ನಮ್ಮ ತಾಯಿಯವರ ತಂಗಿ ಸೌಭಾಗ್ಯ
ಚಿಕ್ಕಮ್ಮನವರ ಯಜಮಾನರಾದ, ನಮ್ಮೆಲ್ಲರ ಪ್ರೀತಿಯ ಶ್ರೀ ಆರ್. ತಿಮ್ಮಯ್ಯನವರ ಸ್ಮರಣಾರ್ಥ ಬರೆದ
ನನ್ನ ಮತ್ತು ನನ್ನ ಪತ್ನಿಯ ಲೇಖನಗಳು.
ಹೀಗೇ ಚಿಕ್ಕಪ್ಪನವರ ಬಗ್ಗೆ
ಒಂದು ನೆನಪು
ಬೆಳಿಗ್ಗೆ ಸವಿನಿದ್ದೆಯಲ್ಲಿದ್ದಾಗಲೇ ಏನೋ ಪಟ ಪಟ ಸದ್ದಾಯಿತು.
ನಿಧಾನವಾಗಿ ಕಣ್ಣು ತೆರೆದು ನೋಡಿದರೆ, ನಾನು ಮಲಗಿದ್ದ ಜಾಗದಲ್ಲಿ ಮಾತ್ರ ಹಾಸಿಗೆ ಇದ್ದು,
ಸುತ್ತಲೂ ಇದ್ದ ಹಾಸಿಗೆಗಳನ್ನು ತೆಗೆದು ಹಾಕಲಾಗಿತ್ತು. ಇನ್ನೂ ಮಂಜು ಮಂಜಾಗಿದ್ದ ಕಣ್ಣುಗಳನ್ನು
ಉಜ್ಜಿಕೊಂಡು ಶಬ್ದ ಬಂದ ಕಡೆ ನೋಡಿದರೆ, ಬಿಳಿ ಪಂಚೆ, ತುಂಬು ತೋಳಿನ ಬಿಳಿ ಬನಿಯನ್ ತೊಟ್ಟ
ಅಕಾರವೊಂದು, ಒಂದು ಸಣ್ಣ ಕೋಲಿಗೆ ಬಟ್ಟೆ ಕಟ್ಟಿಕೊಂಡು ಕಿಟಕಿ ಮೇಲಿದ್ದ ಧೂಳನ್ನು
ಜಾಡಿಸುತ್ತಿತ್ತು. ಹಾಗೇ ಸಂಪೂರ್ಣ ಎಚ್ಚರವಾಗಿ ನಾನಿದ್ದ ಜಾಗದ ಅಂದಾಜು ಮಾಡುತ್ತ ಹಾಸಿಗೆ ಮೇಲೆ ಎದ್ದು
ಕುಳಿತೆ. ನನಗಾಗ ಅರಿವಾಗಿದ್ದು ಹಿಂದಿನ ದಿನ ನಾನು ನಮ್ಮ ಚಿಕ್ಕಪ್ಪನವರ ಮಲೆಬೆನ್ನೂರಿನ ಮನೆಗೆ,
ನನ್ನ ಸೋದರ ಮಾವನಾದ ನನ್ನದೇ ವಯಸ್ಸಿನ ಸತೀಶನೊಂದಿಗೆ ಬಂದಿದ್ದು ಮತ್ತು ರಾತ್ರಿ ಒಳ್ಳೆ ಊಟ ಮಾಡಿ
ಸುಸ್ತಾಗಿ ಮಲಗಿದ್ದು, ಮತ್ತು ಇದು ನಮಗೆ ಆ ಮನೆಯಲ್ಲಿ ಮೊದಲಿನ ಬೆಳಿಗ್ಗೆ ಆಗಿತ್ತು. ನನಗಾಗ
ಸುಮಾರು ಹತ್ತು ವರ್ಷ ವಯಸ್ಸಿರಬಹುದು. ಹಾಸಿಗೆ ಮೇಲೆ ಕುಳಿತು ಮತ್ತೊಮ್ಮೆ ಕಣ್ಣುಜ್ಜಿಕೊಂಡು
ನೋಡಿದೆ. ಆ ಮನೆಯ ಯಜಮಾನರೇ ಅಗಿದ್ದರೂ, ಯಾವುದೇ ಸಂಕೋಚವಿಲ್ಲದೇ ಮನೆ ಕೆಲಸ ಮಾಡುತ್ತಿದ್ದರು.
ನನ್ನ ಹಾಸಿಗೆ ಸುತ್ತ ಇದ್ದ ಎಲ್ಲಾ ಹಾಸಿಗೆಗಳನ್ನೂ ಅವರೇ ತೆಗೆದಿದ್ದರು.
ನಮ್ಮ ಚಿಕ್ಕಪ್ಪ ತಿಮ್ಮಯ್ಯನವರು ಹಾಗೇ. ಎಲ್ಲಾ ಕೆಲಸಗಳನ್ನೂ ಅವರೇ
ಮಾಡಿಕೊಳ್ಳುತ್ತಿದ್ದರು. ಯಾವಾಗಲೂ ಶುಭ್ರ ವಸ್ತ್ರಧಾರಿ. ಮಲೆಬೆನ್ನೂರಿನ ಮನೆಯಲ್ಲಿ ಸ್ನಾನದ
ನೀರಿನ ಹಂಡೆಗೆ ಅವರೇ ಕಟ್ಟಿಗೆ ಇಟ್ಟು ಉರಿ ಹಾಕಬೇಕು. ಹಾಗೆ ನೀರೊಲೆಗೆ ಉರಿ ಹಾಕುವಾಗಲೂ ಸುತ್ತ
ಮುತ್ತ ಎಲ್ಲೂ ಕಸ ಇರಬಾರದು. ಧಗ ಧಗ ಉರಿಯುವ ಬೆಂಕಿಯೂ ನಮ್ಮ ಚಿಕ್ಕಪ್ಪನವರನ್ನು ಕಂಡರೆ
ಶಿಸ್ತಾಗಿ, ಒಲೆಯೊಳಗೇ ಉರಿಯಿತ್ತಿತ್ತು. ಹೊರಗೆ ಎಲ್ಲೂ ಜ್ವಾಲೆ ಸೂಸದೇ, ಹಂಡೆಯ ಹೊರಗೆ ಕಪ್ಪು
ಮಸಿ ಬಳಿಯದೇ ಬೆಂಕಿ ಉರಿಯಬೇಕು. ಅಂತಹ ಶಿಸ್ತನ್ನು ನಮ್ಮ ಚಿಕ್ಕಪ್ಪ ಅದಕ್ಕೆ ಕಲಿಸಿದ್ದರು. ಅಂದರೆ,
ನೀವು ಅವರು ಮಾಡುವ ಯಾವುದೇ ಕೆಲಸದ ಅಂದಾಜು ಮಾಡಿಕೊಳ್ಳಬೇಕು. ಕೆಲಸಗಳಲ್ಲಿ ಶೇಕಡ ನೂರರಷ್ಟು
ತಾದ್ಯಾತ್ಮತೆ. ಮನೆಯ ಎಲ್ಲಾ ಕಿಟಕಿ ಬಾಗಿಲುಗಳೂ ನಮ್ಮ ಚಿಕ್ಕಪ್ಪ ಪ್ರತಿದಿನ ಬಂದು
ಮಾತನಾಡಿಸದಿದ್ದರೆ (ಧೂಳು ಒರೆಸದಿದ್ದರೆ) ಬೇಸರ ಮಾಡಿಕೊಳ್ಳುತ್ತಿದ್ದವೇನೋ. ತಮ್ಮ ಎಲ್ಲಾ
ಬಟ್ಟೆಗಳನ್ನೂ ತಾವೇ ಶುಭ್ರ ಮಾಡಿಕೊಳ್ಳುತ್ತಿದ್ದರು. ಅವರ ಬಿಳಿ ಬಟ್ಟೆ ಯಾವುದೇ
ಜಾಹೀರಾತಿನಲ್ಲಿನ ಬಿಳಿ ಬಟ್ಟೆಗಳನ್ನೂ ಮೀರಿಸುತ್ತಿತ್ತು. ಹಾಗೇ ಪ್ರತಿದಿನವೂ ಮುಖ ಕ್ಷೌರ
ಮಾಡಿಕೊಂಡು ಮೀಸೆ ಮತ್ತು ಗಡ್ಡ ಎಂದೂ ನುಣುಪಾಗಿ ಇರುವಂತೆ ನೋಡಿಕೊಳ್ಳಬೇಕು. ಅವರೆಂದಿಗೂ
ಕುರುಚಲು ಗಡ್ಡ ಬಿಟ್ಟಿದ್ದನ್ನು ನೋಡೇ ಇಲ್ಲ. ಬಹುಶಃ ಇದಕ್ಕೆ ನಮ್ಮ ಚಿಕ್ಕಮ್ಮನೂ ಕಾರಣ ಇರಬೇಕು!!...
ಅವರ ದಿನ ನಿತ್ಯಚರಿ ಶುರುವಾಗುತ್ತಿದ್ದುದೇ ಮನೆ ಕೆಲಸದೊಂದಿಗೆ. ಮುಗಿಯುತ್ತಿದ್ದುದೂ
ಮನೆಕೆಲಸದೊಂದಿಗೆ. ಎಲ್ಲದರಲ್ಲೂ ಅದೇ ತಾದ್ಯಾತ್ಮತೆ. ಮನೆಯಲ್ಲಿ ಮಕ್ಕಳಿಗೂ ಇದೇ ಶಿಸ್ತನ್ನು
ಕಲಿಸಿದ್ದರು. ಮಕ್ಕಳೆಲ್ಲಾ ಬೆಳಿಗ್ಗೆ ಎದ್ದ ತಕ್ಷಣ ಅವರವರಿಗೆ ಹಂಚಿಕೊಂಡಿದ್ದ ಕೆಲಸ ಅವರವರೇ ಮಾಡಿಕೊಳ್ಳುವ
ಅಭ್ಯಾಸ ಬೆಳಿಸಿದ್ದರು . ಮನೆಯಲ್ಲೂ ಎಂದೂ ದನಿಯೆತ್ತಿ ಮಕ್ಕಳನ್ನು ಗದರಿದ್ದು ನೋಡಲಿಲ್ಲ.
ನಮ್ಮ ತಂದೆ ನಾಗಪ್ಪನವರು ಭೋರ್ಗರೆವ ಜಲಪಾತವಾದರೆ, ಚಿಕ್ಕಪ್ಪ
ತಿಮ್ಮಯ್ಯನವರು ಪ್ರಶಾಂತವಾಗಿ ಹರಿವ ನದಿ. ಇಬ್ಬರೂ ಶಿಸ್ತಿನ ಸಿಪಾಯಿಗಳೇ. ಇಬ್ಬರೂ ತಮ್ಮ ನೇರ
ನುಡಿ, ಸರಳತೆಯನ್ನು ಬಿಟ್ಟುಕೊಡಲಿಲ್ಲ, ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಇಬ್ಬರೂ ತಮ್ಮ
ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿದರು. ನಮ್ಮ ತಂದೆಯ ರೌದ್ರಾವತಾರ ನೋಡಿ ಅಭ್ಯಾಸವಿದ್ದ
ನನಗೆ, ನಮ್ಮ ಚಿಕ್ಕಪ್ಪನವರ ಶಾಂತತೆ ನೋಡಿ ಆಶ್ಚರ್ಯವೂ ಅಗುತ್ತಿತ್ತು. ನಮ್ಮ ತಂದೆ ಜೋಕನ್ನು ಸಹ
ಜೋರಾಗಿ ಮಾಡಿದರೆ, ಚಿಕ್ಕಪ್ಪನವರು ಮೀಸೆಯಿಲ್ಲದ ತುಟಿಗಳಲ್ಲೇ ತುಳುಕಿಸಿ ಮಂದಹಾಸ ಬೀರುತ್ತ
ನಗೆಬಾಂಬನ್ನು ಸಿಡಿಸುತ್ತಿದ್ದರು. ಇವರಿಬ್ಬರನ್ನೂ ನೋಡಿದಾಗ, ಜೀವನದ ಅಂತರಂಗಗಳೆಲ್ಲವೂ ಒಮ್ಮೆ
ನಿಗೂಢವಾಗಿಯೂ ಮತ್ತೊಮ್ಮೆ ಅತ್ಯಂತ ಸರಳವಾಗಿಯೂ ಕಾಣಿಸುತ್ತಿತ್ತು.
ಆಂತರಿಕ ಶಿಸ್ತು ಎನ್ನುವುದು ಅಂತರ್ಗತವಾಗಿಸಿಕೊಂಡಿದ್ದ
ಚಿಕ್ಕಪ್ಪನರು, ಊಟದಲ್ಲೂ ಅದೇ ಶಿಸ್ತನ್ನು ಅಳವಡಿಸಿಕೊಂಡಿದ್ದರು. ಕೆಲಸಕ್ಕೆ ಹೋಗುವಾಗ ಬೆಳಿಗ್ಗೆ
ಮುದ್ದೆ ಸಾರು ಉಂಡು ಹೋಗುತ್ತಿದ್ದರು. ಅವರು ಬೆಳಗಿನ ತಿಂಡಿ ತಿಂದ್ದದ್ದು ನಾನಂತೂ ನೋಡಲಿಲ್ಲ.
ನಮ್ಮ ಚಿಕ್ಕಮ್ಮನಿಗೆ ಹುಶಾರಿಲ್ಲದಿದ್ದಾಗ, ಸ್ವಲ್ಪವೂ ಬೇಸರವಿಲ್ಲದೇ, ಪೂರ್ಣ ತೊಡಗಿಸಿಕೊಂಡು
ಅವರ ಸೇವೆಯನ್ನು ಮಾಡಿದರು. ನನ್ನ ಪತ್ನಿ ಕೆಲವೊಮ್ಮೆ ನನ್ನ ಬಳಿ “ಹೆಂಡತಿಯ ಸೇವೆ ಮಾಡುವ ಅವರ
ಗುಣ ಬೇರಾವ ಗಂಡಸಿಗೂ ಬರುವುದು ಸುಲಭವಲ್ಲ” ಎಂದು ಹೇಳುತ್ತಿದ್ದರೆ, ಮೆಲ್ಲಗೆ ಜಾಗ ಖಾಲಿ
ಮಾಡುತ್ತಿದ್ದೆ.
ಚಿಕ್ಕಪ್ಪನವರು ಕೊನೆ ಕಾಲದಲ್ಲೂ ತಮ್ಮ ಸಹಜ ಪ್ರವೃತ್ತಿಯಾದ
ತಿಳಿಹಾಸ್ಯ ಬಿಟ್ಟಿರಲಿಲ್ಲ. ತಮಗೆ ಅಪಾರ ನೋವು ಇದ್ದರೂ ನೋಡಬಂದವರ ಮುಖದಲ್ಲಿ ನಗು ಬರಿಸುವ ಗುಣ.
ಅವರು ತೀರಿಕೊಂಡದ್ದನ್ನು ನಂಬಲೇ ಸಾಧ್ಯವಿಲ್ಲದಷ್ಟು ಅವರು ಕಣ್ಣಿಗೆ, ಹೃದಯಕ್ಕೆ
ತುಂಬಿಕೊಂಡಿದ್ದಾರೆ. ಅವರ ಮೃತದೇಹದ ಅಂತ್ಯಕ್ರಿಯೆ ನಡೆದ ದಿನ ಎಲ್ಲಾ ಮುಗಿದ ಮೇಲೆ ಅವರ ಮನೆಗೆ
ಬಂದಾಗ ಅವರು ಮಲಗುತ್ತಿದ್ದ ಮಂಚದ ಮೇಲೆ ಸೊಳ್ಳೆ ಪರದೆ ಹಾಕಲು ಇದ್ದ ಮರದ ಚೌಕಟ್ಟಿನ ಮೇಲೆ ಒಂದು
ಹೊಸ ಬಿಳಿ ಚಡ್ದಿ ಹಾಕಿದ್ದು ನೋಡಿದೆ. ಚಿಕ್ಕಪ್ಪನ ಮಗ ನಾಗೇಶ (ನಟರಾಜ್) “ಇದು ನೋಡಿ ಶ್ರೀಧರಣ್ಣ,
ಇದನ್ನು ನಮ್ಮ ಅಪ್ಪ, ಆಸ್ಪತ್ರೆಗೆ ಹೋಗುವ ಮುಂಚೆ ತಾವೇ ತೊಳೆದು ಇಟ್ಟಿದ್ದು. ಇದನ್ನು ಹೊಸತು
ಎಂದುಕೊಳ್ಳಬೇಡಿ. ಅವರು ಹಾಗೇನೆ.” ಎಂದ. ಕಣ್ಣು ತುಂಬಿ ಬಂತು. ತಮ್ಮ ಒಳಚಡ್ಡಿಯನ್ನೂ ಶುಭ್ರವಾಗಿ
ಇಟ್ಟಿರುತ್ತಿದ್ದ, ಚಿಕ್ಕಪ್ಪ, ಜೀವನದಲ್ಲೂ ಶುಭ್ರವಾಗೇ ಬಾಳಿ ಎಲ್ಲರಿಗೂ ತಮ್ಮ ಆದರ್ಶವನ್ನು
ಬಾಳಿ ತೋರಿಸುವುದರ ಮೂಲಕ ಜೀವನ ಸಂದೇಶ ನೀಡಿ ಬಂದ ದಾರಿಗೆ ಹೋಗಿಬಿಟ್ಟರು. ಅವರ ನೆನಪಷ್ಟೆ ಈಗ ಉಳಿದಿರುವುದು.
ಡಾ.
ಎಸ್.ಎನ್. ಶ್ರೀಧರ
(ಶ್ರೀ ಆರ್.
ತಿಮ್ಮಯ್ಯನವರ ಧರ್ಮಪತ್ನಿಯ ಅಕ್ಕನ ಮಗ)
ನಮ್ಮ ಚಿಕ್ಕ
ಮಾವ ಹೀಗಿದ್ದರು
ನಮ್ಮಣ್ಣ ಜಯಣ್ಣನೊಂದಿಗೆ
ನಮ್ಮ ಚಿಕ್ಕ ಮಾವನವರಾದ ಶ್ರೀ ಆರ್. ತಿಮ್ಮಯ್ಯನವರ
ಮನೆಗೆ ಅಳುಕಿನಿಂದಲೇ ಅವರ ಮೈಸೂರಿನ ಮನೆಗೆ ಕಾಲಿಟ್ಟಿದ್ದೆ. ಮೈಸೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣದ ನನ್ನ ಎಮ್.ಎ. ಕೋರ್ಸ್ ಗಾಗಿ ನಡೆವ ಸಂಪರ್ಕ ತರಗತಿಗಳಿಗೆ ಹಾಜರಾಗಲು ಮೈಸೂರಿನಲ್ಲಿರುವ
ಅವರ ಮನೆಯಲ್ಲಿ ಉಳಿದುಕೊಳ್ಳಲು ಜಯಣ್ಣ ನನ್ನನ್ನು ಅವರ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದರು.
ಅಲ್ಲಿವರೆಗೂ ಅಷ್ಟೇನೂ ಹತ್ತಿರದಿಂದ
ಅವರನ್ನು ಕಂಡಿರದಿದ್ದರೂ, ನಾನು ಅವರ
ಮನೆಗೆ ಕಾಲಿಟ್ಟ ದಿನವೇ ತಮ್ಮ ಸರಳತೆಯ ಮಾತುಗಳಿಂದ ಚಿಕ್ಕ ಮಾವನವರೂ, ಅವರ
ಧರ್ಮಪತ್ನಿ ಶ್ರೀಮತಿ ಸೌಭಾಗ್ಯಕ್ಕ, ಅವರ ಮಕ್ಕಳಾದ ಮಾಲಿನಿ, ನಾಗೇಶ ಮತ್ತು ಶಾಲಿನಿ ಅವರ ಸೌಜನ್ಯ ಪೂರಿತ ಸ್ನೇಹಮಯಿ ವರ್ತನೆಯಿಂದ ನನಗೆ ಈ ಮನೆ ಹೊಸತೆಂದು
ಅನ್ನಿಸಲೇ ಇಲ್ಲ. ಅವರು ಆಗಿನ್ನೂ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಹೊಸ
ಮನೆ ಕಟ್ಟಿಸುತ್ತಿದ್ದರು. ಹೊಸ ಮನೆ ಕಟ್ಟುವಾಗ ಸಮಾನ್ಯವಾಗಿ ಎಲ್ಲರ ಮನದಲ್ಲಿ
ಅತೀವ ಒತ್ತಡವಿರುವುದು ಸಹಜ. ನಮ್ಮ ಚಿಕ್ಕಮಾವ ಅದನ್ನೆಲ್ಲಾ ಒಳಗೊಳಗೆ ಅನುಭವಿಸುತ್ತಿದ್ದರೂ,
ಅವರು ಎಂದೂ ಅದನ್ನು ತಮ್ಮ ಪತ್ನಿಯವರ ಮೇಲಾಗಲೀ, ಅಥವಾ
ಮಕ್ಕಳ ಮೇಲಾಗಲೀ ತೋರಕೊಡದೇ, ತಾವೇ ಅದರ ಹಣಕಾಸಿನ ನಿರ್ವಹಣೆ ಮಾಡುತ್ತಿದ್ದರು.
ಅವರು ಎಂದಿಗೂ ಯಾರ ಮೇಲೂ ಸಿಡುಕಿದ್ದಾಗಲೀ, ರೇಗಿದ್ದಾಗಲೀ
ಅಥವಾ ಅಸಮಾಧಾನದಿಂದ ಮಾತನ್ನಾಡಿದ್ದನ್ನಾಗಲೀ ನಾನು ಕಂಡಿದ್ದಿಲ್ಲ. ಮನೆಯಲ್ಲಿ
ಮಕ್ಕಳು ಮತ್ತು ಚಿಕ್ಕಮಾವನವರು ಶಾಲಾಕಾಲೇಜುಗಳಿಗೆ ಹೊರಟ ಮೇಲೆ, ನಮ್ಮ ಚಿಕ್ಕ
ಅತ್ತೆ ಸೌಭಾಗ್ಯಕ್ಕ ತಾವೂ ತಮಗೆ ಮಧ್ಯಾಹ್ನದ ಊಟ ಮತ್ತು ಒಂದು ಛತ್ರಿ ಹಿಡಿದು ಅವರು ಕಟ್ಟಿಸುತ್ತಿದ್ದ
ಹೊಸಮನೆ ಬಳಿಗೆ ಹೊರಟುಬಿಡುತ್ತಿದ್ದರು. ಅವರು ಮತ್ತೆ ಮನೆಗೆ ಬರುತ್ತಿದ್ದುದು
ಸಂಜೆಯ ಹೊತ್ತಿಗೇನೆ. ಮನೆಯಲ್ಲಿ ಎಲ್ಲರೂ ಅವರವರ ಜವಾಬ್ದಾರಿ ಅರಿತು ತಮ್ಮ
ತಮ್ಮ ಕೆಲಸ ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿದ್ದರು
.
ನಮ್ಮ ಚಿಕ್ಕಮಾವ ಯಾವಾಗಲೂ
ಶುಭ್ರವಸ್ತ್ರಧಾರಿಯಾಗಿರುತ್ತಿದ್ದರು. ಮನೆಯಲ್ಲಿದ್ದಾಗ,
ಬಿಳಿ ಪಂಚೆ ಮತ್ತು ತೋಳಿನ ಬನಿಯನ್ ತೊಟ್ಟಿದ್ದರೆ, ಹೊರಗೆ
ಹೋಗುವಾಗ, ಸರಳವಾದ ಪ್ಯಾಂಟು-ಷರಟು ಧರಿಸುತ್ತಿದ್ದರು.
ಅವರು ಸದಾ ಚಟುವಟಿಕೆಯ ಚಿಲುಮೆಯಾಗಿರುತ್ತಿದ್ದರು ಮತ್ತು ಶಿಸ್ತು ಮತ್ತು ಶುಚಿತ್ವಕ್ಕೆ
ಬಹಳ ಮಹತ್ವ ನೀಡುತ್ತಿದ್ದರು. ನಾನು ಅವರಲ್ಲಿ ಕಂಡ ಈ ಗುಣಗಳನ್ನು ಅವರ ಕೊನೆ
ಕ್ಷಣಗಳಲ್ಲೂ ಹಾಗೇ ಉಳಿಸಿಕೊಂಡಿದ್ದರು. ಕೊನೆಕ್ಷಣಗಳಲ್ಲಿ ಕೂಡಾ ವಿನೋದದ
ಮಾತನ್ನಾಡಿ ತಮ್ಮನ್ನು ನೋಡಬಂದವರಲ್ಲೂ ಮಂದಹಾಸ ಮೂಡುವಂತೆ ಮಾಡುತ್ತಿದ್ದರು.
ಅವರ ಮಂದಹಾಸದ ಮುಖ, ಸರಳತೆಯ ಜೀವನ ನನ್ನ ಕಣ್ಣಿಗೆ ಕಟ್ಟಿದಂತಿದ್ದು,
ಈ ಚಿತ್ರಣ ಎಂದಿಗೂ ಮಾಸದಂತೆ, ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿ
ಉಳಿಸಿಕೊಂಡು ನಾವ್ಯಾರೂ ಉಹಿಸಿರದಷ್ಟು ಬೇಗ ನಮ್ಮನ್ನೆಲ್ಲಾ ಅಗಲಿ ಭೌತಿಕವಾಗಿ ಮರೆಯಾಗಿಬಿಟ್ಟರು.
ಶ್ರೀಮತಿ ರತ್ನಶ್ರೀಧರ್
(ಶ್ರೀ ಆರ್.
ತಿಮ್ಮಯ್ಯನವರ ಧರ್ಮಪತ್ನಿಯ ಅಕ್ಕನ ಸೊಸೆ)