My Wife looks Pretty with Kanakambara Flower decorated plait. She is my inspiration after my parents. I Love Kanakambara because of her. So is the name of this blog.
I shall showcase here my views, articles, photos and share some good funny videos.
ಈಗ ನಡೆಯುತ್ತಿರುವ ಕಾವೇರಿ ಸಂಬಂಧದ ವಿವಾದ, ಅಶಾಂತಿ,
ಇವುಗಳಿಗೆ ನಮ್ಮಲ್ಲೇ ಪರಿಹಾರವಿದೆ. ಈಗ ನಮ್ಮಲ್ಲಿ ಇರುವ ನೀರಿನಲ್ಲೇ ಸಧ್ಯಕ್ಕೆ ಮಾಡುತ್ತಿರುವ
ಸಾಗುವಳಿಯ ಹತ್ತರಿಂದ ಹದಿನೈದು ಪಟ್ಟು ಹೆಚ್ಚು ಸಾಗುವಳಿ ಮಾಡಲು ಅವಕಾಶವಿದೆ. ಇಸ್ರೇಲ್
ಹನಿನೀರಾವರಿ ತಂತ್ರದಲ್ಲಿ, ಅತಿ ಕಡಿಮೆ ನೀರಿನಲ್ಲಿ, ನಮ್ಮ ದೇಶದಲ್ಲೇ ಅನೇಕ ಕಡೆ, ಅನೇಕ ಕೃಷಿ
ವಿಶ್ವವಿದ್ಯಾಲಯಗಳಲ್ಲಿ, ಅನೇಕ ಪ್ರಗತಿಪರರ ಹೊಲ ಗದ್ದೆಗಳಲ್ಲಿ, ವಿವಿಧ ರೀತಿಯ ಬೆಳೆಯನ್ನು
ಯಶಸ್ವಿಯಾಗಿ ಬಿಳೆದ ನಿದರ್ಶನಗಳು ಅನೇಕ. ಅತಿ ಕಡಿಮೆ ನೀರಿನ, ಅಂದರೆ ಗದ್ದೆಯಲ್ಲಿ ನೀರನ್ನು
ನಿಲ್ಲಿಸದೇ, ಬೆಳೆಯಬಹುದಾದ ಭತ್ತ ಮತ್ತು ಕಬ್ಬು ತಳಿಗಳೂ ರೂಪುಗೊಂಡಿವೆ.
ಗದ್ದೆಯಲ್ಲಿ ನೀರು ನಿಲ್ಲಿಸುವ ರೀತಿಯಲ್ಲಿ
ಅಗತ್ಯಕ್ಕಿಂತ ಹೆಚ್ಚಿನ ನೀರು ಪೋಲಾಗುವುದನ್ನು ಕಂಡಿದ್ದೇವೆ. ನೀರು ಹೆಚ್ಚಾಗಿ ದೊರಕುವ
ಪ್ರದೇಶಗಳಲ್ಲಿ, ನೀರಿನ ಬಳಕೆಯಲ್ಲಿ ನಿರ್ಲಕ್ಷ್ಯ ತೋರುವ ರೈತ ಬಂಧುಗಳು, ತಮ್ಮ ಪರಂಪರಾಗತವಾದ
ನೀರು ನಿಲ್ಲಿಸುವ ಗದ್ದೆಗಳ ಬದಲಾಗಿ, ಕಡಿಮೆ ನೀರಿನಲ್ಲಿ ಅದೇ ಬೆಳೆಗಳನ್ನು ಬೆಳೆಯುವ ತಂತ್ರಕ್ಕೆ
ಮೊರೆ ಹೋದಲ್ಲಿ, ಇನ್ನಿತರ ರೈತರಿಗೂ ಅಗತ್ಯ ನೀರು ದೊರಕುವುದರಲ್ಲಿ ಸಂಶಯವಿಲ್ಲ. ಸರ್ಕಾರ ಮತ್ತು
ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳು, ಈ ನಿಟ್ಟಿನಲ್ಲಿ ಕೆಲಸ ಮಾಡಿದಲ್ಲಿ, ಹಾಗೂ ರೈತ
ಭಾಂದವರಿಗೆ ಸೂಕ್ತ ತಳಿಗಳ ಬಗ್ಗೆ ಅರಿವು ಮೂಡಿಸುವುದರ ಮೂಲಕ, ಹಾಗೂ ಸೂಕ್ತ ಕಾನೂನನ್ನು ರೂಪಿಸಿ,
ಯಶಸ್ವಿಯಾಗಿ ಜಾರಿಗೊಳಿಸುವುದರ ಮೂಲಕ ನೀರಿನ ಕೊರತೆಯ ಅಶಾಂತಿಯನ್ನು ಶಾಶ್ವತವಾಗಿ
ಕೊನೆಗೊಳ್ಳಿಸಬಹುದಾಗಿದೆ.
ಎಮ್. ಎಸ್. ಅರ್. ಎಸ್. ಎ. ಎಸ್. ಗೆ ವಿದಾಯ ಹೇಳಿದಾಗ ಗೀಚಿದ ಭಾವನೆಗಳು. ಸಾಧಿಸಿದ ಬಗ್ಗೆ ಸಮಾಧಾನ, ಇನ್ನೂ ಸಾಧಿಸಬಹುದಾಗಿತ್ತೆಂಬ ಭಾವನೆ, ಬಿಡುವಾಗ ನಿರ್ಭಾವವಾಗಿರಬೇಕೆಂಬ ಒತ್ತಾಯದ ನಿರ್ಧಾರ ಈ ಸಾಲುಗಳಲ್ಲಿವೆ.
ಬೆಂಗಳೂರಿನಿಂದ ಸುಮಾರು 4,200 ಕಿ.ಮೀ. ದೂರದಲ್ಲಿ, ಹಿಂದೂಮಹಾಸಾಗರದ ಮಧ್ಯೆ, ದಕ್ಷಿಣ ಆಫ಼್ರಿಕಾ ಮತ್ತು
ಮಡಗಾಸ್ಕರ್ ದ್ವೀಪದ ಬಳಿ ಇರುವ ಮಾರಿಷಸ್ ನಲ್ಲಿ ಶಿವನ ಸ್ತುತಿ ’ಭಂ ಭಂ
ಭೋಲೆ’ ಕೇಳಿ ಆಶ್ಚರ್ಯ ಆಯಿತು. ದೂರದ
ದಿಲ್ಲಿಯಲ್ಲಿ ರಾಗಿಮುದ್ದೆ ಸೊಪ್ಪು ಸಾರು ಕಂಡಾಗ ಆದಂತಹ ಅನುಭವವಾಯಿತು. ಮಾರಿಷಸ್ ನಲ್ಲಿರುವ ಜೆ.ಎಸ್.ಎಸ್.
ಇಂಜಿನಿಯರಿಂಗ್ ಕಾಲೇಜಿಗೆ ಪರೀಕ್ಷಿಕನಾಗಿ ವಿ.ಟಿ.ಯು.ನಿಂದ ನಿಯೋಜಿತಗೊಂಡು ಈ ಸುಂದರ ದ್ವೀಪಕ್ಕೆ ಭೇಟಿಕೊಟ್ಟಾಗ
ನನಗಾದ ಕುತೂಹಲ ಮಿಶ್ರಿತ ಆಶ್ಚರ್ಯ ಇದು.
ಈ ಮಾರಿಷಸ್ ಎಂಬ ದ್ವೀಪ ಪ್ರಪಂಚದ ಭೂಪಟದಲ್ಲಿ
ದಕ್ಷಿಣ ಆಫ಼್ರಿಕ ದೇಶದ ಪೂರ್ವದಿಕ್ಕಿನಲ್ಲಿ ಹಿಂದೂಮಹಾಸಾಗರದಲ್ಲಿ ಸಣ್ಣ ಚುಕ್ಕೆಯಾಗಿ
ಕಾಣುತ್ತದೆ. ೬೦ ಕಿ.ಮೀ ಉದ್ದ, ೪೦ ಕಿ.ಮೀ. ಅಗಲ ಇರುವ ಈ ಸಣ್ಣ
ದ್ವೀಪದಲ್ಲಿ ಏನುಂಟು ಏನಿಲ್ಲ. ಸುಮಾರು ಏಳೆಂಟು ಮಳೆಗಾಲದ ನದಿಗಳು,
ಅವುಗಳಿಗೆ ಕಟ್ಟಿದ ಸಣ್ಣ ಅಣೆಕಟ್ಟುಗಳು ಮತ್ತು ಅವುಗಳ ಪುಟ್ಟ ಪುಟ್ಟ
ಜಲಾಗಾರಗಳು, , ಸುಪ್ರಸಿದ್ಧ ಸುಂದರ ಜಲಪಾತಗಳು, ಸಣ್ಣವೇ ಆದರೂ ದಟ್ಟವಾದ ಕಾಡುಗಳು, ಅಲ್ಲಲ್ಲೇ ಧುತ್ತೆಂದು
ನಿಲ್ಲುವ ಅತಿ ಎತ್ತರದ ಬೆಟ್ಟಗುಡ್ಡಗಳ ಸಾಲು, ಎಲ್ಲಕ್ಕಿಂತ ಹೆಚ್ಚಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆವ, ಪ್ರಶಾಂತವಾದ ಸುಂದರವಾದ ಸಮುದ್ರ ತೀರಗಳು.
ಈ ದ್ವೀಪ ಹುಟ್ಟಿದ್ದೇ ಸಮುದ್ರದೊಳಗಿನ ಅಗ್ನಿಪರ್ವತವೊಂದರ ಫ಼ೂತ್ಕಾರದಿಂದ, ಹಾಗಾಗೇ ಇಡೀ ದ್ವೀಪದಲ್ಲಿ ಬೆಟ್ಟಗಳ ಸಾಲೇ ಇದೆ. ಅಲ್ಲದೇ,
ನೆಲವೆಲ್ಲಾ ಈಗಲೂ ಲಾವಾರಸದ ಕಲ್ಲುಗಳಿಂದಲೇ ಕೂಡಿದೆ. ಇಂತಹ
ಅಗ್ನಿಪರ್ವತಗಳು ತಣ್ಣಗಾಗಿ, ಬಾಯಿಯ ಕುಳಿ ತೆರೆದುಕೊಂಡು ಮಿಲಿಯಾಂತರ ವರ್ಷಗಳ ಹಿಂದಿನ
ರೌದ್ರಾವತಾರದ ಸಾಕ್ಷಿಯಾಗಿ ಕುಳಿತಿರುತ್ತವೆ. ರಾಜ್ಯ, ಕೋಶ ಕಳೆದುಕೊಂಡು ಗತ ವೈಭವವನ್ನು ಮೆಲುಕು ಹಾಕುತ್ತಾ ಕಾಲ ತಳ್ಳುವ ರಾಜವಂಶದವರ ಸ್ಥಿತಿ
ಇವಕ್ಕೆ. ಮಾರಿಷಸ್ ದ್ವೀಪದಲ್ಲಿರುವ ಇಂತಹ ಎರಡು ತಾಣಗಳಲ್ಲಿ ಒಂದಾದ ’ದಿ ಗ್ರ್ಯಾಂಡ್ ಬೇಸಿನ್’ ಎಂದು ಕರೆಸಿಕೊಳ್ಳುವ, ಲಕ್ಷಾಂತರ ವರ್ಷಗಳ ಒಂದು ಹಳೆಯ
ಅಗ್ನಿಪರ್ವತವೊಂದರ ತಲೆಯ ಮೇಲೆ ದೊಡ್ಡಕುಳಿ ಬಿದ್ದು ತಣ್ಣಗಾಗಿ, ಅದರಲ್ಲಿ
ನೀರು ತುಂಬಿ ಸುತ್ತಲೂ ಕಾಡು ಬೆಳೆದು ಸುಂದರವಾದ ಪ್ರಕೃತಿ ರೂಪುಗೊಂಡಿದೆ. ಈ ಗ್ರ್ಯಾಂಡ್ ಬೇಸಿನ್ ಈಗ ಅಲ್ಲಿ ’ಗಂಗಾ ತಾಲಾಬ್’ ಎಂದು ಪ್ರಸಿದ್ಧವಾಗಿ, ಅಲ್ಲಿನ ಹಿಂದೂಗಳ ಶ್ರದ್ಧೆಯ
ಕೇಂದ್ರವಾಗಿದೆ. ಇದರಲ್ಲಿ ಕುಳಿಯು ಅನಿಯಮಿತ ಅಕಾರದಲ್ಲಿ ಸುಮಾರು ೧೨೦೦ ಮೀ. ಉದ್ದ,
೫೦೦ ಮೀ. ಅಗಲ ಇದ್ದು, ಶುದ್ಧ ನೀರಿನಿಂದ ತುಂಬಿದೆ. ಈ ಕುಳಿಯಲ್ಲೇ ಪ್ರಾಕೃತಿಕವಾದ ನೀರಿನ ಬುಗ್ಗೆಗಳಿವೆ ಎಂದು ನಂಬಲಾಗಿದೆ. ಅಲ್ಲದೇ, ಸುತ್ತಲಿನ ಗುಡ್ಡ ಬೆಟ್ಟಗಳಿಂದ ಹರಿದ ಬಂದ ನೀರು
ಶೇಖರಣೆಯಾಗಿದ್ದು, ಯಾವ
ವರ್ಷದಲ್ಲೂ ಈ ಸುಂದರ ಕೊಳ ಬತ್ತಿದ್ದಿಲ್ಲವಂತೆ. ಈ ಸರೋವರದ ಮಧ್ಯೆ ಆಳ
ಸುಮಾರು 60 ಅಡಿ ಆಳ ಇದೆ ಅಂದಾಜಿಸಲಾಗಿದೆ. ಭಾರತದಿಂದ ಬ್ರಿಟಿಶರು
ಕರೆತಂದ ಭಾರತೀಯರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಹಿಂದೂಗಳು ಈ ಪ್ರದೇಶದಲ್ಲಿ ಶಿವನ
ಗಂಗೆಯನ್ನು ಕಲ್ಪಿಸಿಕೊಂಡು, ಇದಕ್ಕೆ ’ಗಂಗಾ
ತಾಲಾಬ್’ ಎಂದು ಹೆಸರಿಸಿ, ಇದರ ಸುತ್ತಲೂ
ಅನೇಕ ದೇವಾಲಯಗಳನ್ನು ಕಟ್ಟಿದ್ದಾರೆ.
ಇಲ್ಲಿನ ಇತ್ತೀಚಿನ ಆಕರ್ಷಣೆ ಎಂದರೆ, 2007ರಲ್ಲಿ
ಸ್ತಾಪಿತವಾದ, ಕಂಚಿನ ಬಣ್ಣದ, 108 ಅಡಿ
ಎತ್ತರದ ಶಿವನ ಪ್ರತಿಮೆ. ಎಡಗೈನಲ್ಲಿ ತ್ರಿಶೂಲ ಹಿಡಿದ ಶಿವ ಎರಡೂ
ಕೈಗಳಲ್ಲಿ ದಪ್ಪ ಕಂಕಣದ ಬಳೆಗಳನ್ನು ಧರಿಸಿ, ಬಲಗೈನಲ್ಲಿ ಭಕ್ತರನ್ನು
ಆಶೀರ್ವಾದಿಸುತ್ತಾ, ನಸುನಗುವ ಮುದ್ರೆಯಲ್ಲಿ ನಿಂತಿದ್ದಾನೆ. ಜಟಾಧಾರಿ ಶಿವನಿಗೆ ತಲೆಯಲ್ಲಿ ಗಂಗೆ ಮತ್ತು ಚೌತಿ ಚಂದ್ರನ ಜೊತೆಯಿದೆ. ಕೆಳಗೆ ನಿಂತಿರುವರಿಗೆ ಶಿವನ ಜಟೆಯಲ್ಲಿರುವ ಗಂಗೆ ಕಾಣುವುದಿಲ್ಲ. ಹಾಗಾಗೇ ಈ ಶಿವ ಗಂಗೆಯನ್ನಡಗಿಸಿಟ್ಟುಕೊಂಡು ಕೆಳಗೆ ನಿಂತಿರುವವರಿಗೆ ಕಳ್ಳ ನಗು
ಬೀರುತ್ತಿದ್ದಾನೇನೋ. ಕುತ್ತಿಗೆಯ
ಸುತ್ತ ದೊಡ್ಡ ನಾಗರವನ್ನು ಸುತ್ತಿಕೊಂಡಿದ್ದು, ಎರಡೂ ತೋಳುಗಳಲ್ಲಿ
ಸಣ್ಣ ನಾಗರಹಾವುಗಳನ್ನು ಧರಿಸಿರುವ ಈ ಬೃಹತ್ ಶಿವನ ಪ್ರತಿಮೆಯಲ್ಲಿ ಜೀವಂತಿಕೆ ಇದೆ. ಕೊರಳಲ್ಲಿ ಧರಿಸಿರಿವ ರುದ್ರಾಕ್ಷಿಮಾಲೆ, ಮೈಮೇಲೆ ಇರುವ
ಮೂರೆಳೆ ಜನಿವಾರ ಎಲ್ಲವನ್ನೂ ಸ್ಪಷ್ಟವಾಗಿ ಕಾಣುವಂತೆ ವಿಗ್ರಹವನ್ನು ರೂಪಿಸಿದ್ದಾರೆ. ಇಡೀ ಪ್ರತಿಮೆಯನ್ನು ಮಾನವ ಅಂಗಾಂಗ ಶಾಸ್ತ್ರಗನುಗುಣವಾಗಿ ರೂಪಿಸಿರುವುದು ಕಂಡು
ಬರುತ್ತದೆ. ಬಲಿಷ್ಟ ದೇಹರಚನೆ, ಕೈ ಮೇಲಿನ
ಉಬ್ಬಿದ ರಕ್ತನಾಳ, ಸೊಂಟಕ್ಕೆ ಸುತ್ತಿಕೊಂಡ ವಸ್ತ್ರದ ಸುಕ್ಕುಗಳು,
ಆಶೀರ್ವದಿಸುವ ಕೈಯಲ್ಲಿ ಸಹಜವೆಂತೆ ತುಸುವೇ ಬಾಗಿದ ಕಿರುಬೆರಳು ಇವೆಲ್ಲವೂ ಈ
ಮೂರ್ತಿಯನ್ನು ರೂಪಿಸಿದ ಕಲಾವಿದರ ಚಾಕಚಕ್ಯತೆಯನ್ನು ತೋರುತ್ತದೆ. ಮೈಗಂಟಿದ
ವಸ್ತ್ರ ಸಹ ಮೈನ ಓರೆಕೋರೆಗಳನ್ನು ತೋರುವಂತೆ ಅಲ್ಲಲ್ಲಿ ಬಾಗಿ, ಸಹಜತೆಯನ್ನೇ
ಮೆರೆದಿದೆ. ಈ ಮೂರ್ತಿಯ ಸೌಂದರ್ಯವನ್ನು ಅಸ್ವಾದಿಸುತ್ತಾ ನಿಂತರೆ ಸಮಯ
ಸರಿದಿದ್ದೇ ತಿಳಿಯುವುದಿಲ್ಲ. ಹಾಗಾಗೇ ಇಲ್ಲಿ ಬರುವ ಪ್ರವಾಸಿಗರೆಲ್ಲರೂ
ದೃಷ್ಟಿಗೆ ನಿಲುಕದ ಶಿವನ ಮುಖ ನೋಡಲು ಒಮ್ಮೆ ಕಣ್ಣು ಕಿರಿದು ಮಾಡಿ, ಮತ್ತೊಮ್ಮೆ
ಕಣ್ಣಗಲಿಸಿ, ಅವನ ಸೌಂದರ್ಯವನ್ನು ತಮ್ಮ ಪುಟ್ಟ ಕ್ಯಾಮೆರಾಗಳಲ್ಲಿ
ಬಂಧಿಸಿಡಲು ಪ್ರಯತ್ನ ಮಾಡುತ್ತಾ, ಅವನ ಕಾಲ ಬುಡದಲ್ಲೇ ತಮ್ಮ ಫ಼ೊಟೋ
ತೆಗೆಸಿಕೊಳ್ಳುತ್ತಾ ಪ್ರಪಂಚ ಮರೆಯುತ್ತಾರೆ.
ಈ ಬೃಹತ್ ಶಿವನನ್ನು ಮನತಣಿಯೆ ನೋಡಿ ಮುಂದೆ ಕಾಲಿಟ್ಟರೆ, ಸಿಗುವುದೇ
ಗಂಗಾ ತಾಲಾಬ್ ಎಂದು ಕರೆಸಿಕೊಳ್ಳುವ ಕೊಳದ ಒಂದು ಭಾಗ ಮತ್ತು ಅದರ ಸುತ್ತಲೂ ಇರುವ ದೇವ ಮೂರ್ತಿಗಳ
ಸಮುಚ್ಛಯ. ಇದರಲ್ಲಿ
ಎರಡು ಶಿವಲಿಂಗ ದೇವಾಲಯಗಳು, ದುರ್ಗಾದೇವಿ ದೇವಾಲಯ, ನವಗ್ರಹ ಮತ್ತು ಅಲ್ಲೇ ಸಣ್ಣದಾದ ಗುಡ್ಡದ ಮೇಲೆ ಇರುವ ಆಂಜನೇಯ ದೇವಾಲಯ ಪ್ರಮುಖವಾದವು.
ಎಷ್ಟೆಂದರೂ ಸಾವಿರ ಸಂಖ್ಯೆಯ ದೇವರುಗಳನ್ನು ಸೃಷ್ಟಿಸಿದವರು ನಾವಲ್ಲವೇ?
ಹಾಗಾಗಿ, ಈ ದೇವಾಲಯಗಳ ಆವರಣದಲ್ಲಿ ಶಿರಡಿ ಸಾಯಿಬಾಬ,
ಗಂಗಾಮಾತಾ, ಗಾಯತ್ರಿ ದೇವಿ ಮತ್ತಿತರ ದೇವ ದೇವತೆಗಳ
ಆಳೆತ್ತರದ ಪ್ರತಿಮೆಗಳನ್ನೂ ಪ್ರತಿಷ್ಟಾಪಿಸಿದ್ದಾರೆ. ಎಲ್ಲಾ
ದೇವಾಲಯಗಳಲ್ಲೂ ಮತ್ತು ಆವರಣದಲ್ಲಿರುವ ದೇವರ ಮೂರ್ತಿಗಳಿಗೂ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.
ಪೂಜೆ ಮಾಡುವ ಪುರೋಹಿತರೆಲ್ಲರೂ ಉತ್ತರ ಭಾರತದಿಂದ ಬಂದವರು. ಹಾಗಾಗೇ, ಮೈ ಮೇಲೆ ಜುಬ್ಬಾ ಧರಿಸಿ, ಸಂಸ್ಕೃತ ಶ್ಲೋಕಗಳನ್ನು ಪಠಿಸುವುದಲ್ಲದೇ, ಹಿಂದೀ
ಭಜನೆಗಳನ್ನೂ ಹಾಡುತ್ತಾರೆ. ಅವರ ಜೊತೆಗೆ, ಅಲ್ಲಿಗೆ
ಬಂದ ಮಾರಿಷಸ್ ನ ಹಿಂದೂ ಭಕ್ತರೂ ದನಿಗೂಡಿಸುತ್ತಾರೆ. ಶಿವಲಿಂಗಗಳಿಗೆ
ತಮ್ಮ ಕೈನಿಂದಲೇ ನೀರ ಅಭಿಷೇಕ ಮಾಡಿ ಭಾರತದಿಂದ ಸಾವಿರಾರು ಕಿ.ಮೀ.
ದೂರದಲ್ಲಿದ್ದೂ ದ್ವೈವತ್ವದ ಧನ್ಯತೆ ಪಡೆಯುತ್ತಾರೆ. ಅಲ್ಲೇ
ಗುಡ್ಡದ ಮೇಲಿರುವ ಹನುಮಾನ್ ದೇವಾಲಯದಿಂದ ಸಂಪೂರ್ಣ ’ಗಂಗಾ ತಾಲಾಬ್’
ಕಾಣುತ್ತದೆ. ಕೊಳ ಮತ್ತು ಅಲ್ಲಿಂದ ಕಾಣುವ ಸುತ್ತಲಿನ
ಬೆಟ್ಟಗಳ ದಟ್ಟ ಹಸುರಿನ ಗಿಡಮರಗಳಿಂದ ತುಂಬಿದ ಮಾರಿಷಸ್ ನ ಸುಂದರ ಪ್ರಕೃತಿ ಮೈ ತುಂಬಿಕೊಂಡ
ಬಸುರಿ ಹೆಣ್ಣಿನಂತೆ ಕಂಗೊಳಿಸುತ್ತದೆ. ಹನುಮಾನ್ ದೇವಾಲಯದ ಬಳಿ ತಲೆ
ಮೇಲೆ ಜುಟ್ಟಿರುವ ವಿಶೇಷ ಕೋತಿ ಪ್ರಭೇದವೊಂದು ಭಕ್ತರು ಅರ್ಪಿಸುವ ಬಾಳೆಹಣ್ಣಿಗೆ ಕಾದು
ಕುಳಿತಿರುತ್ತದೆ. ಇವು ಕೊಂಚ ರೇಗಿದರೆ, ಥೇಟ್
ಭಾರತದ ಮಂಗಗಳಂತೇ ಹಲ್ಲು ಕಿರಿದು ಗುರುಗುಟ್ಟಿ ಹೆದರಿಸಲೂ ಸೈ.
ಇನ್ನೊಂದು ವಿಶೇಷವೆಂದರೆ, ಸ್ವಲ್ಪ ದೊಡ್ದದಾಗಿರುವ ಶಿವಲಿಂಗ ದೇವಾಲಯಕ್ಕೆ ಹಿಂದುಗಳಲ್ಲದ ಭಕ್ತರೂ ಪೂಜೆ ಸಲ್ಲಿಸಲು
ಬರುತ್ತಾರೆ. ಶಿವ ಪೂಜೆ ನಡೆಯುತ್ತಿರುವಾಗ, ಕೈಯಲ್ಲಿ
ಹೂ ಗುಚ್ಛ ಹಿಡಿದು, ನೆಲದ ಮೇಲೆ ಕಾಲು ಮಡಿಚಿ ಕುಳಿತುಕೊಳ್ಳಲು ಅಭ್ಯಾಸ
ಇಲ್ಲದಿರುವುದರಿಂದ, ಶಿವಲಿಂಗದ ಕಡೆಗೇ ಕಾಲು ಚಾಚಿ ಕುಳಿತು, ಸಾಂಗವಾಗಿ ನಡೆಯುವ ಪೂಜಾ ವಿಧಾನವನ್ನು ಬೆರಗುಗಣ್ಣಿನಿಂದ ನೋಡುತ್ತಾ, ಮುಗ್ಧವಾಗಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ! ಮಾರಿಷಸ್ ನಲ್ಲಿ ಪರಿಚಯವಾದ, ಅಲ್ಲಿನ ಸ್ಟೇಟ್ ಬ್ಯಾಂಕ್ ಆಫ಼್ ಇಂಡಿಯಾದ ಉನ್ನತ ಅಧಿಕಾರಿಗಳಾದ, ಕನ್ನಡಿಗರಾದ ಶ್ರೀ ಹಿರೇಮಠ್ ಮತ್ತು ಶ್ರೀ ನಾಯಕ್ ರವರು ಅಲ್ಲಿನ ಮಹಾ ಶಿವರಾತ್ರಿ ಪೂಜೆ
ಬಗ್ಗೆ ವಿವರಿಸಿದರು. ಅವರು ವಿವರಿಸಿದಂತೆ, ಮಹಾ
ಶಿವರಾತ್ರಿಯ ಮುಂಚೆ ಮತ್ತು ನಂತರ ಸುಮಾರು ಒಂದು ವಾರ ಈ ಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ
ಕಿ.ಮೀ.ಗಟ್ಟಳೆ ನಡೆದು ಬರುತ್ತಾರಂತೆ.
ಹಾಗೆ ಬರುವಾಗ ದಾರಿಯಲ್ಲೆಲ್ಲಾ ಹಿಂದೂಗಳಲ್ಲದೇ ಇತರರೂ ಕೂಡಾ ಶಿಬಿರಗಳನ್ನು
ತೆರೆದು ಭಕ್ತರಿಗೆ ಉಚಿತ ಪ್ರಸಾದ, ಹಣ್ಣು ಹಂಪಲಿನ ಸೇವೆ
ಮಾಡುತ್ತಾರಂತೆ. ಇದನ್ನು ಅಲ್ಲಿನ ಜೆ.ಎಸ್.ಎಸ್.ನಲ್ಲಿ ಉಪನ್ಯಾಸಕರಾಗಿರುವ ಪರಮೇಶಾಚಾರಿ, ರವಿ, ಮತ್ತಿತರರು, ತಾವು ಅಲ್ಲಿಗೆ
ಸುಮಾರು ೨೦ ಕಿ.ಮೀ. ನಡೆದು ಹೋದಾಗ ಅಲ್ಲಿನ
ಜನ ಸಲ್ಲಿಸಿದ ಉಚಿತ ಸೇವೆಯನ್ನು ನೆನೆದು ಅನುಮೋದಿಸಿದರು. ನಮ್ಮಲ್ಲಿ
ಅಮರನಾಥ ಯಾತ್ರೆ ಮಾಡಿದಾಗ ಕಾಶ್ಮೀರದ ಸ್ಥಳೀಯ ಮುಸ್ಲಿಮರೂ ಈ ರೀತಿಯ ಸೇವೆ ಸಲ್ಲಿಸುವುದನ್ನು
ಕೇಳಿದ್ದೆ. ದೇವರ ನೆಪದಲ್ಲಿ ಜನ ಗಡಿ ಮೆರೆತು ಮಾನವೀಯತೆಯನ್ನು ತೋರುತ್ತಾರೆಂಬುದು ಮತ್ತೊಮ್ಮೆ ಸಾಬೀತಾಯಿತಷ್ಟೆ!
ಎರಡು ವಾರಗಳಲ್ಲಿ ಜೆ.ಎಸ್.ಎಸ್.ನವರ ಆತಥ್ಯ ಸವಿದು, ಈ ಸುಂದರ ದ್ವೀಪದ ಸೌಂದರ್ಯ ಮೆಲಕು
ಹಾಕುತ್ತಾ ಮತ್ತೊಮ್ಮೆ ಇಲ್ಲಿಗೆ ಸಂಸಾರ ಸಮೇತ ಬರುವ ಆಶಯದಿಂದ ವಿಮಾನ ಹತ್ತಿದವನಿಗೆ, ಮಾರಿಷಸ್ ಏರ್ ಲೈನ್ ನ ಗಗನ ಸಖಿ ಊಟದ ತಟ್ಟೆ ಹಿಡಿದು ’ನಗಪ್ಪ’
ಎಂದಳು. ಮೊದಲಿಗೆ ಅರ್ಥವಾಗದಿದ್ದರೂ ನಂತರ
ಪರಿಸ್ಥಿತಿಯ ಅರಿವಾಗಿ ನಸು ನಗೆ ನಕ್ಕೆ. ಪಾಸ್ ಪೋರ್ಟ್ ನಲ್ಲಿ ನನ್ನ
ಪೂರ್ತಿ ಹೆಸರು ’ಸೋಮಲಾಪುರ ನಾಗಪ್ಪ ಶ್ರೀಧರ’ ಎಂದಿದೆ. ಸೋಮಲಾಪುರದ ನಾಗಪ್ಪ ನಮ್ಮ ತಂದೆ. ನನ್ನ ಹೆಸರು ಎಸ್.ಎನ್. ಶ್ರೀಧರ.
ಮೊದಲೇ ಹಿಂದೂ ಊಟ ಬೇಕೆಂದು ವಿಮಾನದ ಟಿಕೆಟ್ ಬುಕ್ ಮಾಡಿದಾಗಲೇ ಬರೆಸಿದ್ದೆ.
ಹಾಗಾಗಿ, ಗಗನಸಖಿ ಆ ’ಸ್ಪೆಷಲ್
ಊಟ’ದ ತಟ್ಟೆ ಹಿಡಿದುಕೊಂಡು ಬಂದು ನನ್ನನ್ನು ’ನಗಪ್ಪ’ ಎಂದು ಕರೆದಿದ್ದಳು. ನಾನು
ನಗುತ್ತಲೇ ಊಟ ಸ್ವೀಕರಿಸಿ, ಸಿಹಿನಿದ್ದೆಯಲ್ಲಿದ್ದಾಗಲೇ, ಬೆಂಗಳೂರು ತಲುಪಿದ್ದೆ. ಹೌದು ಮತ್ತೊಮ್ಮೆ ಮಾರಿಷಸ್ ಗೆ
ಹೋಗುತ್ತೇನೆ, ಸಂಸಾರ ಸಮೇತನಾಗಿ. ತಾವೂ
ಬರುತ್ತೀರಲ್ಲವೇ?
19ನೇ ಮಾರ್ಚ್ 2007, ಸರ್ವಜಿತು ಉಗಾದಿಯ ಉದಯರಾಗ, ಬೆಳಿಗ್ಗೆ 5.45 ಗಂಟೆ. ಇನ್ನೂ ಚುಮು ಚುಮು ಬೆಳಕು. ಸೂರ್ಯೋದಯ 6.05 ಕ್ಕೆ
ಎಂದಿದ್ದರೂ, ಸೂರ್ಯಗ್ರಹಣದ ಛಾಯಾಗ್ರಹಣದ ಹುಚ್ಚಿನಲ್ಲಿ ಅಷ್ಟೊತ್ತಿಗೆಲ್ಲಾ ಮನೆ ಮಾಳಿಗೆ ಹತ್ತಿ
ಕೂತಿದ್ದೆ. ಕ್ಯಾಮೆರಾ ಮತ್ತು ಜೊತೆಗಿನ ಪರಿಕರಗಳನ್ನೆಲ್ಲಾ ಜೋಡಿಸಿಟ್ಟುಕೊಂಡು ಇನ್ನೂ
ಸೂರ್ಯೋದಯವಾಗಲಿಲ್ಲವಲ್ಲಾ ಎಂದು ಕಾತುರ ಪಡುತ್ತಾ ಕೆಳಗಿನ ಬೀದಿಯತ್ತ ಕಣ್ಣು ಹಾಯಿಸಿದೆ.
ಬೀದಿಯಲ್ಲಿ ಒಂದೇ ಒಂದು ಮಾನವ ಜಂತುವಿನ ಸುಳಿವೂ ಇಲ್ಲ. ಹಿಂದಿನ ದಿನ ರಾತ್ರಿಯೇ ಸಂಪ್ರದಾಯವಾದೀ
ಜನರೆಲ್ಲಾ ತಮ್ಮ ತಮ್ಮ ರಾಶಿಗೆ ಸಂಬಂಧಪಟ್ಟಂತೆ ಪೂಜೆಗೆ ದೇವಸ್ತಾನಗಳಲ್ಲಿ ಪೂಜೆಗೆ ಮುಂಗಡ
ಬುಕಿಂಗ್ ಮಾಡಿ, ಮನೆ ಬಾಗಿಲು ಕಿಟಕಿ ಜಡಿದು, ಧರ್ಬೆ ತುಂಡುಗಳನ್ನು ನೀರಿನಲ್ಲಿ,
ಪಾತ್ರೆಗಳಲ್ಲಿ, ಹಾಸಿಗೆಗಳಲ್ಲಿ ಹಾಕಿ ಅಘೋಷಿತ ಬಂದ್ ಆಚರಿಸುತ್ತಿದ್ದರು. ಮುಂಜಾನೆ ಆರು
ಗಂಟೆಯಾದರೂ ನಾಯಿಗಳನ್ನು ಹಿಡಿದುಕೊಂಡು ಬಂದು ಬೇರೆಯವರ ಮನೆ ಮುಂದೆ ಗಲೀಜು ಮಾಡಿಸುವ ಜನರ
ದರ್ಶನವೂ ಇಲ್ಲ. ಹಾಗೇ ಓಡಾಡಿಕೊಂಡಿದ್ದ ಬೀದಿ ನಾಯಿಗಳನ್ನೂ ಕಾರ್ಪೋರೇಶನ್ನಿನವರು ಈ ಮೊದಲೇ
ತುರುಬಿಕೊಂಡು ಹೋಗಿದ್ದರು. ಒಟ್ಟಿನಲ್ಲಿ ಎಲ್ಲವೂ ಭಣ, ಭಣ.
ಆರು ಗಂಟೆ ಐದು ನಿಮಿಷಕ್ಕೆ ಹೊಂಬೆಳಗು. ಜಗವೆಲ್ಲಾ ತೊಯ್ದ ಸೂರ್ಯನ
ದರ್ಶನ, ದೂರದ ಅಪಾರ್ಟ್ ಮೆಂಟಿನ ಹಿಂದೆ ಅಗೋಚರ. ನಿಂತಲ್ಲೇ ಚಡಪಡಿಕೆ. ಸೂರ್ಯ ಅಪಾರ್ಟಮೆಂಟ್ ಮೇಲೇರಿ
ಬರಷ್ಟರಲ್ಲಿ ಪಾರ್ಶ್ವಗ್ರಹಣದ ಬಹುಭಾಗವನ್ನು ತಪ್ಪೀಸಿಕೊಂಡೆನೆಂಬ ಅತಂಕ. ಅಗೋ ಬಂದ, ಜಗದ ನಾಯಕ
ಸೂರಪ್ಪ, ತನ್ನ ತಲೆಯನ್ನು ಓರೆ ಮಾಡಿಕೊಂಡು ಅಪಾರ್ಟಮೆಂಟ್ ಮೇಲೇರಿದ. ಅಷ್ಟರಲ್ಲೇ ಪಾರ್ಶ್ವಗ್ರಹಣ
ಶುರುವಾಗಿತ್ತು. ಮಾಧ್ಯಮದವೆರೆದುರು ಅರೆಬರೆ ಮುಖ ಮುಚ್ಚಿಕೊಳ್ಳುವ ಗಣ್ಯ ವ್ಯಕ್ತಿಗಳ ಅಪರಾಧಿ ಪುತ್ರರೆ
ರೀತಿಯಲ್ಲಿ ತುಸುವೇ ತನ್ನಿರುವನ್ನು ತೋರುತ್ತಾ, ತುಸುವೇ ಮರೆಮಾಚುತ್ತಾ, ಮೇಲೇರಿ ಬಂದ. ಇಂತಹ
ಸಂಧರ್ಭಕ್ಕೆಂದೇ ತರಿಸಿಕೊಂಡಿದ್ದ ವಿಶೇಷ ಕಪ್ಪು ಫಿಲಂನ ಮೂಲಕ ಆತನನ್ನು ನೋಡಿದೆ. ನಾಚಿಕೆಯಿಂದ
ಕೆಂಪಾಗಿದ್ದ ಸೂರ್ಯನ ಬಲತಲೆಯ ಭಾಗ ಚಂದ್ರನಿಂದ ಮರೆಯಾಗಿತ್ತು.
ಅದೇ ಫಿಲಂನ್ನು ಕ್ಯಾಮೆರಾಲೆನ್ಸ್ ಮುಂದೆ
ಒತ್ತಿ ಹಿಡಿದು ಕ್ಯಾಮೆರಾದ ಅಪರ್ಚರ್, ಎಕ್ಸ್ ಪೋಶರ್ ಟೈಮ್, ಫೋಕಲ್ ಲೆಂಗ್ತ್ ಗಳನ್ನು ಸೂಕ್ತವಾಗಿ
ಬದಲಾಯಿಸುತ್ತಾ ಚಕಚಕನೆ ಸೂರ್ಯನ ಬಿಂಬಗಳನ್ನು ಬಾಚಿಕೊಳ್ಳತೊಡಗಿದೆ. ಡಿಜಿಟಲ್ ಕ್ಯಾಮೆರಾ ಆದ್ದರಿಂದ
ಫೋಟೋದ ಫಿಲಂ ರೋಲ್ ಮತ್ತು ಅದರ ಸಂಸ್ಕರಣೆ ವೆಚ್ಚದ ತಲೆನೋವು ಇರಲಿಲ್ಲ. ಸುಮಾರು ಮೂವತ್ತರಿಂದ
ನಲ್ವತ್ತು ಫೋಟೋಗಳ ಭಂಡಾರವನ್ನೇ ತುಂಬಿಕೊಂಡೆ. ಅಷ್ಟರಲ್ಲೆ, ಮಗನ ಮತ್ತು ಮಡದಿಯ ಆಗಮನ. ಅವರ ಪ್ರಶ್ನೆಗಳಿಗೆ
ಉತ್ತರಿಸುತ್ತಾ, ಅವರಿಗೂ ಸೂರ್ಯನನ್ನು ಫಿಲಂ ಮೂಲಕ ತೋರಿಸುತ್ತಾ ನನ್ನ ಛಾಯಾಗ್ರಹಣವನ್ನೂ ಮುಂದುವರೆಸಿದೆ.
ಈ ಮಧ್ಯೆ ನನ್ನ ಮಡದಿ ತಂದಿದ್ದ ನನ್ನ ಬೆಳಗಿನ ಪೇಯ, ನಿಂಬೆಹಣ್ಣಿನ ಹುಳಿ ಹಿಂಡಿದ ಬೆಚ್ಚಗಿನ
ನೀರನ್ನೂ ಗುಟುಕಿಸುತ್ತಿದ್ದೆ. ಮೊದಲ ಕಪ್ಪನ್ನು ಸೂರ್ಯನಿಗೇ ಎತ್ತಿ ತೋರಿ ಚೀರ್ಸ್ ಹೇಳಿ ಗಟಗಟ
ಕುಡಿದೆ. ಸೂರ್ಯ ಬೆವರು ಒರಸಿಕೊಂಡು ನಿಟ್ಟುಸಿರು ಬಿಟ್ಟಂತಾಯ್ತು. ಅಷ್ಟರಲ್ಲಿ, ಆಗಸದಲ್ಲಿ
ಚಂದ್ರ ಸೂರ್ಯನ ಮೇಲ್ಬಾಗದಲ್ಲಿ ಸವಾರಿ ಮಾಡುತ್ತಾ, ಬಲಗಡೆ ಅಂಚಿನಲ್ಲೇ ಓಡುತ್ತಾ ಕೊನೆಗೆ
ಗಡಿಯಾರದ 9ರ ಅಂಕೆಯ ಜಾಗದಲ್ಲಿ ನಿರ್ಗಮಿಸಿ ಗ್ರಹಣದ ತನ್ನ ಕೆಲಸ ಮುಗಿಸಿದ. ಸೂರ್ಯ ಕಳಂಕದ
ಕಲೆ ತೊಳೆದುಕೊಂಡು ಹೂ ನಗೆ ಬೀರಿ, ’ನನ್ನ ಕೆಲಸ ಇನ್ನೂ ಇದೆ, ಅಪ್ಪಾ..’ ಎನ್ನುತ್ತಾ ಹೊರಟ.
ಸೂರ್ಯನ ಮೊಗದಲ್ಲೀಗ ಗಣಿ ಲಂಚದ ಆಪಾದನೆಯನ್ನು ಕೊಡವಿಕೊಂಡ ಕುಮಾರಸ್ವಾಮಿಗಳ ನಿರಾತಂಕ ಕಳೆ.
ಕೊನೆಗೂ ಕುರ್ಚಿ ಗಳಿಸಿದ ಯಡಿಯೂರಪ್ಪನವರ ವಿಭೂತಿ ಬಳೆದ ಅರಳಿದ ಮೊಗದ ಮಿಂಚು ನಗೆ.
ನನ್ನ ಕೆಲಸವೂ ಮುಗಿದಿತ್ತು. ಪಕ್ಕದ
ಮನೆಯವರು ಪಂಚಾಂಗ ನೋಡಿಕೊಳ್ಳುತ್ತಾ, “ಗ್ರಹಣ ಬಿಟ್ಟಿತೂ,... ಬೇಗ, ಬೇಗ ನೀರನ್ನು ಚೆಲ್ಲಿ ....”
ಎನ್ನುತ್ತಾ ಚುರುಕಾದರು. ನಾಯಿಗಳ ಯಜಮಾನರು ಒಬ್ಬೊಬ್ಬರಾಗಿ ತಮ್ಮ ನಾಯಿಯ ಹೊಟ್ಟೆಯ ಒತ್ತಡ ಕಡಿಮೆ
ಮಾಡಲು ಯಾರ ಮನೆ ಮುಂದಿನ ಅಂಗಳ ಚೆನ್ನಾಗಿದೆ ಎನ್ನುತ್ತಾ ಸರ್ವೆ ಮಾಡುತ್ತಾ ಹೊರಟರು. ಅಷ್ಟರಲ್ಲಿ
ಎಲ್ಲರ ಮನೆ ಮುಂದೂ ನೀರು ಚೆಲ್ಲುವ , ರಂಗೋಲೆ ಹಾಕುವ ಕಾರ್ಯಕ್ರಮ ಶುರುವಾಗಿದ್ದರಿಂದ ನಾಯಿಗಳ ಚೈನನ್ನು
ಬಲವಾಗಿ ಎಳೆದುಕೊಂಡು ಹೊರಟಿದ್ದರು. ನನ್ನ ಕ್ಯಾಮೆರಾ ಸ್ಟಾಂಡನ್ನು ತೆಗೆದು ಒಳಗೆ ಬಂದು,
ಕ್ಯಾಮೆರಾವನ್ನು ಲ್ಯಾಪ್ ಟಾಪ್ಗೆ ಜೋಡಿಸಿ, ಸೂಕ್ತ ಫೋಟೋಗಳನ್ನು ಆರಿಸಿಕೊಳ್ಳುತ್ತಾ ಕುಳಿತೆ.
ಅಷ್ಟರಲ್ಲಿ ನನ್ನ ಜೀವನದ ನಲವತ್ತು ವರ್ಷಗಳ ಸಂಗಾತಿ ಮನೆ ಅಂಗಳ ತಲುಪಿದ ಸದ್ದಾಯಿತು. ಮನೆ
ಪೇಪರಿನವನು ಹಾಕಿದ ಪ್ರಜಾವಾಣಿಯನ್ನು ಬಾಚಿ ತಂದು ತೊಡೆ ಮೇಲಿಟ್ಟುಕೊಂಡು ಅರೆಮನಸ್ಸಿನಲ್ಲಿ
ಲ್ಯಾಪ್ ಟಾಪಿನಲ್ಲಿ ಕೆಲಸ ಮಾಡತೊಡಗಿದೆ. ಮಡದಿ ಬಂದು “ಸವತಿಯನ್ನು ಬೆಳಿಗ್ಗೆನೇ ತೊಡೆ
ಮೇಲೇರಿಸಿಕೊಂಡರಾ! ಇನ್ನು ಓದು ಮುಗಿಯುವವರೆಗೆ ಯಾರ ಮಾತೂ ನಿಮಗೆ ಕೇಳಿಸೋಲ್ಲ” ಎನ್ನುತ್ತಾ ಕಾಫಿ
ಬಟ್ಟಲನ್ನು ಕಿಕ್ಕಿ ಹೋದಳು. ಅಲ್ಲೇ ಠಿಕಾಣಿ ಹೂಡಿದ್ದ ಮಗರಾಯ, “ಅಪ್ಪಾ, ಗ್ರಹಣದ ಸಮಯದಲ್ಲಿ ಏನೂ
ತಿನ್ನಬಾರದಂತೆ, ಕುಡಿಯಬಾರದಂತೆ. ಆದರೂ ನೀನ್ಯಾಕೆ ಆ ನಿಂಬೆ ನೀರು ಕುಡಿದೆ?” ಎಂದು ತನ್ನ ಕಾಫಿ
ಕಪ್ ಕೈಗೆತ್ತಿಕೊಂಡ. ತಕ್ಷಣ ಡಾ.ಎಚ್. ನರಸಿಂಹಯ್ಯನವರು ನೆನೆಪಾದರು. ಹೀಗೇ, ಗ್ರಹಣದ ಒಂದು ದಿನ
ಮಟ ಮಟ ಮಧ್ಯಾನ್ಹ ರಸ್ತೆ ಮಧ್ಯೆ ತಟ್ಟೆ ಹಿಡಿದು ಊಟ ಮಾಡಿ ಜೀರ್ಣಿಸಿಕೊಂಡಿದ್ದನ್ನು ತಮ್ಮ
’ಹೋರಾಟದ ಹಾದಿ’ಯಲ್ಲಿ ದಾಖಲಿಸಿದ್ದರು. ಅದನ್ನೇ ಮಗನಿಗೆ ತಿಳಿಸಿದೆ. ಮಡದಿ, “ಸಾಕು ಬನ್ರೀ,
ಮುಂದಿನದ್ದನ್ನು ನೋಡಿ...” ಎನ್ನುತ್ತಾ ಬೆಚ್ಚಗೆ ಕಾಯಿಸಿದ ಎಣ್ಣೆಯನ್ನು ಬಟ್ಟಲೊಳಗೆ ಹಾಕಿಕೊಂಡು
ತಂದಳು. ವರ್ಷಕ್ಕೊಂದು ಬಾರಿಯಾದರೂ ಸಿಗುವ ಮಡದಿಯ ಕೈಯಿನ ಎಣ್ಣೆ ನೀರಿನ ಸ್ನಾನದ ಸೇವೆಯ
ಸುಖವನ್ನು ನೆನೆಯುತ್ತಾ ಲ್ಯಾಪ್ ಟಾಪ್ ಮುಚ್ಚಿಟ್ಟು, ಛಾಯಾಗ್ರಹಣಾಯಾಣಕ್ಕೆ ಮಂಗಳ ಹಾಡಿ ಎದ್ದೆ.
ಈ ಪ್ರಹಸನ ತಮಾಷೆಗಾಗಿ ಬರೆದದ್ದು. ಇದು ಅನೇಕ ಕಡೆ ಪ್ರಯೋಗಗೊಂಡು ಜನರನ್ನು ನಗೆಗಡಲಲ್ಲಿ ತೇಲಿಸಿದೆ. ಮೂರು ಮಹಿಳಾ ಸಂಘಟನೆಗಳು, ಯಶಸ್ವಿ ಪ್ರಯೋಗ ಮಾಡಿವೆ. ಚಂದನ ದೂರದರ್ಶನ ವಾಹಿನಿಯಲ್ಲೂ ಪ್ರಸಾರವಾಗಿದೆ.
ಈ ನಾಟಕ ಪ್ರಯೋಗ ಮಾಡಬಯಸುವವರು ಲೇಖಕರಿಂದ ಅನುಮತಿ ಪಡೆಯಬೇಕಾದ್ದು ಸಹಜ ಧರ್ಮ.
ಈ ನಾಟಕದ ಬರಹದ ಕೊನೆಯಲ್ಲಿ ಒಂದು ಕಾಲೇಜಿನಲ್ಲಿ ಮಹಿಳಾ ಉಪನ್ಯಾಸಕರು ನಡೆಸಿಕೊಟ್ಟ ಪ್ರದರ್ಶನದ ವಿಡಿಯೋ ಕೂಡ ಇದೆ.
ನಾಟಕ
ಮೀಟಿಂಗೋ, ತಲೆ ಈಟಿಂಗೋ
ರಚನೆ: ಡಾ|| ಎಸ್. ಎನ್. ಶ್ರೀಧರ
ಪಾತ್ರವರ್ಗ:
೧. ರಮಾಮಣಿ: ಮಹಿಳಾಮಂಡಳಿಯ ಅಧ್ಯಕ್ಷರು, ಸುಮಾರು
೪೦-೪೫ ವರ್ಷ
೨. ಸೀತಮ್ಮ: ಮಹಿಳಾಮಂಡಳಿಯ ಕಾರ್ಯದರ್ಶಿ, ಸುಮಾರು ೩೫-೪೦ ವರ್ಷ
೩. ಶಾಂತಮ್ಮ: ಸದಸ್ಯೆ, ಸುಮಾರು ೩೦ ವರ್ಷ
೪. ಸೌಮ್ಯ: ಸದಸ್ಯೆ, ಸುಮಾರು ೩೦ ವರ್ಷ
೫. ಗೋದೂಬಾಯಿ: ಸದಸ್ಯೆ, ಉತ್ತರ ಕರ್ನಾಟಕದವರು,
ಸುಮಾರು ೩೫ ವರ್ಷ
೬. ಲಲನೆ: ಸದಸ್ಯೆ, ಅವಿವಾಹಿತೆ, ಸುಮಾರು ೨೦ ವರ್ಷ
೭. ಮಲ್ಲಿ: ಸದಸ್ಯೆ, ಸುಮಾರು ೩೦ ವರ್ಷ
೮. ಸಂಶಯಿ: ಸದಸ್ಯೆ, ಸುಮಾರು ೩೦ ವರ್ಷ
ದೃಶ್ಯ ೧
(ಮಹಿಳಾ ಸಮಾಜದ ಸಭೆ. ಕುರ್ಚಿಗಳನ್ನು
ಅರ್ಧ ಚಂದ್ರಾಕೃತಿಯಲ್ಲಿ ಹಾಕಿದ್ದಾರೆ. ಅಧ್ಯಕ್ಷರು ಮಧ್ಯೆ ಕುಳಿತಿದ್ದಾರೆ.
ಅವರ ಅಕ್ಕಪಕ್ಕ ಕುಳಿತ ಮಹಿಳಾ ಮಣಿಗಳು ಗುಜು ಗುಜು ಮಾತಾಡುತಿದ್ದಾರೆ.)
ರಮಾಮಣಿ (ಅಧ್ಯಕ್ಷೆ): (ಎದ್ದುನಿಂತು) ಮಾನ್ಯ ಸದಸ್ಯರೇ, ದಯವಿಟ್ಟು ಶಾಂತರಾಗಿ! ಈಗ ಸಭೆ ಆರಂಬಿಸೋಣ. ರೀ, ಕಾರ್ಯದರ್ಶಿ ಸೀತಮ್ಮನವರೇ, ಈ ಸಭೆ
ಕರೆದಿರುವ ವಿಷಯ ಹೇಳ್ರೀ. (ಕುಳಿತುಕೊಳ್ಳುವರು)
ಅಧ್ಯಕ್ಷೆ: (ಮಧ್ಯೆ ಪ್ರವೇಶಿಸಿ) ಹೌದು ಹೌದು! ಸಭೆ ಆರಂಭಕ್ಕೆ ಮುಂಚೇನೇ ಶಾಂತಿ ಕದಡ್ತೀರಲ್ರೀ...... (ಶಾಂತಮ್ಮನ
ಕಡೆ ತಿರುಗಿ) ರೀ ಶಾಂತಮ್ಮ, ನೀವು ಕುತ್ಗೊಳ್ರೀ. (ಸೀತಮ್ಮನ ಕಡೆ ತಿರುಗಿ) ಕಾರ್ಯದರ್ಶಿ ಸೀತಮ್ಮನವರೇ, ನೀವು ಸುಮ್ಮನೇ "ಸದಸ್ಯರೇ" ಅಂಥೇಳಿ ಮಾತನ್ನು ಶುರು ಮಾಡಿ. (ಶಾಂತಮ್ಮ ಕುಳಿತುಕೊಳ್ಳುವರು. ಸೀತಮ್ಮ ತಮ್ಮ ಕೈಲಿದ್ದ ಪೇಪರ್
ಹಿಡಿದು ಓದಲು ಅನುವಾಗುವರು). (ಸ್ವಗತ) ಅಬ್ಬಬ್ಬಾ!
ಈ ಸಭೆ ನಡೆಸಿ ಮುಗ್ಸೋ ಹೊತ್ತಿಗೆ ನನ್ಗೆ ಬಿ.ಪಿ.
ಬಂದ್ ಬಿಡುತ್ತೆ. ಎಲ್ಲಾ ಈ ಸೀತಮ್ಮನಿಂದಲೇ...
(ಹೀಗೆ ಹೇಳುತ್ತಾ ಕುರ್ಚಿ ಮೇಲೆ ಕುಳಿತಿಕೊಳ್ಳಲು ಹೋಗುವರು)
ಸೀತಮ್ಮ: (ಅಧ್ಯಕ್ಷರ ಕಡೆ ತಿರುಗಿ)
ಏನ್ರೀ, ಅಧ್ಯಕ್ಷೆ ರಮಾಮಣಿಯವರೇ, ಈಗ ಗಲಾಟೆ ನಾನು ಶುರು ಮಾಡಿದ್ನೇ?.. ಹಾಗಂತ ನೀವೂ ಹೇಳ್ತೀರಾ!!
(ಕಿವಿ ಮುಚ್ಚಿಕೊಳ್ಳುತ್ತಾ) ಶಾಂತಂ ಪಾಪಂ! ಶಾಂತಂ ಪಾಪಂ!
ಲಲನೆ: (ಒಯ್ಯಾರದಿಂದ ಓಲಾಡುತ್ತಾ)
ಹಯ್ಯೋ, ಹಲ್ರೀ ಶಾಂತಮ್ಮ! ಅವ್ರು
ಹೇಳಿದ್ದು ’ಶಾಂತಂ ಪಾಪಂ!’ ಅಂತ. ಶಾಂತಮ್ಮ ಪಾಪಮ್ಮಾ ಅಲ್ಲಾರೀ. (ಎನ್ನುತ್ತಾ ಎಲ್ಲರಿಗೂ ಕಾಣುವಂತೆ
ತಮ್ಮ ಸೀರೆ ಸೆರಗು ಬೀಸುವರು)
ಪಕ್ಕದಲ್ಲೇ ಕುಳಿತಿರುವ ಸೌಮ್ಯ: (ಸೀರೆ ತಮ್ಮ ಕೈಯಲ್ಲಿ ಹಿಡಿದು ನೋಡುತ್ತಾ..) ಈ ಸೀರೆ
ನೋಡಿದ್ರೆ, ಅದೇನೋ ಹೇಳ್ತಾರಲ್ಲಾ... ಹಾಗಿದೆಯಲ್ರೀ!...
ಲಲನೆಯವರೇ, ಎಲ್ರೀ ತೆಗೊಂಡಿದ್ದು ಈ ಸೀರೆ!!
ಲಲನೆ: (ಇನ್ನೂ ವೈಯಾರ ಮಾಡುತ್ತಾ)
ಹ್ಹಿದಾ! ಹಿದನ್ನ ನನ್ನ ವುಡ್ ಬೀ ಅಮೇರಿಕಾದಿಂದ ತಂದ್ರು.
ಹಲ್ಲಿ ಹಿವನ್ನ ಅಮೇರಿಕಾ ಪ್ರಸಿದೆಂಟ್ ಫ಼್ಯಾಮಿಲಿಗೇ ಅಂತಾನೇ ತಯಾರಿಸ್ತಾರಂತೆ.
ಆದ್ರೆ, ನನ್ನ ವುಡ್ ಬೀ ಅಮೆರಿಕಾದಲ್ಲಿ ಪ್ರಸಿಡೆಂಟ್ ಗೆ
ತೊಂಬಾ ಕ್ಲೋಸ್ ಅಲ್ವಾ! ಹಾಗಾಗಿ ಅ ಪ್ರಸಿಡೆಂಟ್ ಒಬಾಮಾ ಅವರೇ
"ಈ ಸೀರೆ ನನ್ನ ವೈಫ಼್ ಗಿಂತ ನಿಮ್ಮ ’ಫ಼ಿಯಾನ್ಸಿ’ಗೇ ಚೆನ್ನಾಗಿ ಹೊಂದುತ್ತೇಂತ ಪ್ರಸೆಂಟ್ ಮಾಡಿದ್ರಂತೆ! ನೋಡಿ,
ಎಷ್ಟು ಬುಶಿ ಬುಶಿಯಾಗಿದೆ ಅಲ್ವಾ! ಒಬಾಮಾ ಕೋದಲಿನ ತರಾನೇ..
ಗೋದೂಬಾಯಿ:ಅಬ್ಬಬ್ಬಾ! ಈ ಸೀರಿ ಎಂತ ಚಂದ ಕಾಣ್ತತದಲ್ಲ!
ರಂಭಿ ಹಂಗಿದ್ದೀಯಲ್ಲೇ ನಮ್ಮವ್ವಾ! .... (ಲಲನೆಗೆ ಕೈ
ನೀವಾಳಿಸಿ ತಮ್ಮ ತಲೆಗೆ ನೆಟಿಗೆ ಮುರಿದುಕೊಳ್ಳುವರು)
ಮಲ್ಲಿ (ಸದಸ್ಯೆ): (ಲಲನೆಯ ಹತ್ತಿರ ಬಂದು ಸೀರೆ ಪರೀಕ್ಷೆ ಮಾಡುತ್ತಾ...) ರೀ.. ಲಲನೆ, ಕುತ್ಗೊಳ್ರೀ....
ಬಿಡಬೇಡ್ರೀ ರೈಲು! ನಿಮ್ಮ ರೈಲಿಗೆ ಕಂಬೀನೇ ಬೇಡಾ!!
ಅಮೇರಿಕಾ ಅಧ್ಯಕ್ಷ್ಯರ ಹೆಂಡತಿ ಸೀರೆ ಉಡ್ತಾರೇನ್ರೀ? ಒಬಾಮ
ಹೆಂಡತಿ ಉಟ್ಟುಕೊಳ್ಳೋದು, ಮೊಣಕೈ ಉದ್ದ ಇರೋ ತುಂಡು ಲಂಗ!! ಸೀರೆ ಉಟ್ಟುಕೋತಾರಂತೆ, ಸೀರೆ!! ಅಮೇರಿಕಾ
ಪ್ರಸಿಡೆಂಟ್ ವೈಫ಼್ ಗಿಂತ ಇವರಿಗೇ ಚೆನ್ನಾಗಿ ಹೊಂದುತ್ತೇ ಅಂದರಂತೆ..... ಏನು ಒಬಾಮ ನಿಮ್ಮ ಚಿಕ್ಕಪ್ಪಾನಾ? ನಿಮ್ಮನ್ನಾ ತಮ್ಮ ತೊಡೆ ಮೇಲೆ
ಇಟ್ಟುಕೊಂಡು ಸಾಕಿದಾರಾ! ಬೆಂಗಳೂರಲ್ಲೇ ಇಟ್ಟಮಡು ಬಿಟ್ಟು ಹೋಗಿಲ್ಲಾ!
ಅಮೇರಿಕಾ ಅಂತೆ, ಅಮೇರಿಕಾ!!
ಲಲನೆ: (ಕೋಪದಿಂದ ಕಾಲನ್ನು ನೆಲಕ್ಕೇ
ಗುದ್ದಿ, ಮಲ್ಲಿ ಕಡೆಗೆ ತಿರುಗಿ) ಇದು ಹತಿಯಾಯ್ತು.
ವೈಯಕ್ತಿಕ ನಿಂದನೆ ಯಾರಿಗೂ ಮಾಡ್ಬಾರ್ದೂ ಅಂತ ಹೋದ ಮೀಟಿಂಗ್ ನಲ್ಲೇ, ರೆಸಲ್ಯೂಷನ್ ತೆಗೆದುಕೊಂಡಿರಲಿಲ್ವ! ಅದನ್ನೇ ವೈಯೋಲೆಟ್ ಮಾಡ್ತೀರಲ್ರೀ....
(ಅಧ್ಯಕ್ಷರ ಕಡೆಗೆ ತಿರುಗಿ) ರೀ, ಅಧ್ಯಕ್ಷರೇ, ಇಲ್ಲಿ ಹವ್ರು ನನಗೆ ಇನ್ ಸಲ್ಟ್ ಮಾಡ್ತಾ ಇದ್ರೆ,
ಹಿಲ್ಲಿ ನೀವು ಸುಮ್ಮನೇ ಕುಳಿತಿದ್ದೀರಲ್ರೀ. ಸರಿ ಎನ್ರೀ
ಇದು?
ಅಧ್ಯಕ್ಷೆ:ಸ್ಟಾಪ್ ಆಲ್ ದೀಸ್ ನಾನ್ ಸೆನ್ಸ್! ರೀ ಮಲ್ಲಿ,
ಯಾಕ್ರೀ ವೈಯಕ್ತಿಕವಾಗಿ ಒಬ್ರು ಮೆಂಬರನ್ನು ಇನ್ ಸಲ್ಟ್ ಮಾಡ್ತೀರಿ? ಸುಮ್ನೆ ಸರಿಯಾಗಿ ಸಭೆ ನಡೆಸೋಕೆ ಅವಕಾಶ
ಕೊಡ್ರೀ....
ಮಲ್ಲಿ:ಅಲ್ರೀ ರಮಾಮಣಿಯವ್ರೇ,
(ಲಲನೆ ಕಡೆ ಕೈ ತೋರಿಸುತ್ತಾ) ಅವ್ರು ಯಾಕೆ ಸಭೇಲಿ ಸೀರೆ
ಬಗ್ಗೆ ಸುಳ್ಳು ಹೇಳಬೇಕು? ಸಭೇನಾ ದಾರಿ ತಪ್ಪಿಸ್ತಿದ್ದಾರೆ ಅಂತ ಅವರ ಮೇಲೆ
ಅರೋಪ ಹೊರಿಸ್ಬಹುದಲ್ಲ! (ಎಲ್ಲರ ಕಡೆಗೆ ತಿರುಗಿ) ನೀವೆಲ್ಲಾ ಏನ್ ಹೇಳ್ತೀರ?...
ಎಲ್ಲರೂ:ಹೌದು, ಹೌದು!! ಅವರು ಸೀರೆ ಎಲ್ಲಿ ತಗೊಂಡ್ರು ಅಂತ ನಿಜ ಹೇಳ್ಬೇಕು.
ಅಧ್ಯಕ್ಷೆ:ರೀ, ಲಲನಾ ಮಣಿಯವರೇ, ನೀವು
ಆ ಸೀರೆಯನ್ನು ಎಲ್ಲಿ ತೆಗೊಂಡ್ರಿ ಅಂತ ನಿಜ ವಿಷಯನಾ ಸಭೆ ಮುಂದೆ ಹೇಳ್ಬಿಡ್ರಿ!! ಇವೆಲ್ಲಾ ರಗಳೆ ಯಾಕೆ??
(ಅಷ್ಟರಲ್ಲಿ ಶ್ರೀಮತಿ ಸಂಶಯಿ, ಲಲನೆಯ ಹತ್ತಿರ ಬಂದು
ಸೀರೆಯನ್ನು ಕೂಲಂಕುಶವಾಗಿ ಪರಿಶೀಲಿಸುತ್ತಾ,)
ಸಂಶಯಿ (ಸದಸ್ಯೆ):ಅಯ್ಯೋ, ಈ ಸೀರೆನಾ!! ಇದು
ಮೊನ್ನೆ ಆ ಡಬ್ಬಾವಾಲಾ ಇಟ್ಟಮಡು ಚೌಲ್ಟ್ರಿನಲ್ಲಿ ಸೇಲ್ ಹಾಕಿದ್ನಲ್ಲಾ, ಅದ್ರಲ್ಲಿ ಇಟ್ಟಿದ್ದ ೧೦೦ ರೂಪಾಯಿ ಸೀರೆ ಕಣ್ರೀ. ಆ ಡಬ್ಬಾ ಸೇಲ್
ಗೆ ನಾನೂ ಹೋಗಿದ್ದೆ ಕಣ್ರೀ. ಈ ಸೀರೆ ಚೆನ್ನಾಗಿದೆ ಅಲ್ವಾ ಅಂತದ್ದಕ್ಕೆ,
ನಮ್ಮೆಜಮಾನ್ರು, "ಅಲ್ವೇ ಜುಜುಬಿ ೧೦೦ ರೂಪಾಯಿ ಸೀರೆ
ಯಾಕೇ ನಿಂಗೆ?" ಇನ್ನೊಂದಿನ ಮಲ್ಲೇಶ್ವರಕ್ಕೇ ಹೋಗಿ, ಮೈಸೂರು ಸಿಲ್ಕ್ ಸೀರೆನೇ ತೆಗೆದುಕೊಳ್ಳುವಂತೆ ಅಂದ್ರು. ನಾನು
ಇದನ್ನು ಅಲ್ಲೇ ಮುದುರಿ ಬಿಸಾಕಿ ಬಂದಿದ್ದೆ.
ಸೌಮ್ಯ:ಅದನ್ಹೇಳ್ರೀ, ಮೊದ್ಲು. ಈ ಲಲನೆ ಕತೆ ಅದೇನೋ.... ಹೇಳ್ತಾರಲ್ಲಾ
..... ಹಾಗಾಯ್ತು.
ಲಲನೆ:ಏನ್ರೀ ಗೋದೂಬಾಯಿ,
ನೀವೂ ಹಾಗೇ ಹೇಳ್ತೀರಾ! (ಮುಖ ಮುಚ್ಚಿಕೊಂಡು ಅಳು ದನಿಯಲ್ಲಿ)
ಆ ಮಲ್ಲಿ ಮಾತ್ರ ನನಗೆ ಅವಮಾನ ಮಾಡ್ತಾರೇಂದ್ರೆ, ಎಲ್ಲರೂ
ಅದನ್ನೇ ಮಾಡ್ತೀರ,... ನಂಗೆ ಈ ಸಭೆನೂ ಬೇಡ, ಏನೂ
ಬೇಡ. ನಾನು ಈಗ್ಲೇ ಹೋಗ್ತೀನಿ.... (ಹೊರಡಲು ಅನುವಾಗುವರು)
ಅಧ್ಯಕ್ಷೆ: (ಲಲನೆ ಕೈ ಹಿಡಿದುಕೊಂಡು ಸಮಾಧಾನ ಮಾಡುತ್ತಾ) ಲಲನೆ,
ಇಷ್ಟಕ್ಕಲ್ಲಾ ನಾವು ಪಲಾಯನ ಮಾಡಿದರೆ, ಈ ಸಮಾಜ ಎದುರಿಸೋದು
ಹ್ಯಾಗೆ? ಬನ್ನಿ ಕುತ್ಗೊಳ್ಳಿ. ಏನೇ ಬಂದ್ರೂ ಧೈರ್ಯದಿಂದ
ಎದುರಿಸ್ಬೇಕಪ್ಪ! ಬನ್ನಿ ಕುತ್ಗೊಳ್ಳಿ. ಏನೇ ಬಂದ್ರೂ
ಧೈರ್ಯದಿಂದ ಎದುರಿಸ್ಬೇಕಪ್ಪ.!! ನನ್ನೇ ನೋಡಿ, ನನ್ ಮೇಲೆ ಹನ್ನೆರಡು ಸಲ ಅವಿಶ್ವಾಸ ನಿಲುವಳಿ ತಂದ್ರು. ನಾನು
ಜಗ್ಗಿದ್ನಾ? ಪ್ರತಿ ಬಾರಿನೂ ಎಲ್ರಿಗೂ ಹೊಸ ಸ್ಯಾರೀ ಕೊಟ್ಟು ಕುರ್ಚಿಗೆ
ಭದ್ರವಾಗಿ ಕೂತಿಲ್ವಾ.... ನೀವಿನ್ನೂ ಚಿಕ್ಕವರು. ಕಲಿಯೋದು ಬಹಳ ಇದೆ. (ಲಲನೆಯವರು ಕಣ್ಣು ಉರೆಸಿಕೊಳ್ಳುತ್ತಾ ಕುಳಿತುಕೊಳ್ಳುವರು)
ಅಯ್ಯೋ, ಈ ಸಭೆ ಹಾದಿ ತಪ್ತಾ ಇದೆ. ರೀ ಕಾರ್ಯದರ್ಶಿ ಸೀತಮ್ಮನವರೇ, ಈ ಮೀಟಿಂಗ್ ನ ಉದ್ದೇಶ ಮೊದ್ಲು
ಎಲ್ರಿಗೂ ಹೇಳ್ರೀ.
ಸೀತಮ್ಮ: (ಎದ್ದುನಿಂತು) ನೋಡಿ ಮಹಿಳಾಸದಸ್ಯರೇ, .... ಅಲ್ಲಲ್ಲ... ಮಹಿಳೆಯರಲ್ಲ.... ಬರೀ ಸದಸ್ಯರೇ, ಈದಿನದ
ಮೀಟಿಂಗ್ ನ ಉದ್ದೇಶ ಏನಪಾ ಅಂದ್ರೆ....
ಗೋದೂಬಾಯಿ:ಏನೇ ನಮ್ಮವ್ವ, ನಾವು ಮಹಿಳೆಯರೇ ಅಲ್ವೇನು?,
ನಾವು ಮಹಿಳೆಯಾಗಿದ್ದಕ್ಕೇ ಅಲ್ವೇನು ಗಂಡಸರಾಂಗ ಈ ಮಹಿಳಾ ಸಂಘ ಕಟ್ಟಿದ್ದು.
ಎದಿ ಸೆಟಿಸಿ ನಿಂತಿದ್ದು. ಕಿತ್ತೂರು ಚೆನ್ನಮ್ಮ,
ಝಾನ್ಸಿ ರಾಣಿ ಲಕ್ಷಿಬಾಯಿ ಇವ್ರೆಲ್ಲಾ ವೀರ ಮಹಿಳೆಯರಾಗಿದ್ದಕ್ಕೇ ಹಂಗೆ ಎಂತೆಂತಹ
ಗಂಡ್ಸರಗೋಳ ಮುಂದೆ ಹೋರಾಡಿದ್ದು!! ಇತಿಹಾಸ ಉಳ್ಕಂಡಿದ್ದು!! ನಮ್ಮನ್ನ ನಾವು ಮಹಿಳೆಯರು ಅನ್ನೋಕೆ ಯಾಕವ್ವಾ ನಾಚ್ಕೆ?
ಅಧ್ಯಕ್ಷೆ: (ಮೇಲೆ ನೋಡಿ ಕೈ ಮುಗಿಯುತ್ತಾ...) ಆ ಭಗವಂತನೇ ಹೇಳ್ಬೇಕು.
ಗೋದೂಬಾಯಿ:ಆ ಭಗವಂತಾನೇ ಯಾಕ್ರೀ ಹೇಳ್ಬೇಕೂ. ಯಾವ್ದಾದ್ರು ಹೆಣ್ಣು
ದೇವ್ರು ಸಿಗಂಗಿಲ್ಲೇನು ನಿಮ್ಗೆ?
ಸೌಮ್ಯ:ಅಯ್ಯೋ ರಾಮಾ!!
.... ಅಲ್ಲಲ್ಲಾ ಸೀತೇ.... ಇದೊಳ್ಳೇ ಕತೆಯಾಯ್ತಲ್ಲ.
ಇಬ್ಬರ ಮಧ್ಯೆ ಅದೇನೋ ಹೇಳ್ತಾರಂತಲ್ಲಾ ಹಾಗಾಯ್ತು.
ಸಂಶಯಿ: (ಅಷ್ಟರಲ್ಲೇ, ಸೀತಮ್ಮನ ಕೈಯನ್ನು ಪರೀಕ್ಷಿಸುತ್ತಾ), ಅಲ್ಲಾ, ಈ ಸೀತಮ್ಮನ ಕೈಗೆ ಯಾವಾಗ ಗಾಯ ಆಯ್ತು? (ಸೀತಮ್ಮನ ಕಿರುಬೆರಳು
ಹಿಡಿದು), ಏನ್ರೀ ಸೀತಮ್ಮ, ಏನಾಯ್ತ್ರೀ ನಿಮ್ಮ
ಬೆರಳಿಗೆ?
ಲಲನೆ:ಹಯ್ಯೋ, ಅವರು ಅವರೆಜಮಾನ್ರಿಗೆ ರಾತ್ರಿ ಊಟ ಆದ
ಮೇಲೆ, ವೀಳೆಯದೆಲೆ ಮಡಿಚಿ ಕೊಡ್ತಾರಲ್ಲಾ, ಆಗ
(ನಾಚಿಕೊಳ್ಳುತ್ತಾ...) ಅವರು ಇವರ್ ಬೆರಳನ್ನು ಕಚ್ಚಿ
ಬಿಟ್ಟಿರಬೇಕು... ಹಿ ಹಿ ಹಿ ಹಿ...
(ಎಲ್ಲರೂ ನಗುವರು)
ಗೋದೂಬಾಯಿ:ಬಿಡ್ರೇ ನಮ್ಮವ್ವ!! ಮನ್ಯಾಗಿನ ಮಾತು ಬಯಾಲಾಗೇ ಅಡ್ತೀರಿ?....
ಸಂಶಯಿ: "ಅಯ್ಯೋ!! ಅದ್ ಹೇಗ್ರೀ ಸಾಧ್ಯ? ಅವರ ಯಜಮಾನರ ಬಾಯಲ್ಲಿ ಒಂದೂ ಹಲ್ಲಿಲ್ಲ.
ಅದ್ ಹೇಗ್ರೀ ಗಾಯ ಆಗೋ ಹಾಗೆ ಕಚ್ತಾರೆ?
(ಮತ್ತೆ ಎಲ್ಲರೂ ನಗುವರು)
ಅಧ್ಯಕ್ಷೆ:ಸ್ಟಾಪ್ ಇಟ್. ಯಾರು ಯಾರ ಮೇಲೂ ಪರ್ಸನಲ್ಲಾಗಿ ಇನ್ಸಲ್ಟ್ ಮಾಡಬಾರದು. ರೀ ಸೀತಮ್ಮನವರೇ ಮೊದ್ಲು ಸಭೆ
ಕರೆದ ವಿಷ್ಯ ಹೇಳ್ರಿ......
ಸೀತಮ್ಮ:ನಾನು ಈ ಸಭೆ ಕರೆದಿರೋ ವಿಶ್ಯಾ
ಹೇಳೋಕೆ ಮುಂಚೆ ಸದಸ್ಯರ ಅನುಮಾನ ಪರಿಹರಿಸಿಬಿಡ್ತೀನಿ. ನನ್ನ ಈ ಬೆರಳಿಗೆ
ಗಾಯ ಹೇಗಾಯ್ತು ಅಂದರೆ, ನಾನು ಮದುವೆ ಆದಾಗ ತುಂಬಾ ಸಣ್ಣ ಇದ್ನಲ್ಲಾ,
ಆಗ ನಮ್ಮ ತವರು ಮನೆಯಿಂದ ೪ ತೊಲ ಚಿನ್ನದ ವಜ್ರದ ಉಂಗುರ ಹಾಕಿಸಿದ್ರು. ಮೊನ್ನೆ, ಅದನ್ನು ಯಾವ ಬೆರಳಿಗೂ ಹಾಕ್ಕೋಳ್ಳೋಕೇ ಆಗ್ದೇ,
ಕಿರುಬೆರಳಿಗೆ ಹಾಕ್ಕೊಂಡೆ. ಆದ್ರೆ ತೆಗೆಯೋಕೆ ಆಗ್ದೇ ಗಾಯ
ಆಗೋಯ್ತು.
ಸಂಶಯಿ:ಅಂದ್ರೆ, ನೀವು ಮದ್ವೆ ಆದ್ದಾಗ ಉಂಗುರದ ಬೆರಳಿಗೆ ಹಾಕ್ಕೋತಿದ್ದ ಉಂಗುರ ಕಿರುಬೆರಳಿಗೆ ಹಾಕ್ಕೊಳ್ಳೋಕೂ
ಆಗದೇ ಇರುವಷ್ಟು ದಪ್ಪ ಆಗ್ಬಿಟ್ಟಿದ್ದೀರಾ?....
ಸೌಮ್ಯ:ಹಾಗೆ ಹೇಳ್ರೀ ಗೋದೂಬಾಯಿ!!
ಈ ಕಾರ್ಯದರ್ಶಿ ಕತೆ... ಅದೇನೋ.... ಹೇಳ್ತಾರಲ್ಲಾ ಹಾಗಾಯ್ತು.....
ಮಲ್ಲಿ: (ಸೀತಮ್ಮನವರಿಗೆ)
ಹೋಗ್ಲಿ, ವಿಷ್ಯಾ ಏನಂತ, ನೇರವಾಗಿ
ಹೇಳಿಬಿಡ್ರೀ ಸೀತಮ್ಮನವರೇ.......
ಶಾಂತಮ್ಮ:ಒಂದ್ನಿಮಿಷ! (ಸೀತಮ್ಮನವರ ಕಡೆ ಬಂದು) ಸೀತಮ್ಮ, ನೆನ್ನೆ
ನಿಮ್ಮ ಮಗ ಬಂದು ನಮ್ಮೆನೇಲಿ ಅರಿಶಿನದ ಪುಡಿ ಕೇಳಿದ! ಯಾಕೇ ಮರೀ,
ಅಂದಿದಕ್ಕೆ, "ಅಮ್ಮ ಬಾಗಿಲಿಗೆ ಕೈ ಅಡ್ಡ ಇಟ್ಟು
ಗಾಯ ಮಾಡ್ ಕೊಂಡುಬಿಟ್ರು. ಮನೇಲಿ ಬೇರೆ ಏನೂ ಮೆಡಿಸಿನ್ ಇಲ್ಲಾ ಅಂತ ಅಮ್ಮ
ಅರಿಶಿನದ ಪುಡಿ ತೆಗೆದುಕೊಂಡು ಬಾ ಅಂತಂದ್ರು ಅಂತ ಹೇಳಿ ಅರಿಶಿನದ ಪುಡಿ ತೆಗೊಂಡು ಹೋದ!! ನೀವು ನೋಡಿದ್ರೆ, ಅದೆನೋ ಉಂಗುರ ಹಾಕ್ಕೊಂಡೆ, ತೆಕ್ಕೊಂಡೆ, ಗಾಯ ಆಯ್ತು ಅಂತೀರಲ್ಲಾ... ಯಾವುದ್ರೀ ನಿಜ?
ಸಂಶಯಿ:ನನ್ಗೆ ಆವಾಗ್ಲೇ ಸಂಶಯ ಬಂದಿತ್ತು.
ಸೀತಮ್ಮನ ಮನೇಲಿ ವಜ್ರದ ಉಂಗುರ ಇರೋಕೆ ಸಾಧ್ಯನಾ ಅಂತ!!! (ಅಧ್ಯಕ್ಷರ ಕಡೆ ತಿರುಗಿ) ರೀ, ಆಧ್ಯಕ್ಷರೇ,
ಈ ಕಾರ್ಯದರ್ಶಿ ಸೀತಮ್ಮನವರೂ ಸುಳ್ಳಿ ಹೇಳಿ ಸಭೆ ದಿಕ್ಕನ್ನು ತಪ್ಪಿಸ್ತಿದ್ದಾರೆ.
ಅವರಿಗೇ ಎಚರಿಕೆ ಕೊಡ್ರೀ...
ಅಧ್ಯಕ್ಷೆ: (ಹಣೆ ಚಚ್ಚಿಕೊಳ್ಳುತ್ತಾ...) ಎಲ್ಲಾ ನನ್ನ ಕರ್ಮ,
ರೀ ಸೀತಮ್ಮ, ದಯವಿಟ್ಟು ನಿಮ್ಮ ಸ್ವಂತ ವಿಷಯ ಬಿಟ್ಟು,
ಸಭೆ ಕರ್ದಿರೋ ಉದ್ದೇಶ ಹೇಳ್ರೀ....
ಸೀತಮ್ಮ:ನಾನೂ ಅದಕ್ಕೇಂತ್ಲೇ ಆಗ್ಲಿಂದ
ಪ್ರಯತ್ನ ಮಾಡ್ತಿದ್ದೀನಿ. ಆದ್ರೆ ಇವ್ರೆಲ್ಲಾ ಸೇರಿ ನನ್ನ ದಾರಿ ತಪ್ಪಿಸ್ತಿದಾರೆ.
(ಎಲ್ಲರ ಕಡೆ ತಿರುಗಿ...) ನಾವು ಈ ಸಭೆ ಕರೆದಿರೋ ವಿಷ್ಯಾ
ಏನಪಾ ಅಂತಂದ್ರೆ...
ಶಾಂತಮ್ಮ:ವಿಷ್ಯ ಅಂದ ಕೂಡ್ಲೆ ನೆನಪಾಯಿತು.
ರಮಾದೇವಿಯವರೇ, ಮೊನ್ನೇ ನಿಮ್ಮ ಎರಡನೇ ಮಗನ ಮನೆಗೆ ಹೋಗಿದ್ರಲ್ಲ,
ಏನ್ರೀ ವಿಷ್ಯ?
ಅಧ್ಯಕ್ಷೆ:ಅದೇರೀ, ನಮ್ಮ ಎರಡನೇ ಸೊಸೇದೂ ಸಿಹಿಸುದ್ದಿ ಅಂತಂದ್ರು,
ಹೋಗಿದ್ದೆ.
ಶಾಂತಮ್ಮ:ಹೌದೇನ್ರೀ,, ಮತ್ತೆ ನೀವು ನಮಗೆಲ್ಲಾ ಸ್ವೀಟ್ಸ್ ಕೊಡಿಸ್ಬೇಕಪ್ಪಾ!! ಅದ್ಸರಿ,
ನಿಮ್ಮ ಮಗ ಸೊಸೆ ಚೆನ್ನಾಗಿದ್ದಾರಾ?...
ಅಧ್ಯಕ್ಷೆ:ಅವಳಿಗೆ ಏನ್ರೀ ಧಾಡಿ!
ಮನೆ ಕೆಲ್ಸನೆಲ್ಲಾ ನನ್ನ ಮಗಾನೇ ಮಾಡ್ತಾನೆ. ಏನೋ
ಒಂದಿಷ್ಟು ಬೇಯ್ಸಿ ಹಾಕಿದ್ರೆ ಆಯ್ತು. ಈ ಕಾಲ್ದಲ್ಲಿ ಹೆಣ್ ಮಕ್ಕಳಿಗೆ ಗಂಡಾ
ಅನ್ನೋ ಗೌರವ ಇರೋದಿಲ್ಲ. ಈ ಹುಡುಗ್ರೋ, ಮೊದ್ಲೇ
ಹುಡುಗು ಮುಂಡೇವು! ಬಾಯಿ ತೆಕ್ಕೊಂಡು ಅವ್ರು ಹೇಳಿದ್ದೆಲ್ಲಾ ಕೇಳ್ಕೊಂಡು
ಕುಣಿತಾವೆ.
ಲಲನೆ:ರಮಾದೇವಿ ಅವರೇ, ಮೊನ್ನೆ ನಮ್ಮತ್ರ ಮಾತಾಡ್ತಾ, ನಿಮ್ಮ ಮಗಳ ವಿಷ್ಯ ಹೇಳ್ಕೊಂಡು,
ನಿಮ್ಮ ಅಳಿಯ ಮನೇಲಿ ತರಕಾರೀನೂ ಹೆಚ್ಕೊಡ್ತಾರೆ. ಎಲ್ಲಾ
ಕೆಲ್ಸಕ್ಕೂ, ಹೆಲ್ಪ್ ಮಾಡ್ತಾರೆ. ತುಂಬಾ ಕೋ ಆಪರೇಟಿವ್
ಅಂತ ದೇವ್ರಂತ ಅಳಿಯ ಅಂತಿದ್ರಿ.
ಸಂಶಯಿ:ಹಾಗೇ ಹೇಳಿ!! ಇವ್ರಿಗೆ ಇವ್ರ ಮಗ ಹೆಂಡ್ತಿಗೆ ಸಹಾಯ ಮಾಡಿದ್ರೆ ಹೆಂಡ್ತಿ ದಾಸ!!. ಮಗಳಿಗೆ ಅಳಿಯ ಸಹಾಯ ಮಾಡಿದ್ರೆ, ದೇವ್ರಂತ ಮನುಷ್ಯ.
(ಮೂತಿ ತಿರುವರು...)