Tuesday, November 7, 2017

ಪ್ರೀತಿಯ ಹಕ್ಕು

ಪ್ರೀತಿಯ ಹಕ್ಕು

          ಸರಿತಾ-ಸಾವಂತ ಇಬ್ಬರೂ ಅನ್ಯೋನ್ಯ ದಂಪತಿಗಳು. ಸಹಪಾಠಿಗಳಾಗಿದ್ದಾಗಲೇ ಪ್ರೇಮಿಸಿ ಮದುವೆಯಾದವರು. ಸರಿತಾಗೆ ಶನಿವಾರ ವಿಶೇಷ. ಅಂದು ಏನೇ ಆದರೂ ದುಡಿಯುವ ಸತಿಪತಿಗಳಿಬ್ಬರೂ ಯಾವುದಾದರೂ ಹೋಟೆಲಿನಲ್ಲಿ ತಿಂದು ಮನೆಗೆ ಹೋಗುವ ರೂಢಿ. ಹಾಗೇ ಈ ಶನಿವಾರವೂ ಅವರು ಅಫೀಸಿನಿಂದ ಮರಳುವ ದಾರಿಯಲ್ಲಿ ಸಿಕ್ಕ ಒಂದು ಸಾಧಾರಣ ಹೋಟೆಲ್ಲಿಗೆ ನುಗ್ಗಿದರು. ಎದುರು-ಬದುರು ಕುಳಿತು ಭಾನುವಾರದ ಕೆಲಸ-ಕಾರ್ಯ, ಔಟಿಂಗ್ ಇತ್ಯಾದಿ ಮಾತನಾಡುತ್ತಾ ಎರಡು ಮಸಾಲೆ ದೋಸೆ ತರಲು ಹೇಳಿ ರಿಲಾಕ್ಸ್ ಆಗೆ ಕುಳಿತರು.
          ಆಗಲೇ ಆ ವಿಚಿತ್ರ ಸಂಸಾರ ಅದೇ ಹೋಟೆಲ್ಲಿಗೆ ಬಂದಿದ್ದು. ಮುಂದೆ ಬಂದ ಪುರುಷನ ಮುಖ ಸಿಡುಬಿನ ಕಲೆಯಿಂದ ವಿಕಾರವಾಗಿತ್ತು. ಅದನ್ನು ಮುಚ್ಚಿಡಲು ಸ್ವಲ್ಪ ಸ್ವಲ್ಪ ಬೆಳೆದ ಕುರುಚಲು ಗಿಡ ಬಿಟ್ಟಿದ್ದ. ಅವನ ಹಿಂದೆ ತಲೆಕೂದಲು ಕೆದರಿಕೊಂಡು ಬಂದ ಬಹುಶಃ ಅವನ ಮಗಳಾದ ಸುಮಾರು 5 ವರ್ಷದ ಹುಡುಗಿ, ಅವಳ ಹಿಂದೆ ಮಾಸಿದ ಸೀರೆ ಉಟ್ಟ, ಮತ್ತೆ ತುಂಬು ಬಸುರಿಯಾದ ಅವನ ಹೆಂಡತಿಯೆನ್ನಬಹುದಾದ ಅವಳೂ ಕಷ್ಟಪಟ್ಟು ಕಾಲಿಟ್ಟುಕೊಂಡು ಒಳಬಂದು ಎಲ್ಲರೂ ಇವರ ಪಕ್ಕದ ಟೇಬಲ್ ಗೇ ಬಂದು ಕುಳಿತರು. ಸರಿತಾ ಅವರತ್ತ ಜಿಗುಪ್ಸೆಯ ನೋಟ ಬೀರುತ್ತಾ, “ಯಾಕಾದರೂ ಇಂತಹವರು ಮದುವೆಯಾಗುತ್ತಾರೋ” ಎಂದು ಗೊಣಗಿಕೊಂಡಳು.
          ಸಾವಂತ, “ಅವರ ಪ್ರಪಂಚ ಅವರಿಗೆ ಬಿಡೇ, ಒಟ್ಟಿನಲ್ಲಿ ಜೀವನ ಮಾಡ್ತಾರಲ್ಲಾ, ಎಲ್ಲಾ ಪ್ರಾಣಿ ಪಕ್ಷಿಗಳಿಗೂ ಜೀವಿಸುವ....”
          “ಸಾಕು ನಿಲ್ಲಿಸೋ ಸಾತೂ, ನೀನಂತೂ ಕಾಲೇಜಿನ ದಿನದಿಂದಲೂ ತತ್ವ ಹೇಳಿ, ಹೇಳಿ, ನನ್ನ ಸನ್ಯಾಸಿನಿ ಮಾಡಿಬಿಡುತ್ತಿದ್ದೀಯಾ” ಎನ್ನುತ್ತಾ, ಸರಿತಾ ಅವನ ಮಾತನ್ನು ಅಲ್ಲಿಗೇ ತುಂಡರಿಸಿದಳು. “ಅಯ್ಯಪ್ಪಾ, ಇಷ್ಟು ಬೇಗ ನೀನು ಸನ್ಯಾಸಿನಿ ಆದರೆ ನನ್ನ ಗತಿ......” ಎನ್ನುತ್ತಾ ಕಣ್ಣು ಮೇಲೆ ಮಾಡಿ ತುಂಟ ನಗೆಯಲ್ಲಿ ಹುಸಿ ಆತಂಕ ತೋರಿದ ಸಾವಂತ.
          ಅಷ್ಟರಲ್ಲಿ ಅವರಿಬ್ಬರಿಗೂ ಮಸಾಲೆ ದೋಸೆ ಬಂತು. ಸರಿತಾ ನಾಜೂಕಾಗಿ ಅದನ್ನು ಬೆರಳಲ್ಲಿ ಮುರಿದು ಕೈಗೆ ತಾಗಿಯೂ ತಾಗದಂತೆ ಅದನ್ನು ಹಿಡಿದು ಚಟ್ನಿಯಲ್ಲಿ ಮೆಲ್ಲಗೆ ಸ್ವಲ್ಪವೇ ಅದ್ದಿ ಬಾಯಿಗೆ ಹಾಕಿಕೊಂಡು ತುಟಿ ಮುಚ್ಚಿಕೊಂಡು ಮೆಲ್ಲಗೆ ಅಗಿದು ತಿನ್ನತೊಡಗದಳು. ಅವಳು ಯಾವಾಗಲೂ ಹಾಗೆಯೇ. ನಯ ನಾಜೂಕು. ತಿನ್ನುವಾಗಲೂ ಬಾಯಿ ತೆರೆಯದೆಯೇ ತುಟಿ ಮುಚ್ಚಿಟ್ಟುಕೊಂಡೇ ಎದುರು ಕುಳಿತವರಿಗೆ ಸ್ವಲ್ಪವೂ ತಿಳಿಯದಂತೆ ಸೇವಿಯಬೇಕೆಂಬುದು ಅವಳ ಅಭಿಮತ. ಸಾವಂತನೋ, ತನ್ನ ಇಷ್ಟ ಬಂದಹಾಗೆ ತಿನ್ನುವವ. ದೋಸೆಯ ಹೊಟ್ಟೆ ಬಗೆದು, ಪಲ್ಯ ಹೊರತೆಗೆದು, ಸ್ವಲ್ಪ ದೋಸೆ ಮುರಿದು ಅದರಲ್ಲಿ ಸ್ವಲ್ಪ ಪಲ್ಯ ಹಿಡಿದು, ನಂತರ ಚಟ್ನಿಯಲ್ಲಿ ಅದ್ದಿ, ಸ್ವಲ್ಪ ದೊಡ್ಡದಾಗೇ ಬಾಯಿ ತೆರೆದು ಅದನ್ನು ಒಳಗೆ ಹಾಕಿಕೊಂಡು, ಚೊರ, ಚೊರ ಸದ್ದು ಮಾಡುತ್ತಾ, ಅದರ ರುಚಿಯನ್ನು ಸವಿಯುತ್ತಾ, ಕಾಲಾಡಿಸುತ್ತಾ ಕುಳಿತ. “ಈ ಹೊಟ್ಟೆಬಾಕನಿಗೆ ಎಷ್ಟು ಹೇಳಿಕೊಟ್ಟರೂ ಅಷ್ಟೆ. ಟೇಬಲ್ ಮ್ಯಾನರ್ಸ್ ಕಲಿಯಲಿಲ್ಲ” ಎಂದು ನಸುಗೋಪದಿಂದ ಗೊಣಗಿಕೊಂಡು ಸರಿತಾ, ಪಕ್ಕದ ಟೇಬಲ್ ಕಡೆ ಕಣ್ಣು ಹಾಯಿಸಿದಳು.
          ಅಲ್ಲಿ ಕುರುಚಲು ಗಡ್ಡದವ ತಾನೊಬ್ಬನೇ ಒಂದು ಉದ್ದಿನ ವಡೆಯನ್ನು ಸಣ್ಣ ಸಣ್ಣ ತುಂಡು ಮಾಡಿ ಸಾಂಬಾರಿನಲ್ಲಿ ಹೊರಳಾಡಿಸಿ ತಿನ್ನುತ್ತಿದ್ದ. ಅವನ ಮಗಳೂ, ಅವನ ಬಸುರಿ ಹೆಂಡತಿಯೂ ಅವನ ತಟ್ಟೆಯನ್ನೂ, ಅವನು ತಿನ್ನುವುದನ್ನೂ ನೋಡುತ್ತಾ ಕುಳಿತ್ತಿದ್ದರು. ಇದನ್ನು ನೋಡಿದ ಸರಿತಾಗೆ ಹೊಟ್ಟೆಯಲ್ಲಿ ಬೆಂಕಿ ಭುಗಿಲೆದ್ದಿತು. “ನಾಯಿಯಂತಹವನು!, ಮನುಷ್ಯನಾಗಲು ನಾಲಾಯಕ್ ಪ್ರಾಣಿ. ಈ ಸುಖಕ್ಕೆ ಅವರಿಬ್ಬರನ್ನು ಯಾಕೆ ಕರೆತಂದನೋ” ಎಂದು ತನ್ನೊಳಗೇ ಗೊಣಗಿಕೊಳ್ಳುತ್ತಾ ಕೋಪದಿಂದ ಮುಖ ಕೆಂಪಗೆ ಮಾಡಿಕೊಂಡು ಅಸಹಾಯಕತೆಯಿಂದ ಕುದಿಯುತ್ತಾ ಕುಳಿತಳು. ಇವೆಲ್ಲವನ್ನೂ ಕಿರುಗಣ್ಣಲ್ಲೇ ನೋಡಿದ ಸಾವಂತ ಏನೂ ಗೊತ್ತಿಲ್ಲದವನಂತೆ, ಮಾತನಾಡಿದರೆ ಉರಿ ಕಾರುವ ಸ್ಥಿತಿಯಲ್ಲಿದ್ದ ಪತ್ನಿ ಸರಿತಾಳನ್ನು ಪ್ರಚೋದಿಸದಂತೆ ತನ್ನ ಪಾಡಿಗೆ ತಾನು ಎಂಬಂತೆ ಎಲ್ಲೋ ನೋಡುತ್ತಾ ದೋಸೆ ಮುಗಿಸತೊಡಗಿದ.
          ಕುರುಚಲು ಗಡ್ಡದವ ತಿಂದುದರಲ್ಲೇ ಸ್ವಲ್ಪ ಉಳಿಸಿ ಮಗಳೆಡೆಗೆ ಚಾಚಿದ. ಅವಳು ಬೇಡವೆಂಬಂತೆ ತಲೆ ಆಡಿಸುತ್ತಾ, ಆದರೆ ಆಸೆಗಣ್ಣಿಂದ ನೋಡುತ್ತಾ, ಎರಡೂ ಕೈಯಲ್ಲಿ ಬಟ್ಟಲನ್ನು ಅವಳಪ್ಪನಿಂದ ತೆಗೆದುಕೊಂಡು ಅದರಲ್ಲಿ ಉಳಿದಿದ್ದ ವಡೆಯ ತುಂಡನ್ನು ತಿನ್ನಲಾರಂಭಿಸಿದಳು. ಇದನ್ನು ಕಂಡ ಮೇಲಂತೂ ಸರಿತಾಗೆ ತಡೆಯಾಗಲಿಲ್ಲ. “ದರಿದ್ರ ಗಂಡಸೇ!.......” ಎಂದು ಜೋರಾಗೇ ಗೊಣಗಿಕೊಂಡು, ನಿರ್ಲಿಪ್ತನಂತಿದ್ದ ತನ್ನ ಗಂಡನ ಮೇಲೇ ತನ್ನೆಲ್ಲಾ ಕೋಪವನ್ನು ತಿರುಗಿಸಿಕೊಂಡು. “ಏನೇ ಆದರೂ ಗಂಡು ಜಾತಿಗೆ ಇರುವ ಕೊಬ್ಬು,.....” ಎಂದು ಉಳಿದ ಮಾತನ್ನು ನುಂಗಿಕೊಂಡಳು.
          ಸಾವಂತ್, “ಸಾರಿ....., ನಿನಗೆಷ್ಟು ಸಲ ಹೇಳಿದ್ದೇನೆ. ಡೋಂಟ್ ಜಂಪ್ ಟು ಕನ್ ಕ್ಲೂಷನ್. ಯಾವಾಗಲೂ,ಯೊಚನೆ ಮಾಡಿ .....” ಇನ್ನೂ ಅವನ ಮಾತು ಮುಗಿಯುವ ಮುನ್ನ ಸರಿತಾ ಏನೋ ಹೇಳಲು ದೊಡ್ಡದಾಗಿ ಬಾಯಿ ತೆಗೆದಳು. ಅಷ್ಟರಲ್ಲಿ ಸಾವಂತ್, ’ಈಗ ನೋಡು’ ಎನ್ನುವಂತೆ ಪಕ್ಕದ ಟೇಬಲ್ ಕಡೆ ಸನ್ನೆ ಮಾಡಿ ತೋರಿದ. ಈಗ ಪಕ್ಕದ ಟೇಬಲ್ ಗೂ ಎರಡು ಪ್ಲೇಟ್ ಮಸಾಲೆ ದೋಸೆ ಬಂದಿಳಿದ್ದಿದ್ದವು. ಒಂದನ್ನು ಆ ಮಗಳೂ, ಇನ್ನೊಂದನ್ನು ಆ ತುಂಬಿದ ಬಸುರಿಯೂ ತಿನ್ನಲು ತೊಡಗಿದರು. ಅಷ್ಟರಲ್ಲಿ ಪುಟ್ಟ ಮಗಳು ತನ್ನ ತಟ್ಟೆಯಲ್ಲಿದ್ದ ದೋಸೆಯಲ್ಲಿ ಒಂದು ಚೂರನ್ನು ಮುರಿದು ಕುರುಚಲು ಗಡ್ಡದ ಅಪ್ಪನಿಗೆ ಒತ್ತಾಯ ಮಾಡಿ ಅವನ ಬಾಯಲ್ಲಿ ಇಟ್ಟಳು. ಆತ, ಅದರಲ್ಲೇ, ಅರ್ಧ ಹಾಗೇ ಹಲ್ಲಲ್ಲಿ ಕಚ್ಚಿ, ಇನ್ನರ್ಧ ತನ್ನ ಹೆಂಡತಿಯ ಬಾಯಿಗೆ ಹಾಕುತ್ತಾ, “ನಿಮ್ಮಮ್ಮನಿಗೇ ಮಸಾಲೆ ದೋಸೆ ಎಂದರೆ ಇಷ್ಟ. ಅವಳಿಗೇ ಬಯಕೆ...”, ನಸುನಗುತ್ತಾ ಮಗಳ ಮತ್ತು ಹೆಂಡತಿಯ ಕಡೆಗೆ ತೃಪ್ತಿಯ ನಗೆ ಬೀರಿದ.
          “ನಿನಗೂ ಮಸಾಲೆ ದೋಸೆ ಇಷ್ಟ ಅಲ್ವಾ, ನೀನೂ ಅದನ್ನೇ ಹೇಳಬಹುದಿತ್ತಲ್ವಾ ಅಪ್ಪಾ...” ರಾಗ ಎಳೆದಳು ಮಾಸಿದ ಬಟ್ಟೆಯ  ಕೆದರಿದ ಕೂದಲಿನ ಮಗಳು. ತೃಪ್ತಿಯ ನಗೆಯ ಬೀರುತ್ತಿದ್ದ ಕುರುಚುಲು ಗಡ್ಡದವನ ಮುಖದಲ್ಲಿ ನಿಧಾನವಾಗಿ ಗೆರೆಗಳು ಸಡಿಲವಾಗಿ, ಸ್ವಲ್ಪ ಸ್ವಲ್ಪವೇ ಬದಲಾಗಿ, ವಕ್ರವಾಗಿ ಚಿಂತೆಯ ತೀರ್ವತೆಯನ್ನು ತೋರಿಸಿಕೊಳ್ಳುತ್ತಿದ್ದಂತೇ ಆತ ಮೆಲ್ಲನುಸುರಿದ, “ಇವತ್ತು ಇಷ್ಟೇ ಆಗೋದು!.....” ಆತನ ಕೈಗಳು ತನ್ನರಿವಿಲ್ಲದಂತೆ ಖಾಲಿ ಜೇಬನ್ನು ಸವರಿದವು. ಸಾವಂತ್ ಸರಿತಾಳತ್ತ ತಿರುಗಿ ನೋಡಿದ. ಸರಿತಾ, ಬಾಯಿತೆಗೆದು ಕುಳಿತು, ನಂಬಲಾರದವಳಂತೆ, ಗರಬಡಿದವಳಂತೆ ಆ ಸಂಸಾರವನ್ನೇ ನೋಡುತ್ತಿದ್ದಳು.

----ಡಾ. ಎಸ್.ಎನ್. ಶ್ರೀಧರ

No comments:

Post a Comment