Thursday, March 14, 2013

ಕಾವೇರಿ ನದಿ ನೀರಿನ ಹಂಚಿಕೆ ವಿವಾದ - ಪರಿಹಾರಕ್ಕೆ ಒಂದು ಸೂತ್ರ


ಪ್ರಜಾವಾಣಿಯ ವಾಚಕರವಾಣಿಗೆ ಮತ್ತೊಂದು ವಿಫಲ ಪತ್ರ 


ಕಾವೇರಿದ ಕಾವೇರಿಗೆ ಪರಿಹಾರ

ಮಾನ್ಯರೇ,

ಈಗ ನಡೆಯುತ್ತಿರುವ ಕಾವೇರಿ ಸಂಬಂಧದ ವಿವಾದ, ಅಶಾಂತಿ, ಇವುಗಳಿಗೆ ನಮ್ಮಲ್ಲೇ ಪರಿಹಾರವಿದೆ. ಈಗ ನಮ್ಮಲ್ಲಿ ಇರುವ ನೀರಿನಲ್ಲೇ ಸಧ್ಯಕ್ಕೆ ಮಾಡುತ್ತಿರುವ ಸಾಗುವಳಿಯ ಹತ್ತರಿಂದ ಹದಿನೈದು ಪಟ್ಟು ಹೆಚ್ಚು ಸಾಗುವಳಿ ಮಾಡಲು ಅವಕಾಶವಿದೆ. ಇಸ್ರೇಲ್ ಹನಿನೀರಾವರಿ ತಂತ್ರದಲ್ಲಿ, ಅತಿ ಕಡಿಮೆ ನೀರಿನಲ್ಲಿ, ನಮ್ಮ ದೇಶದಲ್ಲೇ ಅನೇಕ ಕಡೆ, ಅನೇಕ ಕೃಷಿ ವಿಶ್ವವಿದ್ಯಾಲಯಗಳಲ್ಲಿ, ಅನೇಕ ಪ್ರಗತಿಪರರ ಹೊಲ ಗದ್ದೆಗಳಲ್ಲಿ, ವಿವಿಧ ರೀತಿಯ ಬೆಳೆಯನ್ನು ಯಶಸ್ವಿಯಾಗಿ ಬಿಳೆದ ನಿದರ್ಶನಗಳು ಅನೇಕ. ಅತಿ ಕಡಿಮೆ ನೀರಿನ, ಅಂದರೆ ಗದ್ದೆಯಲ್ಲಿ ನೀರನ್ನು ನಿಲ್ಲಿಸದೇ, ಬೆಳೆಯಬಹುದಾದ ಭತ್ತ ಮತ್ತು ಕಬ್ಬು ತಳಿಗಳೂ ರೂಪುಗೊಂಡಿವೆ.

ಗದ್ದೆಯಲ್ಲಿ ನೀರು ನಿಲ್ಲಿಸುವ ರೀತಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ನೀರು ಪೋಲಾಗುವುದನ್ನು ಕಂಡಿದ್ದೇವೆ. ನೀರು ಹೆಚ್ಚಾಗಿ ದೊರಕುವ ಪ್ರದೇಶಗಳಲ್ಲಿ, ನೀರಿನ ಬಳಕೆಯಲ್ಲಿ ನಿರ್ಲಕ್ಷ್ಯ ತೋರುವ ರೈತ ಬಂಧುಗಳು, ತಮ್ಮ ಪರಂಪರಾಗತವಾದ ನೀರು ನಿಲ್ಲಿಸುವ ಗದ್ದೆಗಳ ಬದಲಾಗಿ, ಕಡಿಮೆ ನೀರಿನಲ್ಲಿ ಅದೇ ಬೆಳೆಗಳನ್ನು ಬೆಳೆಯುವ ತಂತ್ರಕ್ಕೆ ಮೊರೆ ಹೋದಲ್ಲಿ, ಇನ್ನಿತರ ರೈತರಿಗೂ ಅಗತ್ಯ ನೀರು ದೊರಕುವುದರಲ್ಲಿ ಸಂಶಯವಿಲ್ಲ. ಸರ್ಕಾರ ಮತ್ತು ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳು, ಈ ನಿಟ್ಟಿನಲ್ಲಿ ಕೆಲಸ ಮಾಡಿದಲ್ಲಿ, ಹಾಗೂ ರೈತ ಭಾಂದವರಿಗೆ ಸೂಕ್ತ ತಳಿಗಳ ಬಗ್ಗೆ ಅರಿವು ಮೂಡಿಸುವುದರ ಮೂಲಕ, ಹಾಗೂ ಸೂಕ್ತ ಕಾನೂನನ್ನು ರೂಪಿಸಿ, ಯಶಸ್ವಿಯಾಗಿ ಜಾರಿಗೊಳಿಸುವುದರ ಮೂಲಕ ನೀರಿನ ಕೊರತೆಯ ಅಶಾಂತಿಯನ್ನು ಶಾಶ್ವತವಾಗಿ ಕೊನೆಗೊಳ್ಳಿಸಬಹುದಾಗಿದೆ. 

No comments:

Post a Comment