Wednesday, November 8, 2017

ಧಾರ್ಮಿಕ ಭಾವನೆಗಳ ಮೇಲೆ ಸವಾರಿ

ಧಾರ್ಮಿಕ ಭಾವನೆಗಳ ಮೇಲೆ ಸವಾರಿ

ಸಾಮಾನ್ಯ ಜನರು ಹೀಗೇಕೆ ಆಡುತ್ತಾರೆ ಎಂಬುದನ್ನು ಮನಶಾಸ್ತ್ರಜ್ಞರೇ ಹೇಳಬೇಕು. ಪರಿಚಯವಿಲ್ಲದ ಹುಡುಗಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಜೀವನ್ಮರಣದ ಹೋರಾಟದಲ್ಲಿದ್ದಾಗ ಇಡೀ ದೇಶವೇ ಮೊಂಬತ್ತಿ ಹಿಡಿದು ಆಕೆಯ ಜೀವಕ್ಕಾಗಿ ಮರುಗುತ್ತದೆ. ಆಕೆಯ ಜೀವಕ್ಕೆ ಎರವಾದ ಅತ್ಯಾಚಾರಿ ಹಂತಕರಿಗೆ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಿದಾಗ ನಿಟ್ಟುಸಿರು ಬಿಡುತ್ತದೆ. ಅದೇ ತಾವು ನಂಬಿದ ಧಾರ್ಮಿಕ ಗುರು ಅತ್ಯಾಚಾರ ನಡೆಸಿದ್ದು, ಲೈಂಗಿಕ ಶೋಷಣೆ ನಡೆಸಿದ್ದು, ದೇಶದ ನ್ಯಾಯಾಲಯವೊಂದು ಆತನನ್ನು ತಪ್ಪಿತಸ್ಥ ಎಂದು ಘೋಷಿಸಿದಾಗ, ಗುರುವಿನ ಪರವಾಗಿ ಆತನ ಭಕ್ತರೆನಿಸಿಕೊಂಡವರು ಉಗ್ರ ಪ್ರತಿಭಟನೆ ಮಾಡುತ್ತಾರೆ. ಅದಕ್ಕಾಗಿ ದೇಶದ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುತ್ತಾರೆ. ಪ್ರಕರಣಕ್ಕೆ ಏನೂ ಸಂಬಂಧವಿಲ್ಲದ ಸಾರ್ವಜನಿಕರ ವಾಹನಗಳಿಗೆ ಬೆಂಕಿ ಇಡುತ್ತಾರೆ. ಕಾನೂನಿಗೂ ಬೆಲೆ ಕೊಡದೇ ನಾಗರೀಕ ಸಮಾಜಕ್ಕೇ ಕಳಂಕವಾಗುತ್ತಾರೆ.

ಅಧ್ಯಾತ್ಮಿಕ ಬೋಧನೆ ಮಾಡುವ, ಪ್ರಾಪಂಚಿಕ ಸುಖಗಳನ್ನು ಬದಿಗೊತ್ತಿ ಸನ್ಯಾಸಿ ಜೀವನ ಮಾಡುವ ಮಠವೊಂದರ ಸ್ವಾಮಿಯಾಗಿರುವ ವ್ಯಕ್ತಿಯೊಬ್ಬನ ಮೇಲೆ ಅತ್ಯಾಚಾರದ ಆರೋಪಗಳು ಬಂದಾಗ, ಆತನ ಮೇಲೆ ದೂರು ನೀಡುವ ಸಂತ್ರಸ್ತೆ ತಮ್ಮ ಒಳ ಉಡುಪಿನಲ್ಲಿರುವ ಆ ಸ್ವಾಮೀಜಿಯ ವೀರ್ಯದ ಗುರುತನ್ನು ನೀಡಿ, ಅದು ಅಪರಾಧ ಪ್ರಯೋಗಾಲಯದಲ್ಲಿ ಸಾಬೀತಾದಮೇಲೂ, ಅದೇ ಸ್ವಾಮೀಜಿಯ ಉಪದೇಶಗಳಿಗೆ ಅಪಾರ ಸಂಖ್ಯೆಯ ಮಹಿಳೆಯರು ಸೇರುವುದು, ಆಶ್ಚರ್ಯವಾಗಿ ಕಾಣುತ್ತದೆ. ಕೆಳ ನ್ಯಾಯಾಲಯದಲ್ಲಿ ಅತ್ಯಾಚಾರದ ಆರೋಪಗಳನ್ನು ತಳ್ಳಿ ಹಾಕಿದರೂ, ಇದು ಒಪ್ಪಿತ ಲೈಂಗಿಕ ಸಂಪರ್ಕವಾಗುತ್ತದೆ ಎಂಬ ವ್ಯಾಖ್ಯಾನ ನೀಡಿದಾಗಲೂ, ಕೆಲವು ಕುರುಡು-ಅನುಯಾಯಿಗಳು, ಸನ್ಯಾಸಿ ಜೀವನಕ್ಕೆ ಕಳಂಕ ತಂದ ಆ ಸ್ವಾಮೀಜಿಯನ್ನೇ ವಹಿಸಿಕೊಂಡು ಮಾತನಾಡಿದಾಗ, ಸಮಾಜದ ಆರೋಗ್ಯದ ಬಗ್ಗೆ ಅನುಮಾನವಾಗುತ್ತದೆ. ತನಗೇ ಸಂಸ್ಕಾರ ಇಲ್ಲದ ’ಮಠದ ಗುರು’, ಭಕ್ತ ಮಹಿಳೆಯರಿಗೆ ’ಕನ್ಯಾ ಸಂಸ್ಕಾರ’ ನೀಡುತ್ತೇನೆಂದರೆ, ತಲೆಬಾಗಿ ನಿಲ್ಲುವ ಹೆಣ್ಣುಮಕ್ಕಳನ್ನು ಕಂಡಾಗ ಮರುಕವಾಗುತ್ತದೆ. 

ತಮ್ಮ ಧರ್ಮದಲ್ಲಿಲ್ಲದ, ಯಾವುದೇ ಮುಸ್ಲಿಂ ರಾಷ್ಟ್ರಗಳಲ್ಲಿ ಜಾರಿಯಿರದ, ಸ್ತ್ರೀ ವಿರೋಧಿ ’ಮೂರು ತಲ್ಲಾಖ್’ ಪದ್ದತಿಯ ಸಾಂವಿಧಾನತೆಯ ಬಗ್ಗೆ, ದೇಶದ ಉನ್ನತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ, ಈ ಅನಿಷ್ಟ ಪದ್ದತಿ ಸಮರ್ಥನೆಗೆ ಕೆಲವು ಮುಸ್ಲಿಂ ಮಹಿಳೆಯರು ನಿಂತದ್ದು, ದಶಕಗಳ ಹಿಂದೆ ನಮ್ಮ ರಾಜ್ಯದಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ನಿಷೇಧಿಸಿದಾಗ, ನಿಷೇಧವನ್ನು ಪ್ರತಿಭಟಿಸಿದವರ ಮಂದೆಯಲ್ಲಿ ಮಹಿಳೆಯರೇ ಇದ್ದುದನ್ನು ಕಂಡಾಗ ಆಘಾತವಾಗುತ್ತದೆ. ಹಾಗೆಯೇ ಯಾವುದೋ ಚರ್ಚ್ ನಲ್ಲಿ, ಮಹಿಳಾಸಂತರ ಮೇಲೆ ಪುರುಷ ಪಾದ್ರಿಯೊಬ್ಬರು ನಡೆಸಿದ್ದರೆನ್ನಲಾದ ಲೈಂಗಿಕ ದೌರ್ಜನ್ಯದ ತನಿಖೆ ನಡೆಯುತ್ತಿರುವ ಸಂಧರ್ಭದಲ್ಲಿ, ಪಾದ್ರಿಯವರನ್ನು ವಹಿಸಿಕೊಂಡು ಕೆಲವು ಮಹಿಳಾಸಂತರು ನಿಂತಿದ್ದು ಇಂತಹದೇ ಸಂಧರ್ಭ. ಧರ್ಮದ ಮತ್ತು ದೇವರ ಭಯದ ಸೆರಿಗಿನಲ್ಲಿ ಮುಗ್ಧ ಮಹಿಳೆಯರನ್ನು ಅಂಕೆಯಲ್ಲಿಡುವ, ಅವರಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವನೆಯನ್ನೇ ಚಿವುಟಿಬಿಡುವ ಹುನ್ನಾರ ಎಲ್ಲಾ ಧರ್ಮಗಳಲ್ಲೂ ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ.    

ತಮ್ಮ ಮೈ ಮೇಲೆ ದೇವರು ಬರುತ್ತದೆಂದು, ಅದರಿಂದ ಜನರ ಸಂಕಷ್ಟಗಳಿಗೆ ಪರಿಹಾರ ನೀಡುತ್ತೇನೆಂದು ಶೋಷಿಸುವ ಪೂಜಾರಿ ವರ್ಗ ಒಂದು ಕಡೆಯಾದರೆ, ಮಠದ ಮೂಲಕ ಸಾಮ್ರಾಜ್ಯ ಕಟ್ಟಿ, ದೇಶ ವಿದೇಶಗಳಲ್ಲಿ ಭಕ್ತರ ಪಡೆಯನ್ನು ಕಟ್ಟಿ, ತೆರಿಗೆ ವಂಚನೆ ಮಾಡುತ್ತಾ, ದೇಶದ ಕಾನೂನುಗಳನ್ನು ಗಾಳಿಗೆ ತೂರುತ್ತಾ ಅಧಿಕಾರದ ಅಮಲಿನಲ್ಲಿ ತಮ್ಮನ್ನು ನಂಬಿ ಬಂದವರ ಮುಗ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಹೈ-ಟೆಕ್ ಸ್ವಯಂ ಘೋಷಿತ ದೇವಮಾನವರು ಇನ್ನೊಂದು ಕಡೆ. ಇಂತಹವರನ್ನು ನ್ಯಾಯಾಲಯದ ಆದೇಶದಂತೆ ದೇಶದ ಕಾನೂನಿಗೆ ಅನುಗುಣವಾಗಿ ಬಂಧಿಸಲು ಸೈನ್ಯ-ಪೋಲೀಸರನ್ನು ಒಳಗೊಂಡಂತೆ ದೊಡ್ಡ ಪಡೆಯನ್ನೇ ಕಳುಹಿಸಿ, ಸಾಮಾನ್ಯ ಜನರ ತೆರಿಗೆ ಹಣದಲ್ಲಿ ಕೋಟ್ಯಾಂತರ ಹಣವನ್ನು ಪೋಲುಮಾಡಬೇಕಾಗಿರುವುದು ದುರಂತವೇ ಸರಿ. ತಮ್ಮ ಭವಿಷ್ಯವನ್ನೇ ತಿಳಿಯದ, ಆದರೆ ಊರಿಗೆಲ್ಲಾ ಭವಿಷ್ಯ ಹೇಳುತ್ತೇನೆಂದು ಸುಳ್ಳು ಹೇಳಿ, ದುಡ್ಡು ವಸೂಲಿ ಮಾಡುವ ಬುರುಡೆ ಜ್ಯೋತಿಷಿಗಳೂ, ಪಂಗಡ, ಒಳಪಂಗಡಗಳಲ್ಲಿ, ಜಾತಿ-ಪ್ರಜಾತಿಗಳಲ್ಲಿ, ವಿವಿಧ ಧರ್ಮಗಳ ಜನರ ನಡುವೆ ದ್ವೇಷ ಬೆಳೆಸುವ ಮಠದ ಸ್ವಾಮೀಜಿಗಳೂ, ವಿವಿಧ ಧರ್ಮಗುರುಗಳೂ, ಇದೇ ವರ್ಗಕ್ಕೆ ಸೇರಿದವರು. ಇನ್ನಿತರ ವರ್ಗಗಳಲ್ಲಿ, ಬರಿ ಕೈಯಲ್ಲೇ ಯಾವುದೇ ಖಾಯಿಲೆಗೂ ಸ್ಥಳದಲ್ಲೇ ದೇವರ ಮೂಲಕ ಚಿಕೆತ್ಸೆ ನೀಡುವೆವು ಎಂದು ಮುಗ್ಧ ಜನರನ್ನು ವಂಚಿಸುತ್ತಿರುವ, ಜನರನ್ನು ಸಾಮೂಹಿಕವಾಗಿ ಸನ್ನಿಗೊಳಪಡಿಸಿ, ಅವರನ್ನು ಬೇಕಾದ ಹಾಗೆ ಕುಣಿಸಿ, ತಾವು ದೈವಪುರುಷ ಎಂಬುದಾಗಿ ಬಿಂಬಿಸಿಕೊಳ್ಳುತ್ತಿರುವವರನ್ನೂ ಕಾಣುತ್ತೇವೆ.

ಜಗದ್ಗುರುಗಳು ಎನ್ನಿಸಿಕೊಂಡವರು, ತಮ್ಮದೇ ಪಂಗಡಗಳಲ್ಲಿ, ಒಳಪಂಗಡಗಳಲ್ಲಿ ಅಸಹನೆ ಹುಟ್ಟುಹಾಕುವುದನ್ನು, ದ್ವೇಷಭಾವನೆಯನ್ನು ಹರಡುವುದನ್ನು ಕಂಡಿದ್ದೇವೆ. ಸಮಾಜ ಸುಧಾರಕರು ಹಾಕಿಕೊಟ್ಟ ಆದರ್ಶಗಳನ್ನೇ ಮರೆತು, ಈ ಮಹಾನ್ ಗುರುಗಳು, ತಮ್ಮದೇ ಜಾತಿಯ ಇನ್ನೊಂದು ಪಂಗಡದ ಗುರುಗಳ ಬಗ್ಗೆ ಸಹ ಅವಹೇಳನಕಾರಿಯಾಗಿ ಸಾರ್ವಜನಿಕವಾಗಿ ಮಾತನಾಡುವುದನ್ನು ಕಂಡಾಗ ಅಸಹ್ಯ ಹುಟ್ಟುತ್ತದೆ.ಶರಣರುಎನಿಸಿಕೊಂಡವರು ಸಹ ಹೀಗೆ ರಾಗದ್ವೇಷದ, ರೋಷಾವೇಷದ ಕೆಂಡದುಂಡೆಗಳನ್ನು ಇನ್ನೊಬ್ಬ ಸಂತರ ಮೇಲೆ ತೂರುತ್ತಾರೆಂದರೆ, ಅವರು ಧಾರ್ಮಿಕತೆಯಲ್ಲಿ ಸಾಧಿಸಿದ್ದೇನೆಂಬುದು ಪ್ರಶ್ನೆಯಾಗುತ್ತದೆ. ’ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದು ಪ್ರವಚನಗಳಲ್ಲಿ ಬೋಧಿಸುವ ಧರ್ಮಗುರುಗಳು ಸಾರ್ವಜನಿಕವಾಗಿ ಕೆಟ್ಟ ಭಾಷಾ ಪ್ರಯೋಗ ಮಾಡಿದಾಗ ಜಿಗುಪ್ಸೆ ತರಿಸುತ್ತದೆ. ಜನಸಾಮಾನ್ಯರಿಗೆ ಉತ್ತಮ ಆದರ್ಶಗಳ ಬಗ್ಗೆ ಉಪನ್ಯಾಸ ಕೊಟ್ಟು ಅವರನ್ನು ತಿದ್ದುವ ಜಾಗದಲ್ಲಿರುವ ಈ ಗುರುಗಳು, ತಮ್ಮ ತಮ್ಮಲ್ಲೇ ಈ ಪರಿ ಬೈದಾಡಿಕೊಡರೆ, ಈ ಸಮಾಜದ ಗತಿಯೇನು? ಮಾನವ ಪ್ರೀತಿ, ಸಮಾನತೆ, ಕರುಣೆ, ಕ್ಷಮಾಗುಣ, ಸಹಬಾಳ್ವೆ ಇವುಗಳನ್ನು ಬೋಧಿಸಿ ಮಾರ್ಗದರ್ಶನ ಮಾಡಬೇಕಾದ ಹೊಣೆಗಾರಿಕೆಯನ್ನು ’ಶರಣರು’ ಮರೆಯದಿರಲಿ.

ಧಾರ್ಮಿಕ ಗುರುಗಳ ಬಗ್ಗೆ ನಮಗಿರುವ ಭಾವನೆಯೆಂದರೆ, ಅವರು ನಮಗೆ ತಿಳಿಯದ ಪಾರಮಾರ್ಥಿಕತೆ ಹೊಂದಿದ್ದಾರೆ, ನಮ್ಮ ಜೀವನಕ್ಕೊಂದು ಅರ್ಥ ಕೊಡುವ ಉಪದೇಶ ಕೊಡುತ್ತಾರೆ. ಜೀವ ನೊಂದಾಗ ಸಮಾಧಾನ ತರುವ ಮಾತನಾಡಿ ಸಂತೈಸುತ್ತಾರೆ. ಸಮಾಜ ಸೇವೆಗೆ ಪ್ರೇರೇಪಿಸುತ್ತಾರೆ, ಸಮಾಜವನ್ನು ತಿದ್ದುತ್ತಾರೆ, ಇತ್ಯಾದಿ. ಈಗಲೂ ಅಂತಹ ಧಾರ್ಮಿಕ ಗುರುಗಳು, ಸ್ವಾಮೀಜಿಗಳೂ ಇದ್ದಾರೆ. ಆದರೆ ಸಮಾಜದಲ್ಲಿ ಅವರ ಪ್ರಭಾವ ಕಡಿಮೆಯಾಗುತ್ತಿದೆಂದೆನಿಸುತ್ತಿದೆ. ಅವರ ಬದಲಿಗೆ ಧಿಡೀರ್ ಖ್ಯಾತಿ ಗಳಿಸುವ ಬಾಬಾಗಳಿಗೆ, ಡೋಂಗಿ ಸ್ವಾಮಿಗಳಿಗೆ, ರೋಷಾವೇಷವಾಗಿ ಸಾರ್ವಜನಿಕವಾಗಿ ಪ್ರಚೋದನಾಕಾರಿಯಾಗಿ ಮಾತನಾಡುವ ಧಾರ್ಮಿಕ ಗುರುಗಳಿಗೆ ಮಣೆ ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಈ ಸ್ವಯಂಘೋಷಿತ ಗುರುಗಳು ಮುಗ್ಧ ಜನರ ಧಾರ್ಮಿಕ ನಂಬಿಕೆಗಳನ್ನು ಉಪಯೋಗಿಸಿಕೊಂಡು, ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ತಮ್ಮೆಲ್ಲಾ ಶ್ರಮ ಹಾಕಿ ಪರ್ಯಾಯ ಸಾಮ್ರಾಜ್ಯ ಕಟ್ಟಲು ತೊಡಗುತ್ತಾರೆ. ಅವರೆಲ್ಲರ ವಿಧಾನ ಒಂದೇ. ಏನಾದರೂ ಮಾಡಿ ಜನರನ್ನು ಆಕರ್ಷಿಸುವ ವಿಷಯವೊಂದನ್ನು ಆಯ್ಕೆ ಮಾಡಿಕೊಳ್ಳುವುದು. ಉದಾಹರಣೆಗೆ, ಜನರ ಭಾವನೆಗಳನ್ನು ಬಡಿದೆಬ್ಬಿಸುವ ಸ್ವಜಾತಿ/ಮತದ ಉದ್ಧಾರ, ಗೋವು ಸಂರಕ್ಷಣೆ, ಅಲ್ಲಲ್ಲಿ ತೋರಿಕೆಯ ಸಮಾಜಸೇವೆಯ ಕಾರ್ಯಕ್ರಮಗಳು, ಜನರ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡುವ ಪ್ರಶ್ನೋತ್ತರ ಗೋಷ್ಟಿಗಳು, ಗೊತ್ತಿಲ್ಲದ ವಿಷಯಗಳ ಬಗ್ಗೆಯೂ ಪಂಡಿತರಂತೆ ಮಾತನಾಡುವ, ಹಾಗಿಲ್ಲದಿದ್ದರೆ, ಅವರ ಜಾತಿ/ಪಂಗಡದ ಮಹಾನ್ ಗುರುಗಳಂತೆ, ಪೋಷಕರಂತೆ, ಉದ್ಧಾರಕರಂತೆ, ಇಲ್ಲದಿದ್ದರೆ, ಮನ:ಶಾಂತಿ  ಬೋಧಿಸುವ ಚಿಂತಕರಂತೆ ಪೋಸು ಕೊಟ್ಟು, ಜನರನ್ನು ಆಕರ್ಷಿಸಿವುದು. ಅನೇಕ ವಿಷಯಗಳ ಬಗ್ಗೆ ವಿಚಾರಗೋಷ್ಟಿ ಏರ್ಪಡಿಸುವುದು, ಅದರಲ್ಲಿ ತಮ್ಮದೇ ವಿಚಾರಗಳನ್ನು ಬಿತ್ತುವುದು. ಇನ್ನೂ ಮುಂದಕ್ಕೆ ಹೋಗಿ ಕಾರ್ಪೋರೇಟ್ ಗಳಲ್ಲಿ ಮ್ಯಾನೇಜ್ ಮೆಂಟ್ ತರಬೇತಿ ನೀಡುವುದು. ಅದರ ಮೂಲಕ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವುದು ಮತ್ತು ಆಸ್ತಿಪಾಸ್ತಿ ಮಾಡುವುದು, ಮತ್ತು ಎಂದಿಗೂ ಆದಾಯತೆರಿಗೆ ಕಟ್ಟದೇ ಇರುವುದು. ನಂತರದ ಸರದಿಯಲ್ಲಿ, ತಮ್ಮನ್ನು ಬೆಂಬಲಿಸುವ ಹಲವು ದಲ್ಲಾಳಿಗಳು, ಪುಢಾರಿಗಳು, ಕಿರಿ-ಹಿರಿ ರಾಜಕಾರಣಿಗಳು, ಚಲನಚಿತ್ರ ನಟರುಗಳು, ಕ್ರೀಡಾಪಟುಗಳು, ಉದ್ಯಮಿಗಳು, ವೈದ್ಯರು, ಕಾಲೇಜುಗಳ ಪ್ರಾಧ್ಯಾಪಕರುಗಳು, ವಿಜ್ಞಾನಿಗಳು ಇತ್ಯಾದಿ ಮೇಲುಸ್ತರದ ಜರನ್ನು ಒಗ್ಗೂಡಿಸುವುದು. ಅವರೊಂದಿಗೆ ವೇದಿಕೆ ಹಂಚಿಕೊಂಡು, ಇತರರಲ್ಲಿ ಹೈ-ಫೈ ಭಾವನೆ ತರುವುದು. ಜೊತೆಗೆ, ಮುಖ್ಯವಾಗಿ, ರಾಜಕಾರಣಿಗಳಿಗೆ, ಉದ್ಯಮಿಗಳಿಗೆ, ಪ್ರಭಾವಿಗಳಿಗೆ ತಮ್ಮ ಮೂಲಕ ನೆಟ್ ವರ್ಕ್ ಮಾಡಿಕೊಡುವುದು. ಹಾಗಾಗಿ ಎಲ್ಲರಿಗೂ ಬೇಕಾದ ಕೇಂದ್ರ ವ್ಯಕ್ತಿಯಾಗಿ, ಯಾರೂ ಅವರನ್ನು ಪ್ರಶ್ನಿಸಲಾಗದಷ್ಟು ಎತ್ತರಕ್ಕೆ ಕೋಟೆ ಬೆಳಿಸಿಕೊಳ್ಳುವುದು.   ಇಂತಹವರಿಂದ, ಸಮಾಜದ ಸ್ವಾಸ್ಥ್ಯ ಕೆಡುವಿದಲ್ಲದೇ, ಉತ್ತಮಗೊಳುವುದಿಲ್ಲ.

ಪ್ರಖ್ಯಾತ ವಿಜ್ಞಾನಿಗಳೂ, ಪ್ರಭಾವಿ ಮಂತ್ರಿಗಳೂ, ದೇಶದ ಪ್ರಧಾನಿಗಳೂ, ರಾಷ್ಟ್ರಪತಿಗಳೂ, ಕೆಲವೊಮ್ಮೆ ನ್ಯಾಯಾಧೀಶರಗಳೂ ಸಾರ್ವಜನಿಕವಾಗಿ ಇಂತಹವರ ಪಾದಕ್ಕೆರಗಿದಾಗ ಜಿಗುಪ್ಸೆ ತರುತ್ತದೆ. ಇವರೆಲ್ಲಾ ತಮ್ಮ ಸ್ವಪ್ರಯತ್ನದಿಂದ ಸಮಾಜದಲ್ಲಿ ಮೇಲೆ ಬಂದಿದ್ದರೂ, ಏಕೆ ಹೀಗೆ ತಮ್ಮ ಏಳ್ಗೆಗೆ ತಮ್ಮ ಸಾಮರ್ಥ್ಯವನ್ನೂ, ಸ್ವಪ್ರಯತ್ನವನ್ನೂ ಮರೆತು ಇಂತಹ ಡೋಂಗಿ ಬಾಬಗಳ ಆಶೀರ್ವಾದವೇ ಕಾರಣವೆಂದು ನಂಬುತ್ತಾರೋ, ನಾ ಕಾಣೆ. ಇವರೆಲ್ಲರಿಗೂ ತಮ್ಮ ಧಾರ್ಮಿಕ ನಂಬಿಕೆಗಳನ್ನು ಹೊಂದಲು, ಖಾಸಗಿಯಾಗಿ ಧಾರ್ಮಿಕ ಆಚರಣೆ ಮಾಡಿಕೊಳ್ಳಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ಇದರ ಬಹಿರಂಗ ಪ್ರದರ್ಶನದಿಂದ ಒಳಿತಿಗಿಂತ ಸಮಾಜಕ್ಕೆ ಹಾನಿಯೇ ಹೆಚ್ಚು. ಸಾಂವಿಧಾನಿಕವಾಗಿ ಉನ್ನತ ಸ್ಥಾನದಲ್ಲಿರುವ ನ್ಯಾಯಾಧೀಶರುಗಳು, ರಾಷ್ಟ್ರಪತಿಗಳು ಸಾರ್ವಜನಿಕ ವೇದಿಕೆಗಳಲ್ಲಿ, ಈ ’ದೇವಮಾನವರ’ ಜೊತೆ ಕೆಳಸ್ಥಾನದಲ್ಲಿರುವ ಆಸನ ಹಂಚಿಕೊಂಡು ಕುಳಿತಾಗ ಮನಸಿಗೆ ಕಸಿವಿಸಿಯಾಗುತ್ತದೆ. ಇಂತಹ ಪ್ರಭಾವಿಗಳ ಜೊತೆಗಿರುವ ಫೋಟೋ ಪ್ರದರ್ಶನ ಮಾಡಿಕೊಂಡು, ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುತ್ತಾ, ಇನ್ನಷ್ಟು ಸಮಾಜ ವಿರೋಧಿ ಕೆಲಸಮಾಡಿಕೊಳ್ಳಲು ಈ ಕಳ್ಳ ಸ್ವಾಮಿಗಳು ಮುಂದಾಗುತ್ತಾರೆ. ಮುಂದೆದರೂ, ಈ ದೇವಮಾನವರ ವಿಚಾರಣೆ ನ್ಯಾಯಾಲಯಕ್ಕೆ ಬಂದರೆ, ಇಂತಹವರ ಮೇಲೆ ಕ್ರಮ ತೆಗೆದುಕೊಳ್ಳುವ ಸಂಧರ್ಭ ಬಂದರೆ, ಸಾರ್ವಜನಿಕವಾಗಿ ಇವರ ಕಾಲಿಗೆರೆದ ನ್ಯಾಯಧೀಶರುಗಳೂ, ರಾಷ್ಟಪತಿಗಳೂ ಹೇಗೆ ನಿರಪೇಕ್ಷ ನಿರ್ಧಾರ ತೆಗೆದುಕೊಳ್ಳಬಲ್ಲರು? 

ನಮ್ಮ ಧಾರ್ಮಿಕ ಭಾವನೆಗಳ ಮೇಲೆ ಸವಾರಿ ಮಾಡುತ್ತಾ, ಸಮಾಜಕ್ಕೆ ಕಂಟಕರಾಗಿರುವ ಇಂತಹ ಡೋಂಗಿ ಬಾಬಾಗಳನ್ನು ಬಹಿಷ್ಕರಿಸಬೇಕಾಗಿದೆ. ಇದಕ್ಕೆ ಸರಿಯಾದ ಪರಿಹಾರವೆಂದರೆ, ಸಾಮಾನ್ಯ ಜನರಾದ ನಾವು ಇಂತಹ ಸಮಾಜ ವಿರೋಧಿ ಭಾವನೆ ಬೆಳೆಸಿಕೊಂಡಿರುವ, ಸಮಾಜ ಘಾತಕ, ಸ್ವಯಂ ಘೋಷಿತ ಧರ್ಮಗುರುಗಳನ್ನು ಅಲಕ್ಷಿಸಿ, ನಮ್ಮ ಯಾವುದೇ ಧಾರ್ಮಿಕ ಆಚರಣೆಗೆ ಇಂತಹವರ ಅಗತ್ಯ ಇಲ್ಲವೆಂಬುದನ್ನು ಮನಗಂಡು, ನಮ್ಮದೇ ದಾರಿಯಲ್ಲಿ ನಾವು ನಡೆಯುವುದು. ಹಾಗೇಯೇ ಇಂತಹ ಡೋಂಗಿ ಸ್ವಾಮಿಗಳ, ಬಾಬಾಗಳ ಮೋಸದ ಬಗ್ಗೆ ಇತರರನ್ನೂ ಎಚ್ಚರಿಸುವುದು. ನಾವು ನಂಬಿದ ಭಗವಂತನನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಲು ಇಂತಹಏಜೆಂಟರಅಗತ್ಯವಿಲ್ಲದೆಂಬುದನ್ನು ಅರಿತು, ನಮ್ಮ ಕಾಯಕದಲ್ಲಿ ಶ್ರದ್ಧೆಯಿಟ್ಟು ನಮ್ಮದೇ ರೀತಿಯಲ್ಲಿ ದೇವರನ್ನು ಕಾಣುವುದು.

-----o---- 

No comments:

Post a Comment