ನನ್ನ ಈ ಲಘು ಬರಹ ಪ್ರಜಾವಾಣಿಯ ನವೆಂಬರ್ ಎರಡನೇ ತಾರೀಖು ಕಾಮನಬಿಲ್ಲು ಸಂಚಿಕೆಯಲ್ಲಿ ಪ್ರಕಟವಾಯಿತು.
ಹನುಮಂತ
ತಿರುಗಲಿಲ್ಲ....
ಬೆಂಗಳೂರಿನ
ಹನುಮಂತನಗರದಲ್ಲಿರುವ ರಾಮಾಂಜನೇಯ ಗುಡ್ಡ ಆಗ ನಮಗೆಲ್ಲಾ “ಹನುಮಂತನ
ಗುಟ್ಟೆ” ಎಂದೇ ಪರಿಚಯ. ಎಪ್ಪತ್ತರ
ದಶಕದ ಸಮಯ. ಸುಮಾರು
ಹತ್ತು ಹನ್ನೊಂದು ವರುಷದ ನಮ್ಮ ಓರಗೆಯ ಹುಡುಗರಿಗೆಲ್ಲಾ ವಂಡರ್ ಪಾರ್ಕ್. ಗುಡ್ಡ
ತುಂಬೆಲ್ಲಾ ಕುರುಚಲು ಗಿಡಗಳು, ಗುಡ್ಡದ ತುದಿಯಲ್ಲೊಂದು ಮಣ್ಣಿನ ಮಾಡು ಹೊದೆಸಿದ್ದ ಸಣ್ಣ
ಕಲ್ಲಿನ ಮಂಟಪ, ಅದರಲ್ಲಿ, ಮುಖ
ಪಕ್ಕಕ್ಕೆ ತಿರುಗಿಸಿ ಬಾಲ ಎತ್ತಿ ನಿಂತು ಒಂದು
ಕೈಯಲ್ಲಿ ಔಷಧಿ ಪರ್ವತ ಎತ್ತಿ ಹಿಡಿದು, ನಿಂತಿರುವ ಆಂಜನೇಯನ ಉಬ್ಬು ಶಿಲ್ಪ. ವರ್ಷಕ್ಕೊಮ್ಮೆ, ವಾರವೆಲ್ಲಾ
ನಡೆಯುತ್ತಿದ್ದ ರಾಮ ನವಮಿ ಬಹಳ ಜೋರಿನ ಹಬ್ಬ. ಮಧ್ಯಾಹ್ನ ಪೂಜೆ ನಂತರ
ಎಲ್ಲರಿಗೆ, ಕೋಸಂಬರಿ, ಕಡ್ಲೆಕಾಳಿನ
ಉಸುಳಿ ಮತ್ತು ಪಾನಕದ ವಿತರಣೆ. ಕಡ್ಲೆಕಾಳಿನ ಉಸುಳಿ, ಮತ್ತು
ಕೋಸಂಬರಿಗೆ ಎಲೆಯಲ್ಲಿ ಕಟ್ಟಿದ ಜೊನ್ನೆ, ಪಾನಕಕ್ಕೆ ನಮ್ಮ ಮನೆಯಿಂದಲೇ ತಂದಿರವ ಉದ್ದನೆಯ ಕಂಚಿನ ಲೋಟ. ಎಲ್ಲರೂ, ದೇವಸ್ತಾನದ
ಸುತ್ತ ಇದ್ದ ಕಲ್ಲಿನ ಕಟ್ಟೆಯ ಮೇಲೆ ಸಾಲಾಗಿ ಕುಳಿತುಕೊಂಡರೆ, ಪ್ರಸಾದ
ಕೊಡುವವರು ಎಲ್ಲರಿಗೂ ಪ್ರಸಾದ, ಪಾನಕ ಹಂಚುತ್ತಾ ಬರುತ್ತಿದ್ದರು.
ಹುಡುಗರಾದ
ನಾವೆಲ್ಲರೂ ಸರದಿಯಲ್ಲಿ ಮೊದಲ ಸ್ಥಾನ ಪಡೆಯಲು ಪೈಪೋಟಿ. ಯಾಕೆಂದರೆ, ಮೊದಲಿಗೆ
ಪ್ರಸಾದ ತೆಗೆದುಕೊಂಡ ತಕ್ಷಣ, ಗಬ ಗಬ
ತಿಂದು, ಗಟಗಟ ಪಾನಕ
ಕುಡಿದು, ವೃತ್ತಾಕಾರದ ಸಾಲಿನ ಕೊನೆಯಲ್ಲಿ ಮತ್ತೆ ಕುಳಿತುಕೊಳ್ಳುವುದು. ಮತ್ತೆ
ಹೊಸದಾಗಿ ಪ್ರಸಾದ, ಪಾನಕ, ಮತ್ತೆ
ವೃತ್ತಾಕಾರವಾಗಿದ್ದ, ಕಟ್ಟೆಯ
ಕೊನೆಯಲ್ಲಿ ಮತ್ತೆ ಪ್ರತ್ಯಕ್ಷ. ಇಂತಹ ಒಂದು ದಿನದಲ್ಲಿ ನಾನು ಗುಡ್ಡಕ್ಕೆ ಬರುವುದು ತಡವಾಗಿ, ಪ್ರಸಾದ-ಪಾನಕ
ಸರಿಯಾಗಿ ಸಿಗಲಿಲ್ಲ. ಮತ್ತೆ ಕೇಳ
ಹೋದಾಗ, ಹಂಚುತ್ತಿರುವ
ಪೂಜಾರಿಯೊಬ್ಬರು, ಗುಂಪಿನಿಂದ
ನನ್ನ ಕೈ ಹಿಡಿದು ಎಳೆದು ಹಾಕಿದರು. ನನಗೆ ತುಂಬಾ ನಿರಾಶೆ, ಅವಮಾನ
ಆಯಿತು. ಆಗ ನನಗೆ
ನೆನಪಾಗಿದ್ದು, ರಾಜಲಕ್ಷ್ಮಿ ಟೆಂಟಿನಲ್ಲಿ
(ಸಂಚಾರಿ ಸಿನಿಮಾ ಮಂದಿರ) ನೆಲದ ಮೇಲೆ ಕುಳಿತು ನೋಡಿದ್ದ ಭಕ್ತ
ಕನಕದಾಸ ಸಿನಿಮಾ. ಅದರಲ್ಲಿ ಕನಕದಾಸ, ಕೃಷ್ಣದೇವರನ್ನು ದೇವಾಲಯದ ಹಿಂಬಾಗ ನಿಂತು
ಪ್ರಾರ್ಥಿಸಿದಾಗ, ದೇವಾಸ್ತಾನ
ಗೋಡೆ ಒಡೆದು, ಕೃಷ್ಣ
ಪೂರ್ವ ದಿಕ್ಕಿನಿಂದ, ಪಶ್ಚಿಮ
ದಿಕ್ಕಿಗೆ ತಿರುಗಿ ನಿಂತು ದರ್ಶನ ಕೊಟ್ಟಿದ್ದು ನೆನಪಿಸಿಕೊಂಡೆ. ಹಾಗೇ ಚಿಕ್ಕ ಮಗುವಾದ ಪ್ರಹ್ಲಾದನ ಪ್ರಾರ್ಥನೆಗೆ
ಓಗೊಟ್ಟು ಕಂಬ ಸೀಳಿಕೊಂಡು ನರಸಿಂಹ ದೇವರು ಬಂದಿದ್ದು ಹರಿಕಥೆಯಲ್ಲಿ ಕೇಳಿ ತಿಳಿದ್ದಿದ್ದೆ.
ತಕ್ಷಣ
ದೇವಸ್ತಾನ ಹಿಂಬಾಗ ಹೋಗಿ, ಕಟ್ಟೆಯ ಮೇಲೆ ಕಣ್ಣ್ಮುಚ್ಚಿ ಕುಳಿತು, ದೇವರನ್ನು
ಪ್ರಾರ್ಥಿಸಿದೆ. “ದೇವ, ನನಗೆ ನಿನ್ನ
ಪ್ರಸಾದ ಈ ಪೂಜಾರಿ ಕೊಡಲಿಲ್ಲ. ಆದ್ದರಿಂದ, ನೀನು ನನ್ನ ಪ್ರಾರ್ಥನೆಗೆ ಮೆಚ್ಚಿ, ನಿಂತಲ್ಲೇ ಹಿಂದೆ
ತಿರುಗಿಬಿಡು, ದೇವಸ್ತಾನದ
ಗೋಡೆ ಒಡೆದು ಬಿಡು. ಸಿನಿಮಾದಲ್ಲಿ
ತೋರಿಸಿರುವಂತೆ ಮಂಗಳಾರತಿ ಗಾಳಿಯಲ್ಲಿ ತೇಲಿ ಬರದಿದ್ದರೂ, ಪ್ರಸಾದ-ಪಾನಕ
ತೇಲಿಬರಲಿ. ಆ ಪೂಜಾರಿಗೆ
ಬುದ್ಧಿ ಬರಲಿ...”
ಎನ್ನುತ್ತಾ ಸುಮಾರು ಅರ್ಧ ತಾಸು ಕುಳಿತು ಆಗಾಗ
ಸ್ವಲ್ಪವೇ ಕಣ್ಣು ತೆರೆದು ದೇವಾಲಯದ ಹಿಂದಿನ ಖಾಲಿ ಗೋಡೆ ನೊಡಿಕೊಳ್ಳುತ್ತಾ, ಮತ್ತೆ
ಕಣ್ಣು ಮುಚ್ಚಿ ಪ್ರಾರ್ಥನೆ ಮಾಡುತ್ತಾ ಕುಳಿತೆ. ಆದರೆ ಪವಾಡವೇನೂ ನಡೆಯಲಿಲ್ಲ. ಸ್ವಲ್ಪ
ಹೊತ್ತಿನ ನಂತರ, ಪ್ರಸಾದ-ಪಾನಕದ
ಪಾತ್ರೆಗಳನ್ನು ದೇವಾಲಯದ ಹಿಂಬಾಗಕ್ಕೆ ತಂದಿಟ್ಟ ಶಬ್ಧ ಕೇಳಿ ಬಂತು. ಅನುಮಾನದಿಂದ
ಪೂರ್ತಿ ಕಣ್ಣು ಬಿಟ್ಟೆ. ದೇವನೇ
ಪಾತ್ರೆಗಳನ್ನು ನನ್ನ ಬಳಿಗೆ ಕಳುಹಿಸರಬಹುದೆಂದು ಆಸೆಯಿಂದ ಇಣುಕಿದೆ. ಪಾತ್ರೆಯೊಳಗೆ
ಎಲ್ಲವೂ ಖಾಲಿ. ಪಾತ್ರೆ-ಕೊಳಗಗಳನ್ನು ತೊಳೆಯಲು ಅಲ್ಲಿಗೆ ತಂದಿಟ್ಟಿದ್ದರು. ಹನುಮಂತ
ಕೊನೆಗೂ ತಿರುಗಿ ನಿಲ್ಲಲಿಲ್ಲ. ಹಸಿವು ಹೆಚ್ಚಿದಂತಾಗಿ ಹೊಟ್ಟೆಯೊಳಗೆ ಸಂಕಟ, ಪ್ರಸಾದ-ಪಾನಕ ಸಿಗದ, ಅದಕ್ಕೆ
ಸಹಾಯ ಮಾಡದ ದೇವರ ಮೇಲೆ ಕೋಪ ಎಲ್ಲಾ ಸೇರಿಕೊಂಡು, ಮತ್ತೊಮ್ಮೆ ಎಂದಿಗೂ ಈ ದೇವಾಲಯಕ್ಕೆ ಬರುವಿದಿಲ್ಲವೆಂದು ಶಪಥ ಮಾಡುತ್ತಾ ಮನೆಗೆ ಬಂದೆ. ಮಾರನೆಯ ದಿನ
ಪ್ರಸಾದದ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಾನೇ ಕುಳಿತ್ತಿದ್ದೆ.
No comments:
Post a Comment