Tuesday, November 7, 2017

ದೊಡ್ಡವರ ಅಹಂ

ದೊಡ್ಡವರ ಅಹಂ

ಇನ್ಫೋಸಿಸ್ ನ ನಾರಯಣ ಮೂರ್ತಿಯವರು, ರಾಷ್ಟ್ರಪತಿಯವರ ಇತ್ತೀಚಿನ ಭೇಟಿಯಲ್ಲಿ ತಮ್ಮ ಸಂಸ್ಥೆಯಲ್ಲಿ ಇರುವ ವಿದೇಶಿಗರಿಗೆ ಮುಜುಗರವಾಗಬಾರದೆಂದು ರಾಷ್ಟ್ರಗೀತೆಯನ್ನು ಕೇವಲ್ ವಾದ್ಯಗಳ ಟ್ಯೂನ್ ನಿಂದ ನುಡಿಸಿ ಗೌರವ ಸೂಚಿಸಲಾಯಿತೆಂದೂ, ಅದನ್ನು ಯಾರೂ ಹಾಡಲಿಲ್ಲ್ ಎಂದೂ ಪತ್ರಿಕಾಗೋಷ್ಟಿಯಲ್ಲಿ ಪ್ರಕಟಿಸಿದ್ದಕ್ಕೆ ಬಹಳಷ್ಟು ಪ್ರತಿಭಟನೆ ನಡೆಯಿತು. ಆ ನಂತರ ಸ್ಪಷ್ಟನೆ ನೀಡಿ, ವಾದ್ಯಗಳ ನಡುವೆಯೂ ರಾಷ್ಟ್ರಪತಿಗಳ ಸುತ್ತಮುತ್ತ ನಿಂತವರು ಅವರ ದನಿಗೂಡಿಸಿ ಹಾಡಿದರೆಂದೂ, ತಮ್ಮ ಮೊದಲಿನ ಹೇಳಿಕೆಗಳಿಂದ ಯಾರಿಗಾದರೂ ನೋವಾಗಿದ್ದರೆ ತಮ್ಮನ್ನು ಕ್ಷಮಿಸಬೇಕೆಂದೂ ಹೇಳಿದರು. (ಪ್ರ.ಜಾ. ಏ. 11). ಆ ನಂತರ ಜನಪ್ರಿಯ ಸಾಹಿತಿ ಎಸ್.ಎಲ್. ಬೈರಪ್ಪನವರು, ನಾರಾಯಣಮೂರ್ತಿಯವರ ನಿಲುವನ್ನು ವಹಿಸಿಕೊಂಡು ಮಾಡಿದ ಸಮರ್ಥನೆ ಮತ್ತು ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ ಸಮಾಜವಾದಿ ಲೇಖಕರೆಂದು ಗುರುತಿಸಿಕೊಂಡ ಬರಗೂರು ರಾಮಚಂದ್ರಪ್ಪನವರು ಭೈರಪ್ಪನವರ ನೆಲೆ-ಮೂಲ ಹಿಡಿದು ಜಾಲಾಡಿದ್ದೂ ಆಯಿತು. ಇದೇ ರೀತಿ ಕಾವೇರಿ ನದಿ ಪ್ರಾಧಿಕಾರದ ತೀರ್ಪನ್ನು ಬೆಂಬಲಿಸಿದ ನಾಟಕಕಾರರಾದ ಗಿರೀಶ್ ಕಾರ್ನಾಡ್ ಅವರ ಪ್ರಕರಣ, ನಂತರ ಅದಕ್ಕೆ ಅತಿಶಯದ ವಿರೋಧವೂ ನಡೆದವು. ಖ್ಯಾತ ವಿಮರ್ಶಕರೊಬ್ಬರು ತಮ್ಮೆಲ್ಲಾ ಪ್ರತಿಭೆ ಧಾರೆಯೆರೆದು ವೈಯಕ್ತಿಕ ನೆಲೆಯಲ್ಲಿ ಕಾರ್ನಾಡರನ್ನು ಖಂಡತುಂಡವಾಗಿ ಖಂಡಿಸಿದ್ದೂ ಆಯಿತು. ಯಾವುದಕ್ಕೂ ಜಗ್ಗದ ಕಾರ್ನಾಡ್, ತಮ್ಮ್ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಇದಕ್ಕೆ ಮುಂಚೆ ಸಾಹಿತಿಯೊಬ್ಬರ ಬಗ್ಗೆ ಹಗುರವಾಗಿ ಮಾತನಾಡಿದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ನಂತರ ಬಹಿರಂಗ ಕ್ಷಮೆ ಯಾಚಿಸಿದ್ದರು.

            ಈ ಪ್ರಕರಣಗಳಿಂದ ಅನೇಕ ವಿಷಯಗಳನ್ನು ಅವಲೋಕಿಸಬಹುದು. ಒಬ್ಬ ಯಶಸ್ವಿ ಉದ್ಯಮಿ ಅಥವಾ ವ್ಯಕ್ತಿ ಸಾರ್ವಜನಿಕವಾಗಿ ಮಾತನಾಡುವಾಗ ಬಹಳ ಎಚ್ಚ್ರಿಕೆಯಿಂದ ಇರುವುದು ಅತ್ಯಂತ ಅವಶ್ಯಕ. ರಾಜಕಾರಣಿಗಳೂ, ಉದ್ಯಮಿಗಳೂ, ತಮ್ಮ ಅಹಂ ಬಿಟ್ಟು ಸಮಯಕ್ಕೆ ತಕ್ಕಂತೆ ತಾವೇ ಆಡಿದ ಮಾತನ್ನು ಹಿಂತೆಗೆದುಕೊಳ್ಳಬಲ್ಲ ಚತುರರು. ಕಲ್ಪನಾಲೋಕದಲ್ಲಿ ವಿಹರಿಸುವ ಸಾಹಿತಿಗಳು ಬಿದ್ದರೂ ಮೀಸೆ ಮಣ್ಣಾಗದ, ತಮ್ಮ ತಪ್ಪು ನಿಲುವು ತಮಗೇ ಗೋಚರವಾದರೂ, ಅದೇ ಸರಿಯಿಂದು ವಿತಂಡವಾದ ಮಾಡುತ್ತಾ ವಿರೋಧಿಗಳನ್ನು ವೈಯಕ್ತಿಕ ನೆಲೆಯಲ್ಲಿ ಹೀಯಾಳಿಸುತ್ತಾ, ಗೆಲುವೆಂಬ ಹುಸಿ-ಸಿಂಹಾಸನದಲ್ಲಿ ವಿರಾಜಮಾನವಾಗಬಯಸುವ ಅತಿಶಯರು. ಇದಕ್ಕೆ ಅಲ್ಲಲ್ಲಿ ಅಪವಾದ ಇರಬಹುದಾದರೂ, ಬಹುತೇಕ ಹೀಗೇ ಎಂದು ಹೇಳಬಹುದು. ಸಮಾಜಕ್ಕೆ ಉತ್ತಮ ಸಂದೇಶ ನೀಡಬಲ್ಲ ಸಾಹಿತಿಗಳು ತಮ್ಮ ವರ್ತನೆಯಲ್ಲಿ ಹೀಗೇಕೆ? ಸಾರ್ವಜನಿಕವಾಗಿ ಅತಿ ಎಚ್ಚರಿಕೆಯಿಂದ ವರ್ತಿಸಬೇಕಾದ ಅನಿವಾರ್ಯತೆಯಿದ್ದರೂ ಬಾಯಿ ಸಡಿಲಿಸಿ ಬಾಲಿಶ ಹೇಳಿಕೆಗಳನ್ನು ನೀಡುವ ಮತ್ತೆ ನಂತರ ಹಿಂತೆಗೆದುಕೊಳ್ಳುವ ಗಣ್ಯ ವ್ಯಕ್ತಿಗಲ ಹುಂಬತನ ಏಕೆ?

--ಡಾ. ಎಸ್.ಎನ್. ಶ್ರೀಧರ

No comments:

Post a Comment