ಚಿತ್ರಮಂದಿರದಲ್ಲಿ ನಿಜವಾದ ಫೈಟಿಂಗ್
ಸುಮಾರು 70ರ ದಶಕ, ನಾನಾಗ ಪ್ರೈಮರಿ ಶಾಲೆ ವಿದ್ಯಾರ್ಥಿ. ನಾವಿದ್ದುದು
ಬೆಂಗಳೂರಿನ ಸುಂಕೇನಹಳ್ಳಿ-ಹನುಮಂತನಗರ-ಗವೀಪುರ ಅಸುಪಾಸು. ನಮಗೆ ಗೊತ್ತಿದ್ದುದು, ಸುಂಕೇನಹಳ್ಳಿಯ
ಸಂಚಾರೀ ಚಿತ್ರಮಂದಿರ ರಾಜಲಕ್ಷ್ಮಿ ಟೆಂಟ್. ಚಿಕ್ಕವರಿಗೆ ಅದು ಮಾಯಾಲೋಕ. ದೊಡ್ಡಪರದೆಯ ಮೇಲೆ
ರಾಜ್ ಕುಮಾರ್, ನರಸಿಂಹರಾಜು, ಬಾಲಕೃಷ್ಣ, ಮತ್ತಿತರ ಪೌರಾಣಿಕ ಮತ್ತು ಸಾಮಾಜಿಕ ಚಿತ್ರಗಳನ್ನು
ನೋಡಿ ಪುಳಕಿತರಾಗುತ್ತಿದ್ದೆವು. ಆ ಸಂಚಾರಿ ಚಿತ್ರಮಂದಿರ (ಟೆಂಟ್), ಶೀಟ್ ಹೊದೆಸಿದ, ಸುತ್ತಲೂ
ಟಾರ್ಪಾಲ್ ಹಾಕಿದ, ’ಕುರ್ಚಿ’ ಮತ್ತು ’ನೆಲ’ ಎಂಬ ಎರಡು ವಿಭಾಗ ಇದ್ದ ಸುಮಾರು ಇನ್ನೂರು ಅಡಿ
ಉದ್ದ, ನೂರು ಅಡಿ ಅಗಲ ಇದ್ದ, ಕೊಟ್ಟಿಗೆಯಂತಹ ಸ್ಥಳ.
ಒಳಗೆ ಸಿನಿಮಾ ನಡೆಯುತ್ತಿದ್ದರೆ, ಸುತ್ತಲಿನ ಅರ್ಧ
ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಳಗೆ ನಡೆಯುತ್ತಿದ್ದ ಸಂಭಾಷಣೆ, ಹಾಡು, ಫೈಟಿಂಗ್ ಶಬ್ಧ ಎಲ್ಲವೂ
ಜೋರಾಗೇ ಕೇಳಿಸುತ್ತಿತ್ತು. ಒಂದು ಸಿನಿಮಾ ಬಂದರೆ, ಸುಮಾರು ಒಂದು ತಿಂಗಳವರೆಗೂ ಪ್ರದರ್ಶನ
ಇರುತ್ತಿತ್ತು. ಹಾಗಾಗಿ ಸುತ್ತಲಿನ ಪಡ್ಡೆ ಹುಡುಗರೆಲ್ಲಾ ಎಲ್ಲಾ ಡೈಲಾಗ್ ಗಳನ್ನೂ, ಹಾಡುಗಳನ್ನೂ
ಬಾಯಿಪಾಠ ಮಾಡಿಕೊಂಡು, ಅದರೊಂದಿಗೇ ಹೇಳಿಕೊಳ್ಳುತ್ತಿದ್ದರು. ಶಾಲೆಯಲ್ಲಿ ನನ್ನ ಸ್ನೇಹಿತರು,
ಮಗ್ಗಿ ಹೇಳಲು ಮತ್ತು ಪಠ್ಯದ ಕನ್ನಡ ಪದ್ಯಗಳನ್ನು ಕಂಠಪಾಟ ಮಾಡಲಾಗದೇ, ಬೆರಳುಗಣ್ಣಿನ ಮೇಲೆ ಶಾಲಾ
ಮಾಸ್ತರರಿಂದ ರೂಲು ದೊಣ್ಣೆಯ ಏಟು ತಿನ್ನುತ್ತಿದ್ದರು. ಆದರೆ, ಯಾವುದೇ ಸಿನಿಮಾ ಬಂದರೂ, ಅದರ
ಎಲ್ಲಾ ಡೈಲಾಗುಗಳನ್ನೂ, ಹಾಡುಗಳನ್ನೂ, ಭಾವಾಭಿನಯದೊಂದಿಗೆ ಮಾಡುತ್ತಿದ್ದುದ್ದು ನನಗೆ ತುಂಬಾ
ಆಶ್ಚರ್ಯ ತರುತ್ತಿತ್ತು. ಬಹುಶಃ, ಎಲ್ಲಾ ಪಾಠಗಳನ್ನೂ, ಸಿನಿಮಾ ಮಾಡಿದ್ದರೆ ಅವರೂ ಎಲ್ಲವನ್ನೂ
ಕಂಠಪಾಟ ಮಾಡಿಕೊಂಡು ಪಾಸಾಗುತ್ತಿದ್ದರು ಎನ್ನಿಸುತ್ತದೆ.
ಇರಲಿ, ಈಗ ಈ ಚಿತ್ರ ಮಂದಿರಕ್ಕೆ ಬರೋಣ. ಇಲ್ಲಿ ಕುರ್ಚಿ
ವಿಭಾಗಕ್ಕೆ ಹನ್ನೆರಡಾಣೆ (ಎಪ್ಪೆತ್ತೈದು ಪೈಸೆ). ನಮಗೆಲ್ಲಾ, ಎಂಟಾಣೆ (ಐವತ್ತು ಪೈಸೆ) ಕೊಟ್ಟು
ಮುಂದಿನ ಅಂಕಣವಾದ ಮಣ್ಣಿನ ನೆಲದ ಮೇಲೆ ಕೂರಲು ಪೈಪೋಟಿ. ಓಡಿ ಹೋಗಿ ಆಯಕಟ್ಟಿನ ಜಾಗ ಹಿಡಿದು,
ಸುತ್ತಲಿನ ಮರಳು ಮಿಶ್ರಿತ ಮಣ್ಣಿನ್ನು ಕೈಯನಲ್ಲಿ ಗೋರಿ ಅದರ ಎತ್ತರವನ್ನು ಜಾಸ್ತಿ ಮಾಡಿ ಅದರ
ಮೇಲೆ ಕುಳಿತರೆ, ಸಿಂಹಾಸನದ ಮೇಲೆ ವಿರಾಜಮಾನನಾದಂತೆ. ಆ ನೆಲದ ಮಣ್ಣಿನಲ್ಲಿ ಬೀಡಿ ತುಂಡುಗಳು,
ಎಲೆ-ಅಡಕೆ, ಹೊಗೆ ಸೊಪ್ಪು ತಿಂದು ಉಗಿದ ಚರಟ, ಕೆಲವು ಮಕ್ಕಳು ಅಲ್ಲೇ ಉಚ್ಚೆ ಹೊಯ್ದು ಅಂಟು
ಅಂಟಾಗಿದ್ದು, ಜನ ಓಡಾಡಿದಾಗ ಗಪ್ಪನೆ ಈ ಮಣ್ಣಿನ ಧೂಳು ಎದ್ದು ಮೂಗಿಗೆ ಸಂಮಿಶ್ರಿತ ವಿಚಿತ್ರ
ವಾಸನೆ. ನಮಗೆ ಇದು ’ಟೆಂಟ್-ವಾಸನೆ’ ಎಂದೇ
ಪರಿಚಿತ.
ಇಂತಹ ಜಾಗದಲ್ಲಿ, ಕೂತರೆ, ಸೈರನ್ನು ಕೂಗುತ್ತಿದ್ದಂತೆ,
ಚಿತ್ರಮಂದಿರದ ತುಂಬಾ ಕಿವಿಗಡಚಿಕ್ಕುವ ಅತಿ ದೀರ್ಘವಾದ ಸಿಳ್ಳೆ. ನಂತರವೇ, ಬೆಳ್ಳಿ ಪರದೆಯ ಮೇಲೆ
ತಿರುಪತಿ ವೆಂಕಟರಮಣನ ಚಿತ್ರ, ಮುಂದೆ ಊದುಬತ್ತಿಯ ದಟ್ಟಹೊಗೆಯ ನಡುವೆ ’ನಮೋ ವೆಂಕಟೇಶ....’ ಎಂಬ
ಗೀತೆ. ಅದು ಸಿನಿಮಾ ಶುರುವಾಗುವ ಸೂಚನೆ. ನೆಲದಮೇಲೆ ಕುಳಿತವರೆಲ್ಲಾ ಕತ್ತು ಉದ್ದ ಮಾಡಿ ಪರದೆಯ
ಕೆಳತುದಿಯವರೆಗೂ ಕಾಣುವಂತೆ ಹೊಸಕಾಡಿ, ಸಾಧ್ಯವಾಗದಿದ್ದರೆ, ಅಂಡಿನ ಕೆಳಗಿನ ಮಣ್ಣನ್ನು ಇನ್ನೂ
ಹೆಚ್ಚಿಸಿ, ಮುಂದೆ ಎತ್ತರ ಕುಳಿತವರಿಗೆ ಬೈದು, ಸರಿ ಮಾಡುವುದರೊಳಗೆ ಹಾಡು ಮುಗಿಯುತ್ತಿತ್ತು.
ನಂತರ ಸರ್ಕಾರದ ಕಾರ್ಯಕ್ರಮಗಳ ಡಾಕ್ಯುಮೆಂಟರಿ. ಅದರಲ್ಲಿ, ಓಡುತ್ತಾ ನಡೆಯುತ್ತಿದ್ದ ಮಹತ್ಮಾ
ಗಾಂಧಿ, ಮಿಲಿಟರಿ ಸಮವಸ್ತ್ರದಲ್ಲಿದ್ದ ಸುಭಾಷ್ ಚಂದ್ರ ಬೋಸರ ಪರೇಡ್ ವೀಕ್ಷಿಸುವ ಚಿತ್ರಗಳು
ಕಾಯಂ. ಅದರ ಹಿನ್ನೆಲೆ ಧ್ವನಿಯಂತೂ ಗಡಸು ದನಿಯ ಮೋಹಕ ಭಾವ ಸ್ಫುರಿಸುವ, ಮತ್ತೆ ಮತ್ತೆ
ಕೇಳಬೇಕೆನ್ನುವ ಆಕರ್ಷಣೆ. ಟಿ.ವಿ. ಮೊಬೈಲು
ಇಲ್ಲದ ಕಾಲದಲ್ಲಿ, ಚಿತ್ರಪರದೆಯ ಮೇಲೆ ತೋರಿಸುವ ಎಲ್ಲವನ್ನೂ ಕಣ್ಣಿನಲ್ಲಿ ತುಂಬಿಕೊಂಡು
ಸಂಭ್ರಮಿಸುವ ತವಕ. ನಂತರ ಜಾಹೀರಾತು, ಅದರ ನಂತರವೇ ಸಿನಿಮಾ ಶುರುವಾಗುತ್ತಿದ್ದುದು.
ನಾನಂತೂ, ಭಕ್ತ ಕನಕದಾಸ, ಭಕ್ತ ಕುಂಬಾರ, ಸತ್ಯ
ಹರಿಶ್ಚಂದ್ರ, ಇಂತಹ ಚಿತ್ರಗಳನ್ನು ಮನೆಯ ಎಲ್ಲಾ ಮಂದಿಯೊಟ್ಟಿಗೆ ಹೋಗಿ ನೋಡುವಾಗ, ಅಲ್ಲಿ ಬರುವ
ಎಲ್ಲಾ ದೃಶ್ಯಗಳಲ್ಲೂ, ನಾನೇ ಅಲ್ಲಿರುವಂತೆ ಭಾವಿಸಿ ತೇಲಾಡುತ್ತಿದ್ದೆ. ದುಃಖದ ಸೀನ್ ಬಂದಾಗ,
ಕಣ್ಣಿನಲ್ಲಿ ನೀರು ಧಾರಾಕಾರವಾಗಿ ಹರಿದರೂ, ಅದನ್ನು ಒರೆಸಿಕೊಂಡರೆ ಎಲ್ಲಿ ಪಕ್ಕ ಕುಳಿತ
ಸಹೋದರರು, ಅಮ್ಮ ಮತ್ತು ಗೆಳೆಯರು ನೋಡಿ ಆಮೇಲೆ ಗೇಲಿ ಮಾಡಿತ್ತಾರೆಂದು ಸುಮ್ಮನೆ ಕುಳಿತು
ಮಿಡುಕಾಡುತ್ತಿದ್ದೆ. ಸತ್ಯ ಹರಿಶ್ಚಂದ್ರ ಮತ್ತು ಅವನಿಗೆ ಕಾಟ ಕೊಡುವ ನಕ್ಷತ್ರಿಕನ ಪಾತ್ರದಲ್ಲಿ
ರಾಜ್ ಕುಮಾರ್ ಮತ್ತು ನರಸಿಂಹರಾಜು ಅವರ ಅಮೋಘ ಅಭಿನಯದಲ್ಲಿ ಅತ್ತು, ಅತ್ತು ಕಣ್ಣೆಲ್ಲಾ
ಊದಿಕೊಳ್ಳುತ್ತಿತ್ತು. ಕೊನೆಯ ದೃಶ್ಯದಲ್ಲಂತೂ ಹರಿಶ್ಚಂದ್ರ ತನ್ನ ಮಗನ ಹೆಣವನ್ನು ಸುಡಲು ಬಂದ
ಹೆಂಡತಿಯ ತಲೆ ಕಡಿಯುವ ಸಂಧರ್ಭ ಬಂದಾಗ, ಚಿತ್ರಮಂದಿರದಲ್ಲಿ ಹೆಂಗಳೆಯರ, ಅದರಲ್ಲೂ ಮುದುಕಿಯರ
ರೋದನ, ಜೋರಾಗೇ ನಕ್ಷತ್ರಿಕನಿಗೆ ಬೈಯುವ, ಹೆದರಿ ಜೋರಾಗಿ ಕಿರುಚಿ ಅಳುವ ಸಣ್ಣ ಮಕ್ಕಳ ದೊಡ್ಡ
ಗಂಟಲಿನ ಕೂಗು, ಎಲ್ಲವೂ ಸೇರಿ ಭೀಭತ್ಸ ವಾತಾವರಣವನ್ನು ಉಂಟು ಮಾಡುತ್ತಿತ್ತು.
ಹೀಗೊಮ್ಮೆ, ಚಿತ್ರದಲ್ಲಿ ಲೀನವಾಗುತ್ತಾ ಇರುವಾಗ,
ಯಾವುದೋ ಸಿನಿಮಾದಲ್ಲಿ, ಹೊಡೆದಾಟದ ದೃಶ್ಯ ಮೂಡಿ ಬರಲಾರಂಭಿಸಿತು. ಸ್ವಲ್ಪ ಹೊತ್ತಿನಲ್ಲೇ, ಮಧ್ಯದಲ್ಲೆಲ್ಲೋ
’ಹೋ..ಹೋ..’ ಎಂಬ ಕೂಗಿನೊಡನೆ ಹೊಡೆದಾಟ ಶುರುವಾಯಿತು. ಮಬ್ಬುಗತ್ತಲಿನಲ್ಲಿ, ಯಾರು ಯಾರಿಗೆ
ಹೊಡೆಯುತ್ತಿದ್ದಾರೆ ಎಂದು ಗೊತ್ತಾಗುವಷ್ಟರಲ್ಲಿ ಗುಂಪು ನೂಕಾಡಿಕೊಂಡು ನಾನಿದ್ದ ಜಾಗಕ್ಕೆ ಬಂದು
ನನ್ನ ಮೇಲೆ ಬೀಳಲಾರಂಭಿಸಿತು. ಹೇಗೋ ಕಷ್ಟ ಪಟ್ಟು ತಪ್ಪಿಸಿಕೊಂಡೆ. ಈ ರೀತಿ ಪ್ರತಿ ಬಾರಿಯೂ
ಹೊಡೆದಾಟದ ದೃಶ್ಯ ಬಂದಾಗ ನಿಜವಾದ ಫೈಟ್ ಇಲ್ಲಿ ಶುರುವಾಗುತ್ತದೆ ಎಂದೂ, ಅದನ್ನು ನಿಯಂತ್ರಿಸಲು
ಬರುವ ಗಾರ್ಡ್ ಗಳು, ಸಿಕ್ಕ ಸಿಕ್ಕವರಿಗೆ ದೊಣ್ಣೆಯಲ್ಲಿ ಹೊಡೆಯುತ್ತಾರೆಂದೂ ನಂತರ ತಿಳಿಯಿತು.
ಇಲ್ಲಿ ಆಗುತ್ತಿದ್ದುದೇನೆಂದರೆ, ’ಕೋದಂಡ’ ಎನ್ನುವ ಮಂದ ಬುದ್ಧಿಯ ನಡು ವಯಸ್ಸಿನ ಒಬ್ಬ ಅನಾಥ,
ಚಿತ್ರಮಂದಿರಕ್ಕೆ ಯಾರಾದರೂ ದುಡ್ಡು ಕೊಟ್ಟು ಕರೆದುಕೊಂಡು ಹೋಗಲು ಗೋಗರೆಯುತ್ತಾ ಕೇಳುತ್ತಿದ್ದ.
ಆತನಿಗೆ ಯಾರಾದರೂ ಹಾಗೆ ಕರೆದುಕೊಂಡು ಹೋದರೆ ಅವರ ದುರದೃಷ್ಟವೆಂದೇ ಹೇಳಬೇಕು. ಯಾವುದಾದರೂ
ಫೈಟಿಂಗ್ ಸೀನ್ ಬಂದರೆ, ಉದ್ರೇಕಗೊಂಡು ಸುತ್ತ ಇದ್ದವರಿಗೆಲ್ಲಾ ಸಿಕ್ಕ ಸಿಕ್ಕವರಿಗೆಲ್ಲಾ ಹೊಡೆದು
ಬಿಡುತ್ತಿದ್ದ. ಆ ಮಬ್ಬುಗತ್ತಲಿನಲ್ಲಿ ಯಾರು ಯಾರಿಗೆ ಹೊಡೆದರೆಂದು ತಿಳಿಯುವ ವ್ಯವಧಾನ ಇಲ್ಲದೇ
ಎಲ್ಲರೂ ಎಲ್ಲರಿಗೂ ಹೊಡೆಯಲು ಮುನ್ನುಗ್ಗುತ್ತಿದರು. ಇದೇ ಸಂಧರ್ಭಕ್ಕೆಂದೇ ತರಿಸಿಟ್ಟಿದ್ದ
ಬಾರುಕೋಲಿನಿಂದ ಗಾರ್ಡ್ ಗಳು ಯಾರೆಗೆಂದರೆ ಅವರಿಗೆ ಬೀಸುತ್ತಿದ್ದರು. ಒಟ್ಟಿನಲ್ಲಿ ಪರದೆ ಮೇಲೂ,
ಅದರ ಮುಂದೆಯೂ ಭರ್ಜರಿ ಫೈಟಿಂಗ್.
ಈ ರಸಭರಿತ ಚಿತ್ರವೀಕ್ಷಣೆಯ ಸವಿನೆನಪುಗಳೆಲ್ಲವೂ,
ಟಿ.ವಿ.ಯಲ್ಲಿ ಹಳೆಯ ಚಿತ್ರಗಳ ಪ್ರಸಾರ ಮಾಡಿದಾಗ, ಮನದಲ್ಲಿ ಥಟ್ಟನೆ ಮೂಡಿ ಬಂದು ಹಳೆಯ ಕಾಲಕ್ಕೆ
ನಮ್ಮನ್ನು ಕೊಂಡೊಯ್ಯುತ್ತವೆ.