Monday, November 14, 2016

ಕರ್ನಾಟಕದಲ್ಲೇ ಅನಾಥವಾಗುತ್ತಿರುವ ಕನ್ನಡ

ನವೆಂಬರ್ 7 ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ. ಇಲ್ಲಿ ಕೊಟ್ಟಿರುವುದು ಪೂರ್ಣ ಪಾಠ. ಇದರಲ್ಲಿ ಅಲ್ಪ ಬದಲಾವಣೆಯೊಂದಿಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಯಿತು.


ಕರ್ನಾಟಕದಲ್ಲೇ ಅನಾಥವಾಗುತ್ತಿರುವ ಕನ್ನಡ

ಪ್ರಜಾವಾಣಿಯು ಕನ್ನಡ ರಾಜ್ಯೋತ್ಸವದ ದಿನದಂದು, ಕನ್ನಡದ ಬಗ್ಗೆ ಅನೇಕ ವಿಷಯಗಳನ್ನು ಚೊಕ್ಕದಾಗಿ ನೀಡಿದೆ. ಹಾಗೇ “ಕನ್ನಡದ ಕೆಲಸ: ಅನುಷ್ಠಾನ ಮುಖ್ಯ” ಎಂಬ ಶಿರೋನಾಮೆಯೊಂದಿಗೆ ಖ್ಯಾತ ವಿಮರ್ಶಕರಾದ ಸಿ.ಎನ್. ರಾಮಚಂದ್ರನ್ ಅವರ ಅನಿಸಿಕೆಗಳನ್ನು ಪ್ರಕಟಿಸಿದೆ. ಈ ಲೇಖನಕ್ಕೆ ಪೂರಕವಾಗಿ ಹಾಗೂ ಭಿನ್ನವಾಗಿ ಚರ್ಚಿಸಲು ಈ ಲೇಖನವನ್ನು ಸಿದ್ಧಪಡಿಸಿ, ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಹೀಗೊಂದು ಪ್ರಸಂಗ: ಮನೆಯೊಂದರಲ್ಲಿ ಹಿರಿಯರೊಬ್ಬರ ನಿಧನದ ನಂತರ ಅವರ ಸ್ಮರಣಾರ್ಥ ಒಂದು ಸಂಚಿಕೆಯನ್ನು ಹೊರತರಲು ಮಕ್ಕಳು ಮೊಮ್ಮಕ್ಕಳು ನಿರ್ಧರಿಸಿದರು. ಲೇಖನವನ್ನು ಕೂಢ್ರೀಕರಿಸಿದಾಗ ಮಕ್ಕಳು ಕನ್ನಡದಲ್ಲಿ ನೆನಪುಗಳನ್ನು ಆತ್ಮೀಯತೆಯ ಸವಿ ಹಂಚುವಂತೆ ಬರೆದರೆ, ಪ್ರೀತಿಯ ಮೊಮ್ಮಕ್ಕಳು ಅಜ್ಜನ ಮೇಲಿನ ಪ್ರೇಮವನ್ನು ಇಂಗ್ಲೀಷಿನಲ್ಲಿ ಅದ್ಭುತವಾಗಿ ನಿವೇದಿಸಿದ್ದರು. ಮಕ್ಕಳು, ಮೊಮ್ಮಕ್ಕಳು ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತಾರೆ. ಅಜ್ಜನ ಜೊತೆಗೂ ಅವರ ಬದುಕಿನಲ್ಲಿ ಮುದ್ದಾದ ಕನ್ನಡದಲ್ಲೇ ಮಾತನಾಡಿದ್ದಾರೆ. ಆದರೆ, ಶಿಕ್ಷಣ ಕೊಟ್ಟ ಬಳುವಳಿಯಿಂದ ಕನ್ನಡದಲ್ಲಿ ಬರೆಯಲಾರರು! ಬಹುಶಃ ಅವರ ಮುಂದಿನ ಪೀಳಿಗೆ ಕನ್ನಡ ಲಿಪಿಯನ್ನೇ ಓದಲಾರರು ಎನಿಸಿತ್ತಿದೆ. ಇದರಲ್ಲಿ ಅತಿಶಯೋಕ್ತಿಯೇನಿಲ್ಲ. ನಮ್ಮ ಸ್ನೇಹಿತ ಬಂಧುಗಳೊಡನೆ ಪ್ರವಾಸಕ್ಕೆ ಹೋಗಿದ್ದಾಗ ಅವರ ಮಕ್ಕಳು ಕನ್ನಡ ಬೋರ್ಡ್ ಓದಲು ಬಾರದೇ ಅವರ ಅಪ್ಪ-ಅಮ್ಮ ಅವರನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ನಾನು ಕನಲಿಹೋದ ದಿನಗಳಲ್ಲಿ ಇದೂ ಒಂದು. ಇತ್ತೀಚೆಗೆ, ನಮ್ಮ ಬಡಾವಣೆಯಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ಸುಗಮ ಸಂಗೀತ ಸ್ಪರ್ಧೆ ಏರ್ಪಡಿಸಿದ್ದೆವು. ಅನೇಕ ಮಕ್ಕಳು ಕನ್ನಡ ಗೀತೆಗಳನ್ನು ಇಂಗ್ಲೀಷ್ ಲಿಪಿಯಯಲ್ಲಿ ಬರೆದುಕೊಂಡು ಅದರಲ್ಲಿ ಓದಿ ಬಾಯಿಪಾಠ ಮಾಡುತ್ತಿದ್ದರು. ಆ ಮಕ್ಕಳೆಲ್ಲರೂ ಕನ್ನಡಿಗರೇ, ಕನ್ನಡ ಮಾತನಾಡಬಲ್ಲರು, ಆದರೆ ಕನ್ನಡ ಲಿಪಿಯನ್ನು ಬಳಸಲಾರರು. ದುರಂತವೆಂದರೆ, ಅವರ ಪೋಷಕರಿಗೆ ತಮ್ಮ ಮಕ್ಕಳ ಈ ಸ್ಥಿತಿ ಸಹಜ ಎಂಬಂತೆ ಅನ್ನಿಸಿದ್ದು. ಕೆಲವರಂತೂ, ತಮ್ಮ ಮಕ್ಕಳಿಗೆ ಕನ್ನಡ ಗೊತ್ತಿಲ್ಲ ಎಂಬುದೇ ಮಹಾಸಾಧನೆ ಎಂಬಂತೆ ತೋರಿಸಿಕೊಳ್ಳುತ್ತಿದ್ದರು. ನಾವು ರಾಜ್ಯದ ಹೊರಗೆ ಪ್ರವಾಸ ಹೋದಾಗ ಯಾರಾದರೂ ಕನ್ನಡಿಗರು ಸಿಗುತ್ತಾರೇನೋ ಎಂದು ಹುಡುಕುತ್ತಿದ್ದಾಗ, ಕನ್ನಡ ಮಾತನಾಡದ ಕನ್ನಡಿಗರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ನಮ್ಮ ರಾಜ್ಯದಲ್ಲಿ ಕೂಡ, ಸ್ವತಃ ಕನ್ನಡಿಗರಿಗಿಂತೆ ಅನ್ಯ ಭಾಷಿಕರೇ ಚಂದದ ಕನ್ನಡ ಮಾತನ್ನಾಡುವುದನ್ನು ಕಂಡಿದ್ದೇವೆ. ಕೆಲವು ನಟಿಮಣಿಯರಂತೂ, ಬೇಕೆಂತಲೇ ತಪ್ಪು ತಪ್ಪು ಕನ್ನಡ ಮಾತನ್ನಾಡುತ್ತಾ, ತಮ್ಮ ಇಂಗ್ಲೀಷಿಗೆ ಪರ್ಯಾಯ ಪದಗಳು ಕನ್ನಡದಲ್ಲಿ ಇಲ್ಲವೆಂಬಂತೆ ಹಾವಭಾವ ತೋರ್ಪಡಿಸುತ್ತಾರೆ. ಅವರ ಇಂಗ್ಲೀಷ್ ಭಾಷೆಯೂ ಅಷ್ಟೇ ಕೆಟ್ಟದಾಗಿರುತ್ತದೆಯೆಂಬುದು ತಿಳಿದ ವಿಷಯವೇ.
ಕನ್ನಡ ರಾಜ್ಯೋತ್ಸವ ಮತ್ತೆ ಬಂದಿದೆ. ಎಲ್ಲರಿಗೂ ಮತ್ತೆ ಮತ್ತೆ ಹ್ಯಾಪಿ ರಾಜ್ಯೋತ್ಸವ ಹೇಳುವ ಅವಕಾಶ. ಆದರೆ, ಕನ್ನಡದ ಈಗಿನ ಸ್ಥಿತಿ ಹೇಗಿದೆ. ನಮ್ಮ ಮಕ್ಕಳೇ ಕನ್ನಡ ಲಿಪಿ ಓದಲಾರದ “ಅವಿದ್ಯಾವಂತ”ರಾಗುತ್ತಿದ್ದಾರೆ. ಎಲ್ಲರಿಗೂ ಇಂಗ್ಲೀಷ್ ಬೇಕು, ನಿಜ. ಕನ್ನಡ ಮಾಧ್ಯಮದಲ್ಲಿ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂದು ಕೆಲವು ಸಾಹಿತಿಗಳಂತೆ ನಾನು ಹೇಳಹೊರಟಿಲ್ಲ. ಅದು ಈಗಿನ ಪರಿಸ್ಥಿತಿಯಲ್ಲಿ ಕಾರ್ಯಸಾಧುವಲ್ಲ ಎಂದು ಎಲ್ಲರಿಗೂ ಮನವರಿಕೆಯಾಗಿದೆ. ಸುಪ್ರೀಂ ಕೋರ್ಟು “ಭಾಷಮಾಧ್ಯಮ ಪೋಷಕರ ಆಯ್ಕೆ” ಎಂದು ಆಜ್ಞೆ ಹೊರಡಿಸಿರುವುದರಿಂದ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ಮಾತೃಭಾಷೆಯಲ್ಲಿ ಪ್ರಾರ್ಥಮಿಕ ಶಿಕ್ಷಣ ಕೊಡಿಸಲು, ಸಂವಿಧಾನ ತಿದ್ದುಪಡಿಗೆ ಆಗ್ರಹಿಸಿ, ಪ್ರಧಾನ ಮಂತ್ರಿಗಳಿಗೆ ಎರಡು ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ (ಪ್ರ.ವಾ. ನ.2). ಇದು ಕೇವಲ ಹಾವು ಹೊಡೆಯಲು ಪೊದೆ ಸುತ್ತ ಕೋಲಿನಲ್ಲಿ ಬಡಿದಂತಾಗುತ್ತದೆ. ಏಕೆಂದರೆ, ಮೇಲ್ಮನೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲದೇ, ಇತರೆ ವಿರೋಧ ಪಕ್ಷಗಳ ಸದಸ್ಯರ ಸಹಕಾರವಿಲ್ಲದೇ ಯಾವುದೇ ಕಾನೂನನ್ನು ರೂಪಿಸಲಾಗುವಿದಿಲ್ಲ. ಅಲ್ಲದೇ, ಬಹುತೇಕ ರಾಜಕಾರಣಿಗಳ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲೇ ಓದುತ್ತಿರುತ್ತಾರೆ. ಹಾಗಾಗಿ ಮೇಲೆ ಹೇಳಿದ ಸಂವಿಧಾನ ತಿದ್ದುಪಡಿಗೆ ಅವರ ಬೆಂಬಲ ಸಿಗುವುದು ಕಷ್ಟ.
ಈಗಿನ ಪರಿಸ್ಥಿತಿಯಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಇಂಗ್ಲೀಷ್ ಶಾಲೆಗಳಿಗೆ ಬೇಡಿಕೆ ಹೆಚ್ಚಿ, ಅತ್ಯಂತ ಚೆನ್ನಾಗಿ ನಡೆಯುತ್ತಿರುವ ಸರ್ಕಾರಿ ಶಾಲೆಗಳೂ ಹಾಳು ಬೀಳುವಂತಾಗಿವೆ. ನಗರದ ಮಕ್ಕಳು ಚೆನ್ನಾಗಿ ಇಂಗ್ಲೀಷ್ ಕಲೆಯಬಹುದಾದರೆ, ಅದಕ್ಕಾಗೇ ಅವರಿಗೆ ಉನ್ನತ ಶಿಕ್ಷಣದಲ್ಲಿ, ಹಾಗೂ ಮುಂದೆ ಉದ್ಯೋಗಗಳಲ್ಲಿ ಉತ್ತಮ ಅವಕಾಶ ದೊರೆಯಬಹುದಾದರೆ, ಹಳ್ಳಿ ಮಕ್ಕಳಿಗೆ ಯಾಕೆ ಬೇಡ? ಇತ್ತೀಚೆಗೆ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳಲ್ಲೂ, ಒಂದನೇ ತರಗತಿಯಿಂದಲೂ ಇಂಗ್ಲೀಷ್ ಕಲಿಸುತ್ತಿದ್ದಾರೆ. ಆದರೆ, ಅದರ ಗುಣಮಟ್ಟ ಚರ್ಚಾರ್ಹ ವಿಷಯ. ಈಗಿರುವ ಪರಿಸ್ಥಿತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಕಲಿಸಲು ಕಷ್ಟಸಾಧ್ಯವಾಗಿರುವಾಗ, ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಗುಣಮಟ್ಟದ ಕನ್ನಡ ಕಲಿಸುವ ಪ್ರಯತ್ನ ಬೇಕಾಗಿದೆ.  
ಸಂವಿಧಾನ ತಿದ್ದುಪಡಿಗಿಂತ, ಮನೆ ಮನೆಗಳಲ್ಲಿ ಪೋಷಕರ ಮೂಲಕ ಮಕ್ಕಳಿಗೆ ಕನ್ನಡ ಕಲಿಸಬೇಕಾಗಿದೆ. ಸಾಧ್ಯವಾದರೆ ಶಾಲೆಗಳಲ್ಲಿ ಭಾಷೆಗಳ ಆಯ್ಕೆ ಬಂದಾಗ ಕನ್ನಡವನ್ನೇ ಪ್ರಥಮ ಭಾಷೆಯಾಗಿ ಆಯ್ದುಕೊಳ್ಳಲು ಪೋಷಕರು ಮುತುವರ್ಜಿ ವಹಿಸಬೇಕಾಗಿದೆ. ಕನ್ನಡಕ್ಕೆ ಬದಲಾಗಿ ಸಂಸ್ಕೃತವನ್ನು ಮೊದಲ ಭಾಷೆಯಾಗಿ ಆರಿಸಿಕೊಳ್ಳಲು ವಿದ್ಯಾರ್ಥಿಗಳು ಹಾಗೂ ಪೋಷಕರು ಹಂಬಲಿಸುವುದು, ಅದರ ಪಠ್ಯ ಕಡಿಮೆ ಇದ್ದು, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಸುಲಭವಾಗಿ ಪಡೆಯಬಹುದು ಎಂಬುದೇ ಆಗಿದೆ. ಕನ್ನಡ ಉಪಾಧ್ಯಾಯರುಗಳು ಕೂಡ ಎಷ್ಟೇ ಬರೆದರೂ ಕಡಿಮೆ ಅಂಕ ಕೊಡುತ್ತಾರೆ ಎಂಬುದು ಸಾರ್ವಜನಿಕ ಅಭಿಪ್ರಾಯ. ಆದರೆ, ಅದು ಇತ್ತೀಚೆಗೆ ಹಾಗಿಲ್ಲ ಎಂದು ನನ್ನ ಅನುಭವ. ಕನ್ನಡ ಪ್ರಥಮ ವಿಷಯವಾಗಿ ಓದಿದ ಅನೇಕ ಮಕ್ಕಳು 10 ನೇ ತರಗತಿಯಲ್ಲಿ ನಿಗದಿಯಾಗಿರುವ 125 ಅಂಕಗಳಿಗೆ, 124-125 ಅಂಕಗಳನ್ನು ಪಡೆದಿರುವುದನ್ನು ನಾವು ಕಾಣಬಹುದು. ಇಷ್ಟಿದ್ದರೂ, ಬಹುತೇಕ ಕನ್ನಡ ಉಪಾಧ್ಯಾಯರುಗಳೂ, ಉಪನ್ಯಾಸಕರೂ ತಮ್ಮ ಮಕ್ಕಳಿಗೆ ಪ್ರೌಢಶಾಲೆಯಲ್ಲಿ ಕನ್ನಡದ ಬದಲಿಗೆ ಸಂಸ್ಕೃತವನ್ನೇ ಪ್ರಥಮ ಭಾಷೆಯಾಗಿ ಕೊಡಿಸಿರುವುದರ ನಿದರ್ಶನಗಳು ಸಾಮಾನ್ಯ.  ಇದು ನಾನು ಸಂಪನ್ಮೂಲ ವ್ಯಕ್ತಿಯಾಗಿ, ಪಿ.ಯು.ಸಿ. ಕನ್ನಡ ಉಪನ್ಯಾಸಕರುಗಳಿಗೆ ಕೌಶಲ್ಯ ಕಾರ್ಯಾಗಾರ ನಡೆಸಿಕೊಟ್ಟಾಗ ಕಂಡುಕೊಂಡ ಕಟು ಸತ್ಯ. ನಾನು ಸ್ವತಃ ಕನ್ನಡ ಉಪನ್ಯಾಸಕನಲ್ಲವೆಂದೂ, ಮತ್ತು ತಾಂತ್ರಿಕ ಕಾಲೇಜೊಂದರಲ್ಲಿ ಪ್ರಾಂಶುಪಾಲನಾಗಿ ನಿರ್ವಹಿಸುತ್ತಿದ್ದೇನೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ. 
ಸಂಸ್ಕೃತದ  ಬಳಕೆ ಮನೆಮಾತನಲ್ಲಿ ಇಲ್ಲವಾದ್ದರಿಂದ ಅದನ್ನು ಪ್ರಥಮ ಭಾಷೆಯಾಗಿ ಶಾಲೆಗಳಲ್ಲಿ ಕಲಿಸಲು ಪ್ರಸ್ತುತವಲ್ಲ ಎಂದು ನನ್ನ ಅಭಿಮತ. ಸಂಸ್ಕೃತ ವಿಧ್ವಾಂಸರು, ಸಂಸ್ಕೃತವಿಲ್ಲದೇ ಕನ್ನಡವಿಲ್ಲ ಎಂದು ಸಾಧಿಸಿ ತೋರಬಹುದು. ಇನ್ನೂ ಹೆಚ್ಚಿನ ಮಟ್ಟಿಗೆ ಸಂಸ್ಕೃತವನ್ನು ಕಲಿಯುವ ಅಗತ್ಯವನ್ನು ಪ್ರತಿಪಾದಿಸಬಹುದು. ಸಂಸ್ಕೃತದ ಹಿರಿಮೆ ಮತ್ತು ಕಲಿಕೆ ಬಗ್ಗೆ ನನ್ನಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ. ಆದರೆ, ಮನೆಮಾತಾದ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಯಲು ಅದು ಅಡ್ಡ ಬರಬಾರದು ಎಂಬುದೇ ನನ್ನ ಪ್ರತಿಪಾದನೆ.
ಮನೆಯಲ್ಲಿನ ಕಲಿಕೆ ಶಾಲೆಯ ಕಲಿಕೆಯಷ್ಟೇ ಪರಿಣಾಮಕಾರಿಯಾಗಿರುವುದರಿಂದ, ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಬೇಕಾಗಿದೆ. ಪೋಷಕರು ಮನೆಯಲ್ಲಿ ಕನ್ನಡ ದಿನಪತ್ರಿಕೆಗೆ ಚಂದಾದಾರರಾಗಿ, ಪ್ರತಿನಿತ್ಯ ತಮ್ಮ ಮನೆಗೆ ಕನ್ನಡ ಪತ್ರಿಕೆಯನ್ನು ತರಿಸಿ ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡಬೇಕಾಗಿದೆ. ಇದೇನು ಹೆಚ್ಚಿನ ಖರ್ಚಿನ ಬಾಬತ್ತಲ್ಲ. ದಿನ ಪತ್ರಿಕೆ ಬೆಲೆ ದಿನಕ್ಕೆ ಕೇವಲ 3 ಅಥವಾ 4 ರೂ ಆಗಬಹುದು. ಮಕ್ಕಳಿಗೆ ಬಣ್ಣದ ಚಿತ್ರ ಇರುವ ಚಂದಮಾಮನಂತಹ ಕಥೆ ಪುಸ್ತಕಗಳ ಪರಿಚಯ ಮಾಡಿಕೊಡಿ. ಇತ್ತೀಚೆಗೆ, ಪುರಾಣ, ರಾಮಾಯಣ, ಮಹಾಭಾರತ, ಪಂಚತಂತ್ರ ಕಥೆಗಳು, ಹನಿಗವನಗಳು, ರಾಷ್ಟ್ರಪ್ರೇಮಿ ಕಥೆಗಳು, ಭಾರತದ ಮಹಾಸಾಧಕರು, ಹೀಗೆ ಅನೇಕ ವಿಷಯಗಳನ್ನು ಹೊತ್ತ ಸಣ್ಣ ಸಣ್ಣ ಕನ್ನಡ ಪುಸ್ತಕಗಳು, ಬಣ್ಣ, ಬಣ್ಣದ ಚಿತ್ರಗಳೊಂದಿಗೆ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿವೆ.  ಇಂತಹ ಪುಸ್ತಕಗಳ ಬೆಲೆ ರೂ. 10 ರಿಂದ 20 ರ ಆಸುಪಾಸಿನಲ್ಲಿ ಇರುತ್ತದೆ. ಇವನ್ನು ಮಕ್ಕಳಿಗೆ ವಿಶೇಷ ಸಂಧರ್ಭಗಳಲ್ಲಿ, ಉಡುಗೊರೆಯಾಗಿ ನೀಡಬಹುದು. ಖಂಡಿತ, ಈ ಪುಸ್ತಕಗಳು ಮಕ್ಕಳ ಮನಸ್ಸನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಹಾಗೆಯೇ, ಆಗಾಗ ಕನ್ನಡದಲ್ಲಿ ಸಣ್ಣ ಕಥೆಗಳನ್ನು, ತಮ್ಮ ಪ್ರವಾಸದ ಅನುಭವಗಳನ್ನು ಬರೆಯಲು ಮಕ್ಕಳಿಗೆ ಪ್ರೋತ್ಸಾಹಿಸಿ. ಮುಖ್ಯವಾಗಿ ತಾವು ದೊಡ್ಡವರು ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಿ. ಮಕ್ಕಳಿಗೆ ಕನ್ನಡದ ಸೊಗಡು ಹಿಡಿಸಿದ ಮೇಲೆ ಅವರಾಗೇ ಕನ್ನಡದ ಆರಾಧಕರಾಗುತ್ತಾರೆ.
ಒಂದು ವಿಸ್ಮಯ: ರಾಮನಗರಕ್ಕೆ ಹೋಗುವ ದಾರಿಯಲ್ಲಿ ಒಬ್ಬ ಹಳ್ಳಿಯವನಂತೆ ಕಾಣುವ ವ್ಯಾಪಾರಿ ಹೂ ಮಾರಾಟ ಮಾಡುತ್ತಿದ್ದ. ಯಾವುದೋ ಕುಗ್ರಾಮದ ವಿಳಾಸ ಕೇಳಿದೆ. ನಮಗೆ ಅದರ ದಾರಿಯನ್ನು ಹೇಳುವಾಗ “ರೈಟ್ ತಗೋಳಿ,.. ಲೆಫ್ಟ್ ತಗೋಳಿ” ಅಂತೆಲ್ಲಾ ಹೇಳಿದ. ನಾನು “ಎಲ್ಲಿ ಬಲಕ್ಕೆ ತಿರುಗಬೇಕು?” ಎಂದೆ. ಆತ “ಬಲಕ್ಕೆ ಬೇಡ ಸ್ವಾಮಿ, ರೈಟ್ ಗೆ ತಿರುಕ್ಕೋಳ್ಳಿ” ಎಂದ. ನನ್ನ ಬಾಯಿ ತೆರೆದೇ ಇತ್ತು. ಆತ ಮುಂದುವರೆದು “ನಿಮಗೆ ಡೌಟ್ ಬಂದರೆ ನಂಗೆ ಕಾಲ್” ಕೊಡಿ ಎಂದು, ತನ್ನ ಮೊಬೈಲ್ ನಂಬರನ್ನು “ಡಬಲ್ ಏಯ್ಟ್, ಟ್ರಿಪಲ್ ತ್ರೀ..  “ ಎಂದು ಹೇಳಿದ. ನನಗೆ ಜ್ಞಾನೋದಯವಾಯ್ತು. ನಮ್ಮ ದಿನನಿತ್ಯದ ಜೀವನದಲ್ಲೂ ನಮ್ಮ ಫೋನ್ ನಂಬರನ್ನು “ಎಂಟು, ಎಂಟು...” ಎಂದು ಕನ್ನಡದಲ್ಲಿ ಹೇಳಲು ಮರೆಯುತ್ತಿದ್ದೇವೆ. ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ, ಬಿಗ್ ಬಜಾರ್ ನಂತಹ ಸೂಪರ್ ಮಾರ್ಕೆಟ್ ಗಳಲ್ಲಿ, ಅಲ್ಲಿನ ನೌಕರರನ್ನು ಕೌಂಟರ್ ಗೆ ಕರೆಯಲು ಮೈಕ್ ಮೂಲಕ ಇಂಗ್ಲೀಷಿನಲ್ಲೇ ಉದ್ಘೋಷಣೆ ಮಾಡುತ್ತಾರೆ. ಆ ನೌಕರರೆಲ್ಲರೂ ಕನ್ನಡಿಗರೇ ಆಗಿದ್ದರೂ, ಮತ್ತು ಕನ್ನಡ ಚೆನ್ನಾಗೇ ಮಾತನಾಡಬಲ್ಲವರಾಗಿದ್ದರೂ, ಇಂಗ್ಲೀಷ್ ಘೋಷಣೆ ಅನಿವಾರ್ಯ ಎಂಬಂತೆ ಬಳಕೆಗೆ ತಂದಿದ್ದಾರೆ. ಬಹುತೇಕ ಸಂಧರ್ಭಗಳಲ್ಲಿ ಆ ನೌಕರರ ಹೆಸರು ಬಿಟ್ಟರೆ ಅವರಿಗೆ ಆ ಉದ್ಘೋಷಣೆಗಳಲ್ಲಿ ಬೇರೇನೂ ಅರ್ಥವಾಗುವುದಿಲ್ಲ. ಇಂತಹ ಒಂದು ಪ್ರಕರಣದಲ್ಲಿ, ಕಸ ಗುಡಿಸುವ ಸಿಬ್ಬಂದಿಯೊಬ್ಬರನ್ನು ಹೀಗೇ ಇಂಗ್ಲೀಷಿನಲ್ಲಿ ಮೈಕ್ ನಲ್ಲಿ ಕರೆದಾಗ, ಆಕೆ ಏನೂ ತಿಳಿಯದೇ, ಕೊನೆಗೆ ಆಕೆಯ ಸೂಪರ್ ವೈಸರ್ ಆಕೆಗೆ ತಿಳಿಸಿಹೇಳಿ ಕಳುಹಿಸಿದ್ದನ್ನು ನಾನು ಕಂಡಿದ್ದೇನೆ. ಈ ಸೂಪರ್ ಮಾಲ್ ನವರಿಗೆ ಯಾಕೆ ಇಂತಹ ಇಂಗ್ಲೀಷ್ ಮೋಹ ಎಂದು ಆಶ್ಚರ್ಯ ಪಟ್ಟಿದ್ದೇನೆ.
ಹೆಚ್ಚಿನ ಆಶಯಗಳನ್ನೂ, ಭಾರೀ ಬದಲಾವಣೆಗಳನ್ನೂ ನಿರೀಕ್ಷಿಸದೇ, ಮನೆ ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ, ನಾವು ಕೆಲಸ ಮಾಡುವ ಸ್ಥಳಗಳಲ್ಲಿ, ವ್ಯಾಪಾರ ಮಾಡುವ ಜಾಗಗಳಲ್ಲಿ, ಕನ್ನಡಕ್ಕೆ ಪೂರಕವಾದ ವಾತವರಣವನ್ನು ಉಂಟು ಮಾಡುವುದೇ ಕನ್ನಡಕ್ಕೆ ಪ್ರೋತ್ಸಾಹ ಕೊಟ್ಟಂತೆ ಎಂಬುದು ಈ ಲೇಖನದ ಆಶಯ.

ಡಾ. ಎಸ್.ಎನ್. ಶ್ರೀಧರ
ಪ್ರಾಂಶುಪಾಲರು ಮತ್ತು ನಿರ್ದೇಶಕರು,
ಕೆ.ಎಸ್. ಸ್ಕೂಲ್ ಆಫ಼ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ ಮೆಂಟ್

ಕನಕಪುರ ರಸ್ತೆ, ಬೆಂಗಳೂರು.

No comments:

Post a Comment