ಅಕ್ಕನ ಮಗ ತೇಜಸ್, ಅಮೆರಿಕಾಗೆ ಹಾರಿ ಹೋದ ಮೇಲೆ ಬರೆದ ಅವನ ವಿಮಾನಯಾನದ ಅನುಭವ ಓದಿದ ಮೇಲೆ ಬರೆದ 'ವಿರಹ' ಗೀತೆ.
ಸೀಮೋಲ್ಲಂಘನ
ತೇಜು, ನೀ ಮಾಡಿದ
ಸೀಮೋಲ್ಲಂಘನ,
ನಮ್ಮ ಸೀಮೆಯಲ್ಲೆಲ್ಲಾ
ಸುದ್ದಿ ಮಾಡಿ, ಗಲ್ಲಿ ಗಲ್ಲಿಗಳ
ದೇವರುಗಳೆಲ್ಲಾ ಅಹುದಹುದೆಂದು
ತಲೆಯಾಡಿಸಿರಲು,
ನೀ ಬರೆದ, ಗಗನ ಸಖಿಯ, ಮದಿರೆಯ
ಸಾನ್ನಿಧ್ಯ ಸಾಧ್ಯತೆಯನ್ನೋದಿ
ನಮ್ಮೂರ ಗುಡಿಬೀದಿಯ
ಹನುಮಂತ ಬೆಟ್ಟವ ಕೆಡವಿ,
ಮೂಗ ಮೇಲೆ ಬೆರಳಿಟ್ಟು,
ನಿಂತು ಬಿಟ್ಟನಲ್ಲಾ.
ಹನುಮಂತನ ಈ ಹೊಸ
ಅವತಾರವ ಕಂಡಯರಿಯದ
ಊರ ಜನ ಹೌಹಾರಿ,
ಪೂಜಾರಿಯ ಮೈಮೇಲೆ
ಕೋತಿರಾಮನವತರಿಸಿ,
ಕಾರಣವೇನೆಂಬುದ
ಪರಾಂಬರಿಸಲು,
’ನಮ್ಮೂರ ಹೈದ,
ಪರದೇಶಕೆ ಹೋದ,
ಅವನು ಮರಳಿ ಬರಲು,
ನನ್ನ ಕೈ ಮೂಗನು ತೊರೆದು,
ಮತ್ತೆ ಬೆಟ್ಟವ ಹಿಡಿಯುವುದು’ ಎಂದನಂತನಲ್ಲಾ.
ತೇಜು, ನನ್ನಾಣೆಯಾಗಿ
ಆಂಜನೇಯನ ರಕ್ಷೆ
ನಿನಗಿರಲಿ, ನೀ ಪಟ್ಟು ಹಿಡಿದ
ಕೆಲಸವೆಲ್ಲವೂ ಹಣ್ಣಾಗಿ,
ವಿಘ್ನವೆಲ್ಲವುಗಳ ದಾಟಿ,
ವಿಶ್ವ ವಿಜೇತನಾಗಿ,
ಬೇಗ ನಮ್ಮೂರಿಗೆ
ಬಂದಿಳಿದು, ಮಾರುತಿಯ
ಮೂಗ ಮೇಲಿನ
ಬೆರಳನ್ನಿಳಿಸುವ ಗಂಡಾಗಿ,
ಅದೇ ಸರಳತೆಯ ನೀ ಮೆರೆಯುವೆಯಲ್ಲಾ..
----- ಡಾ. ಎಸ್.ಎನ್. ಶ್ರೀಧರ
No comments:
Post a Comment