Friday, March 8, 2013

meetingo illa tale iitingo


          ಈ ಪ್ರಹಸನ ತಮಾಷೆಗಾಗಿ ಬರೆದದ್ದು. ಇದು ಅನೇಕ ಕಡೆ ಪ್ರಯೋಗಗೊಂಡು ಜನರನ್ನು ನಗೆಗಡಲಲ್ಲಿ ತೇಲಿಸಿದೆ. ಮೂರು ಮಹಿಳಾ ಸಂಘಟನೆಗಳು, ಯಶಸ್ವಿ ಪ್ರಯೋಗ ಮಾಡಿವೆ. ಚಂದನ ದೂರದರ್ಶನ ವಾಹಿನಿಯಲ್ಲೂ ಪ್ರಸಾರವಾಗಿದೆ.  
         ಈ ನಾಟಕ ಪ್ರಯೋಗ ಮಾಡಬಯಸುವವರು ಲೇಖಕರಿಂದ ಅನುಮತಿ ಪಡೆಯಬೇಕಾದ್ದು ಸಹಜ ಧರ್ಮ. 
         ಈ ನಾಟಕದ ಬರಹದ ಕೊನೆಯಲ್ಲಿ ಒಂದು ಕಾಲೇಜಿನಲ್ಲಿ ಮಹಿಳಾ ಉಪನ್ಯಾಸಕರು ನಡೆಸಿಕೊಟ್ಟ ಪ್ರದರ್ಶನದ ವಿಡಿಯೋ ಕೂಡ ಇದೆ.    

ನಾಟಕ
ಮೀಟಿಂಗೋ, ತಲೆ ಈಟಿಂಗೋ
ರಚನೆ: ಡಾ|| ಎಸ್. ಎನ್. ಶ್ರೀಧರ

ಪಾತ್ರವರ್ಗ:
. ರಮಾಮಣಿ:           ಮಹಿಳಾಮಂಡಳಿಯ ಅಧ್ಯಕ್ಷರು, ಸುಮಾರು ೪೦-೪೫ ವರ್ಷ
. ಸೀತಮ್ಮ:             ಮಹಿಳಾಮಂಡಳಿಯ ಕಾರ್ಯದರ್ಶಿ, ಸುಮಾರು ೩೫-೪೦ ವರ್ಷ
. ಶಾಂತಮ್ಮ:           ಸದಸ್ಯೆ, ಸುಮಾರು ೩೦ ವರ್ಷ
. ಸೌಮ್ಯ:                ಸದಸ್ಯೆ, ಸುಮಾರು ೩೦ ವರ್ಷ
. ಗೋದೂಬಾಯಿ:       ಸದಸ್ಯೆ, ಉತ್ತರ ಕರ್ನಾಟಕದವರು, ಸುಮಾರು ೩೫ ವರ್ಷ
. ಲಲನೆ:                ಸದಸ್ಯೆ, ಅವಿವಾಹಿತೆ, ಸುಮಾರು ೨೦ ವರ್ಷ
. ಮಲ್ಲಿ:                 ಸದಸ್ಯೆ, ಸುಮಾರು ೩೦ ವರ್ಷ
. ಸಂಶಯಿ:              ಸದಸ್ಯೆ, ಸುಮಾರು ೩೦ ವರ್ಷ




ದೃಶ್ಯ ೧
(ಮಹಿಳಾ ಸಮಾಜದ ಸಭೆ. ಕುರ್ಚಿಗಳನ್ನು ಅರ್ಧ ಚಂದ್ರಾಕೃತಿಯಲ್ಲಿ ಹಾಕಿದ್ದಾರೆ. ಅಧ್ಯಕ್ಷರು ಮಧ್ಯೆ ಕುಳಿತಿದ್ದಾರೆ. ಅವರ ಅಕ್ಕಪಕ್ಕ ಕುಳಿತ ಮಹಿಳಾ ಮಣಿಗಳು ಗುಜು ಗುಜು ಮಾತಾಡುತಿದ್ದಾರೆ.)

ರಮಾಮಣಿ (ಅಧ್ಯಕ್ಷೆ): (ಎದ್ದುನಿಂತು) ಮಾನ್ಯ ಸದಸ್ಯರೇ, ದಯವಿಟ್ಟು ಶಾಂತರಾಗಿ! ಈಗ ಸಭೆ ಆರಂಬಿಸೋಣ. ರೀ, ಕಾರ್ಯದರ್ಶಿ ಸೀತಮ್ಮನವರೇ, ಈ ಸಭೆ ಕರೆದಿರುವ ವಿಷಯ ಹೇಳ್ರೀ. (ಕುಳಿತುಕೊಳ್ಳುವರು)
ಸೀತಮ್ಮ (ಕಾರ್ಯದರ್ಶಿ): (ಎದ್ದುನಿಂತು), ಮಹಿಳಾಸದಸ್ಯರೇ,.....
ಶಾಂತಮ್ಮ (ಸದಸ್ಯೆ): (ಎದ್ದುನಿಂತು), ಅಲ್ರೀ, ಸೀತಮ್ಮ! ಇದು ಮಹಿಳಾ ಸಂಘ, ಇಲ್ಲಿರೊರೆಲ್ಲಾ ಮಹಿಳೆಯರೇ ಅಂದ ಮೇಲೆ ಮತ್ತೆ ಯಾಕ್ರೀಮಹಿಳಾ ಸದಸ್ಯರೇ....’ ಅನ್ನೋದು?
(ಎಲ್ಲರೂ ಜೋರಾಗಿ ನಗುವರು)
ಸೀತಮ್ಮ: ಸಾಕು ಸುಮನಿರ್ರೀ ಶಾಂತಮ್ಮ. ಇಲ್ಲಿ ಇರೋರು ಎಲ್ಲಾ ಮಹಿಳೆಯರೇ ಅನ್ನೋದು ನನಗೂ ಗೊತ್ತು! ಆದ್ರೆ, ಕೆಲವುಗಂಡುಬೀರಿಯರೂಇರುತ್ತಾರಲ್ಲ. (ಶಾಂತಮ್ಮನ ಕಡೆ ಮೂತಿ ತಿರುವರು).
ಶಾಂತಮ್ಮ: ನೋಡ್ರೀ ಸೀತಮ್ಮ! ನನ್ನೇನಾದ್ರೂ ಅಂದ್ರೆ ಸುಮ್ನಿರೋಲ್ಲ! ಏನ್ರೀ ಅದು. ಯಾರ್ರೀ ಅದು ಗಂಡುಬೀರಿ? (ನಿಂತುಕೊಂಡು ಸೆರಗು ಸೊಂಟಕ್ಕೆ ಸಿಕ್ಕಿಸಿಕೊಂಡು ಜಗಳಕ್ಕೆ ಅನುವಾಗುವರು)
ಸೌಮ್ಯ (ಸದಸ್ಯೆ) : (ರಾಗ ಎಳೆಯುತ್ತಾ) ಅಯ್ಯಯ್ಯೋ, ಶುರುವಿನಲ್ಲೇ ಏನ್ರೀ ಇದೂ. ಅದೇನೋ ಅಂತಾರಲ್ಲ ...... ಹಾಗಾಯ್ತು.
ಗೋದೂಬಾಯಿ (ಸದಸ್ಯೆ): ಅಯ್ಯಯ್ಯೋ! ಸುಮ್ನಿರ್ರೇ ನಮ್ಮವ್ವ! ಶುರುನಾಗೇ ಕವಕವ ಹಚ್ಚೀರಿ......
ಅಧ್ಯಕ್ಷೆ: (ಮಧ್ಯೆ ಪ್ರವೇಶಿಸಿ) ಹೌದು ಹೌದು! ಸಭೆ ಆರಂಭಕ್ಕೆ ಮುಂಚೇನೇ ಶಾಂತಿ ಕದಡ್ತೀರಲ್ರೀ...... (ಶಾಂತಮ್ಮನ ಕಡೆ ತಿರುಗಿ) ರೀ ಶಾಂತಮ್ಮ, ನೀವು ಕುತ್ಗೊಳ್ರೀ.  (ಸೀತಮ್ಮನ ಕಡೆ ತಿರುಗಿ) ಕಾರ್ಯದರ್ಶಿ ಸೀತಮ್ಮನವರೇ, ನೀವು ಸುಮ್ಮನೇ "ಸದಸ್ಯರೇ" ಅಂಥೇಳಿ ಮಾತನ್ನು ಶುರು ಮಾಡಿ. (ಶಾಂತಮ್ಮ ಕುಳಿತುಕೊಳ್ಳುವರು. ಸೀತಮ್ಮ ತಮ್ಮ ಕೈಲಿದ್ದ ಪೇಪರ್ ಹಿಡಿದು ಓದಲು ಅನುವಾಗುವರು). (ಸ್ವಗತ) ಅಬ್ಬಬ್ಬಾ! ಈ ಸಭೆ ನಡೆಸಿ ಮುಗ್ಸೋ ಹೊತ್ತಿಗೆ ನನ್ಗೆ ಬಿ.ಪಿ. ಬಂದ್ ಬಿಡುತ್ತೆ. ಎಲ್ಲಾ ಈ ಸೀತಮ್ಮನಿಂದಲೇ... (ಹೀಗೆ ಹೇಳುತ್ತಾ ಕುರ್ಚಿ ಮೇಲೆ ಕುಳಿತಿಕೊಳ್ಳಲು ಹೋಗುವರು)
ಸೀತಮ್ಮ: (ಅಧ್ಯಕ್ಷರ ಕಡೆ ತಿರುಗಿ) ಏನ್ರೀ, ಅಧ್ಯಕ್ಷೆ ರಮಾಮಣಿಯವರೇ, ಈಗ ಗಲಾಟೆ ನಾನು ಶುರು ಮಾಡಿದ್ನೇ?.. ಹಾಗಂತ ನೀವೂ ಹೇಳ್ತೀರಾ!! (ಕಿವಿ ಮುಚ್ಚಿಕೊಳ್ಳುತ್ತಾ) ಶಾಂತಂ ಪಾಪಂ! ಶಾಂತಂ ಪಾಪಂ!
ಶಾಂತಮ್ಮ: (ಎದ್ದು ನಿಲ್ಲುತ್ತಾ) ಯಾಕ್ರೀ ಸೀತಮ್ಮ? ನನ್ನನ್ನು ಶಾಂತಮ್ಮ ಪಾಪಮ್ಮಾ ಅಂತ ಕರೀತೀರ! ನಾನೇನ್ರೀ ಪಾಪ ಮಾಡಿದ್ದೆ
ಸೌಮ್ಯ: ಇದೊಳ್ಳೆ ಕತೆಯಾಯ್ತಲ್ಲಾ!..... ಅದೇನೋ ಅಂತಾರಲ್ಲ...... ಹಾಗಾಯ್ತು.
ಲಲನೆ: (ಒಯ್ಯಾರದಿಂದ ಓಲಾಡುತ್ತಾ) ಹಯ್ಯೋ, ಹಲ್ರೀ ಶಾಂತಮ್ಮ! ಅವ್ರು ಹೇಳಿದ್ದುಶಾಂತಂ ಪಾಪಂ!’ ಅಂತ. ಶಾಂತಮ್ಮ ಪಾಪಮ್ಮಾ ಅಲ್ಲಾರೀ. (ಎನ್ನುತ್ತಾ ಎಲ್ಲರಿಗೂ ಕಾಣುವಂತೆ ತಮ್ಮ ಸೀರೆ ಸೆರಗು ಬೀಸುವರು)
ಪಕ್ಕದಲ್ಲೇ ಕುಳಿತಿರುವ ಸೌಮ್ಯ: (ಸೀರೆ ತಮ್ಮ ಕೈಯಲ್ಲಿ ಹಿಡಿದು ನೋಡುತ್ತಾ..) ಈ ಸೀರೆ ನೋಡಿದ್ರೆ, ಅದೇನೋ ಹೇಳ್ತಾರಲ್ಲಾ... ಹಾಗಿದೆಯಲ್ರೀ!... ಲಲನೆಯವರೇ, ಎಲ್ರೀ ತೆಗೊಂಡಿದ್ದು ಈ ಸೀರೆ!!
ಲಲನೆ: (ಇನ್ನೂ ವೈಯಾರ ಮಾಡುತ್ತಾ) ಹ್ಹಿದಾ! ಹಿದನ್ನ ನನ್ನ ವುಡ್ ಬೀ ಅಮೇರಿಕಾದಿಂದ ತಂದ್ರು. ಹಲ್ಲಿ ಹಿವನ್ನ ಅಮೇರಿಕಾ ಪ್ರಸಿದೆಂಟ್ ಫ಼್ಯಾಮಿಲಿಗೇ ಅಂತಾನೇ ತಯಾರಿಸ್ತಾರಂತೆ. ಆದ್ರೆ, ನನ್ನ ವುಡ್ ಬೀ ಅಮೆರಿಕಾದಲ್ಲಿ ಪ್ರಸಿಡೆಂಟ್ ಗೆ ತೊಂಬಾ ಕ್ಲೋಸ್ ಅಲ್ವಾ! ಹಾಗಾಗಿ ಅ ಪ್ರಸಿಡೆಂಟ್ ಒಬಾಮಾ ಅವರೇ "ಈ ಸೀರೆ ನನ್ನ ವೈಫ಼್ ಗಿಂತ ನಿಮ್ಮಫ಼ಿಯಾನ್ಸಿಗೇ ಚೆನ್ನಾಗಿ ಹೊಂದುತ್ತೇಂತ ಪ್ರಸೆಂಟ್ ಮಾಡಿದ್ರಂತೆ! ನೋಡಿ, ಎಷ್ಟು ಬುಶಿ ಬುಶಿಯಾಗಿದೆ ಅಲ್ವಾ! ಒಬಾಮಾ ಕೋದಲಿನ ತರಾನೇ..
ಗೋದೂಬಾಯಿ: ಅಬ್ಬಬ್ಬಾ! ಈ ಸೀರಿ ಎಂತ ಚಂದ ಕಾಣ್ತತದಲ್ಲ! ರಂಭಿ ಹಂಗಿದ್ದೀಯಲ್ಲೇ ನಮ್ಮವ್ವಾ! .... (ಲಲನೆಗೆ ಕೈ ನೀವಾಳಿಸಿ ತಮ್ಮ ತಲೆಗೆ ನೆಟಿಗೆ ಮುರಿದುಕೊಳ್ಳುವರು)
ಮಲ್ಲಿ (ಸದಸ್ಯೆ): (ಲಲನೆಯ ಹತ್ತಿರ ಬಂದು ಸೀರೆ ಪರೀಕ್ಷೆ ಮಾಡುತ್ತಾ...) ರೀ.. ಲಲನೆ, ಕುತ್ಗೊಳ್ರೀ.... ಬಿಡಬೇಡ್ರೀ ರೈಲು! ನಿಮ್ಮ ರೈಲಿಗೆ ಕಂಬೀನೇ ಬೇಡಾ!! ಅಮೇರಿಕಾ ಅಧ್ಯಕ್ಷ್ಯರ ಹೆಂಡತಿ ಸೀರೆ ಉಡ್ತಾರೇನ್ರೀ? ಒಬಾಮ ಹೆಂಡತಿ ಉಟ್ಟುಕೊಳ್ಳೋದು, ಮೊಣಕೈ ಉದ್ದ ಇರೋ ತುಂಡು ಲಂಗ!! ಸೀರೆ ಉಟ್ಟುಕೋತಾರಂತೆ, ಸೀರೆ!! ಅಮೇರಿಕಾ ಪ್ರಸಿಡೆಂಟ್ ವೈಫ಼್ ಗಿಂತ ಇವರಿಗೇ ಚೆನ್ನಾಗಿ ಹೊಂದುತ್ತೇ ಅಂದರಂತೆ..... ಏನು ಒಬಾಮ ನಿಮ್ಮ ಚಿಕ್ಕಪ್ಪಾನಾ? ನಿಮ್ಮನ್ನಾ ತಮ್ಮ ತೊಡೆ ಮೇಲೆ ಇಟ್ಟುಕೊಂಡು ಸಾಕಿದಾರಾ! ಬೆಂಗಳೂರಲ್ಲೇ ಇಟ್ಟಮಡು ಬಿಟ್ಟು ಹೋಗಿಲ್ಲಾ! ಅಮೇರಿಕಾ ಅಂತೆ, ಅಮೇರಿಕಾ!!
ಸೌಮ್ಯ: ಇದೊಳ್ಳೆ ಕತೆಯಾಯ್ತಲ್ಲಾ!..... ಅದೇನೋ ಅಂತಾರಲ್ಲ...... ಹಾಗಾಯ್ತು..
ಲಲನೆ: (ಕೋಪದಿಂದ ಕಾಲನ್ನು ನೆಲಕ್ಕೇ ಗುದ್ದಿ, ಮಲ್ಲಿ ಕಡೆಗೆ ತಿರುಗಿ) ಇದು ಹತಿಯಾಯ್ತು. ವೈಯಕ್ತಿಕ ನಿಂದನೆ ಯಾರಿಗೂ ಮಾಡ್ಬಾರ್ದೂ ಅಂತ ಹೋದ ಮೀಟಿಂಗ್ ನಲ್ಲೇ, ರೆಸಲ್ಯೂಷನ್ ತೆಗೆದುಕೊಂಡಿರಲಿಲ್ವ! ಅದನ್ನೇ ವೈಯೋಲೆಟ್ ಮಾಡ್ತೀರಲ್ರೀ.... (ಅಧ್ಯಕ್ಷರ ಕಡೆಗೆ ತಿರುಗಿ) ರೀ, ಅಧ್ಯಕ್ಷರೇ, ಇಲ್ಲಿ ಹವ್ರು ನನಗೆ ಇನ್ ಸಲ್ಟ್ ಮಾಡ್ತಾ ಇದ್ರೆ, ಹಿಲ್ಲಿ ನೀವು ಸುಮ್ಮನೇ ಕುಳಿತಿದ್ದೀರಲ್ರೀ. ಸರಿ ಎನ್ರೀ ಇದು
ಅಧ್ಯಕ್ಷೆ: ಸ್ಟಾಪ್ ಆಲ್ ದೀಸ್ ನಾನ್ ಸೆನ್ಸ್! ರೀ ಮಲ್ಲಿ, ಯಾಕ್ರೀ ವೈಯಕ್ತಿಕವಾಗಿ ಒಬ್ರು ಮೆಂಬರನ್ನು ಇನ್ ಸಲ್ಟ್ ಮಾಡ್ತೀರಿಸುಮ್ನೆ ಸರಿಯಾಗಿ ಸಭೆ ನಡೆಸೋಕೆ ಅವಕಾಶ ಕೊಡ್ರೀ....
ಮಲ್ಲಿ: ಅಲ್ರೀ ರಮಾಮಣಿಯವ್ರೇ, (ಲಲನೆ ಕಡೆ ಕೈ ತೋರಿಸುತ್ತಾ) ಅವ್ರು ಯಾಕೆ ಸಭೇಲಿ ಸೀರೆ ಬಗ್ಗೆ ಸುಳ್ಳು ಹೇಳಬೇಕು? ಸಭೇನಾ ದಾರಿ ತಪ್ಪಿಸ್ತಿದ್ದಾರೆ ಅಂತ ಅವರ ಮೇಲೆ ಅರೋಪ ಹೊರಿಸ್ಬಹುದಲ್ಲ! (ಎಲ್ಲರ ಕಡೆಗೆ ತಿರುಗಿ) ನೀವೆಲ್ಲಾ ಏನ್ ಹೇಳ್ತೀರ?...
ಎಲ್ಲರೂ: ಹೌದು, ಹೌದು!! ಅವರು ಸೀರೆ ಎಲ್ಲಿ ತಗೊಂಡ್ರು ಅಂತ ನಿಜ ಹೇಳ್ಬೇಕು.
ಅಧ್ಯಕ್ಷೆ: ರೀ, ಲಲನಾ ಮಣಿಯವರೇ, ನೀವು ಆ ಸೀರೆಯನ್ನು ಎಲ್ಲಿ ತೆಗೊಂಡ್ರಿ ಅಂತ ನಿಜ ವಿಷಯನಾ ಸಭೆ ಮುಂದೆ ಹೇಳ್ಬಿಡ್ರಿ!! ಇವೆಲ್ಲಾ ರಗಳೆ ಯಾಕೆ??
(ಅಷ್ಟರಲ್ಲಿ ಶ್ರೀಮತಿ ಸಂಶಯಿ, ಲಲನೆಯ ಹತ್ತಿರ ಬಂದು ಸೀರೆಯನ್ನು ಕೂಲಂಕುಶವಾಗಿ ಪರಿಶೀಲಿಸುತ್ತಾ,)
ಸಂಶಯಿ (ಸದಸ್ಯೆ): ಅಯ್ಯೋ, ಈ ಸೀರೆನಾ!! ಇದು ಮೊನ್ನೆ ಆ ಡಬ್ಬಾವಾಲಾ ಇಟ್ಟಮಡು ಚೌಲ್ಟ್ರಿನಲ್ಲಿ ಸೇಲ್ ಹಾಕಿದ್ನಲ್ಲಾ, ಅದ್ರಲ್ಲಿ ಇಟ್ಟಿದ್ದ ೧೦೦ ರೂಪಾಯಿ ಸೀರೆ ಕಣ್ರೀ. ಆ ಡಬ್ಬಾ ಸೇಲ್ ಗೆ ನಾನೂ ಹೋಗಿದ್ದೆ ಕಣ್ರೀ. ಈ ಸೀರೆ ಚೆನ್ನಾಗಿದೆ ಅಲ್ವಾ ಅಂತದ್ದಕ್ಕೆ, ನಮ್ಮೆಜಮಾನ್ರು, "ಅಲ್ವೇ ಜುಜುಬಿ ೧೦೦ ರೂಪಾಯಿ ಸೀರೆ ಯಾಕೇ ನಿಂಗೆ?" ಇನ್ನೊಂದಿನ ಮಲ್ಲೇಶ್ವರಕ್ಕೇ ಹೋಗಿ, ಮೈಸೂರು ಸಿಲ್ಕ್ ಸೀರೆನೇ ತೆಗೆದುಕೊಳ್ಳುವಂತೆ ಅಂದ್ರು. ನಾನು ಇದನ್ನು ಅಲ್ಲೇ ಮುದುರಿ ಬಿಸಾಕಿ ಬಂದಿದ್ದೆ.
(ಎಲ್ಲರೂ ಜೋರಾಗಿ ನಗುವರು)
ಗೋದೂಬಾಯಿ: (ಲಲನೆಗೆ) ಏನೇ ಹುಚ್ಚು ಖೋಡಿ!!. ಎಲ್ಲಾರ್ಗೂ ಪೆಗ್ಗಿ ಬೀಳಿಸ್ದೆಲ್ಲಾ ನಮ್ಮವ್ವ!! ಮಾತೂ ಮನಸೂ ಸಾಫ಼್ ಸೀದಾ ಇರಬೇಕವ್ವ!! ಇಲ್ಲಾಂದ್ರೆ, ಹಿಂಗೇ ಮಾನ ಕಳ್ಕೊಳ್ಳೋದು ನೋಡು!
ಸೌಮ್ಯ: ಅದನ್ಹೇಳ್ರೀ, ಮೊದ್ಲು. ಈ ಲಲನೆ ಕತೆ ಅದೇನೋ.... ಹೇಳ್ತಾರಲ್ಲಾ .....  ಹಾಗಾಯ್ತು.
ಲಲನೆ: ಏನ್ರೀ ಗೋದೂಬಾಯಿ, ನೀವೂ ಹಾಗೇ ಹೇಳ್ತೀರಾ! (ಮುಖ ಮುಚ್ಚಿಕೊಂಡು ಅಳು ದನಿಯಲ್ಲಿ) ಆ ಮಲ್ಲಿ ಮಾತ್ರ ನನಗೆ ಅವಮಾನ ಮಾಡ್ತಾರೇಂದ್ರೆ, ಎಲ್ಲರೂ ಅದನ್ನೇ ಮಾಡ್ತೀರ,... ನಂಗೆ ಈ ಸಭೆನೂ ಬೇಡ, ಏನೂ ಬೇಡ. ನಾನು ಈಗ್ಲೇ ಹೋಗ್ತೀನಿ.... (ಹೊರಡಲು ಅನುವಾಗುವರು)
ಅಧ್ಯಕ್ಷೆ: (ಲಲನೆ ಕೈ ಹಿಡಿದುಕೊಂಡು ಸಮಾಧಾನ ಮಾಡುತ್ತಾ) ಲಲನೆ, ಇಷ್ಟಕ್ಕಲ್ಲಾ ನಾವು ಪಲಾಯನ ಮಾಡಿದರೆ, ಈ ಸಮಾಜ ಎದುರಿಸೋದು ಹ್ಯಾಗೆ? ಬನ್ನಿ ಕುತ್ಗೊಳ್ಳಿ. ಏನೇ ಬಂದ್ರೂ ಧೈರ್ಯದಿಂದ ಎದುರಿಸ್ಬೇಕಪ್ಪ! ಬನ್ನಿ ಕುತ್ಗೊಳ್ಳಿ. ಏನೇ ಬಂದ್ರೂ ಧೈರ್ಯದಿಂದ ಎದುರಿಸ್ಬೇಕಪ್ಪ.!! ನನ್ನೇ ನೋಡಿ, ನನ್ ಮೇಲೆ ಹನ್ನೆರಡು ಸಲ ಅವಿಶ್ವಾಸ ನಿಲುವಳಿ ತಂದ್ರು. ನಾನು ಜಗ್ಗಿದ್ನಾ? ಪ್ರತಿ ಬಾರಿನೂ ಎಲ್ರಿಗೂ ಹೊಸ ಸ್ಯಾರೀ ಕೊಟ್ಟು ಕುರ್ಚಿಗೆ ಭದ್ರವಾಗಿ ಕೂತಿಲ್ವಾ.... ನೀವಿನ್ನೂ ಚಿಕ್ಕವರು. ಕಲಿಯೋದು ಬಹಳ ಇದೆ. (ಲಲನೆಯವರು ಕಣ್ಣು ಉರೆಸಿಕೊಳ್ಳುತ್ತಾ ಕುಳಿತುಕೊಳ್ಳುವರು)
ಅಯ್ಯೋ, ಈ ಸಭೆ ಹಾದಿ ತಪ್ತಾ ಇದೆ. ರೀ ಕಾರ್ಯದರ್ಶಿ ಸೀತಮ್ಮನವರೇ, ಈ ಮೀಟಿಂಗ್ ನ ಉದ್ದೇಶ ಮೊದ್ಲು ಎಲ್ರಿಗೂ ಹೇಳ್ರೀ.
ಸೀತಮ್ಮ: (ಎದ್ದುನಿಂತು) ನೋಡಿ ಮಹಿಳಾಸದಸ್ಯರೇ, .... ಅಲ್ಲಲ್ಲ... ಮಹಿಳೆಯರಲ್ಲ.... ಬರೀ ಸದಸ್ಯರೇ, ಈದಿನದ ಮೀಟಿಂಗ್ ನ ಉದ್ದೇಶ ಏನಪಾ ಅಂದ್ರೆ....
ಗೋದೂಬಾಯಿ: ಏನೇ ನಮ್ಮವ್ವ, ನಾವು ಮಹಿಳೆಯರೇ ಅಲ್ವೇನು?, ನಾವು ಮಹಿಳೆಯಾಗಿದ್ದಕ್ಕೇ ಅಲ್ವೇನು ಗಂಡಸರಾಂಗ ಈ ಮಹಿಳಾ ಸಂಘ ಕಟ್ಟಿದ್ದು. ಎದಿ ಸೆಟಿಸಿ ನಿಂತಿದ್ದು. ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷಿಬಾಯಿ ಇವ್ರೆಲ್ಲಾ ವೀರ ಮಹಿಳೆಯರಾಗಿದ್ದಕ್ಕೇ ಹಂಗೆ ಎಂತೆಂತಹ ಗಂಡ್ಸರಗೋಳ ಮುಂದೆ ಹೋರಾಡಿದ್ದು!! ಇತಿಹಾಸ ಉಳ್ಕಂಡಿದ್ದು!! ನಮ್ಮನ್ನ ನಾವು ಮಹಿಳೆಯರು ಅನ್ನೋಕೆ ಯಾಕವ್ವಾ ನಾಚ್ಕೆ?
ಸೀತಮ್ಮ: (ಅಧ್ಯಕ್ಷರ ಕಡೆಗೆ ತಿರುಗಿ), ಅಧ್ಯಕ್ಷರೇ, ಇದೇನ್ರೀ ಇದು? ಮಹಿಳೆಯರೇ ಅಂದ್ರೂ ವಿರೋಧಿಸ್ತಾರೆ, ಮಹಿಳೆಯರಲ್ಲಾಂದ್ರೂ ಕೊಸರಾಡ್ತಾರೆ. ನಾನೀಗೆ ಹ್ಯಾಗೆ ಹೇಳ್ಲಿ?...
ಅಧ್ಯಕ್ಷೆ: (ಮೇಲೆ ನೋಡಿ ಕೈ ಮುಗಿಯುತ್ತಾ...) ಆ ಭಗವಂತನೇ ಹೇಳ್ಬೇಕು.
ಗೋದೂಬಾಯಿ: ಆ ಭಗವಂತಾನೇ ಯಾಕ್ರೀ ಹೇಳ್ಬೇಕೂ. ಯಾವ್ದಾದ್ರು ಹೆಣ್ಣು ದೇವ್ರು ಸಿಗಂಗಿಲ್ಲೇನು ನಿಮ್ಗೆ?
ಸೌಮ್ಯ: ಅಯ್ಯೋ ರಾಮಾ!! .... ಅಲ್ಲಲ್ಲಾ ಸೀತೇ.... ಇದೊಳ್ಳೇ ಕತೆಯಾಯ್ತಲ್ಲ. ಇಬ್ಬರ ಮಧ್ಯೆ ಅದೇನೋ ಹೇಳ್ತಾರಂತಲ್ಲಾ ಹಾಗಾಯ್ತು.
ಸಂಶಯಿ: (ಅಷ್ಟರಲ್ಲೇ, ಸೀತಮ್ಮನ ಕೈಯನ್ನು ಪರೀಕ್ಷಿಸುತ್ತಾ), ಅಲ್ಲಾ, ಈ ಸೀತಮ್ಮನ ಕೈಗೆ ಯಾವಾಗ ಗಾಯ ಆಯ್ತು? (ಸೀತಮ್ಮನ ಕಿರುಬೆರಳು ಹಿಡಿದು), ಏನ್ರೀ ಸೀತಮ್ಮ, ಏನಾಯ್ತ್ರೀ ನಿಮ್ಮ ಬೆರಳಿಗೆ?
ಲಲನೆ:  ಹಯ್ಯೋ, ಅವರು ಅವರೆಜಮಾನ್ರಿಗೆ ರಾತ್ರಿ ಊಟ ಆದ ಮೇಲೆ, ವೀಳೆಯದೆಲೆ ಮಡಿಚಿ ಕೊಡ್ತಾರಲ್ಲಾ, ಆಗ (ನಾಚಿಕೊಳ್ಳುತ್ತಾ...) ಅವರು ಇವರ್ ಬೆರಳನ್ನು ಕಚ್ಚಿ ಬಿಟ್ಟಿರಬೇಕು... ಹಿ ಹಿ ಹಿ ಹಿ...
(ಎಲ್ಲರೂ ನಗುವರು)
ಗೋದೂಬಾಯಿ: ಬಿಡ್ರೇ ನಮ್ಮವ್ವ!! ಮನ್ಯಾಗಿನ ಮಾತು ಬಯಾಲಾಗೇ ಅಡ್ತೀರಿ?....
ಸಂಶಯಿ: "ಅಯ್ಯೋ!! ಅದ್ ಹೇಗ್ರೀ ಸಾಧ್ಯ? ಅವರ ಯಜಮಾನರ ಬಾಯಲ್ಲಿ ಒಂದೂ ಹಲ್ಲಿಲ್ಲ. ಅದ್ ಹೇಗ್ರೀ ಗಾಯ ಆಗೋ ಹಾಗೆ ಕಚ್ತಾರೆ?
(ಮತ್ತೆ ಎಲ್ಲರೂ ನಗುವರು)
ಅಧ್ಯಕ್ಷೆ: ಸ್ಟಾಪ್ ಇಟ್. ಯಾರು ಯಾರ ಮೇಲೂ ಪರ್ಸನಲ್ಲಾಗಿ ಇನ್ಸಲ್ಟ್ ಮಾಡಬಾರದು. ರೀ ಸೀತಮ್ಮನವರೇ ಮೊದ್ಲು ಸಭೆ ಕರೆದ ವಿಷ್ಯ ಹೇಳ್ರಿ......
ಸೀತಮ್ಮ: ನಾನು ಈ ಸಭೆ ಕರೆದಿರೋ ವಿಶ್ಯಾ ಹೇಳೋಕೆ ಮುಂಚೆ ಸದಸ್ಯರ ಅನುಮಾನ ಪರಿಹರಿಸಿಬಿಡ್ತೀನಿ. ನನ್ನ ಈ ಬೆರಳಿಗೆ ಗಾಯ ಹೇಗಾಯ್ತು ಅಂದರೆ, ನಾನು ಮದುವೆ ಆದಾಗ ತುಂಬಾ ಸಣ್ಣ ಇದ್ನಲ್ಲಾ, ಆಗ ನಮ್ಮ ತವರು ಮನೆಯಿಂದ ೪ ತೊಲ ಚಿನ್ನದ ವಜ್ರದ ಉಂಗುರ ಹಾಕಿಸಿದ್ರು. ಮೊನ್ನೆ, ಅದನ್ನು ಯಾವ ಬೆರಳಿಗೂ ಹಾಕ್ಕೋಳ್ಳೋಕೇ ಆಗ್ದೇ, ಕಿರುಬೆರಳಿಗೆ ಹಾಕ್ಕೊಂಡೆ. ಆದ್ರೆ ತೆಗೆಯೋಕೆ ಆಗ್ದೇ ಗಾಯ ಆಗೋಯ್ತು.
ಸಂಶಯಿ: ಅಂದ್ರೆ, ನೀವು ಮದ್ವೆ ಆದ್ದಾಗ ಉಂಗುರದ ಬೆರಳಿಗೆ ಹಾಕ್ಕೋತಿದ್ದ ಉಂಗುರ ಕಿರುಬೆರಳಿಗೆ ಹಾಕ್ಕೊಳ್ಳೋಕೂ ಆಗದೇ ಇರುವಷ್ಟು ದಪ್ಪ ಆಗ್ಬಿಟ್ಟಿದ್ದೀರಾ?....
(ಎಲ್ಲರೂ ನಗುವರು.... ಸೀತಮ್ಮ ಕೋಪಿಸಿಕೊಂಡು ಕುಳಿತುಕೊಂಡು ಬಿಡುವರು)
ಅಧ್ಯಕ್ಷೆ: ರೀ ಸಂಶಯಿ, ಇನ್ನೊಂದ್ಸಲ ನೀವು ಹೀಗೇ ಬೇರೆಯವ್ರನ್ನು ಆಡ್ಕೋತಾ ಇದ್ರೆ, ನಿಮ್ಮನ್ನಾ ಅನಿವಾರ್ಯವಾಗಿ ಸಭೇ ಇಂದ ಆಚೆ ಕಳಿಸಬೇಕಾಗುತ್ತೆ.
ಸಂಶಯಿ: ಅಯ್ಯೋ, ನಾನೇನು ಮಾಡ್ದೆ? ... ಇರೋ ವಿಷಯಾ ಇರೋ ಹಾಗೇ ಹೇಳ್ದೆ... ಅಷ್ಟೆ. ಹೋಗ್ಲಿ ಬಿಡಿ, ಸುಮ್ನೇ ಇರ್ತೀನಿ.
ಅಧ್ಯಕ್ಷೆ: (ಜೋರಾಗಿ) ರೀ, ಸೀತಮ್ಮನವರೇ, ಸಭೆ ಕರೆದಿರೋ ವಿಶ್ಯ ಹೇಳ್ರೀ..
ಸೀತಮ್ಮ:  ಇವ್ರೆಲ್ಲಾ ಬಿಟ್ರಲ್ಲವೇ ನಾನು ಮಾತಾನಾಡೋದು?.... (ಸದಸ್ಯರನ್ನು ಉದ್ದೇಶಿಸಿ), ನಾವು ಇಲ್ಲಿ ಸಭೆ ಕರೆದಿರೋ ವಿಶ್ಯಾ ಏನಪಾ ಅಂತಂದ್ರೆ......
ಗೋದೂಬಾಯಿ: (ಅಣಕಿಸಿಕೊಳ್ಳುತ್ತಾ..)  ವಿಶ್ಯಾ ಏನಪಾ ಅಂತಂದ್ರೆ......ಅಲ್ಲೇ ನಮ್ಮವ್ವ, ವಿಶ್ಯಾ ಏನಪಾ ಅಂತಂದ್ರೆ......ಅಂತಲೇ ಕುಂತೀಯಲ್ಲ, ಲಗೂನಾ ಅದೇನಂತಾ ವದರವಲ್ಲೀ ಯಾಕೇ?... ಆ ಶಿವ ವಿಷನಾ ಗಂಟಲಲ್ಲೇ ಇಟ್ಕೋಂಡ, ಈಕಿ, ವಿಶ್ಯಾನಾ ಇಟಗೊಂಡು ಕುಂತಾಳಲ್ಲಪ್ಪಾ!!.
ಸೌಮ್ಯ: ಹಾಗೆ ಹೇಳ್ರೀ ಗೋದೂಬಾಯಿ!! ಈ ಕಾರ್ಯದರ್ಶಿ ಕತೆ... ಅದೇನೋ.... ಹೇಳ್ತಾರಲ್ಲಾ ಹಾಗಾಯ್ತು.....
ಮಲ್ಲಿ: (ಸೀತಮ್ಮನವರಿಗೆ) ಹೋಗ್ಲಿ, ವಿಷ್ಯಾ ಏನಂತ, ನೇರವಾಗಿ ಹೇಳಿಬಿಡ್ರೀ ಸೀತಮ್ಮನವರೇ.......
ಶಾಂತಮ್ಮ: ಒಂದ್ನಿಮಿಷ! (ಸೀತಮ್ಮನವರ ಕಡೆ ಬಂದು) ಸೀತಮ್ಮ, ನೆನ್ನೆ ನಿಮ್ಮ ಮಗ ಬಂದು ನಮ್ಮೆನೇಲಿ ಅರಿಶಿನದ ಪುಡಿ ಕೇಳಿದ! ಯಾಕೇ ಮರೀ, ಅಂದಿದಕ್ಕೆ, "ಅಮ್ಮ ಬಾಗಿಲಿಗೆ ಕೈ ಅಡ್ಡ ಇಟ್ಟು ಗಾಯ ಮಾಡ್ ಕೊಂಡುಬಿಟ್ರು. ಮನೇಲಿ ಬೇರೆ ಏನೂ ಮೆಡಿಸಿನ್ ಇಲ್ಲಾ ಅಂತ ಅಮ್ಮ ಅರಿಶಿನದ ಪುಡಿ ತೆಗೆದುಕೊಂಡು ಬಾ ಅಂತಂದ್ರು ಅಂತ ಹೇಳಿ ಅರಿಶಿನದ ಪುಡಿ ತೆಗೊಂಡು ಹೋದ!!  ನೀವು ನೋಡಿದ್ರೆ, ಅದೆನೋ ಉಂಗುರ ಹಾಕ್ಕೊಂಡೆ, ತೆಕ್ಕೊಂಡೆ, ಗಾಯ ಆಯ್ತು ಅಂತೀರಲ್ಲಾ... ಯಾವುದ್ರೀ ನಿಜ?
ಸಂಶಯಿ: ನನ್ಗೆ ಆವಾಗ್ಲೇ ಸಂಶಯ ಬಂದಿತ್ತು. ಸೀತಮ್ಮನ ಮನೇಲಿ ವಜ್ರದ ಉಂಗುರ ಇರೋಕೆ ಸಾಧ್ಯನಾ ಅಂತ!!! (ಅಧ್ಯಕ್ಷರ ಕಡೆ ತಿರುಗಿ) ರೀ, ಆಧ್ಯಕ್ಷರೇ, ಈ ಕಾರ್ಯದರ್ಶಿ ಸೀತಮ್ಮನವರೂ ಸುಳ್ಳಿ ಹೇಳಿ ಸಭೆ ದಿಕ್ಕನ್ನು ತಪ್ಪಿಸ್ತಿದ್ದಾರೆ. ಅವರಿಗೇ ಎಚರಿಕೆ ಕೊಡ್ರೀ...
ಅಧ್ಯಕ್ಷೆ: (ಹಣೆ ಚಚ್ಚಿಕೊಳ್ಳುತ್ತಾ...) ಎಲ್ಲಾ ನನ್ನ ಕರ್ಮ, ರೀ ಸೀತಮ್ಮ, ದಯವಿಟ್ಟು ನಿಮ್ಮ ಸ್ವಂತ ವಿಷಯ ಬಿಟ್ಟು, ಸಭೆ ಕರ್ದಿರೋ ಉದ್ದೇಶ ಹೇಳ್ರೀ....
ಸೀತಮ್ಮ: ನಾನೂ ಅದಕ್ಕೇಂತ್ಲೇ ಆಗ್ಲಿಂದ ಪ್ರಯತ್ನ ಮಾಡ್ತಿದ್ದೀನಿ. ಆದ್ರೆ ಇವ್ರೆಲ್ಲಾ ಸೇರಿ ನನ್ನ ದಾರಿ ತಪ್ಪಿಸ್ತಿದಾರೆ. (ಎಲ್ಲರ ಕಡೆ ತಿರುಗಿ...) ನಾವು ಈ ಸಭೆ ಕರೆದಿರೋ ವಿಷ್ಯಾ ಏನಪಾ ಅಂತಂದ್ರೆ...
ಶಾಂತಮ್ಮ: ವಿಷ್ಯ ಅಂದ ಕೂಡ್ಲೆ ನೆನಪಾಯಿತು. ರಮಾದೇವಿಯವರೇ, ಮೊನ್ನೇ ನಿಮ್ಮ ಎರಡನೇ ಮಗನ ಮನೆಗೆ ಹೋಗಿದ್ರಲ್ಲ, ಏನ್ರೀ ವಿಷ್ಯ?
ಅಧ್ಯಕ್ಷೆ: ಅದೇರೀ, ನಮ್ಮ ಎರಡನೇ ಸೊಸೇದೂ ಸಿಹಿಸುದ್ದಿ ಅಂತಂದ್ರು, ಹೋಗಿದ್ದೆ.
ಶಾಂತಮ್ಮ: ಹೌದೇನ್ರೀ,, ಮತ್ತೆ ನೀವು ನಮಗೆಲ್ಲಾ ಸ್ವೀಟ್ಸ್ ಕೊಡಿಸ್ಬೇಕಪ್ಪಾ!! ಅದ್ಸರಿ, ನಿಮ್ಮ ಮಗ ಸೊಸೆ ಚೆನ್ನಾಗಿದ್ದಾರಾ?...
ಅಧ್ಯಕ್ಷೆ: ಅವಳಿಗೆ ಏನ್ರೀ ಧಾಡಿಮನೆ ಕೆಲ್ಸನೆಲ್ಲಾ ನನ್ನ ಮಗಾನೇ ಮಾಡ್ತಾನೆ. ಏನೋ ಒಂದಿಷ್ಟು ಬೇಯ್ಸಿ ಹಾಕಿದ್ರೆ ಆಯ್ತು. ಈ ಕಾಲ್ದಲ್ಲಿ ಹೆಣ್ ಮಕ್ಕಳಿಗೆ ಗಂಡಾ ಅನ್ನೋ ಗೌರವ ಇರೋದಿಲ್ಲ. ಈ ಹುಡುಗ್ರೋ, ಮೊದ್ಲೇ ಹುಡುಗು ಮುಂಡೇವು! ಬಾಯಿ ತೆಕ್ಕೊಂಡು ಅವ್ರು ಹೇಳಿದ್ದೆಲ್ಲಾ ಕೇಳ್ಕೊಂಡು ಕುಣಿತಾವೆ.
ಲಲನೆ: ರಮಾದೇವಿ ಅವರೇ, ಮೊನ್ನೆ ನಮ್ಮತ್ರ ಮಾತಾಡ್ತಾ, ನಿಮ್ಮ ಮಗಳ ವಿಷ್ಯ ಹೇಳ್ಕೊಂಡು, ನಿಮ್ಮ ಅಳಿಯ ಮನೇಲಿ ತರಕಾರೀನೂ ಹೆಚ್ಕೊಡ್ತಾರೆ. ಎಲ್ಲಾ ಕೆಲ್ಸಕ್ಕೂ, ಹೆಲ್ಪ್ ಮಾಡ್ತಾರೆ. ತುಂಬಾ ಕೋ ಆಪರೇಟಿವ್ ಅಂತ ದೇವ್ರಂತ ಅಳಿಯ ಅಂತಿದ್ರಿ.
ಸಂಶಯಿ: ಹಾಗೇ ಹೇಳಿ!! ಇವ್ರಿಗೆ ಇವ್ರ ಮಗ ಹೆಂಡ್ತಿಗೆ ಸಹಾಯ ಮಾಡಿದ್ರೆ ಹೆಂಡ್ತಿ ದಾಸ!!. ಮಗಳಿಗೆ ಅಳಿಯ ಸಹಾಯ ಮಾಡಿದ್ರೆ, ದೇವ್ರಂತ ಮನುಷ್ಯ. (ಮೂತಿ ತಿರುವರು...)
(ಎಲ್ಲರೂ ಮುಸಿ ಮುಸಿ ನಗುವರು)
ಸೌಮ್ಯ: ಹಾಂ... ಇದೊಂತರಾ ಅತ್ತೆ-ತಾಯಿ ಇಬ್ಬಂದಿತನ ಆಯ್ತಲ್ಲಾ!! ಅದೇನೋ.... ಅಂತರಲ್ಲಾ... ಹಾಗಾಯ್ತು...
ಅಧ್ಯಕ್ಷೆ: ರೀ ಸೌಮ್ಯ, ಸ್ವಲ್ಪ ಸೌಮ್ಯವಾಗಿರೋದನ್ನ ಕಲೀರಿ. ಮಾತಿಗೆ ಮುಂಚೆ "ಅದೇನೋ.... ಅಂತರಲ್ಲಾ... ಹಾಗಾಯ್ತು..." ಅಂತಿರ್ತೀರಲ್ಲಾ!!, ಅದೇನೋ ಅನ್ನೋದೇನೂ??, ಏನಂತಾರೆ?.. ಅಂತ ಒಂದ್ಸಲನೂ ಬಾಯ್ಬಿಟ್ಟು ಹೇಳಲ್ಲ. ಸುಮ್ನೇ ಏನೇನೋ ಮಾತಾಡ್ತಿರ್ತೀರಿ....
ಸೌಮ್ಯ: ಅಯ್ಯೋ ಇದೊಳ್ಳೆ ಕತೆಯಾಯ್ತಲ್ಲಾ!!, ನಾನೇನ್ರೀ ಮಾಡ್ದೆ ನಿಮಗೆ? ಸುಮ್ನೇ ನಂಗೆ ನಾನೇ ಏನಾದ್ರೂ ಹೇಳಿಕೊಂಡ್ರೆ ಯಾಕ್ರೀ ಹೀಗೆ ಕೋಪ ಮಾಡ್ಕೊಳ್ಳುತ್ತೀರ? ಅದೇನೋ... ಅಂತಾರಲ್ಲ... ಹಂಗಾಯ್ತು.... (ಎಲ್ಲರೂ ಹಣೆ ಚಚ್ಚಿಕೊಳ್ಳುವರು).
ಗೋದೂಬಾಯಿ: ಬಿಡ್ರೇ ನಮ್ಮವ್ವ!!!, ವಿಷ್ಯ ಬಿಟ್ಟು ಬೇರೇನೇ ಮಾತಾಡ್ಲಿಕ್ಕೆ ಹತ್ತೀರಿ. ರೀ ಸೀತಮ್ಮ, ಈಗಾದ್ರೂ ಈ ಸಭೆ ಕರ್ದಿರೋ ವಿಷ್ಯಾ ವದರ್ರೀ....
ಅಧ್ಯಕ್ಷೆ: (ಕೂಗಿಕೊಂಡು....) ರ್ರೀ, ಸೀತಮ್ಮ, ಸಭೆ ವಿಷ್ಯ ಹೇಳ್ರೀ.
ಸೀತಮ್ಮ:  (ಸ್ವಗತ) ನನಗಂತೂ ಸಾಕಾಗಿ ಹೋಯ್ತು!! (ಸೀರೆ ಸೆರಗಿನಲ್ಲಿ ಗಾಳಿ ಹಾಕಿಕೊಳ್ಳುತ್ತಾ..) (ಪ್ರಕಾಶ..) ಎಲ್ರೂ ಇಲ್ಕೇಳಿ, ಈ ಸಭೆ ಕರೆದಿರೋ ವಿಷ್ಯ ಏನಪಾ ಅಂತಂದ್ರೆ, .......
(ಅಷ್ಟರಲ್ಲಿ, ಒಳಗಿನಿಂದ ಒಂದು ಗಂಡಸಿನ ಧ್ವನಿ ಕೇಳುತ್ತದೆ:  "ಅಮ್ಮಾವ್ರೇ ಉಪ್ಪಿಟ್ಟು, ಕಾಫ಼ಿ ರೆಡಿ. ಬಿಸಿ ಆರೋದರೊಳಗೆ ತಿನ್ನಿ ಬನ್ನಿ...)
(ತಕ್ಷಣ ಅಧ್ಯಕ್ಷೆ ಮತ್ತು ಕಾರ್ಯದರ್ಶಿ ಬಿಟ್ಟು ಎಲ್ಲರೂ, "ಬರ್ರೀ, ಬರ್ರೀ, ಉಪ್ಪಿಟ್ಟು ತಣ್ಣಗಾದರೆ ತಿನ್ನೋಕಾಗುವುದಿಲ್ಲ," ಎಂದು ಹೇಳಿಕೊಳ್ಳುತ್ತಾ ಹೊರಟುಬಿಡುವರು.
ಸೀತಮ್ಮ: ಆಧ್ಯಕ್ಷರೇ, ಏನಿದು?, ನಾವು ಕರೆದಿರುವ ಸಭೆ ವಿಷಯಾನೇ ಚರ್ಚೆ ಆಗ್ಲಿಲ್ಲವಲ್ರೀ....
ಅಧ್ಯಕ್ಷೆ: ಹಾಳಾಗಿ ಹೋಗ್ಲಿ ಬಿಡ್ರೀ, ನೀವೇ ವಂದನಾರ್ಪಣೆ ಮಾಡಿಬಿಡಿ. ನನಗೇ ಉಪ್ಪಿಟ್ಟು ಅಂದ್ರೆ ಆಸೆ. ಇವರೆಲ್ಲಾ ಸೇರಿಕೊಂಡರೆ ನಮಗೆ ಏನೂ ಉಳಿಸುವುದಿಲ್ಲ. ನಾನು ಈಗಲೇ ಹೊರಟೆ. (ಹೊರಡುವರು)..
ಸೀತಮ್ಮ: (ಸಭಿಕರ ಕಡೆ ತಿರುಗಿ), ಈ ಸಭೆ ಕರೆದಿರೋ ವಿಷ್ಯಾ ಏನೆಂದರೆ,....... ಆಯ್ಯಯ್ಯೋ, ನಾನ್ಯಾಕೆ ನಿಮಗೆ ಹೇಳುತ್ತಿದ್ದೇನೆ? ನೀವೇನು ನಮ್ಮ ಸಂಘದ ಸದಸ್ಯರಲ್ವಲ್ಲಾ!..
(ಒಳಗಿನಿಂದಅಧ್ಯಕ್ಷೆ: ಸೀತಮ್ಮ, ಈ ಬಕಾಸುರ ವಂಶದವರೆಲ್ಲಾ ಆಗಲೇ ಉಪ್ಪಿಟ್ಟು ಖಾಲಿ ಮಾಡಿದ್ದಾರಲ್ರೀ.
ಸೀತಮ್ಮ: ಅಯ್ಯೋ ಇವರ ಮನೆ ಹಾಳಾಗ.... ನಾನೂ ಬಂದೆ ತಡೀರ್ರೀ....(ಒಳಗೆ ಓಡುವರು.)

ತೆರೆ ಬೀಳುವುದು.

 






No comments:

Post a Comment