ಪ್ರೇಮದ ಮೊಟ್ಟೆಗಳು
ಬಟ್ಟಲುಗಣ್ಣಿನ
ಗುಬ್ಬಚ್ಚಿ ಹುಡುಗಿಯೇ
ನನ್ನೆದೆಯಲ್ಲಿ ನೀ ಕಟ್ಟಿದ
ಪ್ರೀತಿಯ ಗೂಡಲಿ
ನೀನಿಟ್ಟ ಪ್ರೇಮದ
ಮೊಟ್ಟೆಗಳಿಗೆ ಜತನದಲಿ
ನೆನೆಪಿನ ಕಾವು ಕೊಡುತ್ತಾ
ನಾನೇ ಬೆಚ್ಚಗಾಗುತ್ತಿದ್ದೇನೆ.
ಡಾ. ಎಸ್.ಎನ್. ಶ್ರೀಧರ
-------------------
ನಾರೀಕೇಳ ಮತ್ತು ಈಚಲ
ಅವನೆಂದ,
ನಾರೀ, ನೀ ಕೇಳ,
ನಿನ್ನೆದೆ ನಾರೀ ಕೇಳ!
ನಿನೇ ನನ್ನ ರಸಗವಳ!!
ಅವಳೆಂದಳು,
ಅಹಾ, ನನ್ನ ನಲ್ಲ,
ಸವಿಮಾತನಾಡಿದೆಯಲ್ಲಾ,
ನಾರೀ ಕೇಳಕೆ ಈಚಲ ಜೊತೆಯಲ್ಲ.
ಡಾ. ಎಸ್.ಎನ್. ಶ್ರೀಧರ
----------------
ಪ್ರೇಮ ಋತು
ನಲ್ಲೇ, ಬಿರುಬೇಸುಗೆಯಲ್ಲೂ,
ಬೆವರಧಾರೆಯಲ್ಲೂ ನಿನ್ನದೇ
ಪ್ರೀತಿಯ ಮಳೆಯ ಜಳಕ
ನಿನ್ನ ಪ್ರೇಮ ಸಿಂಚನದ ಪುಳಕ
ಗೆಳತೀ, ಜಡಿಮಳೆಯಲ್ಲೂ
ಭೋರ್ಗರೆವ ಹರಿವಿನಲ್ಲೂ, ನಿನ್ನದೇ
ನೆನಪಿನ ದೋಣಿಯ ತೊಯ್ದಾಟ,
ಮೈಯಲ್ಲಿ ಸಾವಿರ ಕಂಪನಗಳ ರಂಗಿನಾಟ
ಪ್ರಿಯೇ, ಕೊರೆವ ಚಳಿಯಲ್ಲೂ
ಗಡ ಗಡ ನಡುಕದಲ್ಲೂ ನಿನ್ನದೇ
ಮೆಲುನಗುವಿನ ಹೊಂಗಿರಣ
ನರನಾಡಿಗಳಲ್ಲಿ ಬಿಸಿ ಭಾವರಸಗಳ ಸಂಮಿಲನ
ಡಾ. ಎಸ್.ಎನ್. ಶ್ರೀಧರ
No comments:
Post a Comment