನ್ನು ಕಲ್ಪಿಸಿಕೊಂಡು, ಇದಕ್ಕೆ ’ಗಂಗಾ
ತಾಲಾಬ್’ ಎಂದು ಹೆಸರಿಸಿ, ಇದರ ಸುತ್ತಲೂ
ಅನೇಕ ದೇವಾಲಯಗಳನ್ನು ಕಟ್ಟಿದ್ದಾರೆ.
ಇಲ್ಲಿನ ಇತ್ತೀಚಿನ ಆಕರ್ಷಣೆ ಎಂದರೆ, 2007ರಲ್ಲಿ
ಸ್ತಾಪಿತವಾದ, ಕಂಚಿನ ಬಣ್ಣದ, 108 ಅಡಿ
ಎತ್ತರದ ಶಿವನ ಪ್ರತಿಮೆ. ಎಡಗೈನಲ್ಲಿ ತ್ರಿಶೂಲ ಹಿಡಿದ ಶಿವ ಎರಡೂ
ಕೈಗಳಲ್ಲಿ ದಪ್ಪ ಕಂಕಣದ ಬಳೆಗಳನ್ನು ಧರಿಸಿ, ಬಲಗೈನಲ್ಲಿ ಭಕ್ತರನ್ನು
ಆಶೀರ್ವಾದಿಸುತ್ತಾ, ನಸುನಗುವ ಮುದ್ರೆಯಲ್ಲಿ ನಿಂತಿದ್ದಾನೆ. ಜಟಾಧಾರಿ ಶಿವನಿಗೆ ತಲೆಯಲ್ಲಿ ಗಂಗೆ ಮತ್ತು ಚೌತಿ ಚಂದ್ರನ ಜೊತೆಯಿದೆ. ಕೆಳಗೆ ನಿಂತಿರುವರಿಗೆ ಶಿವನ ಜಟೆಯಲ್ಲಿರುವ ಗಂಗೆ ಕಾಣುವುದಿಲ್ಲ. ಹಾಗಾಗೇ ಈ ಶಿವ ಗಂಗೆಯನ್ನಡಗಿಸಿಟ್ಟುಕೊಂಡು ಕೆಳಗೆ ನಿಂತಿರುವವರಿಗೆ ಕಳ್ಳ ನಗು
ಬೀರುತ್ತಿದ್ದಾನೇನೋ. ಕುತ್ತಿಗೆಯ
ಸುತ್ತ ದೊಡ್ಡ ನಾಗರವನ್ನು ಸುತ್ತಿಕೊಂಡಿದ್ದು, ಎರಡೂ ತೋಳುಗಳಲ್ಲಿ
ಸಣ್ಣ ನಾಗರಹಾವುಗಳನ್ನು ಧರಿಸಿರುವ ಈ ಬೃಹತ್ ಶಿವನ ಪ್ರತಿಮೆಯಲ್ಲಿ ಜೀವಂತಿಕೆ ಇದೆ. ಕೊರಳಲ್ಲಿ ಧರಿಸಿರಿವ ರುದ್ರಾಕ್ಷಿಮಾಲೆ, ಮೈಮೇಲೆ ಇರುವ
ಮೂರೆಳೆ ಜನಿವಾರ ಎಲ್ಲವನ್ನೂ ಸ್ಪಷ್ಟವಾಗಿ ಕಾಣುವಂತೆ ವಿಗ್ರಹವನ್ನು ರೂಪಿಸಿದ್ದಾರೆ. ಇಡೀ ಪ್ರತಿಮೆಯನ್ನು ಮಾನವ ಅಂಗಾಂಗ ಶಾಸ್ತ್ರಗನುಗುಣವಾಗಿ ರೂಪಿಸಿರುವುದು ಕಂಡು
ಬರುತ್ತದೆ. ಬಲಿಷ್ಟ ದೇಹರಚನೆ, ಕೈ ಮೇಲಿನ
ಉಬ್ಬಿದ ರಕ್ತನಾಳ, ಸೊಂಟಕ್ಕೆ ಸುತ್ತಿಕೊಂಡ ವಸ್ತ್ರದ ಸುಕ್ಕುಗಳು,
ಆಶೀರ್ವದಿಸುವ ಕೈಯಲ್ಲಿ ಸಹಜವೆಂತೆ ತುಸುವೇ ಬಾಗಿದ ಕಿರುಬೆರಳು ಇವೆಲ್ಲವೂ ಈ
ಮೂರ್ತಿಯನ್ನು ರೂಪಿಸಿದ ಕಲಾವಿದರ ಚಾಕಚಕ್ಯತೆಯನ್ನು ತೋರುತ್ತದೆ. ಮೈಗಂಟಿದ
ವಸ್ತ್ರ ಸಹ ಮೈನ ಓರೆಕೋರೆಗಳನ್ನು ತೋರುವಂತೆ ಅಲ್ಲಲ್ಲಿ ಬಾಗಿ, ಸಹಜತೆಯನ್ನೇ
ಮೆರೆದಿದೆ. ಈ ಮೂರ್ತಿಯ ಸೌಂದರ್ಯವನ್ನು ಅಸ್ವಾದಿಸುತ್ತಾ ನಿಂತರೆ ಸಮಯ
ಸರಿದಿದ್ದೇ ತಿಳಿಯುವುದಿಲ್ಲ. ಹಾಗಾಗೇ ಇಲ್ಲಿ ಬರುವ ಪ್ರವಾಸಿಗರೆಲ್ಲರೂ
ದೃಷ್ಟಿಗೆ ನಿಲುಕದ ಶಿವನ ಮುಖ ನೋಡಲು ಒಮ್ಮೆ ಕಣ್ಣು ಕಿರಿದು ಮಾಡಿ, ಮತ್ತೊಮ್ಮೆ
ಕಣ್ಣಗಲಿಸಿ, ಅವನ ಸೌಂದರ್ಯವನ್ನು ತಮ್ಮ ಪುಟ್ಟ ಕ್ಯಾಮೆರಾಗಳಲ್ಲಿ
ಬಂಧಿಸಿಡಲು ಪ್ರಯತ್ನ ಮಾಡುತ್ತಾ, ಅವನ ಕಾಲ ಬುಡದಲ್ಲೇ ತಮ್ಮ ಫ಼ೊಟೋ
ತೆಗೆಸಿಕೊಳ್ಳುತ್ತಾ ಪ್ರಪಂಚ ಮರೆಯುತ್ತಾರೆ.
ಈ ಬೃಹತ್ ಶಿವನನ್ನು ಮನತಣಿಯೆ ನೋಡಿ ಮುಂದೆ ಕಾಲಿಟ್ಟರೆ, ಸಿಗುವುದೇ
ಗಂಗಾ ತಾಲಾಬ್ ಎಂದು ಕರೆಸಿಕೊಳ್ಳುವ ಕೊಳದ ಒಂದು ಭಾಗ ಮತ್ತು ಅದರ ಸುತ್ತಲೂ ಇರುವ ದೇವ ಮೂರ್ತಿಗಳ
ಸಮುಚ್ಛಯ. ಇದರಲ್ಲಿ
ಎರಡು ಶಿವಲಿಂಗ ದೇವಾಲಯಗಳು, ದುರ್ಗಾದೇವಿ ದೇವಾಲಯ, ನವಗ್ರಹ ಮತ್ತು ಅಲ್ಲೇ ಸಣ್ಣದಾದ ಗುಡ್ಡದ ಮೇಲೆ ಇರುವ ಆಂಜನೇಯ ದೇವಾಲಯ ಪ್ರಮುಖವಾದವು.
ಎಷ್ಟೆಂದರೂ ಸಾವಿರ ಸಂಖ್ಯೆಯ ದೇವರುಗಳನ್ನು ಸೃಷ್ಟಿಸಿದವರು ನಾವಲ್ಲವೇ?
ಹಾಗಾಗಿ, ಈ ದೇವಾಲಯಗಳ ಆವರಣದಲ್ಲಿ ಶಿರಡಿ ಸಾಯಿಬಾಬ,
ಗಂಗಾಮಾತಾ, ಗಾಯತ್ರಿ ದೇವಿ ಮತ್ತಿತರ ದೇವ ದೇವತೆಗಳ
ಆಳೆತ್ತರದ ಪ್ರತಿಮೆಗಳನ್ನೂ ಪ್ರತಿಷ್ಟಾಪಿಸಿದ್ದಾರೆ. ಎಲ್ಲಾ
ದೇವಾಲಯಗಳಲ್ಲೂ ಮತ್ತು ಆವರಣದಲ್ಲಿರುವ ದೇವರ ಮೂರ್ತಿಗಳಿಗೂ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.
ಪೂಜೆ ಮಾಡುವ ಪುರೋಹಿತರೆಲ್ಲರೂ ಉತ್ತರ ಭಾರತದಿಂದ ಬಂದವರು. ಹಾಗಾಗೇ, ಮೈ ಮೇಲೆ ಜುಬ್ಬಾ ಧರಿಸಿ, ಸಂಸ್ಕೃತ ಶ್ಲೋಕಗಳನ್ನು ಪಠಿಸುವುದಲ್ಲದೇ, ಹಿಂದೀ
ಭಜನೆಗಳನ್ನೂ ಹಾಡುತ್ತಾರೆ. ಅವರ ಜೊತೆಗೆ, ಅಲ್ಲಿಗೆ
ಬಂದ ಮಾರಿಷಸ್ ನ ಹಿಂದೂ ಭಕ್ತರೂ ದನಿಗೂಡಿಸುತ್ತಾರೆ. ಶಿವಲಿಂಗಗಳಿಗೆ
ತಮ್ಮ ಕೈನಿಂದಲೇ ನೀರ ಅಭಿಷೇಕ ಮಾಡಿ ಭಾರತದಿಂದ ಸಾವಿರಾರು ಕಿ.ಮೀ.
ದೂರದಲ್ಲಿದ್ದೂ ದ್ವೈವತ್ವದ ಧನ್ಯತೆ ಪಡೆಯುತ್ತಾರೆ. ಅಲ್ಲೇ
ಗುಡ್ಡದ ಮೇಲಿರುವ ಹನುಮಾನ್ ದೇವಾಲಯದಿಂದ ಸಂಪೂರ್ಣ ’ಗಂಗಾ ತಾಲಾಬ್’
ಕಾಣುತ್ತದೆ. ಕೊಳ ಮತ್ತು ಅಲ್ಲಿಂದ ಕಾಣುವ ಸುತ್ತಲಿನ
ಬೆಟ್ಟಗಳ ದಟ್ಟ ಹಸುರಿನ ಗಿಡಮರಗಳಿಂದ ತುಂಬಿದ ಮಾರಿಷಸ್ ನ ಸುಂದರ ಪ್ರಕೃತಿ ಮೈ ತುಂಬಿಕೊಂಡ
ಬಸುರಿ ಹೆಣ್ಣಿನಂತೆ ಕಂಗೊಳಿಸುತ್ತದೆ. ಹನುಮಾನ್ ದೇವಾಲಯದ ಬಳಿ ತಲೆ
ಮೇಲೆ ಜುಟ್ಟಿರುವ ವಿಶೇಷ ಕೋತಿ ಪ್ರಭೇದವೊಂದು ಭಕ್ತರು ಅರ್ಪಿಸುವ ಬಾಳೆಹಣ್ಣಿಗೆ ಕಾದು
ಕುಳಿತಿರುತ್ತದೆ. ಇವು ಕೊಂಚ ರೇಗಿದರೆ, ಥೇಟ್
ಭಾರತದ ಮಂಗಗಳಂತೇ ಹಲ್ಲು ಕಿರಿದು ಗುರುಗುಟ್ಟಿ ಹೆದರಿಸಲೂ ಸೈ.
ಇನ್ನೊಂದು ವಿಶೇಷವೆಂದರೆ, ಸ್ವಲ್ಪ ದೊಡ್ದದಾಗಿರುವ ಶಿವಲಿಂಗ ದೇವಾಲಯಕ್ಕೆ ಹಿಂದುಗಳಲ್ಲದ ಭಕ್ತರೂ ಪೂಜೆ ಸಲ್ಲಿಸಲು
ಬರುತ್ತಾರೆ. ಶಿವ ಪೂಜೆ ನಡೆಯುತ್ತಿರುವಾಗ, ಕೈಯಲ್ಲಿ
ಹೂ ಗುಚ್ಛ ಹಿಡಿದು, ನೆಲದ ಮೇಲೆ ಕಾಲು ಮಡಿಚಿ ಕುಳಿತುಕೊಳ್ಳಲು ಅಭ್ಯಾಸ
ಇಲ್ಲದಿರುವುದರಿಂದ, ಶಿವಲಿಂಗದ ಕಡೆಗೇ ಕಾಲು ಚಾಚಿ ಕುಳಿತು, ಸಾಂಗವಾಗಿ ನಡೆಯುವ ಪೂಜಾ ವಿಧಾನವನ್ನು ಬೆರಗುಗಣ್ಣಿನಿಂದ ನೋಡುತ್ತಾ, ಮುಗ್ಧವಾಗಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ! ಮಾರಿಷಸ್ ನಲ್ಲಿ ಪರಿಚಯವಾದ, ಅಲ್ಲಿನ ಸ್ಟೇಟ್ ಬ್ಯಾಂಕ್ ಆಫ಼್ ಇಂಡಿಯಾದ ಉನ್ನತ ಅಧಿಕಾರಿಗಳಾದ, ಕನ್ನಡಿಗರಾದ ಶ್ರೀ ಹಿರೇಮಠ್ ಮತ್ತು ಶ್ರೀ ನಾಯಕ್ ರವರು ಅಲ್ಲಿನ ಮಹಾ ಶಿವರಾತ್ರಿ ಪೂಜೆ
ಬಗ್ಗೆ ವಿವರಿಸಿದರು. ಅವರು ವಿವರಿಸಿದಂತೆ, ಮಹಾ
ಶಿವರಾತ್ರಿಯ ಮುಂಚೆ ಮತ್ತು ನಂತರ ಸುಮಾರು ಒಂದು ವಾರ ಈ ಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ
ಕಿ.ಮೀ.ಗಟ್ಟಳೆ ನಡೆದು ಬರುತ್ತಾರಂತೆ.
ಹಾಗೆ ಬರುವಾಗ ದಾರಿಯಲ್ಲೆಲ್ಲಾ ಹಿಂದೂಗಳಲ್ಲದೇ ಇತರರೂ ಕೂಡಾ ಶಿಬಿರಗಳನ್ನು
ತೆರೆದು ಭಕ್ತರಿಗೆ ಉಚಿತ ಪ್ರಸಾದ, ಹಣ್ಣು ಹಂಪಲಿನ ಸೇವೆ
ಮಾಡುತ್ತಾರಂತೆ. ಇದನ್ನು ಅಲ್ಲಿನ ಜೆ.ಎಸ್.ಎಸ್.ನಲ್ಲಿ ಉಪನ್ಯಾಸಕರಾಗಿರುವ ಪರಮೇಶಾಚಾರಿ, ರವಿ, ಮತ್ತಿತರರು, ತಾವು ಅಲ್ಲಿಗೆ
ಸುಮಾರು ೨೦ ಕಿ.ಮೀ. ನಡೆದು ಹೋದಾಗ ಅಲ್ಲಿನ
ಜನ ಸಲ್ಲಿಸಿದ ಉಚಿತ ಸೇವೆಯನ್ನು ನೆನೆದು ಅನುಮೋದಿಸಿದರು. ನಮ್ಮಲ್ಲಿ
ಅಮರನಾಥ ಯಾತ್ರೆ ಮಾಡಿದಾಗ ಕಾಶ್ಮೀರದ ಸ್ಥಳೀಯ ಮುಸ್ಲಿಮರೂ ಈ ರೀತಿಯ ಸೇವೆ ಸಲ್ಲಿಸುವುದನ್ನು
ಕೇಳಿದ್ದೆ. ದೇವರ ನೆಪದಲ್ಲಿ ಜನ ಗಡಿ ಮೆರೆತು ಮಾನವೀಯತೆಯನ್ನು ತೋರುತ್ತಾರೆಂಬುದು ಮತ್ತೊಮ್ಮೆ ಸಾಬೀತಾಯಿತಷ್ಟೆ!
ಎರಡು ವಾರಗಳಲ್ಲಿ ಜೆ.ಎಸ್.ಎಸ್.ನವರ ಆತಥ್ಯ ಸವಿದು, ಈ ಸುಂದರ ದ್ವೀಪದ ಸೌಂದರ್ಯ ಮೆಲಕು
ಹಾಕುತ್ತಾ ಮತ್ತೊಮ್ಮೆ ಇಲ್ಲಿಗೆ ಸಂಸಾರ ಸಮೇತ ಬರುವ ಆಶಯದಿಂದ ವಿಮಾನ ಹತ್ತಿದವನಿಗೆ, ಮಾರಿಷಸ್ ಏರ್ ಲೈನ್ ನ ಗಗನ ಸಖಿ ಊಟದ ತಟ್ಟೆ ಹಿಡಿದು ’ನಗಪ್ಪ’
ಎಂದಳು. ಮೊದಲಿಗೆ ಅರ್ಥವಾಗದಿದ್ದರೂ ನಂತರ
ಪರಿಸ್ಥಿತಿಯ ಅರಿವಾಗಿ ನಸು ನಗೆ ನಕ್ಕೆ. ಪಾಸ್ ಪೋರ್ಟ್ ನಲ್ಲಿ ನನ್ನ
ಪೂರ್ತಿ ಹೆಸರು ’ಸೋಮಲಾಪುರ ನಾಗಪ್ಪ ಶ್ರೀಧರ’ ಎಂದಿದೆ. ಸೋಮಲಾಪುರದ ನಾಗಪ್ಪ ನಮ್ಮ ತಂದೆ. ನನ್ನ ಹೆಸರು ಎಸ್.ಎನ್. ಶ್ರೀಧರ.
ಮೊದಲೇ ಹಿಂದೂ ಊಟ ಬೇಕೆಂದು ವಿಮಾನದ ಟಿಕೆಟ್ ಬುಕ್ ಮಾಡಿದಾಗಲೇ ಬರೆಸಿದ್ದೆ.
ಹಾಗಾಗಿ, ಗಗನಸಖಿ ಆ ’ಸ್ಪೆಷಲ್
ಊಟ’ದ ತಟ್ಟೆ ಹಿಡಿದುಕೊಂಡು ಬಂದು ನನ್ನನ್ನು ’ನಗಪ್ಪ’ ಎಂದು ಕರೆದಿದ್ದಳು. ನಾನು
ನಗುತ್ತಲೇ ಊಟ ಸ್ವೀಕರಿಸಿ, ಸಿಹಿನಿದ್ದೆಯಲ್ಲಿದ್ದಾಗಲೇ, ಬೆಂಗಳೂರು ತಲುಪಿದ್ದೆ. ಹೌದು ಮತ್ತೊಮ್ಮೆ ಮಾರಿಷಸ್ ಗೆ
ಹೋಗುತ್ತೇನೆ, ಸಂಸಾರ ಸಮೇತನಾಗಿ. ತಾವೂ
ಬರುತ್ತೀರಲ್ಲವೇ?
No comments:
Post a Comment