ಜಾಲತಾಣ (Internet)
ತೆರೆದ ಜಗವು ಈ ಜಾಣ ಜಾಲತಾಣ,
ಅರಿತ-ನುರಿತವರ ಮೊಗಸಾಲೆ, ದಡ್ಡ
ಅಹಂಕಾರಿ-ದುರುಳರ ಪಡಸಾಲೆ, ನೀ
ಪೇಳ್ದಂತೆ, ನೀ ಕೇಳ್ದಂತೆ ಮಾರ್ದನಿಸುವ ಮೈದಾನವಿದು- ಅರಿಬೊಮ್ಮ
ವಿಷಯಂಗಳು ಜಗದಗಲ ವಿಸ್ತಾರ,
ದಾರಿ ತಪ್ಪಿಸುವ ಅತೀವ ಹುನ್ನಾರ,
ಸಕಲವೂ ಪುಟಿದೆದ್ದು, ಚಂಗನೆ ದಾರಿ
ತಪ್ಪಿಸಿ, ದಡ ಹತ್ತಿಸುವ, ಭ್ರಮೆಯಾವರಣ ಈ ಜಾಲತಾಣ- ಅರಿಬೊಮ್ಮ
ಮನೆ ಹಿರಿಯರು ಬೇಕೇ? ವಿಷಯ ತಿಳಿಸಲು,
ತಾನಿಲ್ಲವೇ ಸಕಲರಿಗೂ ಗುರುವು, ಕೇಳಿದಾಕ್ಷಣ,
ಕಣ್ಣು ರೆಪ್ಪೆ ಮುಚ್ಚುವುದರಲ್ಲಿ, ಬಾಲಕೃಷ್ಣನ
ಪುಟ್ಟ ಬಾಯಿಯಲ್ಲಿ ತೆರೆವ ಅನಂತವಿಶ್ವವಿದು ಜಾಲತಾಣ - ಅರಿಬೊಮ್ಮ
ಆಡುಗೆ, ನಡುಗೆ, ತೊಡುಗೆ, ನಮಗೆ, ನಿಮಗೆ
ಏನಿಲ್ಲ, ಏನುಂಟು, ಎಣಿಕೆಗೆ ಸಿಗದ ನಕ್ಷತ್ರಗಳು,
ಕೂಸು ಪಾಲಿಸುವುದೆಂತು, ಕೂತು ಉಣ್ಣುವುದೆಂತು,
ಮೈ ದಣಿಸುವುದೆಂತು, ಮನೆ ಕಟ್ಟುವುದೆಂತು, ಸಕಲಗ್ರಾಹಿ ಈ ಜಾಲತಾಣ – ಅರಿಬೊಮ್ಮ
ಅರಿತು ನಡೆದರೆ, ಸುಭದ್ರ ಮಾರ್ಗವು,ಆಭೇದ್ಯ ಗೋಡೆಯು
ಹಾದಿ ತಪ್ಪಿದರೆ, ಶಯನ ಕೋಣೆಯು ಅನ್ಯರಿಗೆ ತೆರೆದಿಹುದು,
ಅಣುಕಾಷ್ಟ ರೇಣು ವಿವರ, ಬೇಡದ ಪ್ರವರ, ಈ ಜಾಲತಾಣ, ನೀ
ಮುಚ್ಚಿಡುವುದ ಮುಚ್ಚಿಟ್ಟು, ತೋರಬಹುದಾದಷ್ಟೇ ತೋರಿ, ಧನ್ಯನಾಗು- ಅರಿಬೊಮ್ಮ
ನಿನ್ನಂದ ಚಂದವ ಅನ್ಯರಿಗೆ ತೋರುವ ಕನ್ನಡಿ,
ನಿನ್ನುತಿಯ ಕಹಳೆ ಊದುವ ಚಂದಗಾತಿ,
ತಂದೆ-ತಾಯಿ, ಗಂಡ-ಹೆಂಡತಿ-ಮಕ್ಕಳ ಹೊಗಳಿ, ಊರಿಗೆ
ತುತ್ತೂರಿಯೂದುವ, ಶತೃಗಳ ಜರೆಯುವ, ಬಹಿರಂಗ ಶೌಚಖಾನೆಯಿದು ಜಾಲತಾಣ - ಅರಿಬೊಮ್ಮ
ಕಲಿಯದರೆ ಮುಕ್ತಿಯಿಲ್ಲ, ಕಲಿತರೆ ಕೊನೆಯಿಲ್ಲ,
ಕಲಿಸುವವರ, ಕಲಿವೀರರ, ಕುಲರಹಿತ, ಕಲಿಯುಗ ಲೋಕ,
ನಗುವ, ನಗಿಸುವ, ಅಳುವ, ಅಳಿಸುವ, ನೋವ ನುಂಗುವ,
ನಾಕ-ನರಕಗಳ ದರ್ಶನಂಗೈಯ್ಯುವ, ಮುಕ್ತಿಮಾರ್ಗವು ಈ ಜಾಲತಾಣ - ಅರಿಬೊಮ್ಮ
---ಡಾ. ಎಸ್.ಎನ್. ಶ್ರೀಧರ
No comments:
Post a Comment